Skip to content
Opens in a new window
Listen to this chapter • 11:37

[1] ಇದಲ್ಲದೆ ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.

[2] ಅವನು ಲೆಬನೋನಿನ ಅಡವಿಯ ಮನೆಯನ್ನು ಕಟ್ಟಿಸಿದನು. ಅದು 44 ಮೀಟರ್ ಉದ್ದ, 22 ಮೀಟರ್ ಅಗಲ, 13.5 ಮೀಟರ್ ಎತ್ತರವೂ ಆಗಿತ್ತು. ಅದು ನಾಲ್ಕು ಸಾಲು ದೇವದಾರು ಕಂಬಗಳ ಮೇಲೆ ಇತ್ತು. ದೇವದಾರು ತೊಲೆಗಳು ಕಂಬಗಳ ಮೇಲೆ ಇದ್ದವು.

[3] ಒಂದೊಂದು ಸಾಲು ಹದಿನೈದು ಕಂಬಗಳಾಗಿ ನಲವತ್ತೈದು ಕಂಬಗಳ ಮೇಲೆ ಇರುವ ತೊಲೆಗಳು ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು.

[4] ಮೂರು ಸಾಲು ಕಿಟಕಿಗಳು ಇದ್ದವು. ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳಿದ್ದವು.

[5] ಕಿಟಕಿಗಳಲ್ಲಿ ಬಾಗಿಲುಗಳೂ, ನಿಲುವುಗಳೂ ಎಲ್ಲಾ ಚೌಕವಾಗಿದ್ದವು. ಮೂರು ಮೂರು ಸಾಲುಗಳಲ್ಲಿ ಬೆಳಕಿನ ಕಿಂಡಿಗಳು ಎದುರೆದುರಾಗಿದ್ದವು.

[6] 22 ಮೀಟರ್ ಉದ್ದವೂ, 13.5 ಮೀಟರ್ ಅಗಲವೂ ಆದ ಮಂಟಪವನ್ನು ಸ್ತಂಭಗಳಿಂದ ಮಾಡಿಸಿದನು. ಈ ಮಂಟಪವೂ, ಸ್ತಂಭಗಳೂ, ತೊಲೆಗಳೂ, ಮನೆಯ ಸ್ತಂಭಗಳಿಗೂ, ತೊಲೆಗಳಿಗೂ ಎದುರೆದುರಾಗಿದ್ದವು.

[7] ಅಲ್ಲಿ ನ್ಯಾಯತೀರಿಸಲು ನ್ಯಾಯಾಸನದ ಮಂಟಪವನ್ನು ಮಾಡಿ, ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ದೇವದಾರುಗಳನ್ನು ಹೊದಿಸಿದನು.

[8] ತಾನು ವಾಸವಾಗಿರುವ ತನ್ನ ಅರಮನೆಯಲ್ಲಿ ಮಂಟಪದ ಒಳಭಾಗದಲ್ಲಿ ಈ ಕೆಲಸದ ಹಾಗೆಯೇ ಬೇರೆ ಒಂದು ಅಂಗಳವಿತ್ತು. ಇದಲ್ಲದೆ ಸೊಲೊಮೋನನು ತನ್ನ ಹೆಂಡತಿಯಾದ ಫರೋಹನ ಮಗಳಿಗೂ ಈ ಮಂಟಪದ ಹಾಗೆಯೇ ಇನ್ನೊಂದು ಮನೆಯನ್ನು ಕಟ್ಟಿಸಿದನು.

[9] ಇವೆಲ್ಲಾ ಒಳಗೂ, ಹೊರಗೂ ಅಸ್ತಿವಾರಗಳು ಮೊದಲುಗೊಂಡು, ಕಡೇ ವರಸೆಯವರೆಗೂ ಹೊರಗಿರುವ ದೊಡ್ಡ ಅಂಗಳದ ಮಟ್ಟಿಗೂ, ಅಳತೆಯ ಪ್ರಕಾರ ಗರಗಸದಿಂದ ಕೊಯ್ಯಲಾದ ಬೆಲೆಯುಳ್ಳ ಕೆತ್ತಿದ ಕಲ್ಲುಗಳಾಗಿದ್ದವು.

[10] ಅಸ್ತಿವಾರವು 4.5 ಮೀಟರ್ ಕಲ್ಲುಗಳೂ, 3.5 ಮೀಟರ್ ಕಲ್ಲುಗಳೂ ಬೆಲೆಯುಳ್ಳ ಕಲ್ಲುಗಳಾಗಿದ್ದವು. ಅವು ದೊಡ್ಡ ಕಲ್ಲುಗಳಾಗಿಯೂ ಇದ್ದವು.

