[1] ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು.
[2] ಆರಂಭದಲ್ಲಿ ಆತನು ದೇವರೊಂದಿಗೆ ಇದ್ದನು.
[3] ಎಲ್ಲಾ ವಸ್ತುಗಳು ಆತನ ಮೂಲಕ ನಿರ್ಮಾಣಗೊಂಡವು. ಆತನಿಲ್ಲದೆ ಯಾವುದೂ ನಿರ್ಮಿತವಾಗಲಿಲ್ಲ.
[4] ಆತನಲ್ಲಿ ಜೀವವಿತ್ತು. ಆ ಜೀವವು ಮನುಷ್ಯರಿಗೆ ಬೆಳಕಾಗಿತ್ತು.
[5] ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ. ಆದರೆ ಕತ್ತಲೆಯು ಬೆಳಕನ್ನು ಮುಸುಕಲಿಲ್ಲ.
[6] ಯೋಹಾನ ಎಂಬ ಒಬ್ಬ ಮನುಷ್ಯನನ್ನು ದೇವರು ಕಳುಹಿಸಿದನು.
[7] ಯೋಹಾನನು ಬೆಳಕಿನ (ಕ್ರಿಸ್ತನ) ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಬಂದನು. ತನ್ನ ಮೂಲಕ ಎಲ್ಲಾ ಜನರು ಬೆಳಕಿನ ಬಗ್ಗೆ ಕೇಳಿ ನಂಬಿಕೊಳ್ಳಲೆಂದು ಅವನು ಬಂದನು.
[8] ಯೋಹಾನನೇ ಆ ಬೆಳಕಾಗಿರಲಿಲ್ಲ. ಆದರೆ ಯೋಹಾನನು ಬೆಳಕಿನ ಬಗ್ಗೆ ಜನರಿಗೆ ಸಾಕ್ಷಿ ನೀಡಲು ಬಂದನು.
[9] ನಿಜವಾದ ಬೆಳಕು ಈ ಲೋಕಕ್ಕೆ ಆಗಮಿಸಲಿತ್ತು. ಈ ನಿಜವಾದ ಬೆಳಕೇ ಎಲ್ಲಾ ಜನರಿಗೆ ಬೆಳಕನ್ನು ಕೊಡುತ್ತದೆ.
[10] ವಾಕ್ಯ ಎಂಬಾತನು ಆಗಲೇ ಈ ಲೋಕದಲ್ಲಿದ್ದನು. ಈ ಲೋಕವು ವಾಕ್ಯ ಎಂಬಾತನ ಮೂಲಕ ನಿರ್ಮಾಣಗೊಂಡಿತು. ಆದರೆ ಈ ಲೋಕದವರು ಆತನನ್ನು ತಿಳಿದಿರಲಿಲ್ಲ.
[11] ಆತನು ತನ್ನ ಸ್ವಾಸ್ತ್ಯಕ್ಕೆ ಬಂದನು. ಆದರೆ ಆತನ ಸ್ವಂತ ಜನರು ಆತನನ್ನು ಸ್ವೀಕರಿಸಿಕೊಳ್ಳಲಿಲ್ಲ.
[12] ಯಾರ್ಯಾರು ಆತನನ್ನು ಸ್ವೀಕರಿಸಿಕೊಂಡರೋ ಅಂದರೆ ಆತನಲ್ಲಿ ನಂಬಿಕೆ ಇಟ್ಟರೋ ಅವರಿಗೆ ಆತನು ದೇವರ ಮಕ್ಕಳಾಗುವ ಅಧಿಕಾರ ಕೊಟ್ಟನು.
[13] ಇವರು ರಕ್ತದಿಂದಾಗಲಿ ಕಾಮದಿಂದಾಗಲಿ ಪುರುಷನ ಸಂಕಲ್ಪದಿಂದಾಗಲಿ ಹುಟ್ಟಿದವರಲ್ಲ. ಇವರು ದೇವರಿಂದಲೇ ಹುಟ್ಟಿದವರು.
[14] ವಾಕ್ಯ ಎಂಬಾತನು ಮನುಷ್ಯನಾಗಿ ನಮ್ಮೊಂದಿಗೆ ವಾಸಿಸಿದನು. ನಾವು ಆತನ ಮಹಿಮೆಯನ್ನು ನೋಡಿದೆವು. ಆ ಮಹಿಮೆಯು ತಂದೆಯ ಒಬ್ಬನೇ ಮಗನಿಗಿರುವ ಮಹಿಮೆಯಾಗಿತ್ತು. ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು.
