Skip to content
Opens in a new window
Listen to this chapter • 12:13

[1] ತಾನು ಯೋಹಾನನಿಗಿಂತಲೂ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಅವರಿಗೆ ದೀಕ್ಷಾಸ್ನಾನ ಮಾಡಿಸುತ್ತಿರುವ ಸುದ್ದಿಯು ಫರಿಸಾಯರಿಗೆ ತಿಳಿಯಿತೆಂಬುದು ಯೇಸುವಿಗೆ ಗೊತ್ತಾಯಿತು.

[2] (ವಾಸ್ತವವಾಗಿ ಜನರಿಗೆ ದೀಕ್ಷಾಸ್ನಾನ ಕೊಟ್ಟದ್ದು ಯೇಸುವಲ್ಲ. ಆತನ ಶಿಷ್ಯರೇ ಜನರಿಗೆ ದೀಕ್ಷಾಸ್ನಾನ ಮಾಡಿಸಿದರು.)

[3] ಆಗ, ಆತನು ಜುದೇಯವನ್ನು ಬಿಟ್ಟು ಮತ್ತೆ ಗಲಿಲಾಯಕ್ಕೆ ಹೋದನು.

[4] ಸಮಾರ್ಯ ಪ್ರಾಂತ್ಯದ ಮೂಲಕವೇ ಗಲಿಲಾಯಕ್ಕೆ ಹೋಗಬೇಕಿತ್ತು.

[5] ಯೇಸು ಸಮಾರ್ಯದ ಪಟ್ಟಣವಾದ ಸಿಖಾರ್ ಎಂಬಲ್ಲಿಗೆ ಬಂದನು. ಯಾಕೋಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸಮೀಪದಲ್ಲಿ ಆ ಊರಿದೆ.

[6] ಯಾಕೋಬನ ಬಾವಿಯು ಅಲ್ಲಿತ್ತು. ಯೇಸು ತನ್ನ ದೀರ್ಘ ಪ್ರಯಾಣದಿಂದ ಆಯಾಸಗೊಂಡಿದ್ದನು. ಆದ್ದರಿಂದ ಆತನು ಬಾವಿಯ ಬಳಿ ಕುಳಿತುಕೊಂಡನು. ಆಗ ಸುಮಾರು ಮಧ್ಯಾಹ್ನದ ಸಮಯವಾಗಿತ್ತು.

[7] ಸಮಾರ್ಯದ ಸ್ತ್ರೀಯೊಬ್ಬಳು ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ಆ ಬಾವಿಗೆ ಬಂದಳು. ಯೇಸು ಆಕೆಗೆ, “ದಯವಿಟ್ಟು, ಕುಡಿಯಲು ಸ್ವಲ್ಪ ನೀರು ಕೊಡು” ಎಂದು ಕೇಳಿದನು.

[8] (ಯೇಸುವಿನ ಶಿಷ್ಯರು ಆಹಾರಪದಾರ್ಥವನ್ನು ಕೊಂಡುಕೊಂಡು ಬರಲು ಪಟ್ಟಣದೊಳಗೆ ಹೋಗಿದ್ದಾಗ ಇದು ಸಂಭವಿಸಿತು.)

[9] ಸಮಾರ್ಯದ ಸ್ತ್ರೀಯು, “ಕುಡಿಯುವ ನೀರಿಗಾಗಿ ನೀನು ನನ್ನನ್ನು ಕೇಳುತ್ತಿರುವುದು ನನಗೆ ಆಶ್ಚರ್ಯವನ್ನು ಉಂಟುಮಾಡಿದೆ! ನೀನಾದರೋ ಯೆಹೂದ್ಯನು. ನಾನಾದರೋ ಸಮಾರ್ಯದವಳು!” ಎಂದು ಹೇಳಿದಳು. (ಯೆಹೂದ್ಯರು ಸಮಾರ್ಯದವರೊಂದಿಗೆ ಸ್ನೇಹದಿಂದಿರಲಿಲ್ಲ.)