[11] ಅದರ ಮೇಲೆ ಕೆತ್ತಿದ ಕಲ್ಲುಗಳ ಅಳತೆಯ ಪ್ರಕಾರ ಬೆಲೆಯುಳ್ಳ ಕಲ್ಲುಗಳೂ, ದೇವದಾರು ತೊಲೆಗಳೂ ಇದ್ದವು.

[12] ದೊಡ್ಡ ಅಂಗಳವು ಸುತ್ತಲೂ ಮೂರು ತರ ಕೆತ್ತಿದ ಕಲ್ಲುಗಳೂ, ಒಂದು ತರ ದೇವದಾರು ಮರದ ತೊಲೆಗಳೂ ಆಗಿದ್ದವು. ಯೆಹೋವ ದೇವರ ಆಲಯದ ಒಳ ಅಂಗಳಕ್ಕೂ, ಆಲಯದ ಮಂಟಪಕ್ಕೂ ಹಾಗೆಯೇ ಇದ್ದವು.

[13] ಅರಸನಾದ ಸೊಲೊಮೋನನು ಹೂರಾಮನನ್ನು ಟೈರಿನಿಂದ ಕರೆಕಳುಹಿಸಿದನು.

[14] ಇವನು ನಫ್ತಾಲಿಯ ಗೋತ್ರದವಳಾದ ಒಬ್ಬ ವಿಧವೆಯ ಮಗನು, ಅವನ ತಂದೆ ಟೈರ್ ಪಟ್ಟಣದ ಕಂಚುಗಾರನಾಗಿದ್ದನು. ಹೂರಾಮನು ಜ್ಞಾನದಿಂದಲೂ ಗ್ರಹಿಕೆಯಿಂದಲೂ ತಿಳುವಳಿಕೆಯಿಂದಲೂ ಎಲ್ಲಾ ತರಹದ ಕಂಚಿನ ಕೆಲಸವನ್ನು ಮಾಡುವ ಅನುಭವಶಾಲಿಯಾಗಿದ್ದನು. ಅವನು ಅರಸನಾದ ಸೊಲೊಮೋನನ ಬಳಿಗೆ ಬಂದು, ಅವನ ಕೆಲಸವನ್ನೆಲ್ಲಾ ಮಾಡಿದನು.

[15] ಅವನು ಎರಡು ಕಂಚಿನ ಸ್ತಂಭಗಳನ್ನು ಮಾಡಿದನು. ಒಂದೊಂದು ಸ್ತಂಭ 8 ಮೀಟರ್ ಉದ್ದ. ಒಂದೊಂದು ಸ್ತಂಭದ ಸುತ್ತಳತೆ 5.3 ಮೀಟರ್ ನೂಲಳತೆ ಇತ್ತು.

[16] ಆ ಸ್ತಂಭಗಳ ಮೇಲೆ ಇರಿಸಲು ಕಂಚಿನ ಎರಕ ಹೊಯ್ದ ಎರಡು ಕುಂಭಗಳನ್ನು ಮಾಡಿದನು. ಒಂದೊಂದು ಕುಂಭವು 2.2 ಮೀಟರ್ ಎತ್ತರವಾಗಿತ್ತು.

[17] ಸ್ತಂಭಗಳ ಕೊನೆಯಲ್ಲಿ ಇರುವ ಕುಂಭಗಳಿಗೆ ಜಾಲರಿಯ ಹಾಗೆ ಇರುವ ಹಣತೆಗಳೂ, ಸರಪಣಿಗಳ ಹಾಗಿರುವ ಗೊಂಡೆಗಳೂ ಇದ್ದವು. ಅವು ಒಂದೊಂದು ಕಂಬಕ್ಕೆ ಏಳು ಇದ್ದವು.

[18] ಸ್ತಂಭಗಳಿಗೆ ಇನ್ನೂ ಮಾಡಿದ್ದು ಹೇಗೆಂದರೆ, ಕೊನೆಯಲ್ಲಿರುವ ಕುಂಭಗಳನ್ನು ಮುಚ್ಚುವ ಹಾಗೆ ಕುಂಭಗಳೊಳಗೆ ಒಂದೊಂದರಲ್ಲಿ ಜಾಲರಿ ಕೆಲಸದ ಮೇಲೆ ಸುತ್ತಲೂ ಎರಡು ಸಾಲು ದಾಳಿಂಬೆ ಹಣ್ಣುಗಳನ್ನು ಮಾಡಿದನು.

