[1] ಸೊಲೊಮೋನನು ಯೆಹೋವ ದೇವರ ಆಲಯವನ್ನೂ, ತನ್ನ ಅರಮನೆಯನ್ನೂ ತಾನು ಬಯಸಿದ್ದೆಲ್ಲವನ್ನೂ ಸಾಧಿಸಿದನು.
[2] ಅನಂತರ ಯೆಹೋವ ದೇವರು ಸೊಲೊಮೋನನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷರಾದಂತೆ, ಅವನಿಗೆ ಎರಡನೆಯ ಸಾರಿ ಪ್ರತ್ಯಕ್ಷರಾದರು.
[3] ಯೆಹೋವ ದೇವರು ಅವನಿಗೆ, “ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆಯನ್ನೂ ನಿನ್ನ ವಿಜ್ಞಾಪನೆಯನ್ನೂ ಕೇಳಿ ನನ್ನ ನಾಮವು ಯುಗಯುಗಾಂತರಕ್ಕೂ ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಆಲಯವನ್ನು ಪರಿಶುದ್ಧ ಮಾಡಿದ್ದೇನೆ. ನನ್ನ ಕಣ್ಣುಗಳೂ, ನನ್ನ ಹೃದಯವೂ ನಿತ್ಯವಾಗಿ ಅಲ್ಲಿರುವುವು.
[4] “ನೀನು ನಿನ್ನ ತಂದೆಯಾದ ದಾವೀದನಂತೆ ಸಂಪೂರ್ಣ ಹೃದಯದಿಂದಲೂ, ಯಥಾರ್ಥತೆಯಿಂದಲೂ ನಾನು ನಿನಗೆ ಆಜ್ಞಾಪಿಸಿದ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಿಷ್ಠೆಯಿಂದ ಕೈಗೊಂಡು ನಡೆದರೆ,
[5] ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ನಿನಗೆ ಉತ್ತರಾಧಿಕಾರಿಯ ಕೊರತೆಯಾಗುವುದಿಲ್ಲವೆಂದು ನಾನು ನಿನ್ನ ತಂದೆ ದಾವೀದನಿಗೆ ಮಾತುಕೊಟ್ಟ ಪ್ರಕಾರ, ‘ಇಸ್ರಾಯೇಲಿನಲ್ಲಿ ನಿನ್ನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.’
[6] “ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ ನಾನು ನಿಮಗೆ ಕೊಟ್ಟಿರುವ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ ಕೈಗೊಂಡು ನಡೆಯದೆ ನನ್ನಿಂದ ದೂರಹೋಗಿ, ಅನ್ಯದೇವರುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ,
[7] ಆಗ ನಾನು ಇಸ್ರಾಯೇಲಿಗೆ ಕೊಟ್ಟ ದೇಶದೊಳಗಿಂದ ಅವರನ್ನು ತೆಗೆದುಹಾಕಿ, ನನ್ನ ನಾಮಕ್ಕೋಸ್ಕರ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಾನು ನಿರಾಕರಿಸುವೆನು. ಇಸ್ರಾಯೇಲರು ಸಮಸ್ತ ಜನರಲ್ಲಿ ಗಾದೆಯಾಗಿಯೂ, ಅಪಹಾಸ್ಯಕ್ಕೆ ಗುರಿಯಾಗುವರು.
[8] ಇದಲ್ಲದೆ ಉನ್ನತವಾಗಿರುವ ಈ ಆಲಯದ ಮಾರ್ಗವಾಗಿ ಹೋಗುವವರೆಲ್ಲರೂ ಅದಕ್ಕೆ ಆಶ್ಚರ್ಯಪಟ್ಟು, ‘ಯೆಹೋವ ದೇವರು ಈ ದೇಶಕ್ಕೂ, ಈ ಆಲಯಕ್ಕೂ ಹೀಗೆ ಏಕೆ ಮಾಡಿದರು?’ ಎಂದು ಕೇಳುವರು.
