Skip to content
Opens in a new window
Listen to this chapter • 9:45

[1] ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರೊಂದಿಗೆ ಹೊರಟನು. ಅವರು ಕಿದ್ರೋನ್ ಕಣಿವೆಯನ್ನು ದಾಟಿಹೋದರು. ಅದರ ಮತ್ತೊಂದು ಕಡೆಯಲ್ಲಿ ಆಲಿವ್ ಮರಗಳ ತೋಟವಿತ್ತು. ಯೇಸು ಮತ್ತು ಆತನ ಶಿಷ್ಯರು ಅಲ್ಲಿಗೆ ಹೋದರು.

[2] ಯೇಸುವಿಗೆ ದ್ರೋಹ ಬಗೆದ ಯೂದನಿಗೂ ಈ ಸ್ಥಳವು ತಿಳಿದಿತ್ತು. ಏಕೆಂದರೆ ಯೇಸು ತನ್ನ ಶಿಷ್ಯರೊಂದಿಗೆ ಆಗಾಗ್ಗೆ ಅಲ್ಲಿಗೆ ಬರುತ್ತಿದ್ದನು.

[3] ಯೂದನು ಸೈನಿಕರ ಗುಂಪೊಂದನ್ನೂ ಮಹಾಯಾಜಕರ ಮತ್ತು ಫರಿಸಾಯರ ಕಾವಲುಗಾರರಲ್ಲಿ ಕೆಲವರನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಅವರು ದೀವಟಿಗೆ, ಪಂಜು ಮತ್ತು ಆಯುಧಗಳಿಂದ ಸುಸಜ್ಜಿತರಾಗಿದ್ದರು.

[4] ತನಗೆ ಸಂಭವಿಸಲಿದ್ದ ಪ್ರತಿಯೊಂದೂ ಯೇಸುವಿಗೆ ತಿಳಿದಿತ್ತು. ಆತನು ಹೊರಗೆ ಹೋಗಿ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು.

[5] ಅವರು, “ನಜರೇತಿನ ಯೇಸುವನ್ನು” ಎಂದು ಉತ್ತರಕೊಟ್ಟರು. ಆತನು, “ನಾನೇ ಯೇಸು” ಎಂದನು. (ಯೇಸುವಿಗೆ ದ್ರೋಹ ಬಗೆದ ಯೂದನು ಅವರೊಂದಿಗೆ ಅಲ್ಲೇ ನಿಂತಿದ್ದನು.)

[6] ಆತನು, “ನಾನೇ ಯೇಸು” ಎಂದಾಗ ಅವರು ಹಿಂದೆ ಸರಿದು ನೆಲದ ಮೇಲೆ ಬಿದ್ದರು.

[7] ಯೇಸು ಅವರಿಗೆ ಮತ್ತೆ “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದನು. ಅವರು, “ನಜರೇತಿನ ಯೇಸುವನ್ನು” ಎಂದು ಹೇಳಿದರು.

[8] ಆತನು, “ನಾನೇ ಯೇಸು ಎಂದು ನಿಮಗೆ ಹೇಳಿದೆನಲ್ಲಾ. ನೀವು ನನ್ನನ್ನು ಹುಡುಕುತ್ತಿದ್ದರೆ, ಉಳಿದ ಇವರನ್ನು ಹೋಗಬಿಡಿರಿ” ಎಂದು ಹೇಳಿದನು.

[9] “ನೀನು ನನಗೆ ಕೊಟ್ಟ ಜನರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ” ಎಂದು ಯೇಸು ಮೊದಲು ಹೇಳಿದ್ದ ಮಾತು ಹೀಗೆ ನಿಜವಾಯಿತು.

[10] ಸೀಮೋನ್ ಪೇತ್ರನ ಬಳಿ ಒಂದು ಖಡ್ಗವಿತ್ತು. ಅವನು ಆ ಖಡ್ಗವನ್ನು ಹೊರತೆಗೆದು ಪ್ರಧಾನ ಯಾಜಕನ ಸೇವಕನೊಬ್ಬನಿಗೆ ಹೊಡೆದು, ಅವನ ಬಲಗಿವಿಯನ್ನು ಕತ್ತರಿಸಿದನು. (ಆ ಸೇವಕನ ಹೆಸರು ಮಾಲ್ಕ.)

[11] ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು! ತಂದೆಯು ನನಗೆ ಕೊಟ್ಟಿರುವ ಸಂಕಟದ ಪಾತ್ರೆಯನ್ನು ನಾನು ಸ್ವೀಕರಿಸಿಕೊಳ್ಳಬೇಕು” ಎಂದು ಹೇಳಿದನು.

