Skip to content
Opens in a new window
Listen to this chapter • 9:58

[1] ತರುವಾಯ ಯೇಸು ಯೆಹೂದ್ಯರ ಒಂದು ಹಬ್ಬಕ್ಕಾಗಿ ಜೆರುಸಲೇಮಿಗೆ ಹೋದನು.

[2] ಜೆರುಸಲೇಮಿನಲ್ಲಿ ಐದು ಮಂಟಪಗಳಿಂದ ಕೂಡಿದ ಒಂದು ಕೊಳವಿದೆ. ಯೆಹೂದ್ಯರ ಭಾಷೆಯಲ್ಲಿ ಅದಕ್ಕೆ “ಬೆತ್ಸಥ” ಎಂದು ಕರೆಯುತ್ತಾರೆ. ಈ ಕೊಳವು “ಕುರಿಬಾಗಿಲು” ಎಂಬ ಸ್ಥಳದ ಸಮೀಪದಲ್ಲಿದೆ.

[3] ಕೊಳದ ಬಳಿಯಲ್ಲಿದ್ದ ಮಂಟಪಗಳಲ್ಲಿ ಅನೇಕ ರೋಗಿಗಳು ಬಿದ್ದುಕೊಂಡಿರುತ್ತಿದ್ದರು. ಅವರಲ್ಲಿ ಕೆಲವರು ಕುರಡರಾಗಿದ್ದರು, ಕೆಲವರು ಕುಂಟರಾಗಿದ್ದರು, ಮತ್ತೆ ಕೆಲವರು, ಪಾರ್ಶ್ವವಾಯು ರೋಗಿಗಳಾಗಿದ್ದರು.

[4]

[5] ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಒಬ್ಬನು ಅಲ್ಲಿ ಬಿದ್ದುಕೊಂಡಿದ್ದನು.

[6] ಯೇಸು ಅವನನ್ನು ನೋಡಿದನು. ಅವನು ಬಹುಕಾಲದಿಂದ ರೋಗಿಯಾಗಿರುವುದು ಆತನಿಗೆ ಗೊತ್ತಿತ್ತು. ಆದ್ದರಿಂದ ಆತನು ಅವನಿಗೆ, “ಗುಣಹೊಂದಲು ನಿನಗೆ ಅಪೇಕ್ಷೆ ಇದೆಯಾ?” ಎಂದು ಕೇಳಿದನು.

[7] ಆ ರೋಗಿಯು, “ಅಯ್ಯಾ, ನೀರು ಉಕ್ಕುವಾಗ ಕೊಳದೊಳಗೆ ಇಳಿದುಹೋಗಲು ನನಗೆ ಯಾರೂ ಸಹಾಯ ಮಾಡುವುದಿಲ್ಲ. ನಾನು ಎಲ್ಲರಿಗಿಂತ ಮೊದಲೇ ನೀರಿಗೆ ಇಳಿಯಲು ಪ್ರಯತ್ನಿಸುವೆ. ಆದರೆ ಪ್ರತಿಸಲವೂ ನನಗಿಂತ ಮೊದಲೇ ಮತ್ತೊಬ್ಬನು ಇಳಿದುಬಿಡುತ್ತಾನೆ” ಎಂದು ಹೇಳಿದನು.

[8] ಆಗ ಯೇಸು, “ಎದ್ದುನಿಲ್ಲು! ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ” ಎಂದು ಹೇಳಿದನು.

[9] ಆ ಕ್ಷಣವೇ ಆ ಮನುಷ್ಯನು ಗುಣಹೊಂದಿ, ತನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆದನು. ಇದೆಲ್ಲಾ ನಡೆದದ್ದು ಸಬ್ಬತ್‌ದಿನದಲ್ಲಿ.

[10] ಆದ್ದರಿಂದ ಯೆಹೂದ್ಯರು ಗುಣಹೊಂದಿದ ಆ ವ್ಯಕ್ತಿಗೆ, “ಇಂದು ಸಬ್ಬತ್‌ದಿನ. ನೀನು ಸಬ್ಬತ್‌ದಿನದಲ್ಲಿ ಹಾಸಿಗೆಯನ್ನು ಹೊತ್ತುಕೊಂಡು ಹೋಗುವುದು ನಮ್ಮ ಧರ್ಮಶಾಸ್ತ್ರಕ್ಕೆ ವಿರುದ್ಧವಾದದ್ದು” ಎಂದರು.

[11] ಅದಕ್ಕೆ ಅವನು, “ನನ್ನನ್ನು ಗುಣಪಡಿಸಿದವನೇ, ‘ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ’ ಎಂದು ಹೇಳಿದನು” ಎಂಬುದಾಗಿ ಉತ್ತರಿಸಿದನು.

