Skip to content
Opens in a new window
Listen to this chapter • 6:12

[1] ಸೊಲೊಮೋನನು ಈಜಿಪ್ಟಿನ ಅರಸನಾದ ಫರೋಹನ ಸಂಗಡ ಬಂಧುತ್ವ ಮಾಡಿ, ಫರೋಹನ ಮಗಳನ್ನು ಮದುವೆಮಾಡಿಕೊಂಡನು. ಅವನು ತನ್ನ ಮನೆಯನ್ನೂ, ಯೆಹೋವ ದೇವರ ಆಲಯವನ್ನೂ, ಯೆರೂಸಲೇಮಿನ ಗೋಡೆಯನ್ನೂ, ಸುತ್ತಲೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.

[2] ಆ ಕಾಲದವರೆಗೂ ಯೆಹೋವ ದೇವರ ಹೆಸರಿಗಾಗಿ ಆಲಯ ಇರಲಿಲ್ಲ. ಆದುದರಿಂದ, ಜನರು ಎತ್ತರದ ಸ್ಥಳಗಳಲ್ಲಿ ಬಲಿ ಅರ್ಪಿಸುತ್ತಿದ್ದರು.

[3] ಸೊಲೊಮೋನನು ಯೆಹೋವ ದೇವರನ್ನು ಪ್ರೀತಿಸಿ, ತನ್ನ ತಂದೆ ದಾವೀದನ ಕಟ್ಟಳೆಯಲ್ಲಿ ನಡೆಯುತ್ತಾ ಇದ್ದನು. ಆದರೂ ತಾನು ಎತ್ತರ ಸ್ಥಳಗಳಲ್ಲಿ ಬಲಿಯನ್ನೂ, ಧೂಪವನ್ನೂ ಅರ್ಪಿಸುತ್ತಾ ಇದ್ದನು.

[4] ಗಿಬ್ಯೋನಿನ ಅತಿಮುಖ್ಯವಾದ ಉನ್ನತ ಸ್ಥಳಕ್ಕೆ ಅರಸನಾದ ಸೊಲೊಮೋನನು ಬಲಿಗಳನ್ನರ್ಪಿಸಲು ಹೋಗಿ, ಆ ಬಲಿಪೀಠದ ಮೇಲೆ ಸಾವಿರ ದಹನಬಲಿಗಳನ್ನು ಅರ್ಪಿಸಿದನು.

[5] ಅವನು ಗಿಬ್ಯೋನಿನಲ್ಲಿರುವಾಗ ರಾತ್ರಿಯಲ್ಲಿ ಸ್ವಪ್ನದೊಳಗೆ ಯೆಹೋವ ದೇವರು ಸೊಲೊಮೋನನಿಗೆ ಕಾಣಿಸಿಕೊಂಡರು. ದೇವರು ಅವನಿಗೆ, “ನಾನು ನಿನಗೆ ಏನು ವರ ಕೊಡಬೇಕು? ಕೇಳಿಕೋ,” ಎಂದರು.

[6] ಅದಕ್ಕೆ ಸೊಲೊಮೋನನು, “ನನ್ನ ತಂದೆಯಾಗಿರುವ ನಿಮ್ಮ ಸೇವಕನಾದ ದಾವೀದನು ನಿಮ್ಮ ಮುಂದೆ ನೀತಿಯಿಂದಲೂ, ಯಥಾರ್ಥವಾದ ಹೃದಯವುಳ್ಳವನಾಗಿಯೂ ನಡೆದದ್ದರಿಂದ, ನೀವು ಅವನಿಗೆ ಮಹಾಕರುಣೆಯನ್ನು ತೋರಿಸಿದ್ದೀರಿ. ಈ ಮಹಾಕರುಣೆಯನ್ನು ಮುಂದುವರೆಸುತ್ತಾ ಈ ದಿನ ಅವನ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಮಗನನ್ನು ಕೊಟ್ಟಿದ್ದೀರಿ.

[7] “ಈಗ ನನ್ನ ದೇವರಾದ ಯೆಹೋವ ದೇವರೇ, ನೀವು ನನ್ನ ತಂದೆ ದಾವೀದನಿಗೆ ಬದಲಾಗಿ ನಿಮ್ಮ ಸೇವಕನನ್ನು ಅರಸನನ್ನಾಗಿ ಮಾಡಿದ್ದೀರಿ. ಆದರೆ ನಾನು ಚಿಕ್ಕ ಬಾಲಕನಾಗಿದ್ದು, ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಬೇಕೆಂದು ತಿಳಿದಿಲ್ಲ.

[8] ಇದಲ್ಲದೆ ನಿಮ್ಮ ಸೇವಕನಾದ ನಾನು ನೀವು ಆಯ್ದುಕೊಂಡಂಥ ಅಸಂಖ್ಯಾತ ಜನರ ಮಧ್ಯದಲ್ಲಿ ಇದ್ದೇನೆ.

