Skip to content
Opens in a new window
Listen to this chapter • 4:37

[1] ನೀವು ನಿಮ್ಮ ಅಪರಾಧಗಳ ಹಾಗೂ ಪಾಪಗಳ ದೆಸೆಯಿಂದ ಸತ್ತವರಾಗಿದ್ದೀರಿ.

[2] ಪೂರ್ವದಲ್ಲಿ ನೀವು ಇಹಲೋಕದ ಪದ್ಧತಿಗೆ ಅನುಸಾರವಾಗಿಯೂ, ವಾಯುಮಂಡಲದಲ್ಲಿ ಅಧಿಕಾರ ನಡಿಸುವ ಅಧಿಪತಿಗೆ ಅಂದರೆ ಅವಿಧೇಯತೆಯ ಮಕ್ಕಳಲ್ಲಿ ಈಗ ಕೆಲಸ ನಡೆಸುವ ಆತ್ಮನಿಗನುಸಾರವಾಗಿ ಜೀವನ ನಡಿಸಿದ್ದೀರಿ.

[3] ನಾವೆಲ್ಲರೂ ಪೂರ್ವದಲ್ಲಿ ಅವರ ಹಾಗೆಯೇ ಇದ್ದೆವು, ಶರೀರಭಾವದ ಆಸೆಗಳಿಗೆ ಅಧೀನರಾಗಿ, ಶಾರೀರಿಕ ಹಾಗೂ ಮಾನಸಿಕ ಇಚ್ಛೆಗಳನ್ನು ಈಡೇರಿಸುತ್ತಾ ಬಂದೆವು. ಸ್ವಭಾವತಃ ನಾವು ಸಹ ಇತರರಂತೆಯೇ ದೇವರ ಕೋಪಕ್ಕೆ ಗುರಿಯಾಗಿದ್ದೆವು.

[4] ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮನ್ನು ಪ್ರೀತಿಸಿದ ಮಹಾ ಪ್ರೀತಿಯ ನಿಮಿತ್ತ,

[5] ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ.

[6] ಆತನು ಕ್ರಿಸ್ತ ಯೇಸುವಿನಲ್ಲಿ ನಮ್ಮೊಂದಿಗಿರುವ ದಯೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು

[7] ಮುಂದಿನ ಯುಗಗಳಲ್ಲಿ ನಮಗೆ ತೋರಿಸಬೇಕೆಂದು ಕ್ರಿಸ್ತಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ, ಪರಲೋಕದಲ್ಲಿ ಯೇಸುಕ್ರಿಸ್ತನೊಂದಿಗೆ ನಮ್ಮನ್ನು ಕೂರಿಸಿದ್ದಾನೆ.

[8] ನಂಬಿಕೆಯ ಮೂಲಕ ಕೃಪೆಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಈ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ.

[9] ಈ ರಕ್ಷಣೆಯೂ ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ, ಆದ್ದರಿಂದ ಹೊಗಳಿಕೊಳ್ಳುವುದಕ್ಕೆ ಯಾರಿಗೂ ಆಸ್ಪದವಿಲ್ಲ.

[10] ನಾವಾದರೋ ದೇವರ ಕಲಾಕೃತಿಯಾಗಿದ್ದೇವೆ, ದೇವರು ಮೊದಲೇ ನಮಗಾಗಿ ಸಂಕಲ್ಪಿಸಿದ್ದ ಸತ್ಕಾರ್ಯಗಳನ್ನು ಮಾಡುವವರಾಗಿ ಬದುಕಬೇಕೆಂದು ಯೇಸು ಕ್ರಿಸ್ತನಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.

[11] ಆದಕಾರಣ ಹಿಂದೊಮ್ಮೆ ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ ಎಂಬುದು ನಿಮಗೆ ನೆನಪಿರಲಿ. ಶರೀರದಲ್ಲಿ ಮನುಷ್ಯನಿಂದ ಸುನ್ನತಿಯನ್ನು ಮಾಡಿಸಿಕೊಂಡು ಸುನ್ನತಿಯವರೆನ್ನಿಸಿಕೊಳ್ಳುವವರಿಂದ ‘ಸುನ್ನತಿಯಿಲ್ಲದವರು’ ಎಂದು ಕರೆಯಲ್ಪಟ್ಟಿದ್ದೀರಿ.