[9] ಅದಕ್ಕೆ ಜನರು, ‘ತಮ್ಮ ತಂದೆಗಳನ್ನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ತಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಅನ್ಯದೇವರುಗಳನ್ನು ಹಿಂಬಾಲಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದ ಯೆಹೋವ ದೇವರು ಈ ಕೇಡನ್ನೆಲ್ಲಾ ಅವರ ಮೇಲೆ ಬರಮಾಡಿದ್ದಾರೆಂದು ಹೇಳುವರು,’ ” ಎಂದರು.
[10] ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಆ ಎರಡು ಮನೆಗಳನ್ನು ಅಂದರೆ, ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ ಕಟ್ಟಿಸಿ ತೀರಿಸಿದ ತರುವಾಯ
[11] ಸೊಲೊಮೋನನ ಇಷ್ಟದ ಪ್ರಕಾರ ಟೈರಿನ ಅರಸನಾದ ಹೀರಾಮನು ದೇವದಾರು ಮರಗಳನ್ನೂ, ತುರಾಯಿ ಮರಗಳನ್ನೂ, ಚಿನ್ನವನ್ನೂ ಕೊಟ್ಟಿದ್ದರಿಂದ ಸೊಲೊಮೋನನು ಟೈರಿನ ಅರಸನಾದ ಹೀರಾಮನಿಗೆ ಗಲಿಲಾಯ ದೇಶದಲ್ಲಿನ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
[12] ಆಗ ಹೀರಾಮನು ಟೈರಿನಿಂದ ಸೊಲೊಮೋನನು ತನಗೆ ಕೊಟ್ಟ ಪಟ್ಟಣಗಳನ್ನು ನೋಡಲು ಬಂದನು. ಆದರೆ ಅವು ಅವನಿಗೆ ಮೆಚ್ಚಿಕೆಯಾಗಿರಲಿಲ್ಲ.
[13] ಆದ್ದರಿಂದ ಅವನು, “ನನ್ನ ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೆ?” ಎಂದು ಹೇಳಿ, ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಇಂದಿನವರೆಗೂ ಅವಕ್ಕೆ ಅದೇ ಹೆಸರು.
[14] ಹೀರಾಮನು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ಚಿನ್ನವನ್ನು ಕಳುಹಿಸಿದನು.
[15] ಅರಸನಾದ ಸೊಲೊಮೋನನು ದಾಸರನ್ನು ಕೂಡಿಸಿದ ಕಾರಣವೇನೆಂದರೆ, ಯೆಹೋವ ದೇವರ ಮಂದಿರವನ್ನೂ, ತನ್ನ ಅರಮನೆಯನ್ನೂ, ಮಿಲ್ಲೋವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಹಾಚೋರನ್ನೂ, ಮೆಗಿದ್ದೋವನ್ನೂ, ಗೆಜೆರನ್ನೂ ಕಟ್ಟುವುದಕ್ಕೋಸ್ಕರವೇ.
[16] ಈಜಿಪ್ಟಿನ ಅರಸನಾದ ಫರೋಹನು ಹೊರಟುಹೋಗಿ, ಗೆಜೆರನ್ನು ತೆಗೆದುಕೊಂಡು, ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು, ಪಟ್ಟಣದಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಕೊಂದು, ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಅದನ್ನು ಬಹುಮಾನವಾಗಿ ಕೊಟ್ಟನು.
[17] ಹೀಗೆಯೇ ಸೊಲೊಮೋನನು ಗೆಜೆರನ್ನೂ, ಕೆಳಗಿನ ಬೇತ್ ಹೋರೋನನ್ನೂ,
[18] ಬಾಲಾತನ್ನೂ, ಮರುಭೂಮಿಯಲ್ಲಿರುವ ತದ್ಮೋರ್ ಎಂಬ ಸ್ಥಳವನ್ನೂ ಕಟ್ಟಿಸಿದನು.