[9] ಆದ್ದರಿಂದ ನಿಮ್ಮ ಜನರನ್ನು ಪರಿಪಾಲಿಸುವುದಕ್ಕೆ, ಒಳ್ಳೆಯದನ್ನೂ ಕೆಟ್ಟದ್ದನ್ನೂ ತಿಳಿಯುವ ಹಾಗೆ, ನಿಮ್ಮ ಸೇವಕನಿಗೆ ತಿಳುವಳಿಕೆಯುಳ್ಳ ಹೃದಯವನ್ನು ಕೊಡಬೇಕು. ಏಕೆಂದರೆ ಈ ನಿಮ್ಮ ಮಹಾಜನರ ನ್ಯಾಯತೀರಿಸುವುದಕ್ಕೆ ಸಾಮರ್ಥ್ಯವುಳ್ಳವರು ಯಾರು?” ಎಂದನು.

[10] ಸೊಲೊಮೋನನು ಕೇಳಿದ ಈ ಮಾತು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದಾಗಿತ್ತು.

[11] ಆದ್ದರಿಂದ ದೇವರು ಅವನಿಗೆ, “ನೀನು ನಿನಗಾಗಿ ದೀರ್ಘಾಯುಷ್ಯ ಅಥವಾ ಸಂಪತ್ತನ್ನು ಕೇಳಲಿಲ್ಲ, ಅಥವಾ ನಿನ್ನ ಶತ್ರುಗಳ ಮರಣವನ್ನು ಕೇಳಿಲ್ಲ, ಆದರೆ ನ್ಯಾಯವನ್ನು ನಿರ್ವಹಿಸುವುದಕ್ಕಾಗಿ ನಿನಗೋಸ್ಕರ ವಿವೇಕವನ್ನು ಕೇಳಿದ್ದರಿಂದ,

[12] ನಾನು ನಿನ್ನ ಮಾತುಗಳ ಪ್ರಕಾರವೇ ಮಾಡಿದೆನು. ನಿನಗೆ ಜ್ಞಾನವನ್ನೂ, ವಿವೇಚನೆಯುಳ್ಳ ಹೃದಯವನ್ನೂ ಕೊಟ್ಟಿದ್ದೇನೆ. ನಿನಗೆ ಸಮನಾದ ಜ್ಞಾನಿಯು ಈ ಮುಂಚೆಯೂ ಇರಲಿಲ್ಲ, ನಿನ್ನ ತರುವಾಯವೂ ಇರುವುದಿಲ್ಲ.

[13] ನೀನು ಕೇಳದ ಐಶ್ವರ್ಯವನ್ನೂ, ಘನವನ್ನೂ ಕೊಟ್ಟಿದ್ದೇನೆ. ಆದ್ದರಿಂದ ನಿನ್ನ ಸಮಸ್ತ ದಿವಸಗಳಲ್ಲಿ ನಿನ್ನ ಹಾಗೆ ಅರಸುಗಳಲ್ಲಿ ಒಬ್ಬನೂ ಇರುವುದಿಲ್ಲ.

[14] ನೀನು, ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು, ನನ್ನ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ಕೈಗೊಂಡರೆ, ನಿನ್ನ ದಿವಸಗಳನ್ನು ಹೆಚ್ಚಿಸುವೆನು,” ಎಂದರು.

[15] ತರುವಾಯ ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಸ್ವಪ್ನವೆಂದು ತಿಳಿದುಕೊಂಡನು. ಅವನು ಯೆರೂಸಲೇಮಿಗೆ ಬಂದು, ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು, ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿ, ತನ್ನ ಸೇವಕರಿಗೆ ಔತಣವನ್ನು ಏರ್ಪಡಿಸಿದನು.

[16] ಇಬ್ಬರು ವೇಶ್ಯೆಯರು ಅರಸನ ಬಳಿಗೆ ಬಂದು, ಅವನ ಮುಂದೆ ನಿಂತರು.

[17] ಅವರಲ್ಲಿ ಒಬ್ಬಳು, “ನನ್ನ ಒಡೆಯನೇ, ನಾನೂ, ಈ ಹೆಣ್ಣು ಮಗಳು ಒಂದೇ ಮನೆಯಲ್ಲಿ ವಾಸವಾಗಿದ್ದೇವೆ.

[18] ನಾನು ಅವಳ ಸಂಗಡ ಮನೆಯಲ್ಲಿರುವಾಗ, ಮಗುವನ್ನು ಹೆತ್ತೆನು. ನಾನು ಹೆತ್ತ ಮೂರು ದಿವಸಗಳ ತರುವಾಯ, ಈ ಹೆಣ್ಣು ಮಗಳು ಕೂಡ ಹೆತ್ತಳು. ನಾವು ಇಬ್ಬರೂ ಕೂಡಿಯೇ ಇದ್ದೆವು. ಮನೆಯಲ್ಲಿ ನಮ್ಮ ಇಬ್ಬರ ಹೊರತು ನಮ್ಮ ಸಂಗಡ ಮತ್ತ್ಯಾರೂ ಇಲ್ಲ.