[15] ಯೋಹಾನನು ಆತನ ಬಗ್ಗೆ ಜನರಿಗೆ ತಿಳಿಸುತ್ತಾ, “‘ನನ್ನ ನಂತರ ಬರುವ ಒಬ್ಬನು ನನಗಿಂತಲೂ ಶ್ರೇಷ್ಠನಾಗಿದ್ದಾನೆ. ಆತನು ನನಗಿಂತ ಮೊದಲೇ ಜೀವಿಸುತ್ತಿದ್ದನು’ ಎಂದು ನಾನು ಹೇಳಿದಾಗ ಈತನ ಬಗ್ಗೆಯೇ ಮಾತಾಡುತ್ತಿದ್ದೆನು” ಎಂದು ಗಟ್ಟಿಯಾಗಿ ಕೂಗಿ ಹೇಳಿದನು.
[16] ವಾಕ್ಯ ಎಂಬಾತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು. ಆತನಿಂದಲೇ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು.
[17] ಧರ್ಮಶಾಸ್ತ್ರವು ಮೋಶೆಯ ಮೂಲಕ ಕೊಡಲ್ಪಟ್ಟಿತು. ಆದರೆ ಕೃಪೆಯೂ ಸತ್ಯವೂ ಯೇಸು ಕ್ರಿಸ್ತನ ಮೂಲಕ ಬಂದವು.
[18] ದೇವರನ್ನು ಯಾರೂ ಎಂದೂ ಕಂಡಿಲ್ಲ. ಆದರೆ ಒಬ್ಬನೇ ಮಗನು (ಯೇಸು) ದೇವರಾಗಿದ್ದಾನೆ ಮತ್ತು ಆತನು ತಂದೆಯ (ದೇವರ) ಎದೆಯಲ್ಲಿದ್ದಾನೆ. ಆತನೇ ತಂದೆಯನ್ನು ತಿಳಿಯಪಡಿಸಿದ್ದಾನೆ.
[19] “ನೀನು ಯಾರು?” ಎಂದು ಯೋಹಾನನನ್ನು ಕೇಳುವುದಕ್ಕಾಗಿ ಜೆರುಸಲೇಮಿನ ಯೆಹೂದ್ಯರು ಯೋಹಾನನ ಬಳಿಗೆ ಕೆಲವು ಯಾಜಕರನ್ನು ಮತ್ತು ಲೇವಿಯರನ್ನು ಕಳುಹಿಸಿದರು.
[20] ಯೋಹಾನನು ಮರೆಮಾಚದೆ, “ನಾನು ಕ್ರಿಸ್ತನಲ್ಲ” ಎಂದು ಹೇಳಿದನು.
[21] ಯೆಹೂದ್ಯರು ಯೋಹಾನನಿಗೆ, “ಹಾಗಾದರೆ ನೀನು ಯಾರು? ನೀನು ಎಲೀಯನೋ?” ಎಂದು ಕೇಳಿದರು. ಅವನು, “ಇಲ್ಲ, ನಾನು ಎಲೀಯನಲ್ಲ” ಎಂದು ಉತ್ತರಿಸಿದನು. ಯೆಹೂದ್ಯರು, “ನೀನು ಪ್ರವಾದಿಯೋ?” ಎಂದು ಕೇಳಿದರು. ಯೋಹಾನನು, “ಇಲ್ಲ, ನಾನು ಪ್ರವಾದಿಯಲ್ಲ” ಎಂದು ಉತ್ತರಕೊಟ್ಟನು.
[22] ಆಗ ಯೆಹೂದ್ಯರು, “ನಮಗೆ ಹೇಳು. ನಮ್ಮನ್ನು ಕಳುಹಿಸಿದವರಿಗೆ ನಾವು ತಿಳಿಸಬೇಕಾಗಿದೆ. ನಿನ್ನ ಬಗ್ಗೆ ನೀನು ಏನು ಹೇಳುವೆ?” ಎಂದು ಕೇಳಿದರು.
