[1] ಹೀಗೆ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
[2] ಅವನಿಗೆ ಇದ್ದ ಮುಖ್ಯ ಅಧಿಕಾರಿಗಳು ಯಾರೆಂದರೆ: ಚಾದೋಕನ ಮಗ ಅಜರ್ಯನು ಮುಖ್ಯಯಾಜಕನಾಗಿದ್ದನು.
[3] ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬವರು ಕಾರ್ಯದರ್ಶಿಗಳು. ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಲೇಖಕ.
[4] ಯೆಹೋಯಾದಾವನ ಮಗ ಬೆನಾಯನು ಸೈನ್ಯದ ಅಧಿಪತಿಯು, ಚಾದೋಕನೂ, ಅಬಿಯಾತರನೂ ಯಾಜಕರು.
[5] ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು. ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.
[6] ಅಹಿಷಾರನು ರಾಜ್ಯ ಗೃಹಾಧಿಪತಿ. ಅಬ್ದನ ಮಗ ಅದೋನೀರಾಮನು ದಾಸರ ಮೇಲೆ ಉಸ್ತುವಾರಿಮಾಡಿಸುವವನಾಗಿದ್ದನು.
[7] ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.
[8] ಅವರ ಹೆಸರುಗಳು, ಅವರ ಜಿಲ್ಲೆಗಳು: ಬೆನ್ ಹೂರ್ ಎಫ್ರಾಯೀಮ್ ಪರ್ವತ ಪ್ರದೇಶದ ಅಧಿಕಾರಿ.
[9] ಬೆನ್ ಡೆಕೆರ್ ಮಾಕಾಚ್, ಶಾಲ್ಬೀಮ್, ಬೇತ್ ಷೆಮೆಷ್, ಏಲೋನ್ ಹಾಗು ಬೇತ್ ಹಾನಾನ್‌ಗಳಲ್ಲಿ ಅಧಿಕಾರಿ.
[10] ಬೆನ್ ಹೆಸೆದ್ ಅರುಬ್ಬೋತದಲ್ಲಿ ಅಧಿಕಾರಿ. ಸೋಕೋ ಮತ್ತು ಹೇಫೆರಿನ ಎಲ್ಲಾ ಪ್ರದೇಶಗಳು ಅವನವಾಗಿದ್ದವು.
[11] ಬೆನ್ ಅಬೀನಾದಾಬ್ ನಾಫೋತ್ ದೋರ್‌ದಲ್ಲಿ ಅಧಿಕಾರಿ. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
[12] ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.
[13] ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.
[14] ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.
[15] ಅಹೀಮಾಚ್ ನಫ್ತಾಲಿಯಲ್ಲಿ ಅಧಿಕಾರಿ. ಅವನಿಗೆ ಸೊಲೊಮೋನನ ಮಗಳಾದ ಬಾಸೆಮತ್ ಹೆಂಡತಿಯಾಗಿದ್ದಳು.
[16] ಹೂಷೈಯ ಮಗ ಬಾಣಾ ಆಶೇರದಲ್ಲಿ ಮತ್ತು ಆಲೋತಿನಲ್ಲಿ ಅಧಿಕಾರಿ.
[17] ಫಾರೂಹನ ಮಗ ಯೆಹೋಷಾಫಾಟನು ಇಸ್ಸಾಕಾರ್ ಪ್ರಾಂತದಲ್ಲಿ ಅಧಿಕಾರಿ.
[18] ಏಲನ ಮಗ ಶಿಮ್ಮಿಯು ಬೆನ್ಯಾಮೀನ್ ಪ್ರಾಂತದಲ್ಲಿ ಅಧಿಕಾರಿ.
[19] ಊರಿಯನ ಮಗ ಗೆಬೆರನು ಗಿಲ್ಯಾದಿನಲ್ಲಿ ಅಧಿಕಾರಿ. ಅಮೋರಿಯರ ಅರಸನಾದ ಸೀಹೋನನ ದೇಶಕ್ಕೂ ಬಾಷಾನಿನ ಅರಸನಾದ ಓಗನ ದೇಶಕ್ಕೂ ಅವನೊಬ್ಬನೇ ಅಧಿಪತಿಯಾಗಿದ್ದನು.
[20] ಯೆಹೂದ ಮತ್ತು ಇಸ್ರಾಯೇಲಿನ ಜನರು ಸಮುದ್ರದ ಮರಳಿನ ಹಾಗೆ ಅಸಂಖ್ಯಾತರಾದರು. ಅವರು ಉಂಡು ಕುಡಿದು ಸುಖದಿಂದ ಇದ್ದರು.