[19] ಇದಲ್ಲದೆ ಸೊಲೊಮೋನನು ಉಗ್ರಾಣದ ಪಟ್ಟಣಗಳನ್ನೂ, ತನ್ನ ರಾಹುತರಿಗೋಸ್ಕರ ಮತ್ತು ರಥಗಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿಸಿದನು. ಯೆರೂಸಲೇಮಿನಲ್ಲಿಯೂ, ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತಗಳಲ್ಲಿಯೂ ತನಗೆ ಇಷ್ಟವಾದವುಗಳನ್ನೆಲ್ಲಾ ಕಟ್ಟಿಸಿದನು.
[20] ಇಸ್ರಾಯೇಲರಲ್ಲದ ಅಮೋರಿಯರು, ಹಿತ್ತಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು, ಇವರಲ್ಲಿ ಉಳಿದ ಸಮಸ್ತ ಜನರನ್ನೂ
[21] ಇಸ್ರಾಯೇಲರು ಸಂಹರಿಸದೆ ಉಳಿಸಿದ್ದ ಅವರ ಮಕ್ಕಳನ್ನೂ ಸೊಲೊಮೋನನು ಇಂದಿನವರೆಗೂ ದಾಸತ್ವಕ್ಕಾಗಿ ನೇಮಿಸಿದನು.
[22] ಆದರೆ ಸೊಲೊಮೋನನು ಇಸ್ರಾಯೇಲರನ್ನು ದಾಸರಾಗಿ ಮಾಡಲಿಲ್ಲ. ಅವರು ಯುದ್ಧಭಟರಾಗಿಯೂ, ಅವನ ಅಧಿಪತಿಯಾಗಿಯೂ, ತನ್ನ ಕೈಕೆಳಗಿರುವ ಅವನ ಪ್ರಧಾನರಾಗಿಯೂ, ಅಧಿಕಾರಿಗಳಾಗಿಯೂ, ತನ್ನ ರಥಗಳ ಮೇಲೆಯೂ, ರಾಹುತರ ಮೇಲೆಯೂ ಅಧಿಪತಿಗಳಾಗಿಯೂ ಇದ್ದರು.
[23] ಇದರೊಳಗೆ ಐದು ನೂರ ಐವತ್ತು ಮಂದಿ ಸೊಲೊಮೋನನ ಕೆಲಸದ ಪ್ರಧಾನ ಅಧಿಕಾರಿಗಳಾಗಿದ್ದರು. ಇವರು ಕೆಲಸದಲ್ಲಿ ಕಷ್ಟಪಡುವ ಜನರ ಮೇಲೆ ಅಧಿಕಾರಿಗಳಾಗಿದ್ದರು.
[24] ಆದರೆ ಫರೋಹನ ಮಗಳು ದಾವೀದನ ಪಟ್ಟಣದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
[25] ವರುಷಕ್ಕೆ ಮೂರು ಸಾರಿ ಸೊಲೊಮೋನನು ಯೆಹೋವ ದೇವರಿಗೆ ತಾನು ಕಟ್ಟಿಸಿದ ಬಲಿಪೀಠದ ಮೇಲೆ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ಯೆಹೋವ ದೇವರ ಮುಂದಿರುವ ಪೀಠದ ಮೇಲೆ ಧೂಪವನ್ನು ಸುಡುತ್ತಿದ್ದನು. ಹೀಗೆ ಆಲಯದ ಅರ್ಪಣೆಗಳನ್ನು ಪೂರೈಸಿದನು.
[26] ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದ ಕೆಂಪು ಸಮುದ್ರತೀರದ ಏಲೋತ್ ಎಂಬ ಊರ ಬಳಿಯಲ್ಲಿರುವ ಎಚ್ಯೋನ್ ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
[27] ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರ ಸಂಗಡ ಆ ಹಡಗುಗಳಲ್ಲಿ ಕಳುಹಿಸಿದನು.
[28] ಅವರು ಓಫೀರಿಗೆ ಹೋಗಿ, ಅಲ್ಲಿಂದ ಹದಿನಾಲ್ಕು ಸಾವಿರ ಕಿಲೋಗ್ರಾಂ ಬಂಗಾರವನ್ನು ಅರಸನಾದ ಸೊಲೊಮೋನನಿಗೆ ತೆಗೆದುಕೊಂಡು ಬಂದರು.