[19] ಮಂಟಪದ ಮುಂದಿರುವ, ಆ ಸ್ತಂಭಗಳ ಕೊನೆಯ ಮೇಲಿರುವ ಕುಂಭಗಳು ತಾವರೆ ಪುಷ್ಪಗಳ ಕೃತಿ 2 ಮೀಟರ್ ಎತ್ತರವಾಗಿದ್ದವು.

[20] ಎರಡು ಸ್ತಂಭಗಳ ಮೇಲಿರುವ ಕುಂಭಗಳಲ್ಲಿ ಉನ್ನತ ಜಾಲರಿಯ ಕೃತಿಯ ಸಮೀಪದಲ್ಲಿರುವ ಅದರ ಹೊಟ್ಟೆಯ ಎದುರಾಗಿ, ಇನ್ನೂರು ದಾಳಿಂಬೆಗಳು ಸಾಲುಗಳಾಗಿ ಸುತ್ತಲೂ ಇದ್ದವು. ಮತ್ತೊಂದು ಕುಂಭಕ್ಕೂ ಹೀಗೆಯೇ ಇತ್ತು.

[21] ಆ ಸ್ತಂಭಗಳನ್ನು ಮಂದಿರದ ಮಂಟಪದ ಮುಂದೆ ನಿಲ್ಲಿಸಿದನು. ಅವನು ಬಲಗಡೆಯಲ್ಲಿ ನಿಲ್ಲಿಸಿದ ಸ್ತಂಭಕ್ಕೆ ಯಾಕೀನ್ ಎಂದೂ, ಎಡಗಡೆಯ ಸ್ತಂಭಕ್ಕೆ ಬೋವಾಜ್ ಎಂದೂ ಹೆಸರಿಟ್ಟನು.

[22] ಸ್ತಂಭಗಳ ತಲೆಯಲ್ಲಿ ತಾವರೆ ಪುಷ್ಪಗಳ ಕೆಲಸವಾಗಿತ್ತು. ಹೀಗೆ ಸ್ತಂಭಗಳ ಕೃತಿಯು ಮುಗಿಯಿತು.

[23] ಅನಂತರ ಅವನು ಸಮುದ್ರಪಾತ್ರೆ ಎಂದು ಕರೆಯಲಾಗುವ ಎರಕದ ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದು ಚಕ್ರಾಕಾರವಾಗಿ ಅಂಚಿನಿಂದ ಅಂಚಿಗೆ ಸುಮಾರು ನಾಲ್ಕು ಮೀಟರ್. ಅದರ ಎತ್ತರ ಸುಮಾರು ಎರಡು ಮೀಟರ್. ಸುತ್ತಳತೆ ಸುಮಾರು ಹದಿನಾಲ್ಕು ಮೀಟರಾಗಿತ್ತು.

[24] ಅದರ ಅಂಚಿನ ಕೆಳಭಾಗದಲ್ಲಿ ಅದರ ಸುತ್ತಲೂ ಅಲಂಕಾರದ ಕಾಯಿಗಳಿದ್ದವು. ಅವು ಒಂದೊಂದು ಮೀಟರಿಗೆ ಹತ್ತರಂತೆ, ಆ ಕೊಳದ ಪಾತ್ರೆಯ ಸುತ್ತಲೂ ಇದ್ದವು. ಇದು ಎರಕ ಹೊಯ್ಯುವಾಗ ಅಲಂಕಾರದ ಕಾಯಿಗಳು ಎರಡು ಸಾಲಾಗಿ ಎರಕ ಹೊಯ್ದಿದ್ದವು.

[25] ಅದು ಹನ್ನೆರಡು ಎತ್ತುಗಳ ಮೇಲೆ ನಿಂತಿತ್ತು. ಮೂರು ಉತ್ತರಕ್ಕೂ, ಮೂರು ಪಶ್ಚಿಮಕ್ಕೂ, ಮೂರು ದಕ್ಷಿಣಕ್ಕೂ, ಮೂರು ಪೂರ್ವಕ್ಕೂ ಮುಖಮಾಡಿಕೊಂಡಿದ್ದವು. ಆ ಕೊಳವು ಅವುಗಳ ಮೇಲೆ ಇತ್ತು. ಅವುಗಳ ಹಿಂಭಾಗಗಳೆಲ್ಲಾ ಒಳಮುಖವಾಗಿದ್ದವು.