[12] ಅದಕ್ಕೆ ಅವರು, “ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆಯಲು ನಿನಗೆ ಹೇಳಿದವನು ಯಾರು?” ಎಂದು ಕೇಳಿದರು.

[13] ಆದರೆ ಗುಣಹೊಂದಿದ್ದ ವ್ಯಕ್ತಿಗೆ ತನ್ನನ್ನು ಗುಣಪಡಿಸಿದವನು ಯಾರೆಂಬುದು ಗೊತ್ತಿರಲಿಲ್ಲ. ಆ ಸ್ಥಳದಲ್ಲಿ ಅನೇಕ ಜನರಿದ್ದರು. ಯೇಸು ಆ ಸ್ಥಳದಿಂದ ನುಸುಳಿಕೊಂಡು ಹೊರಟುಹೋದನು.

[14] ಅನಂತರ ಯೇಸು ಆ ಮನುಷ್ಯನನ್ನು ದೇವಾಲಯದಲ್ಲಿ ಕಂಡು ಅವನಿಗೆ, “ನೋಡು, ಈಗ ನೀನು ಗುಣಹೊಂದಿರುವೆ. ಆದರೆ ಪಾಪ ಮಾಡುವುದನ್ನು ಬಿಟ್ಟುಬಿಡು. ಇಲ್ಲದಿದ್ದರೆ ಹೆಚ್ಚಿನ ಕೇಡು ನಿನಗೆ ಸಂಭವಿಸಬಹುದು!” ಎಂದು ಹೇಳಿದನು.

[15] ಆಗ ಆ ಮನುಷ್ಯನು ಆ ಯೆಹೂದ್ಯರ ಬಳಿಗೆ ಹೋಗಿ ತನ್ನನ್ನು ಗುಣಪಡಿಸಿದವನು ಯೇಸುವೇ ಎಂದು ತಿಳಿಸಿದನು.

[16] ಯೇಸು ಈ ಕಾರ್ಯಗಳನ್ನು ಸಬ್ಬತ್‌ದಿನದಲ್ಲಿ ಮಾಡುತ್ತಿದ್ದನು. ಈ ಕಾರಣದಿಂದಾಗಿ ಯೆಹೂದ್ಯರು ಯೇಸುವನ್ನು ಹಿಂಸಿಸತೊಡಗಿದರು.

[17] ಆದರೆ ಯೇಸು ಅವರಿಗೆ, “ನನ್ನ ತಂದೆಯು ತನ್ನ ಕಾರ್ಯವನ್ನು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ ನಾನು ಸಹ ಕಾರ್ಯನಿರತನಾಗಿದ್ದೇನೆ” ಎಂದು ತನ್ನನ್ನು ಪ್ರತಿಪಾದಿಸಿಕೊಂಡನು.

[18] ಯೇಸು ಸಬ್ಬತ್ತನ್ನು ಉಲ್ಲಂಘಿಸಿದ್ದಲ್ಲದೆ ದೇವರನ್ನು ತನ್ನ ತಂದೆಯೆಂದು ಹೇಳಿಕೊಂಡು ತನ್ನನ್ನು ದೇವರಿಗೆ ಸರಿಸಮಾನನನ್ನಾಗಿ ಮಾಡಿಕೊಳ್ಳುತ್ತಿದ್ದಾನೆಂದು ಯೆಹೂದ್ಯರು ಆತನನ್ನು ಕೊಲ್ಲಲು ಮತ್ತಷ್ಟು ಪ್ರಯತ್ನಿಸಿದರು.

[19] ಅದಕ್ಕೆ ಉತ್ತರವಾಗಿ ಆತನು ಹೀಗೆಂದನು: “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಮಗನು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ತಂದೆಯು ಮಾಡುವುದನ್ನು ಕಂಡು ತಾನೂ ಹಾಗೆಯೇ ಮಾಡುತ್ತಾನೆ. ತಂದೆಯು ಮಾಡುವ ಕಾರ್ಯಗಳನ್ನೇ ಮಗನೂ ಮಾಡುತ್ತಾನೆ.

[20] ತಂದೆಯು ಮಗನನ್ನು ಪ್ರೀತಿಸುವನು ಮತ್ತು ತಾನು ಮಾಡುವ ಎಲ್ಲಾ ಕಾರ್ಯಗಳನ್ನು ಮಗನಿಗೆ ತೋರಿಸುವನು. ಆದರೆ ಇದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ತಂದೆಯು ಮಗನಿಗೆ ತೋರಿಸುವನು. ಆಗ ನೀವೆಲ್ಲರೂ ಆಶ್ಚರ್ಯಚಕಿತರಾಗುವಿರಿ.