[10] ಯೇಸು ಆಕೆಗೆ, “ದೇವರು ಏನು ಕೊಡುತ್ತಾನೆಂಬುದು ನಿನಗೆ ಗೊತ್ತಿಲ್ಲ ಮತ್ತು ಕುಡಿಯಲು ನೀರನ್ನು ಕೇಳಿದ ನಾನು ಯಾರೆಂಬುದೂ ನಿನಗೆ ಗೊತ್ತಿಲ್ಲ. ನಿನಗೆ ಈ ಸಂಗತಿಗಳು ಗೊತ್ತಿದ್ದರೆ, ನೀನು ನನ್ನನ್ನು ಕೇಳಿಕೊಳ್ಳುತ್ತಿದ್ದೆ, ಮತ್ತು ನಾನು ನಿನಗೆ ಜೀವಜಲವನ್ನು ಕೊಡುತ್ತಿದ್ದೆ” ಎಂದನು.

[11] ಆ ಸ್ತ್ರೀಯು, “ಅಯ್ಯಾ, ಆ ಜೀವಜಲ ನಿನಗೆಲ್ಲಿ ಸಿಕ್ಕುವುದು? ಬಾವಿಯು ಬಹು ಆಳವಾಗಿದೆ ಮತ್ತು ನೀರು ಸೇದುವುದಕ್ಕೆ ನಿನ್ನಲ್ಲಿ ಏನೂ ಇಲ್ಲ.

[12] ನಮ್ಮ ಪಿತೃವಾದ ಯಾಕೋಬನಿಗಿಂತಲೂ ನೀನು ದೊಡ್ಡವನೋ? ನಮಗೆ ಈ ಬಾವಿಯನ್ನು ಯಾಕೋಬನೇ ಕೊಟ್ಟನು. ಸ್ವತಃ ಅವನೇ ಈ ನೀರನ್ನು ಕುಡಿದನು. ಅಲ್ಲದೆ ಅವನ ಮಕ್ಕಳು ಈ ಬಾವಿಯ ನೀರನ್ನು ಕುಡಿದರು ಮತ್ತು ಅವನ ಪಶುಗಳೆಲ್ಲಾ ಈ ಬಾವಿಯ ನೀರನ್ನು ಕುಡಿದವು” ಎಂದು ಹೇಳಿದಳು.

[13] ಯೇಸು, “ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೂ ಮತ್ತೆ ದಾಹವಾಗುವುದು.

[14] ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ದಾಹವಾಗುವುದೇ ಇಲ್ಲ. ನಾನು ಅವನಿಗೆ ಕೊಡುವ ನೀರು ಅವನೊಳಗೆ ಉಕ್ಕಿಹರಿಯುವ ನೀರಿನ ಬುಗ್ಗೆಯಾಗುವುದು. ಆ ನೀರು ಅವನಿಗೆ ನಿತ್ಯಜೀವವನ್ನು ತರುತ್ತದೆ” ಎಂದು ಉತ್ತರಕೊಟ್ಟನು.

[15] ಆ ಸ್ತ್ರೀಯು ಯೇಸುವಿಗೆ, “ಅಯ್ಯಾ, ಆ ನೀರನ್ನು ನನಗೆ ಕೊಡು. ಆಗ ನನಗೆ ಮತ್ತೆಂದಿಗೂ ದಾಹವಾಗುವುದಿಲ್ಲ. ನೀರನ್ನು ತೆಗೆದುಕೊಂಡು ಹೋಗುವುದಕ್ಕಾಗಿ ನಾನು ಇಲ್ಲಿಗೆ ಮತ್ತೆ ಬರುವ ಅಗತ್ಯವೂ ಇರುವುದಿಲ್ಲ” ಎಂದು ಹೇಳಿದಳು.

[16] ಯೇಸು ಆಕೆಗೆ, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ” ಎಂದನು.

[17] ಆ ಸ್ತ್ರೀಯು, “ನನಗೆ ಗಂಡನಿಲ್ಲ” ಎಂದು ಹೇಳಿದಳು. ಯೇಸು ಆಕೆಗೆ, “ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ.

[18] ನಿಜವಾಗಿಯೂ ನಿನಗೆ ಐದು ಮಂದಿ ಗಂಡಂದಿರಿದ್ದರು. ಆದರೆ ಈಗ ನೀನು ಯಾರೊಂದಿಗೆ ವಾಸಿಸುತ್ತಿರುವಿಯೋ ಅವನು ನಿನ್ನ ಗಂಡನಲ್ಲ. ನೀನು ನನಗೆ ಸತ್ಯವನ್ನು ತಿಳಿಸಿದೆ” ಎಂದು ಹೇಳಿದನು.