[26] ಅದರ ದಪ್ಪವು ಅಂಗೈ ಅಗಲದಷ್ಟಾಗಿಯೂ, ಅದರ ಅಂಚು ಪಾತ್ರೆಯ ಅಂಚಿನ ಹಾಗೆಯೂ, ತಾವರೆ ಪುಷ್ಪದ ಹಾಗೆಯೂ ಇತ್ತು. ಅದು ನಾಲ್ವತ್ತು ನಾಲ್ಕು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.

[27] ಅವನು ಹತ್ತು ಕಂಚಿನ ಚಲಿಸುವ ಪೀಠಗಳನ್ನು ಮಾಡಿದನು. ಒಂದೊಂದು ಪೀಠವು 1.8 ಮೀಟರ್ ಉದ್ದವೂ, 1.8 ಮೀಟರ್ ಅಗಲವೂ, 1.4 ಮೀಟರ್ ಎತ್ತರವೂ ಆಗಿದ್ದವು.

[28] ಆ ಪೀಠಗಳ ಮೇಲಿರುವ ಕೆಲಸ ಹೇಗೆಂದರೆ, ಅವುಗಳಿಗೆ ಅಂಚುಗಳಿದ್ದವು. ಅವು ಅಂಚುಗಳ ಹಲಗೆಗಳ ನಡುವೆ ಇದ್ದವು.

[29] ಹಲಗೆಗಳ ನಡುವೆ ಇರುವ ಆ ಅಂಚುಗಳಲ್ಲಿ ಸಿಂಹಗಳೂ, ಎತ್ತುಗಳೂ, ಕೆರೂಬಿಗಳೂ ಇದ್ದವು. ಹಲಗೆಗಳ ಮೇಲ್ಭಾಗದಲ್ಲಿ ಒಂದು ಅಂಚು ಇತ್ತು. ಸಿಂಹಗಳಿಗೂ, ಎತ್ತುಗಳಿಗೂ ಕೆಳಭಾಗದಲ್ಲಿ ತೋರಣಗಳು ಅದರ ಸಂಗಡ ಇದ್ದವು.

[30] ಒಂದೊಂದು ಪೀಠಕ್ಕೆ ನಾಲ್ಕು ಕಂಚಿನ ಗಾಲಿಗಳೂ, ಕಂಚಿನ ಅಚ್ಚುಗಳೂ ಇದ್ದವು. ಅದರ ನಾಲ್ಕು ಮೂಲೆಗಳಿಗೂ ಹೂಗಳ ತೋರಣಗಳ ಜೋಡಣೆಗಳಿದ್ದವು.

[31] ಅಂಚಿಗೆ ಒಳಗಾದ ಅದರ ಬಾಯಿ ಮೇಲೆ ಒಂದು ಮೊಳ ಉದ್ದವಾಗಿತ್ತು. ಚಕ್ರಾಕಾರವಾಗಿದ್ದ ಈ ಬಾಯಿ ಒಂದೂವರೆ ಮೊಳ ಅಗಲವಾಗಿತ್ತು. ಅದರ ಬಾಯಿಯ ಮೇಲೆ ಚಿತ್ರಗಳಿದ್ದವು. ಅದರ ಚಿತ್ರಗಳು ದುಂಡಾಗಿರದೆ ಚೌಕವಾಗಿದ್ದವು.

[32] ಅಂಚುಗಳ ಕೆಳಗೆ ನಾಲ್ಕು ಗಾಲಿಗಳಿದ್ದವು. ಗಾಲಿಗಳ ಅಚ್ಚುಗಳು ಪೀಠದಲ್ಲಿದ್ದವು. ಒಂದೊಂದು ಗಾಲಿಯು ಒಂದೂವರೆ ಮೊಳವಾಗಿತ್ತು. ಗಾಲಿಗಳ ಮೇಲೆ ಇದ್ದ ಕೆಲಸವು ರಥದ ಗಾಲಿಯ ಕೆಲಸದ ಹಾಗೆ ಇತ್ತು.

[33] ಅವುಗಳ ಇರುಸುಗಳೂ, ಅಣಸುಗಳೂ, ಚಕ್ರಗಳೂ, ಅವುಗಳ ಕಂಬಿಗಳೂ ಎರಕ ಹೊಯ್ದ ಕಂಚಿನಿಂದ ಮಾಡಲಾಗಿತ್ತು.