[21] ಇದಲ್ಲದೆ ಸೊಲೊಮೋನನು ಯೂಫ್ರೇಟೀಸ್ ಮೊದಲುಗೊಂಡು ಫಿಲಿಷ್ಟಿಯರ ದೇಶ ಮತ್ತು ಈಜಿಪ್ಟಿನ ಮೇರೆಯವರೆಗೂ ಇರುವ ಸಮಸ್ತ ರಾಜ್ಯಗಳನ್ನು ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳೆಲ್ಲಾ ಕಪ್ಪಗಳನ್ನು ಕೊಡುವವರಾಗಿ ಅವನಿಗೆ ಅಧೀನರಾಗಿದ್ದರು.
[22] ಸೊಲೊಮೋನನು ಒಂದು ದಿನದ ಭೋಜನಕ್ಕೆ ಕೊಡುತ್ತಿದ್ದ ಆಹಾರ ಪದಾರ್ಥಗಳು 5,000 ಕಿಲೋಗ್ರಾಂ ನಯವಾದ ಗೋಧಿಯ ಹಿಟ್ಟು, 10,000 ಕಿಲೋಗ್ರಾಂ ಜವೆಗೋಧಿ,
[23] ಕೊಬ್ಬಿದ ಎತ್ತುಗಳು ಹತ್ತು, ಮೇಯುವ ಎತ್ತುಗಳು ಇಪ್ಪತ್ತು, ಕುರಿಗಳು ನೂರು. ಇವುಗಳ ಹೊರತಾಗಿ ದುಪ್ಪಿಗಳೂ, ಜಿಂಕೆಗಳೂ, ಕೆಂದ ಜಿಂಕೆಗಳೂ, ಕೊಬ್ಬಿದ ಕೋಳಿಗಳೂ ಆಗಿದ್ದವು.
[24] ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗೂ, ನದಿಯ ಈಚೆಯಲ್ಲಿರುವ ಸಮಸ್ತ ಅರಸರ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಅವನಿಗೆ ಸುತ್ತಲಿರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಿತ್ತು.
[25] ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.
[26] ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಲವತ್ತು ಸಾವಿರ ಕುದುರೆಗಳಿಗೆ ಸ್ಥಳವಿತ್ತು, ಹನ್ನೆರಡು ಸಾವಿರ ರಾಹುತರೂ ಇದ್ದರು.
[27] ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ.
[28] ಹೀಗೆಯೇ ಪ್ರತಿಯೊಬ್ಬನು ತನ್ನ ನೇಮಕದ ಪ್ರಕಾರ ಕುದುರೆಗಳಿಗೋಸ್ಕರವೂ, ಸವಾರಿ ಒಂಟೆಗಳಿಗೋಸ್ಕರವೂ, ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ, ಹುಲ್ಲನ್ನೂ ತಂದರು.
[29] ದೇವರು ಸೊಲೊಮೋನನಿಗೆ ಅತ್ಯಧಿಕವಾಗಿ ಜ್ಞಾನವನ್ನೂ, ಗ್ರಹಿಕೆಯನ್ನೂ, ಸಮುದ್ರ ತೀರದಲ್ಲಿಯ ಮರಳಿನ ಹಾಗೆಯೇ ವಿವೇಕವನ್ನೂ ಕೊಟ್ಟರು.
[30] ಸೊಲೊಮೋನನ ಜ್ಞಾನವು ಮೂಡಣ ದೇಶದ ಸಮಸ್ತರ ಜ್ಞಾನಕ್ಕಿಂತಲೂ, ಈಜಿಪ್ಟಿನ ಸಮಸ್ತರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು.
[31] ಜೇರಹನ ಮಗನಾದ ಏತಾನನು, ಮಹೋಲನ ಮಕ್ಕಳಾದ ಹೇಮಾನನು, ಕಲ್ಕೋಲನು, ದರ್ದನು ಮೊದಲಾದ ಸಮಸ್ತ ಮನುಷ್ಯರಿಗಿಂತಲೂ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ದೇಶಗಳಲ್ಲಿ ಅವನ ಕೀರ್ತಿ ಇತ್ತು.
[32] ಅವನು ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು. ಅವನ ಹಾಡುಗಳು ಸಾವಿರದ ಐದು.
[33] ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು.
[34] ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.