[12] ಬಳಿಕ ಆ ಸೈನಿಕರು, ಅವರ ಸೇನಾಧಿಪತಿ ಹಾಗೂ ಯೆಹೂದ್ಯ ಕಾವಲುಗಾರರು ಯೇಸುವನ್ನು ಹಿಡಿದು ಕಟ್ಟಿ, ಅನ್ನನ ಬಳಿಗೆ ತಂದರು.

[13] ಅನ್ನನು ಕಾಯಫನ ಮಾವ. ಆ ವರ್ಷ ಕಾಯಫನು ಪ್ರಧಾನಯಾಜಕನಾಗಿದ್ದನು.

[14] ಎಲ್ಲಾ ಜನರಿಗಾಗಿ ಒಬ್ಬನು ಸಾಯುವುದೇ ಮೇಲು ಎಂಬ ಸಲಹೆಯನ್ನು ಕೊಟ್ಟಿದ್ದವನು ಇವನೇ.

[15] ಸೀಮೋನ್ ಪೇತ್ರ ಮತ್ತು ಯೇಸುವಿನ ಶಿಷ್ಯರಲ್ಲಿ ಮತ್ತೊಬ್ಬನು ಯೇಸುವಿನೊಂದಿಗೆ ಹೋದರು. ಆ ಮತ್ತೊಬ್ಬ ಶಿಷ್ಯನಿಗೆ ಪ್ರಧಾನಯಾಜಕನ ಪರಿಚಯವಿತ್ತು. ಆದ್ದರಿಂದ ಅವನು ಪ್ರಧಾನ ಯಾಜಕನ ಮನೆಯ ಅಂಗಳದೊಳಗೆ ಹೋದನು.

[16] ಆದರೆ ಪೇತ್ರನು ಹೊರಗೆ ಬಾಗಿಲಿನ ಸಮೀಪದಲ್ಲಿ ಕಾದುಕೊಂಡಿದ್ದನು. ಪ್ರಧಾನಯಾಜಕನ ಪರಿಚಯವಿದ್ದ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಯೊಂದಿಗೆ ಮಾತಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಹೋದನು.

[17] ದ್ವಾರಪಾಲಕಿಯು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದಳು. ಪೇತ್ರನು, “ಇಲ್ಲ, ನಾನಲ್ಲ!” ಎಂದು ಉತ್ತರಕೊಟ್ಟನು.

[18] ಆಗ ಚಳಿಯಿದ್ದುದರಿಂದ ಕಾವಲುಗಾರರು ಬೆಂಕಿ ಹಾಕಿ ಅದರ ಸುತ್ತಲೂ ನಿಂತುಕೊಂಡು ತಮ್ಮನ್ನು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಪೇತ್ರನು ಅವರೊಂದಿಗೆ ನಿಂತುಕೊಂಡಿದ್ದನು.

[19] ಪ್ರಧಾನಯಾಜಕನು ಯೇಸುವಿಗೆ ಆತನ ಶಿಷ್ಯರ ಬಗ್ಗೆಯೂ ಆತನು ಉಪದೇಶಿಸಿದ ಸಂಗತಿಗಳ ಬಗ್ಗೆಯೂ ಪ್ರಶ್ನೆಗಳನ್ನು ಕೇಳಿದನು.

[20] ಅದಕ್ಕೆ ಯೇಸು, “ನಾನು ಬಹಿರಂಗವಾಗಿ ಜನರೊಂದಿಗೆ ಮಾತಾಡಿದ್ದೇನೆ; ಯಾವಾಗಲೂ ಸಭಾಮಂದಿರಗಳಲ್ಲಿ ಮತ್ತು ದೇವಾಲಯದಲ್ಲಿ ಬೋಧಿಸಿದ್ದೇನೆ. ಯೆಹೂದ್ಯರೆಲ್ಲರೂ ಅಲ್ಲಿಗೆ ಒಟ್ಟಾಗಿ ಸೇರಿಬರುತ್ತಿದ್ದರು. ನಾನು ಯಾವುದನ್ನೂ ರಹಸ್ಯವಾಗಿ ಎಂದೂ ಹೇಳಿಲ್ಲ.

[21] ಹೀಗಿರಲು, ನೀನು ನನ್ನನ್ನು ಪ್ರಶ್ನಿಸುವುದೇಕೆ? ನನ್ನ ಉಪದೇಶವನ್ನು ಕೇಳಿದ ಜನರನ್ನು ಕೇಳು. ನಾನು ಹೇಳಿದ್ದನ್ನು ಅವರು ಬಲ್ಲರು” ಎಂದು ಉತ್ತರಕೊಟ್ಟನು.