[19] ಆ ಸ್ತ್ರೀಯು, “ಅಯ್ಯಾ, ನೀನು ಪ್ರವಾದಿಯೆಂದು ಕಾಣುತ್ತದೆ.

[20] ನಮ್ಮ ಪಿತೃಗಳು ಈ ಗುಡ್ಡದ ಮೇಲೆ ಆರಾಧಿಸಿದರು. ಆದರೆ ಜನರು ಆರಾಧಿಸಬೇಕಾದ ಸ್ಥಳ ಜೆರುಸಲೇಮ್ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲಾ” ಎಂದಳು.

[21] ಯೇಸು, “ಅಮ್ಮಾ, ನನ್ನನ್ನು ನಂಬು! ನೀವು ಇನ್ನೆಂದಿಗೂ ತಂದೆಯನ್ನು (ದೇವರನ್ನು) ಜೆರುಸಲೇಮಿನಲ್ಲಾಗಲಿ ಈ ಗುಡ್ಡದ ಮೇಲಾಗಲಿ ಆರಾಧಿಸಬೇಕಿಲ್ಲ.

[22] ನೀವು ನಿಮಗೆ ತಿಳಿದಿಲ್ಲದ ಯಾವುದನ್ನೋ ಆರಾಧಿಸುತ್ತೀರಿ. ನಮಗಾದರೋ ನಾವು ಯಾರನ್ನು ಆರಾಧಿಸುತ್ತಿದ್ದೇವೆ ಎಂಬುದು ತಿಳಿದಿದೆ. ರಕ್ಷಣೆಯು ಯೆಹೂದ್ಯರಿಂದ ಬರುತ್ತದೆ.

[23] ನಿಜವಾದ ಆರಾಧಕರು ತಂದೆಯ ಚಿತ್ತಕ್ಕನುಸಾರವಾಗಿ ತಂದೆಯನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವ ಕಾಲ ಬರುತ್ತದೆ. ಆ ಕಾಲ ಈಗಲೇ ಬಂದಿದೆ ಮತ್ತು ಅಂಥ ಜನರೇ ತನ್ನ ಆರಾಧಕರಾಗಿರಬೇಕೆಂದು ತಂದೆಯು ಬಯಸುತ್ತಾನೆ.

[24] ದೇವರು ಆತ್ಮಸ್ವರೂಪಿ. ಆದ್ದರಿಂದ ದೇವರನ್ನು ಆರಾಧಿಸುವವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸಬೇಕು” ಎಂದು ಹೇಳಿದನು.

[25] ಆ ಸ್ತ್ರೀಯು, “ಮೆಸ್ಸೀಯನು ಬರುತ್ತಾನೆಂದು ನನಗೆ ಗೊತ್ತು. ಆತನು ಬಂದಾಗ ನಮಗೆ ಪ್ರತಿಯೊಂದನ್ನೂ ವಿವರಿಸುವನು” ಎಂದು ಹೇಳಿದಳು. (“ಮೆಸ್ಸೀಯನು” ಅಂದರೆ “ಕ್ರಿಸ್ತನು”)

[26] ಆಗ ಯೇಸು, “ಆತನೇ ಈಗ ನಿನ್ನೊಂದಿಗೆ ಮಾತಾಡುತ್ತಿದ್ದಾನೆ. ನಾನೇ ಮೆಸ್ಸೀಯ” ಎಂದು ಹೇಳಿದನು.

[27] ಆ ಸಮಯದಲ್ಲಿ ಆತನ ಶಿಷ್ಯರು ಹಿಂತಿರುಗಿ ಬಂದರು. ಯೇಸು ಒಬ್ಬ ಸ್ತ್ರೀಯೊಂದಿಗೆ ಮಾತಾಡುತ್ತಿರುವುದನ್ನು ನೋಡಿ ಅವರು ಆಶ್ಚರ್ಯಗೊಂಡರು. ಆದರೆ, “ನಿನಗೇನು ಬೇಕು?” ಎಂದಾಗಲಿ “ನೀನು ಆಕೆಯೊಂದಿಗೆ ಏಕೆ ಮಾತಾಡುತ್ತಿರುವೆ?” ಎಂದಾಗಲಿ ಅವರಲ್ಲಿ ಒಬ್ಬರೂ ಕೇಳಲಿಲ್ಲ.

