Skip to content
Opens in a new window
Listen to this chapter • 5:13

[1] ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ವಿಧೇಯರಾಗಿರಿ. ಇದು ನ್ಯಾಯವಾದದ್ದು.

[2] ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ, “ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು,

[3] ಗೌರವಿಸಿದರೆ ನಿನಗೆ ಶುಭವಾಗುವುದು, ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ.”

[4] ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ, ಕರ್ತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿ ಅವರನ್ನು ಶಿಸ್ತಿನಲ್ಲಿಯೂ ಉಪದೇಶದಲ್ಲಿಯೂ ಸಾಕಿ ಸಲಹಿರಿ.

[5] ದಾಸರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ ಕ್ರಿಸ್ತನಿಗೆ ವಿಧೇಯರಾಗುವ ಹಾಗೆಯೇ ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರಿ.

[6] ಮನುಷ್ಯರನ್ನು ಮೆಚ್ಚಿಸುವವರಂತೆ ತೋರಿಕೆಗೆ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೇ, ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.

[7] ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಮನಃಪೂರ್ವಕವಾಗಿ ಸೇವೆಮಾಡಿರಿ.

[8] ಯಾಕೆಂದರೆ ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬುದನ್ನು ನೀವು ತಿಳಿದವರಾಗಿದ್ದೀರಿ.

[9] ಯಜಮಾನರೇ, ನಿಮ್ಮ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆದುಕೊಳ್ಳಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.

[10] ಕಡೆಯದಾಗಿ, ನೀವು ಕರ್ತನಲ್ಲಿಯೂ ಆತನ ಅತ್ಯಧಿಕವಾದ ಶಕ್ತಿಯಲ್ಲಿಯೂ ಬಲಗೊಳ್ಳಿರಿ.

[11] ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವುದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

[12] ನಮಗೆ ಹೋರಾಟವಿರುವುದು ಮನುಷ್ಯಮಾತ್ರದವರ ಸಂಗಡವಲ್ಲ. ರಾಜತ್ವಗಳ ಮೇಲೆಯೂ, ಅಧಿಕಾರಿಗಳ ಮೇಲೆಯೂ, ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ, ಆಕಾಶ ಮಂಡಲಗಳಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.

[13] ಆದ್ದರಿಂದ ಆ ದುಷ್ಟ ದಿನದಲ್ಲಿ ವೈರಿಗಳನ್ನು ಎದುರಿಸುವುದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ದೃಢವಾಗಿ ನಿಲ್ಲುವುದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

[14] ಸತ್ಯವೆಂಬ ನಡುಕಟ್ಟನ್ನು ಸೊಂಟಕ್ಕೆ ಕಟ್ಟಿಕೊಂಡು, ನೀತಿಯೆಂಬ ಎದೆಕವಚವನ್ನು ಧರಿಸಿಕೊಂಡು,

[15] ಸಮಾಧಾನದ ಸುವಾರ್ತೆಯನ್ನು ಪ್ರಚುರಪಡಿಸುವುದಕ್ಕೆ ಸಿದ್ಧ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.

[16] ಎಲ್ಲಾದಕ್ಕಿಂತ ಹೆಚ್ಚಾಗಿ ನಂಬಿಕೆಯೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ನಂದಿಸುವುದಕ್ಕೆ ಶಕ್ತರಾಗುವಿರಿ.

[17] ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿದುಕೊಳ್ಳಿರಿ.

[18] ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಗಳಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರಿ. ನನಗಾಗಿಯೂ ಪ್ರಾರ್ಥನೆ ಮಾಡಿರಿ.

[19] ನಾನು ಮಾತನಾಡಲು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಗಳನ್ನು ಭಯವಿಲ್ಲದೆ ತಿಳಿಸುವುದಕ್ಕೆ ಬೇಕಾದ ಮಾತುಗಳನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.

[20] ಆ ಸುವಾರ್ತೆಯ ನಿಮಿತ್ತವಾಗಿ ರಾಯಭಾರಿಯಾದ ನಾನು ಸೆರೆಮನೆಯಲ್ಲಿ ಬಿದ್ದಿದ್ದೇನಲ್ಲಾ. ಅದರ ವಿಷಯದಲ್ಲಿ ನಾನು ಮಾತನಾಡಬೇಕಾದ ಹಾಗೆಯೇ ಧೈರ್ಯವಾಗಿ ನಾನು ಮಾತನಾಡುವಂತೆ ನನಗಾಗಿ ಬೇಡಿಕೊಳ್ಳಿರಿ.

[21] ನನ್ನ ವಿಷಯಗಳು ನನ್ನ ಕೆಲಸಕಾರ್ಯಗಳು ನಿಮಗೆ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತ ಸೇವಕನಾಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸಿಕೊಡುವನು.

[22] ನೀವು ನಮ್ಮ ಸಂಗತಿಗಳನ್ನು ತಿಳಿದುಕೊಳ್ಳುವಂತೆಯೂ, ಅವನು ನಿಮ್ಮ ಹೃದಯಗಳನ್ನು ಸಂತೈಸುವಂತೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.

[23] ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ಶಾಂತಿಯೂ, ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರೆಲ್ಲರಿಗೆ ಉಂಟಾಗಲಿ.

[24] ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾಗಿ ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.

ಎಫೆಸದವರಿಗೆ — Chapters