[23] ಅದಕ್ಕೆ ಯೋಹಾನನು, “‘ಪ್ರಭುವಿಗಾಗಿ ನೇರವಾದ ದಾರಿಯನ್ನು ಸಿದ್ಧಗೊಳಿಸಿರಿ’ ಎಂದು ಅಡವಿಯಲ್ಲಿ ಕೂಗುವವನ ಸ್ವರವೇ ನಾನು” ಯೆಶಾಯ 40:3 ಎಂದು ಪ್ರವಾದಿಯಾದ ಯೆಶಾಯನ ಮಾತುಗಳಲ್ಲೇ ಉತ್ತರಕೊಟ್ಟನು.
[24] ಕಳುಹಿಸಲ್ಪಟ್ಟಿದ್ದವರಲ್ಲಿ ಕೆಲವು ಮಂದಿ ಫರಿಸಾಯರೂ ಇದ್ದರು.
[25] ಅವರು ಅವನಿಗೆ, “ನೀನು ನಿನ್ನ ಬಗ್ಗೆ, ‘ನಾನು ಕ್ರಿಸ್ತನೂ ಅಲ್ಲ, ಎಲೀಯನೂ ಅಲ್ಲ, ಪ್ರವಾದಿಯೂ ಅಲ್ಲ’ ಎಂದು ಹೇಳುತ್ತಿರುವೆ. ಹಾಗಾದರೆ ನೀನು ಜನರಿಗೆ ಏಕೆ ದೀಕ್ಷಾಸ್ನಾನ ಮಾಡಿಸುವೆ?” ಎಂದು ಕೇಳಿದರು.
[26] ಯೋಹಾನನು, “ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಮಾಡಿಸುವೆನು. ಆದರೆ ನಿಮಗೆ ಗೊತ್ತಿಲ್ಲದ ಒಬ್ಬನು ಇಲ್ಲಿದ್ದಾನೆ.
[27] ನನ್ನ ನಂತರ ಬರುವವನು ಆತನೇ. ಆತನ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ” ಎಂದು ಹೇಳಿದನು.
[28] ಜೋರ್ಡನ್ ನದಿಯ ಆಚೆದಡದಲ್ಲಿದ್ದ ಬೆಥಾನಿ ಎಂಬ ಊರಲ್ಲಿ ಈ ಸಂಗತಿಗಳೆಲ್ಲಾ ನಡೆದವು. ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದದ್ದು ಇಲ್ಲಿಯೇ.
[29] ಮರುದಿನ ಯೋಹಾನನು, ತನ್ನ ಬಳಿಗೆ ಬರುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕಾಗಿ ದೇವರು ನೇಮಿಸಿದ ಕುರಿಮರಿ. ಆತನು ಈ ಲೋಕದ ಪಾಪಗಳನ್ನು ಪರಿಹರಿಸುವನು.
[30] ‘ನನ್ನ ನಂತರ ಒಬ್ಬ ವ್ಯಕ್ತಿಯು ಬರುವನು. ಆತನು ನನಗಿಂತಲೂ ದೊಡ್ಡವನು. ಏಕೆಂದರೆ ಆತನು ನನಗಿಂತಲೂ ಮೊದಲೇ ಇದ್ದವನು ಮತ್ತು ಯಾವಾಗಲೂ ಇದ್ದವನು’ ಎಂದು ನಾನು ಹೇಳುತ್ತಿದ್ದುದು ಈತನ ವಿಷಯವಾಗಿಯೇ.
[31] ಆತನು ಯಾರೆಂಬುದು ನನಗೂ ಗೊತ್ತಿರಲಿಲ್ಲ. ಆದರೆ ಆತನನ್ನು ಇಸ್ರೇಲರಿಗೆ ತಿಳಿಸುವುದಕ್ಕೋಸ್ಕರ ನಾನು ಜನರಿಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೆನು” ಎಂದು ಹೇಳಿದನು.
[32] ಇದಲ್ಲದೆ ಯೋಹಾನನು ಸಾಕ್ಷಿಕೊಟ್ಟು ಹೇಳಿದ್ದೇನೆಂದರೆ, “ಆತನು ಯಾರೆಂದು ನನಗೂ ಗೊತ್ತಿರಲಿಲ್ಲ. ಆದರೆ ಜನರಿಗೆ ದೀಕ್ಷಾಸ್ನಾನ ಕೊಡಲು ನನ್ನನ್ನು ಕಳುಹಿಸಿದಾತನು ನನಗೆ, ‘ಪವಿತ್ರಾತ್ಮನು ಇಳಿದುಬಂದು ಒಬ್ಬ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವೆ. ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುವವನು ಆ ವ್ಯಕ್ತಿಯೇ’ ಎಂದು ಹೇಳಿದ್ದನು. ಇದು ನೆರವೇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಪವಿತ್ರಾತ್ಮನು ಪರಲೋಕದಿಂದ ಪಾರಿವಾಳದ ರೂಪದಲ್ಲಿ ಇಳಿದುಬಂದು ಆತನ (ಯೇಸುವಿನ) ಮೇಲೆ ನೆಲಸುವುದನ್ನು ನಾನು ನೋಡಿದೆನು.