[22] ಯೇಸು ಹೀಗೆ ಹೇಳಿದ ಕೂಡಲೇ, ಅಲ್ಲಿ ನಿಂತಿದ್ದ ಕಾವಲುಗಾರರಲ್ಲಿ ಒಬ್ಬನು ಯೇಸುವಿಗೆ ಹೊಡೆದು, “ನೀನು ಪ್ರಧಾನಯಾಜಕನೊಂದಿಗೆ ಆ ರೀತಿ ಮಾತಾಡಕೂಡದು” ಎಂದನು.

[23] ಯೇಸು, “ನಾನು ತಪ್ಪಾಗಿ ಮಾತಾಡಿದ್ದರೆ, ನಾನು ಹೇಳಿದ್ದು ತಪ್ಪೆಂದು ಎಲ್ಲರಿಗೂ ತೋರಿಸಿಕೊಡು. ಆದರೆ ನಾನು ಹೇಳಿದ್ದು ಸರಿಯಾಗಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದು ಉತ್ತರಕೊಟ್ಟನು.

[24] ಆಗ ಅನ್ನನು ಯೇಸುವನ್ನು ಮತ್ತೆ ಕಟ್ಟಿಸಿ, ಪ್ರಧಾನಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.

[25] ಸೀಮೋನ್ ಪೇತ್ರನು ತನ್ನನ್ನು ಬೆಚ್ಚಗೆ ಮಾಡಿಕೊಳ್ಳುತ್ತಾ ಬೆಂಕಿಯ ಸಮೀಪದಲ್ಲಿ ನಿಂತುಕೊಂಡಿದ್ದನು. ಅಲ್ಲಿದ್ದವರು ಪೇತ್ರನಿಗೆ, “ಆ ಮನುಷ್ಯನ ಶಿಷ್ಯರಲ್ಲಿ ನೀನೂ ಒಬ್ಬನಲ್ಲವೇ?” ಎಂದು ಕೇಳಿದರು. ಆದರೆ ಪೇತ್ರನು, “ಇಲ್ಲ, ನಾನಲ್ಲ!” ಎಂದು ಹೇಳಿದನು.

[26] ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು ಪೇತ್ರನಿಂದ ಕಿವಿ ಕತ್ತರಿಸಿಹಾಕಲ್ಪಟ್ಟ ಸೇವಕನ ಸಂಬಂಧಿಕನಾಗಿದ್ದನು. ಆ ಸೇವಕನು, “ನೀನು ತೋಟದಲ್ಲಿ ಅವನೊಂದಿಗೆ (ಯೇಸುವಿನೊಂದಿಗೆ) ಇದ್ದುದನ್ನು ನಾನು ನೋಡಿದಂತಿದೆ!” ಎಂದು ಹೇಳಿದನು.

[27] ಆದರೆ ಪೇತ್ರನು ಮತ್ತೆ, “ಇಲ್ಲ, ನಾನು ಆತನೊಂದಿಗೆ ಇರಲಿಲ್ಲ!” ಎಂದನು. ಆ ಕೂಡಲೇ ಕೋಳಿ ಕೂಗಿತು.

[28] ಬಳಿಕ ಯೆಹೂದ್ಯರು ಯೇಸುವನ್ನು ಕಾಯಫನ ಮನೆಯಿಂದ ರೋಮ್ ರಾಜ್ಯಪಾಲನ ಭವನಕ್ಕೆ ಕರೆದುಕೊಂಡು ಬಂದರು. ಆಗ ಮುಂಜಾನೆಯಾಗಿತ್ತು. ಯೆಹೂದ್ಯರು ಭವನದೊಳಗೆ ಹೋಗಲಿಲ್ಲ. ಅವರು ಪಸ್ಕಹಬ್ಬದ ಊಟಮಾಡ ಬೇಕೆಂದಿದ್ದ ಕಾರಣ ತಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಲು ಇಷ್ಟಪಡಲಿಲ್ಲ.

[29] ಆದ್ದರಿಂದ ಪಿಲಾತನು ಆ ಯೆಹೂದ್ಯರ ಬಳಿಗೆ ಬಂದು, “ಈ ಮನುಷ್ಯನ ಮೇಲೆ ನೀವು ಹೊರಿಸುತ್ತಿರುವ ಅಪರಾಧಗಳೇನು?” ಎಂದು ಕೇಳಿದನು.

[30] ಯೆಹೂದ್ಯರು, “ಇವನು ಒಬ್ಬ ಕೆಟ್ಟ ಮನುಷ್ಯ. ಆದಕಾರಣ, ನಾವು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆವು” ಎಂದು ಉತ್ತರಕೊಟ್ಟರು.