[28] ಬಳಿಕ ಆ ಸ್ತ್ರೀಯು, ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ಹಿಂತಿರುಗಿ ಹೋಗಿ ಜನರಿಗೆ,

[29] “ನಾನು ಈವರೆಗೆ ಮಾಡಿರುವ ಪ್ರತಿಯೊಂದನ್ನೂ ಒಬ್ಬ ವ್ಯಕ್ತಿ ನನಗೆ ತಿಳಿಸಿದನು. ಬಂದು ಅವನನ್ನು ನೋಡಿರಿ. ಆತನೇ ಕ್ರಿಸ್ತನಿರಬಹುದು” ಎಂದು ಹೇಳಿದಳು.

[30] ಆದ್ದರಿಂದ ಜನರು ಆತನನ್ನು ನೋಡಲು ಪಟ್ಟಣದಿಂದ ಹೊರಬಂದರು.

[31] ಅಷ್ಟರಲ್ಲಿ ಯೇಸುವಿನ ಶಿಷ್ಯರು, “ಗುರುವೇ, ಊಟಮಾಡು” ಎಂದು ಆತನನ್ನು ಒತ್ತಾಯ ಮಾಡಿದರು.

[32] ಅದಕ್ಕೆ ಯೇಸು, “ನನ್ನಲ್ಲಿ ಆಹಾರವಿದೆ. ಆ ಆಹಾರದ ಬಗ್ಗೆ ನಿಮಗೇನೂ ಗೊತ್ತಿಲ್ಲ” ಎಂದನು.

[33] ಆದ್ದರಿಂದ ಶಿಷ್ಯರು, “ಯಾರಾದರೂ ಆತನಿಗೆ ಮೊದಲೇ ಆಹಾರವನ್ನು ತಂದುಕೊಟ್ಟರೇ?” ಎಂದು ತಮ್ಮತಮ್ಮೊಳಗೆ ಕೇಳತೊಡಗಿದರು.

[34] ಯೇಸು, “ನನ್ನನ್ನು ಕಳುಹಿಸಿದಾತನು (ದೇವರು) ನಾನು ಏನು ಮಾಡಬೇಕೆಂದು ಬಯಸುವನೋ ಅದನ್ನು ಮಾಡುವುದೇ ನನಗೆ ಆಹಾರವಾಗಿದೆ. ಆತನು ನನಗೆ ಕೊಟ್ಟಿರುವ ಕೆಲಸವನ್ನು ಪೂರೈಸುವುದೇ ನನಗೆ ಆಹಾರವಾಗಿದೆ.

[35] ‘ಸುಗ್ಗಿಗೆ ಇನ್ನೂ ನಾಲ್ಕು ತಿಂಗಳು ಕಾಯಬೇಕು’ ಎಂದು ನೀವು ಹೇಳುವಿರಿ. ಆದರೆ ನಾನು ನಿಮಗೆ ಹೇಳುತ್ತೇನೆ, ನಿಮ್ಮ ಕಣ್ಣುಗಳನ್ನು ತೆರೆಯಿರಿ. ಹೊಲಗಳ ಸುತ್ತಲೆಲ್ಲಾ ನೋಡಿರಿ, ಅವು ಕೊಯ್ಲಿಗೆ ಬಂದಿವೆ.

[36] ಈಗಲೂ ಸಹ, ಬೆಳೆಯನ್ನು ಕೊಯ್ಯುವವನಿಗೆ ಕೂಲಿ ದೊರೆಯುತ್ತದೆ. ಅವನು ಬೆಳೆಗಳನ್ನು ನಿತ್ಯಜೀವಕ್ಕಾಗಿ ಕೂಡಿಸುತ್ತಿದ್ದಾನೆ. ಆದ್ದರಿಂದ ಈಗ ಬಿತ್ತುವವರೂ ಮತ್ತು ಕೊಯ್ಯುವವರೂ ಒಟ್ಟಿಗೆ ಸಂತೋಷವಾಗಿರುವರು.