[34] ಆದ್ದರಿಂದ ಆತನೇ (ಯೇಸುವೇ) ದೇವರ ಮಗನೆಂದು ನಾನು ಜನರಿಗೆ ತಿಳಿಸುವೆನು” ಎಂದನು.
[35] ಮರುದಿನ ಯೋಹಾನನು ತನ್ನ ಇಬ್ಬರು ಶಿಷ್ಯರೊಂದಿಗೆ ಇದ್ದಾಗ,
[36] ಸಮೀಪದಲ್ಲಿ ನಡೆದುಹೋಗುತ್ತಿದ್ದ ಯೇಸುವನ್ನು ಕಂಡು, “ಇಗೋ, ಯಜ್ಞಕ್ಕೆ ದೇವರು ನೇಮಿಸಿದ ಕುರಿಮರಿ!” ಎಂದು ಹೇಳಿದನು.
[37] ಯೋಹಾನನ ಈ ಮಾತನ್ನು ಕೇಳಿದ ಆ ಇಬ್ಬರು ಶಿಷ್ಯರು ಯೇಸುವನ್ನು ಹಿಂಬಾಲಿಸಿದರು.
[38] ಯೇಸು ಹಿಂತಿರುಗಿ ನೋಡಿ, “ನಿಮಗೇನು ಬೇಕು?” ಎಂದು ಕೇಳಿದನು. ಆ ಇಬ್ಬರು, “ರಬ್ಬಿ, ನೀನು ಎಲ್ಲಿ ಇಳಿದುಕೊಂಡಿರುವೆ?” ಎಂದು ಕೇಳಿದರು. (“ರಬ್ಬಿ” ಅಂದರೆ “ಗುರು” ಎಂದರ್ಥ.)
[39] ಯೇಸು, “ನನ್ನೊಂದಿಗೆ ಬನ್ನಿ, ಆಗ ನೀವೇ ನೋಡುವಿರಿ” ಎಂದು ಹೇಳಿದನು. ಆದ್ದರಿಂದ ಆ ಇಬ್ಬರು ಹೋಗಿ ಯೇಸು ಇಳಿದುಕೊಂಡಿದ್ದ ಸ್ಥಳವನ್ನು ನೋಡಿದರು. ಆ ದಿನ ಅವರು ಅಲ್ಲಿಯೇ ಆತನೊಂದಿಗೆ ಇದ್ದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
[40] ಈ ಇಬ್ಬರು ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. ಸೀಮೋನ್ ಪೇತ್ರನ ತಮ್ಮನಾದ ಅಂದ್ರೆಯನು ಇವರಲ್ಲಿ ಒಬ್ಬನಾಗಿದ್ದನು.
[41] ಮೊದಲನೆಯದಾಗಿ, ಅವನು ತನ್ನ ಅಣ್ಣನಾದ ಸೀಮೋನನನ್ನು ಕಾಣಲು ಹೋಗಿ ಅವನಿಗೆ, “ನಾವು ಮೆಸ್ಸೀಯನನ್ನು ಕಂಡುಕೊಂಡೆವು” ಎಂದು ಹೇಳಿದನು. (“ಮೆಸ್ಸೀಯ” ಅಂದರೆ “ಕ್ರಿಸ್ತನು” ಎಂದರ್ಥ.)
[42] ಅವನು ಸೀಮೋನನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದನು. ಯೇಸು ಸೀಮೋನನ ಕಡೆಗೆ ನೋಡಿ, “ಯೋಹಾನನ ಮಗನಾದ ನಿನ್ನ ಹೆಸರು ಸೀಮೋನ. ನೀನು ಕೇಫನೆಂದು ಕರೆಸಿಕೊಳ್ಳುವೆ” ಎಂದು ಹೇಳಿದನು. (“ಕೇಫ” ಅಂದರೆ “ಪೇತ್ರ” ಎಂದರ್ಥ).
