Skip to content
Opens in a new window
Listen to this chapter • 6:50

[1] ಶೆಬದ ರಾಣಿಯು ಯೆಹೋವ ದೇವರ ನಾಮದ ಮಹತ್ತಿನಿಂದ ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು.

[2] ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು.

[3] ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವುಗಳಲ್ಲಿ ಅರಸನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು.

[4] ಶೆಬದ ರಾಣಿಯು ಸೊಲೊಮೋನನ ಸಮಸ್ತ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ,

[5] ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.

[6] ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ.

[7] ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಿನ್ನ ಜ್ಞಾನವೂ, ನಿನ್ನ ಸಂಪತ್ತೂ ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ.

[8] ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು.

[9] ಇಸ್ರಾಯೇಲಿನ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಯೆಹೋವ ದೇವರು ಯುಗಯುಗಕ್ಕೂ ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು.

[10] ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧದ್ರವ್ಯಗಳ ಹಾಗೆ ಬೇರೆ ಯಾರೂ ಕೊಟ್ಟಿರಲಿಲ್ಲ.

[11] ಹೀರಾಮನ ಹಡಗುಗಳು ಓಫೀರನಿಂದ ಬಂಗಾರ ಮಾತ್ರವಲ್ಲದೆ ಅನೇಕ ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದವು.

[12] ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ ಅರಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ, ವೀಣೆಗಳನ್ನೂ ಮಾಡಿಸಿದನು. ಅಂದಿನಿಂದ ಈ ದಿನದವರೆಗೂ ಅಂಥಾ ಸುಗಂಧದ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.

[13] ಅರಸನಾದ ಸೊಲೊಮೋನನು ಶೆಬದ ರಾಣಿಗೆ ಔದಾರ್ಯವಾಗಿ ಕೊಟ್ಟ ಕಾಣಿಕೆಗಳ ಹೊರತಾಗಿ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು.

[14] ಸೊಲೊಮೋನನಿಗೆ ಪ್ರತಿ ವರುಷ ಸುಮಾರು ಇಪ್ಪತ್ತಮೂರು ಸಾವಿರ ಕಿಲ್ರೊಗ್ರಾಂ ಬಂಗಾರವು ದೊರಕುತ್ತಿತ್ತು.

[15] ಇದಲ್ಲದೆ ಸೊಲೊಮೋನನಿಗೆ ವರ್ತಕರಿಂದಲೂ, ವರ್ತಕರ ವ್ಯಾಪಾರದಿಂದಲೂ, ಅರೇಬಿಯದ ಅರಸರಿಂದಲೂ, ದೇಶದ ಅಧಿಪತಿಗಳಿಂದಲೂ ಸಹ ಬಂಗಾರವು ದೊರಕುತ್ತಿತ್ತು.

[16] ಅರಸನಾದ ಸೊಲೊಮೋನನು ಬಂಗಾರದಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿ ಸುಮಾರು ಏಳು ಕಿಲೋಗ್ರಾಂ ತೂಕದ ಬಂಗಾರವಿತ್ತು.

[17] ಹಾಗೆಯೇ ಬಂಗಾರದಿಂದ ಮುನ್ನೂರು ಸಣ್ಣ ಗುರಾಣಿಗಳನ್ನು ಮಾಡಿಸಿದನು. ಒಂದೊಂದು ಗುರಾಣಿಗೆ ಸುಮಾರು ಎರಡು ಕಿಲೋಗ್ರಾಂ ಬಂಗಾರ ಹಿಡಿಯಿತು. ಅರಸನು ಇವುಗಳನ್ನು ಲೆಬನೋನಿನ ಅಡವಿಯ ಮನೆಯಲ್ಲಿ ಇಟ್ಟನು.

[18] ಅರಸನು ದಂತದಿಂದ ದೊಡ್ಡ ಸಿಂಹಾಸನವನ್ನು ಮಾಡಿಸಿ, ಅದನ್ನು ಚೊಕ್ಕ ಬಂಗಾರದಿಂದ ಹೊದಿಸಿದನು.

[19] ಈ ಸಿಂಹಾಸನಕ್ಕೆ ಆರು ಮೆಟ್ಟಲುಗಳಿದ್ದವು. ಈ ಸಿಂಹಾಸನದ ಹಿಂಭಾಗವು ದುಂಡಾಗಿತ್ತು. ಕುಳಿತುಕೊಳ್ಳುವ ಆಸನದ ಎರಡು ಕಡೆಗಳಲ್ಲಿ ಕೈಗಳಿದ್ದವು. ಆ ಕೈಗಳ ಬಳಿಯಲ್ಲಿ ಎರಡು ಸಿಂಹಗಳು ನಿಂತಿದ್ದವು.

[20] ಹನ್ನೆರಡು ಸಿಂಹಗಳು, ಆರು ಮೆಟ್ಟಲುಗಳ ಮೇಲೆ ಎರಡು ಕಡೆಗಳಲ್ಲಿ ನಿಂತಿದ್ದವು. ಯಾವ ರಾಜ್ಯದಲ್ಲಿಯೂ ಅಂಥದ್ದು ಇರಲಿಲ್ಲ.

