Skip to content
Opens in a new window
Listen to this chapter • 7:37

[1] ಇಸ್ರಾಯೇಲರು ಈಜಿಪ್ಟ್ ದೇಶದಿಂದ ಬಂದ ನಾನೂರ ಎಂಬತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋನನ ಆಳಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಾದ ಜಿವ್ ತಿಂಗಳಲ್ಲಿ ಅವನು ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.

[2] ಅರಸನಾದ ಸೊಲೊಮೋನನು ಯೆಹೋವ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದನು, ಅದರ ಉದ್ದ ಸುಮಾರು 27 ಮೀಟರ್, ಅದರ ಅಗಲ 9 ಮೀಟರ್, ಅದರ ಎತ್ತರ 14 ಮೀಟರ್.

[3] ಮಂದಿರದ ಮುಂದೆ ಮಂಟಪವಿತ್ತು. ಅದು ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು. ಆಲಯದ ಮುಂದೆ ಇರುವ ಅದರ ಅಗಲವು 4.5 ಮೀಟರ್.

[4] ಅವನು ಸಣ್ಣ ಜಾಲರಿಗಳುಳ್ಳ ಕಿಟಿಕಿಗಳನ್ನು ಆಲಯಕ್ಕೆ ಮಾಡಿಸಿದನು.

[5] ಕಟ್ಟಡದ ಹೊರಗಿನ ಗೋಡೆಗಳ ಸುತ್ತಲೂ, ಸೊಲೊಮೋನನು ಅನೇಕ ಕೋಣೆಗಳ ಸಂಕೀರ್ಣವನ್ನು ಎರಡೂ ಬದಿಗಳಲ್ಲಿ ನಿರ್ಮಿಸಿದನು.

[6] ಕೆಳಗಿರುವ ಕೊಠಡಿಯು 2.2 ಮೀಟರ್ ಅಗಲ, ಎರಡನೆಯದು 2.7 ಮೀಟರ್ ಅಗಲ, ಮೂರನೆಯದು 3.1 ಮೀಟರ್ ಅಗಲ. ಏಕೆಂದರೆ ತೊಲೆಗಳು ಆಲಯದ ಗೋಡೆಗಳಲ್ಲಿ ತಗಲದ ಹಾಗೆ ಆಲಯದ ಸುತ್ತಲೂ ಹೊರಗಡೆಯಲ್ಲಿ ನಿಲ್ಲುವ ಅಂತಸ್ತುಗಳನ್ನು ಕಟ್ಟಿಸಿದನು.

[7] ಆಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಆಲಯವನ್ನು ಕಟ್ಟುತ್ತಿರುವಾಗ, ಅದರಲ್ಲಿ ಸುತ್ತಿಗೆ, ಉಳಿ, ಕಬ್ಬಿಣದ ಉಪಕರಣಗಳ ಶಬ್ದವೇ ಕೇಳಲಿಲ್ಲ.

[8] ಮಧ್ಯ ಕೊಠಡಿಯ ಬಾಗಿಲು ಆಲಯದ ದಕ್ಷಿಣ ಭಾಗದಲ್ಲಿ ಇತ್ತು. ಅಲ್ಲಿಂದ ಮಧ್ಯ ಕೊಠಡಿಗೂ, ಮಧ್ಯ ಕೊಠಡಿಯಿಂದ ಮೂರನೆಯ ಕೊಠಡಿಗೂ ಹತ್ತಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.

[9] ಹೀಗೆಯೇ ಅವನು ಆಲಯವನ್ನು ಕಟ್ಟಿ, ತೀರಿಸಿದ ತರುವಾಯ, ಆಲಯವನ್ನು ದೇವದಾರುಗಳ ತೊಲೆಗಳಿಂದಲೂ, ಹಲಗೆಗಳಿಂದಲೂ ಮುಚ್ಚಿಸಿದನು.

[10] ಅವನು 2.2 ಮೀಟರ್ ಎತ್ತರವಾದ ಕೊಠಡಿಗಳನ್ನು ಆಲಯದ ಬಳಿಯಲ್ಲಿ ಸುತ್ತಲು ಕಟ್ಟಿಸಿದನು. ಅವು ಆಲಯದ ಮೇಲೆ ಇರಿಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.