[31] ಪಿಲಾತನು ಯೆಹೂದ್ಯರಿಗೆ, “ಯೆಹೂದ್ಯರಾದ ನೀವೇ ಇವನನ್ನು ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ತೀರ್ಪುಮಾಡಿ” ಎಂದು ಹೇಳಿದನು. ಯೆಹೂದ್ಯರು, “ಆದರೆ ಒಬ್ಬನಿಗೆ ಮರಣದಂಡನೆ ವಿಧಿಸಲು ನಿನ್ನ ಕಾನೂನು ನಮಗೆ ಅವಕಾಶ ಕೊಡುವುದಿಲ್ಲ” ಎಂದು ಉತ್ತರಕೊಟ್ಟರು.

[32] (ತಾನು ಸಾಯುವ ರೀತಿಯ ಬಗ್ಗೆ ಯೇಸು ಹೇಳಿದ್ದ ಮಾತು ಹೀಗೆ ನಿಜವಾಯಿತು.)

[33] ಬಳಿಕ ಪಿಲಾತನು, ಭವನದೊಳಗೆ ಹಿಂತಿರುಗಿ ಹೋಗಿ, ಯೇಸುವನ್ನು ಕರೆದು, “ನೀನು ಯೆಹೂದ್ಯರ ರಾಜನೋ?” ಎಂದು ಕೇಳಿದನು.

[34] ಯೇಸು, “ಇದು ನಿನ್ನ ಪ್ರಶ್ನೆಯೋ? ಅಥವಾ ನನ್ನ ಬಗ್ಗೆ ಬೇರೆ ಜನರು ನಿನಗೆ ತಿಳಿಸಿದರೋ?” ಎಂದನು.

[35] ಪಿಲಾತನು, “ನಾನು ಯೆಹೂದ್ಯನಲ್ಲ! ನಿನ್ನ ಸ್ವಂತ ಜನರು ಮತ್ತು ಅವರ ಮಹಾಯಾಜಕರು ನಿನ್ನನ್ನು ಕರೆದುಕೊಂಡು ಬಂದು ನನ್ನ ಮುಂದೆ ನಿಲ್ಲಿಸಿದ್ದಾರೆ. ನೀನು ಏನು ಮಾಡಿದೆ?” ಎಂದು ಕೇಳಿದನು.

[36] ಯೇಸು, “ನನ್ನ ರಾಜ್ಯವು ಈ ಲೋಕಕ್ಕೆ ಸೇರಿದ್ದಲ್ಲ. ಅದು ಈ ಲೋಕಕ್ಕೆ ಸೇರಿದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಸಿಗದಂತೆ ನನ್ನ ಸೇವಕರು ಹೋರಾಡುತ್ತಿದ್ದರು. ಆದರೆ ನನ್ನ ರಾಜ್ಯವು ಮತ್ತೊಂದು ಸ್ಥಳದ್ದು” ಎಂದನು.

[37] ಪಿಲಾತನು, “ಹಾಗಾದರೆ ನೀನು ರಾಜ!” ಎಂದನು. ಯೇಸು, “ನೀನೇ ನನ್ನನ್ನು ರಾಜನೆಂದು ಹೇಳುತ್ತಿರುವೆ. ಅದು ಸತ್ಯ. ನಾನು ಜನರಿಗೆ ಸತ್ಯದ ಬಗ್ಗೆ ಹೇಳುವುದಕ್ಕಾಗಿಯೇ ಹುಟ್ಟಿದೆನು. ಆದಕಾರಣವೇ ನಾನು ಈ ಲೋಕಕ್ಕೆ ಬಂದೆನು. ಸತ್ಯಕ್ಕೆ ಸೇರಿದ ಪ್ರತಿಯೊಬ್ಬನೂ ನನಗೆ ಕಿವಿಗೊಡುತ್ತಾನೆ” ಎಂದು ಉತ್ತರಕೊಟ್ಟನು.

[38] ಪಿಲಾತನು, “ಸತ್ಯವೆಂದರೇನು?” ಎಂದು ಕೇಳಿ, ಮತ್ತೆ ಯೆಹೂದ್ಯರ ಬಳಿಗೆ ಹೊರಕ್ಕೆ ಬಂದನು. ಅವನು ಯೆಹೂದ್ಯರಿಗೆ, “ಈ ಮನುಷ್ಯನ ಮೇಲೆ ಅಪವಾದ ಹೊರಿಸಲು ನನಗೆ ಏನೂ ಕಾಣುತ್ತಿಲ್ಲ.

[39] ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.

[40] ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)

ಯೋಹಾನನ ಸುವಾರ್ತೆ — Chapters