[34] ಒಂದೊಂದು ಪೀಠದ ನಾಲ್ಕು ಮೂಲೆಗಳಲ್ಲಿ ಅಂಚುಗಳಿದ್ದವು. ಪೀಠದಲ್ಲಿಂದಲೇ ಅಖಂಡವಾಗಿದ್ದವು.

[35] ಪೀಠದ ತಲೆಯಲ್ಲಿ 23 ಸೆಂಟಿಮೀಟರ್ ದುಂಡಾದ ಬಾಯಿ ಇತ್ತು. ಪೀಠದ ತಲೆಯ ಮೇಲೆ ಅದರ ಕೈಪಿಡಿಗಳೂ, ಅದರ ಅಂಚುಗಳೂ ಅಖಂಡವಾಗಿದ್ದವು.

[36] ಅದರದರ ಪ್ರಮಾಣದ ಪ್ರಕಾರ ಹಲಗೆಗಳ ಕೈಹಿಡಿಗಳ ಮೇಲೆಯೂ ಅಂಚುಗಳ ಮೇಲೆಯೂ ಕೆರೂಬಿ, ಸಿಂಹ ಖರ್ಜೂರ ವೃಕ್ಷಗಳನ್ನು ಚಿತ್ರಿಸಿದನು. ಸುತ್ತಲೂ ಅದರದರ ಪ್ರಮಾಣದ ಪ್ರಕಾರ ಪುಷ್ಪ ತೋರಣಗಳನ್ನು ಚಿತ್ರಿಸಿದನು.

[37] ಈ ಪ್ರಕಾರ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳಿಗೆಲ್ಲಾ ಒಂದೇ ಎರಕವೂ, ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇದ್ದವು.

[38] ಹತ್ತು ಕಂಚಿನ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು 800 ಲೀಟರ್ ನೀರು ಹಿಡಿಯುತ್ತಿತ್ತು. ಒಂದೊಂದು ತೊಟ್ಟಿಯು 2 ಮೀಟರ್ ಇದ್ದವು. ಪ್ರತಿಯೊಂದು ಪೀಠಗಳ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.

[39] ಆಲಯದ ದಕ್ಷಿಣ ದಿಕ್ಕಿಗೆ ಐದು ಪೀಠಗಳನ್ನೂ, ಆಲಯದ ಉತ್ತರ ದಿಕ್ಕಿಗೆ ಐದು ಪೀಠಗಳನ್ನೂ ಇಟ್ಟನು. ಆದರೆ ಜಲಾಶಯವನ್ನು ಆಲಯದ ದಕ್ಷಿಣ ದಿಕ್ಕಿಗೆ ಅಂದರೆ ಆಲಯದ ಆಗ್ನೇಯ ಮೂಲೆಯಲ್ಲಿ ಇಟ್ಟನು.

[40] ಇದಲ್ಲದೆ ಹೂರಾಮನು ಪಾತ್ರೆಗಳನ್ನೂ, ಸಲಿಕೆಗಳನ್ನೂ, ಬಟ್ಟಲುಗಳನ್ನೂ ಮಾಡಿದನು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನು ಒಪ್ಪಿಸಿದ ಎಲ್ಲಾ ಕೆಲಸಗಳನ್ನು ಹೂರಾಮನು ಮಾಡಿ ತೀರಿಸಿದನು:

[41] ಅವು ಯಾವುವೆಂದರೆ, ಎರಡು ಸ್ತಂಭಗಳು, ಆ ಸ್ತಂಭಗಳ ಮೇಲಿನ ಎರಡು ಕುಂಭಗಳು, ಆ ಎರಡು ಕುಂಭಗಳನ್ನು ಮುಚ್ಚುವ ಎರಡು ಜಾಲರಿಗಳು.