[37] ‘ಒಬ್ಬನು ಬಿತ್ತುತ್ತಾನೆ, ಆದರೆ ಮತ್ತೊಬ್ಬನು ಬೆಳೆಯನ್ನು ಕೊಯ್ಯುತ್ತಾನೆ’ ಎಂದು ನಾವು ಹೇಳುವ ನಾಣ್ಣುಡಿ ಸತ್ಯವಾದದ್ದು.

[38] ನೀವು ದುಡಿದಿಲ್ಲದ ಬೆಳೆಯನ್ನು ಕೊಯ್ಯುವುದಕ್ಕಾಗಿ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಬೇರೆಯವರು ದುಡಿದರು, ಆದರೆ ಅವರ ದುಡಿಮೆಯಿಂದ ನೀವು ಲಾಭವನ್ನು ಪಡೆಯುತ್ತೀರಿ” ಎಂದು ಹೇಳಿದನು.

[39] ಆ ಸಮಾರ್ಯ ಪಟ್ಟಣದ ಜನರಲ್ಲಿ ಅನೇಕರು ಯೇಸುವನ್ನು ನಂಬಿದರು. ಏಕೆಂದರೆ ಆ ಸ್ತ್ರೀಯು ಆತನ ವಿಷಯವಾಗಿ ಅವರಿಗೆ, “ನಾನು ಮಾಡಿರುವ ಪ್ರತಿಯೊಂದನ್ನೂ ಆತನು ನನಗೆ ತಿಳಿಸಿದನು” ಎಂದು ಹೇಳಿದ್ದಳು.

[40] ಸಮಾರ್ಯದವರು ಯೇಸುವಿನ ಬಳಿಗೆ ಹೋಗಿ ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಂಡರು. ಆದ್ದರಿಂದ ಆತನು ಅಲ್ಲಿ ಎರಡು ದಿನ ಇದ್ದನು.

[41] ಆತನು ಹೇಳಿದ ಸಂಗತಿಗಳನ್ನು ಕೇಳಿ ಇನ್ನೂ ಅನೇಕ ಜನರು ನಂಬಿದರು.

[42] ಅವರು ಆ ಸ್ತ್ರೀಗೆ, “ನಾವು ಮೊದಲು ನಿನ್ನ ಮಾತನ್ನು ಕೇಳಿ ಯೇಸುವನ್ನು ನಂಬಿದೆವು. ಆದರೆ ಈಗ ಸ್ವತಃ ನಾವೇ ಆತನ ಮಾತನ್ನು ಕೇಳಿದ್ದರಿಂದ ನಂಬುತ್ತೇವೆ. ನಿಜವಾಗಿಯೂ ಈತನೇ ಲೋಕರಕ್ಷಕನೆಂದು ಈಗ ನಮಗೆ ತಿಳಿದಿದೆ” ಎಂದು ಹೇಳಿದರು.

[43] ಎರಡು ದಿನಗಳಾದ ನಂತರ ಯೇಸು ಅಲ್ಲಿಂದ ಗಲಿಲಾಯಕ್ಕೆ ಹೋದನು.

[44] (ಪ್ರವಾದಿಗೆ ಸ್ವಂತ ಊರಿನಲ್ಲಿ ಗೌರವವಿಲ್ಲವೆಂದು ಸ್ವತಃ ಯೇಸುವೇ ತಿಳಿಸಿದ್ದನು.)

[45] ಆತನು ಗಲಿಲಾಯವನ್ನು ತಲುಪಿದಾಗ, ಅಲ್ಲಿಯ ಜನರು ಆತನನ್ನು ಸ್ವಾಗತಿಸಿದರು. ಈ ಜನರು ಪಸ್ಕಹಬ್ಬಕ್ಕಾಗಿ ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯದಲ್ಲಿ ಆತನು ಮಾಡಿದ ಕಾರ್ಯಗಳನ್ನೆಲ್ಲಾ ನೋಡಿದ್ದರು.

[46] ಯೇಸು ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಭೇಟಿ ನೀಡಿದನು. ಆತನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು ಆ ಊರಿನಲ್ಲೇ. ರಾಜನ ಒಬ್ಬ ಅಧಿಕಾರಿಯು ಕಪೆರ್ನೌಮ್ ಪಟ್ಟಣದಲ್ಲಿ ವಾಸವಾಗಿದ್ದನು. ಅವನ ಮಗನಿಗೆ ಕಾಯಿಲೆಯಾಗಿತ್ತು.