[43] ಮರುದಿನ ಯೇಸು ಗಲಿಲಾಯಕ್ಕೆ ಹೋಗಲು ನಿರ್ಧರಿಸಿದನು. ಯೇಸು ಫಿಲಿಪ್ಪನನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
[44] ಅಂದ್ರೆಯ ಮತ್ತು ಪೇತ್ರರಂತೆ ಫಿಲಿಪ್ಪನು ಸಹ ಬೆತ್ಸಾಯಿದ ಎಂಬ ಊರಿನವನಾಗಿದ್ದನು.
[45] ಫಿಲಿಪ್ಪನು ನತಾನಿಯೇಲನನ್ನು ಕಂಡು ಅವನಿಗೆ, “ಯಾವನ ವಿಷಯದಲ್ಲಿ ಮೋಶೆಯು ಧರ್ಮಶಾಸ್ತ್ರದಲ್ಲಿ ಬರೆದನೋ ಮತ್ತು ಪ್ರವಾದಿಗಳು ಬರೆದರೋ, ಆತನನ್ನು ನಾವು ಕಂಡುಕೊಂಡೆವು. ಆತನ ಹೆಸರು ಯೇಸು. ಆತನು ಯೋಸೇಫನ ಮಗನು. ಆತನು ನಜರೇತಿನವನು” ಎಂದು ಹೇಳಿದನು.
[46] ಆದರೆ ನತಾನಿಯೇಲನು ಫಿಲಿಪ್ಪನಿಗೆ, “ನಜರೇತಿನಿಂದ ಒಳ್ಳೆಯದೇನಾದರೂ ಬರುವುದೇ?” ಎಂದು ಕೇಳಿದನು. ಫಿಲಿಪ್ಪನು, “ಬಂದು ನೋಡು” ಎಂದು ಉತ್ತರಕೊಟ್ಟನು.
[47] ಯೇಸು ತನ್ನ ಬಳಿಗೆ ಬರುತ್ತಿದ್ದ ನತಾನಿಯೇಲನನ್ನು ಕಂಡು ಅವನ ಬಗ್ಗೆ, “ಇವನು ನಿಜವಾದ ಇಸ್ರೇಲ. ಇವನಲ್ಲಿ ಕಪಟವಿಲ್ಲ” ಎಂದು ಹೇಳಿದನು.
[48] ನತಾನಿಯೇಲನು, “ನೀನು ನನ್ನನ್ನು ಹೇಗೆ ಬಲ್ಲೆ?” ಎಂದು ಕೇಳಿದನು. ಯೇಸು, “ಫಿಲಿಪ್ಪನು ನನ್ನ ಬಗ್ಗೆ ನಿನಗೆ ತಿಳಿಸುವುದಕ್ಕಿಂತ ಮೊದಲೇ ನೀನು ಅಂಜೂರದ ಮರದ ಕೆಳಗಿದ್ದಾಗ ನಾನು ನಿನ್ನನ್ನು ನೋಡಿದೆನು” ಎಂದು ಹೇಳಿದನು.
[49] ಆಗ ನತಾನಿಯೇಲನು ಯೇಸುವಿಗೆ, “ಗುರುವೇ, ನೀನೇ ದೇವರ ಮಗನು. ನೀನೇ ಇಸ್ರೇಲರ ರಾಜ” ಎಂದು ಹೇಳಿದನು.
[50] ಯೇಸು ನತಾನಿಯೇಲನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ನೋಡಿದೆನೆಂದು ನಾನು ನಿನಗೆ ಹೇಳಿದ್ದರಿಂದ ನೀನು ನನ್ನನ್ನು ನಂಬುವೆ. ಆದರೆ ಅದಕ್ಕಿಂತಲೂ ಹೆಚ್ಚು ದೊಡ್ಡ ಕಾರ್ಯಗಳನ್ನು ನೀನು ನೋಡುವೆ!” ಎಂದು ಹೇಳಿದನು.
[51] ಅದಲ್ಲದೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಪರಲೋಕವು ತೆರೆದಿರುವುದನ್ನೂ ಮನುಷ್ಯಕುಮಾರನ ಮೇಲೆ ದೇವದೂತರುಗಳು ಏರಿಹೋಗುವುದನ್ನೂ ಕೆಳಗೆ ಇಳಿದುಬರುವುದನ್ನೂ ನೀವು ನೋಡುವಿರಿ” ಎಂದು ಹೇಳಿದನು.