[21] ಇದಲ್ಲದೆ ಅರಸನಾದ ಸೊಲೊಮೋನನು ಕುಡಿಯುವ ಪಾತ್ರೆಗಳೆಲ್ಲಾ ಬಂಗಾರದವುಗಳಾಗಿದ್ದವು. ಲೆಬನೋನಿನ ಅಡವಿಯ ಮನೆಯ ಎಲ್ಲಾ ಸಾಮಗ್ರಿಗಳು ಚೊಕ್ಕ ಬಂಗಾರದವುಗಳು. ಸೊಲೊಮೋನನ ದಿವಸಗಳಲ್ಲಿ ಬೆಳ್ಳಿಗೆ ಬೆಲೆಯೇ ಇರಲಿಲ್ಲ, ಆದುದರಿಂದ ಅವನಲ್ಲಿ ಬೆಳ್ಳಿಯ ವಸ್ತು ಒಂದಾದರೂ ಕಾಣಿಸಲಿಲ್ಲ.

[22] ಹೀರಾಮನ ಹಡಗುಗಳ ಜೊತೆಯಲ್ಲಿ ಅರಸನ ಹಡಗುಗಳು ತಾರ್ಷೀಷಿಗೆ ಹೋಗಿ ಮೂರು ವರ್ಷಕ್ಕೆ ಒಂದು ಸಾರಿ ಬಂಗಾರ, ಬೆಳ್ಳಿ, ದಂತ, ಕೋತಿ, ನವಿಲು ಇವುಗಳನ್ನೂ ತರುತ್ತಿದ್ದವು.

[23] ಹೀಗೆಯೇ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಸಮಸ್ತ ಅರಸರಿಗಿಂತ ಮಿಗಿಲಾಗಿದ್ದನು.

[24] ದೇವರು ಸೊಲೊಮೋನನ ಹೃದಯದಲ್ಲಿ ಕೊಟ್ಟಿದ್ದ ಜ್ಞಾನವನ್ನು ಕೇಳುವುದಕ್ಕಾಗಿ ಭೂಲೋಕದಲ್ಲಿರುವ ಸಮಸ್ತರೂ ಅವನ ದರ್ಶನವನ್ನು ಬಯಸಿದರು.

[25] ಅವರೆಲ್ಲರೂ ಕಾಣಿಕೆಯಾಗಿ ಬೆಳ್ಳಿಯ ಪಾತ್ರೆಗಳನ್ನೂ, ಬಂಗಾರದ ಪಾತ್ರೆಗಳನ್ನೂ, ವಸ್ತ್ರಗಳನ್ನೂ, ಆಯುಧಗಳನ್ನೂ, ಸುಗಂಧಗಳನ್ನೂ, ಕುದುರೆಗಳನ್ನೂ, ಹೇಸರಗತ್ತೆಗಳನ್ನೂ, ವರುಷ ವರುಷವೂ ನೇಮಕವಾದ ಪ್ರಕಾರ ತರುತ್ತಿದ್ದರು.

[26] ಇದಲ್ಲದೆ ಸೊಲೊಮೋನನು ರಥಗಳನ್ನೂ, ರಾಹುತರನ್ನೂ ಕೂಡಿಸಿದನು. ಸಾವಿರದ ನಾನೂರು ರಥಗಳು, ಹನ್ನೆರಡು ಸಾವಿರ ಕುದುರೆಯ ರಾಹುತರು ಇದ್ದರು. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೇ ಇರಿಸಿದನು, ಉಳಿದವುಗಳನ್ನು ರಥಗಳ ಪಟ್ಟಣಗಳಲ್ಲಿಯೂ ಇರಿಸಿದನು.

[27] ಅರಸನ ಕಾಲದಲ್ಲಿ ಯೆರೂಸಲೇಮಿನಲ್ಲಿ ಬೆಳ್ಳಿಯನ್ನು ಕಲ್ಲುಗಳಂತೆಯೂ, ದೇವದಾರು ಮರಗಳನ್ನು ತಗ್ಗಿನಲ್ಲಿರುವ ಅತ್ತಿಮರಗಳಂತೆಯೂ ಪರಿಗಣಿಸಲಾಯಿತು.

[28] ಇದಲ್ಲದೆ ಸೊಲೊಮೋನನಿಗೆ ಈಜಿಪ್ಟಿನಿಂದಲೂ ಕುವೆಯಿಂದಲೂ ಕುದುರೆಗಳು ಬರುತ್ತಿದ್ದವು. ಅರಸನ ವರ್ತಕರು ಅವುಗಳನ್ನು ಹಿಂಡುಹಿಂಡಾಗಿ ಕೊಂಡುಕೊಂಡು ಬರುತ್ತಿದ್ದರು.

[29] ಹಾಗೆಯೇ ಈಜಿಪ್ಟಿನಿಂದ ಆರುನೂರು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ರಥವನ್ನೂ ನೂರ ಐವತ್ತು ಬೆಳ್ಳಿ ನಾಣ್ಯಗಳ ಕ್ರಯಕ್ಕೆ ಒಂದು ಕುದುರೆಯನ್ನೂ ತರಿಸುತ್ತಿದ್ದರು. ಈ ಪ್ರಕಾರ ಹಿತ್ತಿಯರ ಮತ್ತು ಅರಾಮಿನ ಅರಸುಗಳೆಲ್ಲರು ಇವರ ಮುಖಾಂತರವಾಗಿಯೇ ತರಿಸುತ್ತಿದ್ದರು.

1 ಅರಸುಗಳು — Chapters