[21] ತಂದೆಯು ಸತ್ತವರನ್ನು ಎಬ್ಬಿಸಿ ಅವರಿಗೆ ಜೀವ ಕೊಡುತ್ತಾನೆ. ಅದೇ ರೀತಿಯಲ್ಲಿ ಮಗನು ತಾನು ಬಯಸಿದವರಿಗೆ ಜೀವವನ್ನು ಕೊಡುತ್ತಾನೆ.

[22] “ಇದಲ್ಲದೆ ತಂದೆಯು ಯಾರಿಗೂ ತೀರ್ಪು ಮಾಡುವುದಿಲ್ಲ. ಆದರೆ ತಂದೆಯು ತೀರ್ಪು ಮಾಡುವ ಅಧಿಕಾರವನ್ನೆಲ್ಲಾ ಮಗನಿಗೆ ಕೊಟ್ಟಿದ್ದಾನೆ.

[23] ಜನರು ತಂದೆಯನ್ನು ಗೌರವಿಸುವಂತೆ ಮಗನನ್ನು ಗೌರವಿಸಬೇಕೆಂದು ದೇವರು ಹೀಗೆ ಮಾಡಿದನು. ಮಗನನ್ನು ಸನ್ಮಾನಿಸದವನು ಆತನನ್ನು ಕಳುಹಿಸಿರುವ ತಂದೆಯನ್ನೂ ಸನ್ಮಾನಿಸದವನಾಗಿದ್ದಾನೆ.

[24] “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನ ಮಾತನ್ನು ಕೇಳಿ ನನ್ನನ್ನು ಕಳುಹಿಸಿದಾತನನ್ನು ನಂಬುವವನು ನಿತ್ಯಜೀವವನ್ನು ಹೊಂದಿದ್ದಾನೆ. ಅವನಿಗೆ ಅಪರಾಧಿಯೆಂಬ ತೀರ್ಪಾಗುವುದಿಲ್ಲ. ಅವನು ಈಗಾಗಲೇ ಮರಣವನ್ನು ದಾಟಿ ಜೀವಕ್ಕೆ ಪ್ರವೇಶಿಸಿದ್ದಾನೆ.

[25] ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸತ್ತುಹೋದವರು ದೇವರ ಮಗನ ಸ್ವರವನ್ನು ಕೇಳುವ ಕಾಲ ಬರುತ್ತದೆ. ಅದು ಈಗಲೇ ಬಂದಿದೆ. ಕೇಳಿ ಸ್ವೀಕರಿಸಿಕೊಳ್ಳುವವರು ಜೀವವನ್ನು ಹೊಂದುವರು.

[26] ತಂದೆಯು ಜೀವಕೊಡುವ ಶಕ್ತಿಯನ್ನು ತಾನು ಹೊಂದಿರುವಂತೆ ಮಗನಿಗೂ ಜೀವಕೊಡುವ ಶಕ್ತಿಯನ್ನು ಅನುಗ್ರಹಿಸಿದನು,

[27] ಮತ್ತು ಎಲ್ಲಾ ಜನರಿಗೆ ತೀರ್ಪುಮಾಡುವ ಅಧಿಕಾರವನ್ನು ತಂದೆಯು ಮಗನಿಗೂ ಕೊಟ್ಟಿದ್ದಾನೆ. ಏಕೆಂದರೆ ಆ ಮಗನು ಮನುಷ್ಯಕುಮಾರನಾಗಿದ್ದಾನೆ.

[28] “ಇದರ ಬಗ್ಗೆ ಆಶ್ಚರ್ಯಪಡಬೇಡಿರಿ. ಏಕೆಂದರೆ ಸಮಾಧಿಗಳಲ್ಲಿರುವ ಜನರೆಲ್ಲರೂ ಆತನ ಸ್ವರವನ್ನು ಕೇಳುವ ಕಾಲ ಬರುತ್ತದೆ.

[29] ಆಗ ಅವರು ತಮ್ಮ ಸಮಾಧಿಗಳಿಂದ ಎದ್ದುಬರುವರು. ಜೀವನದಲ್ಲಿ ಒಳ್ಳೆಯದನ್ನು ಮಾಡಿದ ಜನರು ಪುನರುತ್ಥಾನಗೊಂಡು ನಿತ್ಯಜೀವವನ್ನು ಹೊಂದಿಕೊಳ್ಳುವರು. ಆದರೆ ಕೆಟ್ಟದ್ದನ್ನು ಮಾಡಿದವರಿಗೆ ತೀರ್ಪಿಗಾಗಿ ಪುನರುತ್ಥಾನವಾಗುವುದು.