[11] ಆಗ ಯೆಹೋವ ದೇವರ ವಾಕ್ಯವು ಸೊಲೊಮೋನನಿಗೆ ಬಂದಿತು,

[12] “ನೀನು ಕಟ್ಟಿಸುವ ಈ ಆಲಯವನ್ನು ಕುರಿತು ನನ್ನ ಕಟ್ಟಳೆಗಳಲ್ಲಿ ನಡೆದು, ನನ್ನ ನ್ಯಾಯಗಳ ಪ್ರಕಾರಮಾಡಿ, ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಗೊಂಡರೆ, ನಾನು ನಿನ್ನ ತಂದೆ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರಮಾಡಿ,

[13] ನನ್ನ ಜನವಾದ ಇಸ್ರಾಯೇಲರ ಕೈಬಿಡದೆ, ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿರುವೆನು,” ಎಂದರು.

[14] ಸೊಲೊಮೋನನು ಆಲಯವನ್ನು ಕಟ್ಟಿಸಿ, ತೀರಿಸಿದನು.

[15] ಆಲಯದ ಗೋಡೆಗಳ ಒಳಭಾಗಕ್ಕೆ ಮಂದಿರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯವರೆಗೂ ದೇವದಾರು ಹಲಗೆಗಳಿಂದ ಕಟ್ಟಿಸಿದನು. ಒಳಭಾಗದಲ್ಲಿ ಮರದಿಂದ ಮುಚ್ಚಿ, ಆಲಯದ ನೆಲವನ್ನು ತುರಾಯಿ ಮರಗಳ ಹಲಗೆಗಳಿಂದ ಮುಚ್ಚಿದನು.

[16] ಅವನು ಆಲಯದ ಕಡೆಗಳಲ್ಲಿ 9 ಮೀಟರ್ ನೆಲವನ್ನೂ, ಗೋಡೆಗಳನ್ನೂ, ದೇವದಾರುಗಳ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಅತಿ ಪರಿಶುದ್ಧಸ್ಥಳದ ಅಂಗನ ಅಥವಾ ಮಹಾಪರಿಶುದ್ಧ ಸ್ಥಳವೆಂದು ಕಟ್ಟಿಸಿದನು.

[17] ಅದರ ಮುಂದಿರುವ ಮಂದಿರವಾಗಿರುವ ಆಲಯ 18 ಮೀಟರ್ ಉದ್ದವಾಗಿತ್ತು.

[18] ಆಲಯದ ಒಳಗಿರುವ ದೇವದಾರು ಮೊಗ್ಗುಗಳೂ, ಅರಳಿದ ಹೂವುಗಳೂ ಕೆತ್ತಿದ ಕೆಲಸಗಳಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಎಲ್ಲಾ ದೇವದಾರದ್ದಾಗಿತ್ತು.

[19] ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಅಲ್ಲಿ ಇರಿಸುವುದಕ್ಕೆ ಆಲಯದ ಒಳಗೆ ದೈವೋಕ್ತಿಯ ಸ್ಥಾನವನ್ನು ಸಿದ್ಧಮಾಡಿಸಿದನು.

[20] ದೈವೋಕ್ತಿಯ ಸ್ಥಾನದ ಮುಂಭಾಗದ ಪ್ರಮಾಣವು, 9 ಮೀಟರ್ ಉದ್ದ, 9 ಮೀಟರ್ ಅಗಲ, 9 ಮೀಟರ್ ಎತ್ತರ ಇತ್ತು. ಅದನ್ನು ಶುದ್ಧ ಬಂಗಾರದಿಂದ ಹೊದಿಸಿದನು. ದೇವದಾರು ಮರದ ಪೀಠವನ್ನು ಹಾಗೆಯೇ ಹೊದಿಸಿದನು.

[21] ಸೊಲೊಮೋನನು ಆಲಯದ ಒಳಭಾಗವನ್ನು ಶುದ್ಧ ಬಂಗಾರದಿಂದ ಹೊದಿಸಿ, ದೈವೋಕ್ತಿಯ ಸ್ಥಾನದ ಮುಂದೆ ಬಂಗಾರದ ಸರಪಣಿಗಳಿಂದ ವಿಭಾಗವನ್ನು ಮಾಡಿ, ಅದನ್ನು ಬಂಗಾರದಿಂದ ಹೊದಿಸಿದನು.

[22] ಅವನು ಆಲಯವನ್ನೆಲ್ಲಾ ಬಂಗಾರದಿಂದ ಹೊದಿಸಿ, ಸ್ಥಾನದ ಮುಂಭಾಗದಲ್ಲಿರುವ ಪೀಠವನ್ನೂ ಬಂಗಾರದಿಂದ ಹೊದಿಸಿದನು.

[23] ಅವನು ದೈವೋಕ್ತಿಯ ಸ್ಥಾನದಲ್ಲಿ ಹಿಪ್ಪೇಮರಗಳಿಂದ ಎರಡು ಕೆರೂಬಿಗಳನ್ನು ಮಾಡಿಸಿದನು. ಒಂದೊಂದು 4.4 ಮೀಟರ್ ಎತ್ತರವಾಗಿತ್ತು.