[19] “ಆದರೆ ಅವಳು ಕೂಸಿನ ಮೇಲೆ ಮಲಗಿದ್ದರಿಂದ, ರಾತ್ರಿಯಲ್ಲಿ ಆಕೆಯ ಮಗು ಸತ್ತು ಹೋಯಿತು.

[20] ಇವಳು ಮಧ್ಯರಾತ್ರಿಯಲ್ಲಿ ಎದ್ದು, ನಿನ್ನ ದಾಸಿಯು ನಿದ್ರೆಗೈಯುತ್ತಿರುವಾಗ, ನನ್ನ ಹತ್ತಿರ ಮಲಗಿದ್ದ ನನ್ನ ಮಗನನ್ನು ತೆಗೆದುಕೊಂಡು, ಅದನ್ನು ತನ್ನ ಎದೆಯ ಮೇಲೆ ಮಲಗಿಸಿಕೊಂಡು, ತನ್ನ ಸತ್ತ ಮಗುವನ್ನು ನನ್ನ ಎದೆಯ ಮೇಲೆ ಮಲಗಿಸಿದಳು.

[21] ಉದಯದಲ್ಲಿ ನನ್ನ ಕೂಸಿಗೆ ಹಾಲು ಕುಡಿಸಲು ಎದ್ದಾಗ, ಅದು ಸತ್ತಿತ್ತು! ಉದಯದಲ್ಲಿ ಅದನ್ನು ಕಂಡಾಗ, ಅದು ನಾನು ಹೆತ್ತ ಮಗುವಾಗಿರಲಿಲ್ಲ,” ಎಂದಳು.

[22] ಆಗ ಆ ಬೇರೆ ಹೆಣ್ಣು ಮಗಳು, “ಇಲ್ಲ ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,” ಎಂದಳು. ಮೊದಲನೆಯವಳು, “ಹಾಗಲ್ಲ, ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,” ಎಂದಳು. ಹೀಗೆ ಅವರು ಅರಸನ ಮುಂದೆ ವಾದಿಸಿದರು.

[23] ಆಗ ಅರಸನು, “ ‘ಇವಳು ಬದುಕಿರುವವನು ನನ್ನ ಮಗನು, ಸತ್ತವನು ನಿನ್ನ ಮಗನು,’ ಎನ್ನುತ್ತಾಳೆ. ಅವಳು, ಹಾಗಲ್ಲ, ‘ಸತ್ತವನು ನಿನ್ನ ಮಗನು, ಬದುಕಿರುವವನು ನನ್ನ ಮಗನು,’ ಎನ್ನುತ್ತಾಳೆ,” ಎಂದು ಹೇಳಿ,

[24] ಅರಸನು, “ಖಡ್ಗವನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಅವರು ಖಡ್ಗವನ್ನು ಅರಸನ ಬಳಿಗೆ ತಂದರು.

[25] ಆಗ ಅರಸನು, “ಬದುಕಿರುವ ಕೂಸನ್ನು ಎರಡು ತುಂಡಾಗಿ ಕಡಿದು, ಇವಳಿಗೆ ಅರ್ಧ ಪಾಲನ್ನೂ, ಅವಳಿಗೆ ಅರ್ಧ ಪಾಲನ್ನೂ ಕೊಡಿರಿ,” ಎಂದನು.

[26] ಆಗ ಬದುಕಿರುವ ಕೂಸಿನ ತಾಯಿಯಾಗಿರುವವಳ ಕರುಳುಗಳು ತನ್ನ ಮಗನಿಗಾಗಿ ಮರುಗಿದ್ದರಿಂದ ಅವಳು ಅರಸನಿಗೆ, “ನನ್ನ ಒಡೆಯನೇ, ಬದುಕಿರುವ ಕೂಸನ್ನು ಇವಳಿಗೆ ಕೊಡು, ಕೊಲ್ಲಬೇಡ,” ಎಂದಳು. ಆದರೆ, ಮತ್ತೊಬ್ಬಳು, ಅದು ನನಗಾಗಲಿ ನಿನಗಾಗಲಿ ಆಗಿರಬಾರದು, ಕಡಿಯಿರಿ. ಎಂದಳು.

[27] ಆಗ ಅರಸನು ಉತ್ತರವಾಗಿ, “ಬದುಕಿರುವ ಕೂಸನ್ನು ಮೊದಲನೆಯವಳಿಗೆ ಕೊಡಿರಿ, ಕೊಲ್ಲಬೇಡಿರಿ, ಇವಳೇ ಅದರ ತಾಯಿ,” ಎಂದನು.

[28] ಅರಸನು ತೀರಿಸಿದ ನ್ಯಾಯವನ್ನು ಕುರಿತು ಸಮಸ್ತ ಇಸ್ರಾಯೇಲರು ಕೇಳಿ, ಅರಸನಿಗೆ ಭಯಪಟ್ಟರು. ಏಕೆಂದರೆ ನ್ಯಾಯತೀರಿಸಲು ಅವನಲ್ಲಿ ದೇವರ ಜ್ಞಾನವಿದೆ ಎಂದು ಕಂಡರು.

1 ಅರಸುಗಳು — Chapters