[47] ಯೇಸು ಜುದೇಯದಿಂದ ಬಂದು ಈಗ ಗಲಿಲಾಯದಲ್ಲಿ ಇದ್ದಾನೆ ಎಂಬ ಸುದ್ದಿಯನ್ನು ಅವನು ಕೇಳಿದನು. ಆದ್ದರಿಂದ ಅವನು ಆತನ ಬಳಿಗೆ ಹೋಗಿ ತನ್ನ ಮಗನನ್ನು ಗುಣಪಡಿಸುವುದಕ್ಕಾಗಿ ಕಪೆರ್ನೌಮ್‌ಗೆ ಬರಬೇಕೆಂದು ಆತನನ್ನು ಬೇಡಿಕೊಂಡನು. ಅವನ ಮಗನು ಸಾಯುವ ಸ್ಥಿತಿಯಲ್ಲಿದ್ದನು.

[48] ಯೇಸು ಅವನಿಗೆ, “ನೀವು ಸೂಚಕಕಾರ್ಯಗಳನ್ನು ಮತ್ತು ಆಶ್ಚರ್ಯಕರವಾದ ಕಾರ್ಯಗಳನ್ನು ನೋಡದ ಹೊರತು ನನ್ನನ್ನು ನಂಬುವುದೇ ಇಲ್ಲ” ಎಂದು ಹೇಳಿದನು.

[49] ರಾಜನ ಅಧಿಕಾರಿ, “ಸ್ವಾಮೀ, ನನ್ನ ಮಗನು ಸಾಯುವ ಮೊದಲೇ ನೀನು ಬರಬೇಕು” ಎಂದು ಕೇಳಿಕೊಂಡನು.

[50] ಯೇಸು ಅವನಿಗೆ, “ಹೋಗು, ನಿನ್ನ ಮಗನು ಬದುಕುವನು” ಎಂದು ಉತ್ತರಕೊಟ್ಟನು. ಯೇಸುವಿನ ಮಾತನ್ನು ಅವನು ನಂಬಿ ಮನೆಗೆ ಹಿಂತಿರುಗಿದನು.

[51] ಅವನು ಮನೆಗೆ ಹೋಗುತ್ತಿರುವಾಗ ಅವನ ಸೇವಕರುಗಳು ಬಂದು ಅವನನ್ನು ಭೇಟಿಯಾಗಿ, “ನಿನ್ನ ಮಗನು ಗುಣಹೊಂದಿದನು” ಎಂದು ತಿಳಿಸಿದರು.

[52] ಅವನು, “ನನ್ನ ಮಗನಿಗೆ ಯಾವಾಗ ಗುಣವಾಯಿತು?” ಎಂದು ಕೇಳಿದನು. ಸೇವಕರುಗಳು, “ನಿನ್ನೆ ಮಧ್ಯಾಹ್ನ ಸುಮಾರು ಒಂದು ಗಂಟೆಯಲ್ಲಿ ಅವನ ಜ್ವರವು ಬಿಟ್ಟಿತು” ಎಂದು ಉತ್ತರಕೊಟ್ಟರು.

[53] “ನಿನ್ನ ಮಗನು ಬದುಕುವನು” ಎಂದು ಯೇಸು ಹೇಳಿದ್ದು ಇದೇ ಹೊತ್ತಿನಲ್ಲಿ ಎಂಬುದು ತಂದೆಗೆ ತಿಳಿದಿತ್ತು. ಆದ್ದರಿಂದ ಅವನು ಮತ್ತು ಅವನ ಮನೆಯವರೆಲ್ಲ ಯೇಸುವನ್ನು ನಂಬಿದರು.

[54] ಯೇಸು ಜುದೇಯದಿಂದ ಗಲಿಲಾಯಕ್ಕೆ ಬಂದ ಮೇಲೆ ಮಾಡಿದ ಎರಡನೆಯ ಸೂಚಕಕಾರ್ಯವಿದು.

ಯೋಹಾನನ ಸುವಾರ್ತೆ — Chapters