[24] ಕೆರೂಬಿಗೆ ಇರುವ ಒಂದೊಂದು ರೆಕ್ಕೆ 2.2 ಮೀಟರ್ ಆಗಿತ್ತು. ಒಂದು ರೆಕ್ಕೆಯ ಕೊನೆ ಮೊದಲುಗೊಂಡು, ಮತ್ತೊಂದು ರೆಕ್ಕೆಯ ಕೊನೆಯವರೆಗೂ 4.4 ಮೀಟರ್ ಆಗಿತ್ತು.

[25] ಎರಡನೆಯ ಕೆರೂಬಿಯು 4.4 ಮೀಟರ್. ಎರಡು ಕೆರೂಬಿಗಳಿಗೂ ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇತ್ತು.

[26] ಒಂದು ಕೆರೂಬಿಯು 4.4 ಮೀಟರ್ ಎತ್ತರವಾಗಿತ್ತು. ಎರಡನೆಯ ಕೆರೂಬಿಯು ಅದರ ಹಾಗೆಯೇ ಇತ್ತು.

[27] ಆ ಕೆರೂಬಿಗಳನ್ನು ದೇವಾಲಯದ ಒಳ ಮನೆಯೊಳಗೆ ಇಟ್ಟನು. ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವುದರಿಂದ ಒಂದು ರೆಕ್ಕೆಯ ಈ ಭಾಗದ ಗೋಡೆಯನ್ನೂ, ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು. ಆಲಯದ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.

[28] ಆ ಕೆರೂಬಿಗಳನ್ನು ಬಂಗಾರದ ತಗಡುಗಳಿಂದ ಹೊದಿಸಿದನು.

[29] ಅವನು ಆಲಯದ ಗೋಡೆಗಳ ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ, ಖರ್ಜೂರದ ಗಿಡಗಳನ್ನೂ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು.

[30] ಆಲಯದ ಒಳಗಿನ ಮತ್ತು ಹೊರಗಿನ ನೆಲವನ್ನು ಬಂಗಾರ ತಗಡುಗಳಿಂದ ಹೊದಿಸಿದನು.

[31] ಅವನು ದೈವೋಕ್ತಿಯ ಸ್ಥಾನದ ಬಾಗಿಲಿಗೆ ಹಿಪ್ಪೇಮರಗಳಿಂದ ಜೋಡು ಬಾಗಿಲುಗಳನ್ನು ಮಾಡಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು.

[32] ಹಿಪ್ಪೇಮರದ ಆ ಜೋಡು ಬಾಗಿಲುಗಳ ಮೇಲೆ ಅವನು ಕೆರೂಬಿ, ಖರ್ಜೂರದ ವೃಕ್ಷ, ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಆ ಕೆರೂಬಿಗಳನ್ನೂ, ಖರ್ಜೂರ ಗಿಡಗಳನ್ನೂ, ಬಂಗಾರದ ತಗಡಿನಿಂದ ಹೊದಿಸಿದನು.

[33] ಅದೇ ರೀತಿಯಲ್ಲಿ, ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿದನು.

[34] ಅದಕ್ಕೆ ತುರಾಯಿ ಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಚಬಹುದಾಗಿತ್ತು.

[35] ಅದರ ಮೇಲೆ ಕೆರೂಬಿಗಳ, ಖರ್ಜೂರ ಗಿಡಗಳ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು. ಈ ಕೆತ್ತನೆಗಳ ಮೇಲೆ ಸಮವಾಗಿ ಬಂಗಾರದ ತಗಡನ್ನು ಹೊದಿಸಿದನು.

[36] ಅವನು ಒಳಗಿನ ಅಂಗಳವನ್ನು ಕೆತ್ತಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.

[37] ನಾಲ್ಕನೆಯ ವರ್ಷದ ಜಿವ್ ತಿಂಗಳಲ್ಲಿ ಯೆಹೋವ ದೇವರ ಆಲಯದ ಅಸ್ತಿವಾರವು ಹಾಕಲಾಯಿತು.

[38] ಹನ್ನೊಂದನೆಯ ವರ್ಷದ, ಎಂಟನೆಯ ತಿಂಗಳಾದ ಬೂಲ್ ಎಂಬ ಕಾರ್ತಿಕ ತಿಂಗಳಲ್ಲಿ ಆ ದೇವಾಲಯದ ಎಲ್ಲಾ ಭಾಗಗಳೂ ಯೋಜನೆಯ ಪ್ರಕಾರ ಕಟ್ಟಲಾಯಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.

1 ಅರಸುಗಳು — Chapters