[30] “ನಾನು ಒಬ್ಬಂಟಿಗನಾಗಿ ಏನೂ ಮಾಡಲಾರೆನು. ನಾನು ಕೇಳಿದ್ದಕ್ಕನುಸಾರವಾಗಿ ತೀರ್ಪು ಮಾಡುತ್ತೇನೆ. ಆದ್ದರಿಂದ ನನ್ನ ತೀರ್ಪು ಸರಿಯಾದದ್ದು. ಏಕೆಂದರೆ, ನಾನು ನನ್ನನ್ನು ಮೆಚ್ಚಿಸಲು ಪ್ರಯತ್ನಿಸದೆ ನನ್ನ ತಂದೆಯನ್ನು ಮೆಚ್ಚಿಸಲು ಪ್ರಯತ್ನಿಸುತ್ತೇನೆ.

[31] “ನನ್ನ ವಿಷಯವಾಗಿ ನಾನೇ ಹೇಳಿಕೊಂಡರೆ, ನನ್ನ ಸಾಕ್ಷಿಯು ಸತ್ಯವಾದದ್ದಲ್ಲ.

[32] ಆದರೆ ನನ್ನ ವಿಷಯವಾಗಿ ಜನರಿಗೆ ಹೇಳುವ ಮತ್ತೊಬ್ಬ ವ್ಯಕ್ತಿಯಿದ್ದಾನೆ. ನನ್ನ ಬಗ್ಗೆ ಅವನು ಹೇಳುವ ಸಂಗತಿಗಳು ಸತ್ಯವಾಗಿವೆಯೆಂದು ನನಗೆ ಗೊತ್ತಿದೆ.

[33] “ನೀವು ಯೋಹಾನನ ಬಳಿಗೆ ಜನರನ್ನು ಕಳುಹಿಸಿದ್ದಿರಿ. ಅವನು ನಿಮಗೆ ಸತ್ಯದ ಬಗ್ಗೆ ತಿಳಿಸಿದನು.

[34] ಆದರೆ ನನ್ನ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ನನಗೆ ಮನುಷ್ಯನೊಬ್ಬನ ಅಗತ್ಯವಿಲ್ಲ. ಆದರೆ ನಿಮಗೆ ರಕ್ಷಣೆಯಾಗಬೇಕೆಂದು ನಾನು ಈ ಸಂಗತಿಗಳನ್ನು ಹೇಳುತ್ತಿದ್ದೇನೆ.

[35] ಯೋಹಾನನು ಉರಿಯುವ ದೀಪದಂತೆ ಬೆಳಕನ್ನು ಕೊಟ್ಟನು ಮತ್ತು ನೀವು ಅವನ ಬೆಳಕನ್ನು ಸ್ವಲ್ಪಕಾಲ ಸಂತೋಷದಿಂದ ಅನುಭವಿಸಿದಿರಿ.

[36] “ಆದರೆ ನನ್ನ ಬಗ್ಗೆ ನನ್ನಲ್ಲಿ ಯೋಹಾನನಿಗಿಂತಲೂ ಹೆಚ್ಚಿನ ಸಾಕ್ಷಿಗಳಿವೆ. ನಾನು ಮಾಡುವ ಕಾರ್ಯಗಳೇ ನನ್ನ ಸಾಕ್ಷಿಗಳಾಗಿವೆ. ತಂದೆಯು ನನಗೆ ಕೊಟ್ಟಿರುವ ಈ ಕಾರ್ಯಗಳೇ, ತಂದೆಯು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂಬುದನ್ನು ತೋರಿಸುತ್ತವೆ.

[37] ಅಲ್ಲದೆ ನನ್ನನ್ನು ಕಳುಹಿಸಿದ ತಂದೆಯು ನನ್ನ ಬಗ್ಗೆ ತಾನೇ ಸಾಕ್ಷಿ ಕೊಟ್ಟಿದ್ದಾನೆ. ಆದರೆ ನೀವು ಆತನ ಧ್ವನಿಯನ್ನು ಎಂದೂ ಕೇಳಿಲ್ಲ. ಆತನು ಹೇಗಿದ್ದಾನೆ ಎಂಬುದನ್ನು ನೀವು ಎಂದೂ ಕಂಡಿಲ್ಲ.

[38] ತಂದೆಯ ಉಪದೇಶವು ನಿಮ್ಮಲ್ಲಿ ನೆಲೆಸಿಲ್ಲ. ಏಕೆಂದರೆ ತಂದೆಯು ಕಳುಹಿಸಿರುವಾತನನ್ನು ನೀವು ನಂಬುವುದಿಲ್ಲ.