[12] ಅಂದು ನೀವು ಕ್ರಿಸ್ತನಿಂದ ದೂರವಿದವರೂ, ಇಸ್ರಾಯೇಲ್ಯರ ಹಕ್ಕಿನಲ್ಲಿ ಪಾಲಿಲ್ಲದವರೂ, ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಪರಕೀಯರೂ, ಯಾವ ನಿರೀಕ್ಷೆಯಿಲ್ಲದವರೂ ಮತ್ತು ಲೋಕದಲ್ಲಿ ದೇವರಿಲ್ಲದವರೂ ಆಗಿದ್ದಿರೆಂಬುದನ್ನು ಜ್ಞಾಪಕಮಾಡಿಕೊಳ್ಳಿರಿ.

[13] ಈಗಲಾದರೋ, ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವಿನಲ್ಲಿ ಆತನ ರಕ್ತದ ಮೂಲಕ ಸಮೀಪಸ್ಥರಾಗಿದ್ದೀರಿ.

[14] ನಿಮ್ಮನ್ನು ಮತ್ತು ನಮ್ಮನ್ನು ಒಂದುಮಾಡಿದವನಾದ ಆತನೇ ನಮಗೆ ಶಾಂತಿದಾತನಾಗಿದ್ದಾನೆ. ಆತನು ವಿಧಿನಿಯಮಗಳಿಂದ ಕೂಡಿದ್ದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ನಿರರ್ಥಕಗೊಳಿಸಿ, ನಮ್ಮನ್ನು ಅಗಲಿಸಿದ್ದ ಹಗೆತನವೆಂಬ ಅಡ್ಡಗೋಡೆಯನ್ನು ತನ್ನ ಶರೀರದಿಂದಲೇ ಕೆಡವಿಹಾಕಿದ್ದಾನೆ.

[15] ಆತನು ಸಮಾಧಾನವನ್ನುಂಟು ಮಾಡುವವನಾಗಿ, ಉಭಯರನ್ನೂ ತನ್ನಲ್ಲಿ ಒಂದುಗೂಡಿಸಿ ನೂತನ ಮಾನವನನ್ನಾಗಿ ನಿರ್ಮಿಸಿದ್ದಾನೆ.

[16] ನಮ್ಮ ಮೇಲೆ ಇದ್ದ ಹಗೆತನವನ್ನು ತನ್ನ ಶಿಲುಬೆಯ ಮೇಲೆ ಇಲ್ಲವಾಗಿಸಿ, ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ಶರೀರವನ್ನಾಗಿ ಮಾಡಿ ದೇವರೊಂದಿಗೆ ಸಂಧಾನಪಡಿಸಿದ್ದಾನೆ.

[17] ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು.

[18] ಇದರಿಂದ ಆತನ ಮೂಲಕ ಉಭಯತ್ರರು ಒಂದೇ ಆತ್ಮನಲ್ಲಿ ತಂದೆಯ ಬಳಿಗೆ ಪ್ರವೇಶಿಸಲು ಮಾರ್ಗವಾಯಿತು.

[19] ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೇ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ.

[20] ಅಪೊಸ್ತಲರೂ ಪ್ರವಾದಿಗಳೂ ಎಂಬ ಅಡಿಪಾಯದ ಮೇಲೆ ನೀವೂ ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು.

[21] ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ, ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.

[22] ಆತನಲ್ಲಿ ನೀವೂ ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ವಾಸಸ್ಥಾನವಾಗುವುದಕ್ಕೆ ನಮ್ಮ ಜೊತೆಯಲ್ಲಿ ಕಟ್ಟಲ್ಪಡುತ್ತಾ ಇದ್ದೀರಿ.

ಎಫೆಸದವರಿಗೆ — Chapters