Skip to content
Opens in a new window
Listen to this chapter • 7:54

[1] ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು.

[2] ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.

[3] ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.

[4] ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.

[5] ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು.

[6] ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು.

[7] ‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ.

[8] ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.

[9] ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.

[10] ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ?

[11] ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ.

[12] ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ!

[13] ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.

[14] “ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು.

[15] ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.

[16] ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು.

[17] ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು.

[18] ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ.

[19] ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು.

[20] ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ.

[21] ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.

[22] ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು.

[23] ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು.

[24] (ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)

[25] ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು.

[26] ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.

[27] ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು.

[28] ‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ.

[29] ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ.

[30] ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.

[31] “ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ.

[32] ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ.

[33] ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ.

[34] ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ.

[35] ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ.

[36] ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.

ಯೋಹಾನನ ಸುವಾರ್ತೆ — Chapters