[39] ನೀವು ಪವಿತ್ರ ಗ್ರಂಥವನ್ನು ಜಾಗ್ರತೆಯಿಂದ ಅಧ್ಯಯನ ಮಾಡುತ್ತೀರಿ. ಆ ಪವಿತ್ರ ಗ್ರಂಥವು ನಿಮಗೆ ನಿತ್ಯಜೀವವನ್ನು ಕೊಡುತ್ತದೆ ಎಂಬುದು ನಿಮ್ಮ ಆಲೋಚನೆ. ಅದೇ ಪವಿತ್ರ ಗ್ರಂಥವು ನನ್ನ ಬಗ್ಗೆ ತಿಳಿಸುತ್ತದೆ!

[40] ಆದರೆ ನೀವು ಬಯಸುವ ಆ ಜೀವವನ್ನು ನನ್ನ ಬಳಿಗೆ ಬಂದು ಹೊಂದಿಕೊಳ್ಳಲು ನಿಮಗೆ ಇಷ್ಟವಿಲ್ಲ.

[41] “ಮನುಷ್ಯರಿಂದ ಬರುವ ಹೊಗಳಿಕೆಯು ನನಗೆ ಬೇಕಾಗಿಲ್ಲ.

[42] ಆದರೆ ನಾನು ನಿಮ್ಮನ್ನು ಬಲ್ಲೆನು. ದೇವರ ಮೇಲೆ ನಿಮಗೆ ಪ್ರೀತಿಯಿಲ್ಲವೆಂದು ನನಗೆ ಗೊತ್ತಿದೆ.

[43] ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ. ನಾನು ಆತನಿಗೋಸ್ಕರ ಮಾತಾಡುತ್ತೇನೆ. ಆದರೆ ನೀವು ನನ್ನನ್ನು ಸ್ವೀಕರಿಸಿಕೊಳ್ಳುವುದಿಲ್ಲ. ಮತ್ತೊಬ್ಬನು ಬಂದು ತನಗೋಸ್ಕರವಾಗಿ ಮಾತಾಡಿದರೆ ನೀವು ಅವನನ್ನು ಸ್ವೀಕರಿಸಿಕೊಳ್ಳುತ್ತೀರಿ.

[44] ನೀವು ಪರಸ್ಪರ ಸನ್ಮಾನವನ್ನು ಬಯಸುತ್ತೀರಿ. ಆದರೆ ಒಬ್ಬನೇ ದೇವರಿಂದ ಬರುವ ಸನ್ಮಾನವನ್ನು ಪಡೆದುಕೊಳ್ಳಲು ನೀವೆಂದೂ ಪ್ರಯತ್ನಿಸುವುದಿಲ್ಲ. ಹೀಗಿರಲು ನೀವು ಹೇಗೆ ನಂಬಬಲ್ಲಿರಿ?

[45] ನಾನು ತಂದೆಯ ಮುಂದೆ ನಿಂತುಕೊಂಡು ನಿಮ್ಮನ್ನು ತಪ್ಪಿತಸ್ಥರೆಂಬುದಾಗಿ ಹೇಳುತ್ತೇನೆಂದು ಯೋಚಿಸಬೇಡಿರಿ. ನಿಮ್ಮನ್ನು ರಕ್ಷಿಸುತ್ತಾನೆಂದು ನೀವು ನಿರೀಕ್ಷಿಸಿಕೊಂಡಿರುವ ಮೋಶೆಯೇ ನಿಮ್ಮ ಮೇಲೆ ದೂರು ಹೇಳುವನು.

[46] ನೀವು ಮೋಶೆಯನ್ನು ನಿಜವಾಗಿಯೂ ನಂಬಿದ್ದರೆ, ನನ್ನನ್ನೂ ನಂಬುತ್ತಿದ್ದಿರಿ. ಯಾಕೆಂದರೆ ಅವನು ನನ್ನ ವಿಷಯವಾಗಿ ಬರೆದಿದ್ದಾನೆ.

[47] ಆದರೆ ಮೋಶೆ ಬರೆದದ್ದನ್ನು ನೀವು ನಂಬುವುದಿಲ್ಲ. ಹೀಗಿರಲು ನಾನು ಹೇಳುವ ಸಂಗತಿಗಳನ್ನು ನೀವು ಹೇಗೆ ನಂಬಬಲ್ಲಿರಿ?”

ಯೋಹಾನನ ಸುವಾರ್ತೆ — Chapters