[42] ಎರಡು ಜಾಲರಿ ಸಾಮಾನುಗಳಿಗೆ ನಾನೂರು ದಾಳಿಂಬೆ ಹಣ್ಣುಗಳು, ಸ್ತಂಭಗಳ ಮೇಲೆ ಇರುವ ಎರಡು ಕುಂಭಗಳನ್ನು ಮುಚ್ಚುವಂತೆ ಒಂದು ಜಾಲರಿ ಸಲಕರಣೆಗಳಿಗೆ ಎರಡು ಸಾಲಿನ ದಾಳಿಂಬೆ ಹಣ್ಣುಗಳು,

[43] ಹತ್ತು ಪೀಠಗಳು, ಅವುಗಳ ಮೇಲಿರುವ ಹತ್ತು ತೊಟ್ಟಿಗಳು,

[44] ಸಮುದ್ರಪಾತ್ರೆಯು ಅದರ ಕೆಳಗಿರುವ ಹನ್ನೆರಡು ಎತ್ತುಗಳು,

[45] ಪಾತ್ರೆಗಳು, ಸಲಿಕೆಗಳು, ಬೋಗುಣಿಗಳು. ಯೆಹೋವ ದೇವರ ಆಲಯಕ್ಕೋಸ್ಕರ ಅರಸನಾದ ಸೊಲೊಮೋನನಿಗೆ ಹೂರಾಮನು ಮಾಡಿದ ಈ ಸಲಕರಣೆಗಳೆಲ್ಲಾ ಹೊಳೆಯುವ ಕಂಚಿನವುಗಳಾಗಿದ್ದವು.

[46] ಯೊರ್ದನಿಗೆ ಸೇರಿದ ಬಯಲಾದ ಸುಕ್ಕೋತಿಗೂ, ಚಾರೆತಾನಿಗೂ ನಡುವೆ ಇರುವ ಜೇಡಿಮಣ್ಣಿನ ಅಚ್ಚುಗಳಲ್ಲಿ ಅರಸನು ಅವುಗಳನ್ನು ಎರಕ ಹೊಯ್ಯಿಸಿದನು.

[47] ಸೊಲೊಮೋನನು ಮಾಡಿಸಿದ ಈ ಸಲಕರಣೆಗಳೆಲ್ಲಾ ಬಹು ಹೆಚ್ಚಾಗಿದ್ದರಿಂದ ಅವುಗಳನ್ನು ಎಣಿಸದೆ ಬಿಟ್ಟನು, ಹೀಗಾಗಿ ಕಂಚಿನ ತೂಕವು ಎಷ್ಟೆಂದು ನಿರ್ಧರಿಸಲಾಗಲಿಲ್ಲ.

[48] ಸೊಲೊಮೋನನು ಯೆಹೋವ ದೇವರ ಆಲಯದ ಎಲ್ಲಾ ಸಲಕರಣೆಗಳನ್ನು ಮಾಡಿಸಿದನು. ಅವು ಯಾವುವೆಂದರೆ: ಬಂಗಾರದ ಧೂಪವೇದಿಯನ್ನು ಸಮ್ಮುಖದ ರೊಟ್ಟಿಗಳನ್ನು ಇಡುವುದಕ್ಕೆ ಚಿನ್ನದ ಮೇಜೂ,

[49] ಮಹಾಪರಿಶುದ್ಧ ಸ್ಥಳದ ಮುಂಭಾಗದ ಬಲಗಡೆಯಲ್ಲಿ ಐದು, ಎಡಗಡೆಯಲ್ಲಿ ಐದು ಶುದ್ಧ ಬಂಗಾರದ ದೀಪಸ್ತಂಭಗಳೂ, ಅದರ ಬಂಗಾರದ ಹೂವುಗಳೂ, ದೀಪಗಳೂ, ಚಿಮಟಗಳೂ,

[50] ಶುದ್ಧ ಬಂಗಾರದಿಂದ ಕತ್ತರಿಗಳು, ಬೋಗುಣಿಗಳು, ಅಗ್ನಿಪಾತ್ರೆಗಳು, ಅಗ್ಗಿಷ್ಟಿಗೆ ಇವುಗಳನ್ನು ಮಾಡಿಸಿದನು. ಇದಲ್ಲದೆ ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯ ಬಾಗಿಲುಗಳಿಗೂ, ಮಂದಿರದ ಮನೆಯ ಬಾಗಿಲುಗಳಿಗೂ ಬಂಗಾರದ ಕೀಲುಗಳನ್ನು ಮಾಡಿಸಿದನು.

[51] ಹೀಗೆಯೇ ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕೋಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಯಿತು. ಆಗ ಸೊಲೊಮೋನನು ತನ್ನ ತಂದೆ ದಾವೀದನು ಪ್ರತಿಷ್ಠೆ ಮಾಡಿದ ಬೆಳ್ಳಿಯನ್ನೂ, ಬಂಗಾರವನ್ನೂ, ಎಲ್ಲಾ ಸಲಕರಣೆಗಳನ್ನೂ ಯೆಹೋವ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.

1 ಅರಸುಗಳು — Chapters