Skip to content
Opens in a new window
Listen to this chapter • 6:03

[1] ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಆ ಕರೆಗೆ ಯೋಗ್ಯರಾಗಿ ಜೀವಿಸಬೇಕೆಂದು, ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.

[2] ನೀವು ಪೂರ್ಣ ವಿನಯ, ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ, ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ.

[3] ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆಸಕ್ತರಾಗಿರಿ.

[4] ನೀವು ಕರೆಯಲ್ಪಟ್ಟಾಗ ಒಂದೇ ನಿರೀಕ್ಷೆಗಾಗಿ ಕರೆಯಲ್ಪಟ್ಟವರಂತೆಯೇ, ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಒಬ್ಬನೇ ಆತ್ಮನನ್ನು ಹೊಂದಿದವರು,

[5] ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ನಂಬಿಕೆಯು ಒಂದೇ, ದೀಕ್ಷಾಸ್ನಾನ ಒಂದೇ,

[6] ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ. ಆತನು ಎಲ್ಲರ ಮೇಲಿರುವವನೂ, ಎಲ್ಲರ ಮುಖಾಂತರ ಕಾರ್ಯ ನಡಿಸುವವನೂ, ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

[7] ಆದರೆ ಕ್ರಿಸ್ತನ ವರದ ಅಳತೆಯ ಪ್ರಕಾರವೇ ಪ್ರತಿಯೊಬ್ಬರಿಗೆ ಕೃಪಾವರವು ಕೊಡಲ್ಪಟ್ಟಿದೆ.

[8] ಆದ್ದರಿಂದ ದೇವರವಾಕ್ಯದಲ್ಲಿ ಹೀಗೆ ಹೇಳಿದೆ, “ಆತನು ಉನ್ನತ ಸ್ಥಾನಕ್ಕೆ ಏರಿಹೋದಾಗ ತಾನು ಸೆರೆಯಾಳುಗಳನ್ನು ಸೆರೆಹಿಡಿದುಕೊಂಡು ಹೋಗಿ ಮನುಷ್ಯರಿಗೆ ವರಗಳನ್ನು ಕೊಟ್ಟನು.”

[9] “ಏರಿಹೋದನೆಂದು” ಹೇಳಿದ್ದರ ಅರ್ಥವೇನು? ಭೂಮಿಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ?

[10] ಇಳಿದು ಬಂದಾತನು, ಸಮಸ್ತವನ್ನು ತುಂಬುವುದಕ್ಕಾಗಿ ಮೇಲಣ ಎಲ್ಲಾ ಲೋಕಗಳಿಗಿಂತಲೂ ಉನ್ನತಕ್ಕೆ ಏರಿಹೋದವನು ಆಗಿದ್ದಾನೆ.

[11] ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ, ಕೆಲವರನ್ನು ಪ್ರವಾದಿಗಳನ್ನಾಗಿಯೂ, ಕೆಲವರನ್ನು ಸುವಾರ್ತಿಕರನ್ನಾಗಿಯೂ, ಕೆಲವರನ್ನು ಸಭಾಪಾಲಕರನ್ನಾಗಿಯೂ, ಬೋಧಕರನ್ನಾಗಿಯೂ ನೇಮಿಸಿದನು.

[12] ನಾವೆಲ್ಲರೂ ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯತೆಯನ್ನು ಹೊಂದಿ, ಪರಿಪಕ್ವತೆಯನ್ನು ಪಡೆದು, ಕ್ರಿಸ್ತನ ಪರಿಪೂರ್ಣತೆಯ ಮಟ್ಟವನ್ನು ತಲುಪುವ ತನಕ,

[13] ದೇವಜನರನ್ನು ದೇವರ ಸೇವೆಗೆ ಸಿದ್ಧಗೊಳಿಸುವುದಕ್ಕೂ, ಕ್ರಿಸ್ತನ ದೇಹವೆಂಬ ಸಭೆಯು ಅಭಿವೃದ್ಧಿಯಾಗುವುದಕ್ಕೋಸ್ಕರವೂ ಆತನು ಇವರನ್ನು ನೇಮಿಸಿದನು.

[14] ಆದ್ದರಿಂದ ನಾವು ಇನ್ನು ಮೇಲೆ ಕೂಸುಗಳಾಗಿರದೇ, ದುರ್ಜನರ ವಂಚನೆಗಳಿಗೂ, ಕುಯುಕ್ತಿಗೂ ಒಳಬಿದ್ದು, ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ಓಲಾಡುವವರ ಹಾಗಿರದೇ,

[15] ಪ್ರೀತಿಯಲ್ಲಿ ಸತ್ಯವನ್ನು ಮಾತನಾಡುತ್ತಾ ಎಲ್ಲಾ ವಿಷಯಗಳಲ್ಲಿಯೂ ತಲೆಯಾಗಿರುವ ಕ್ರಿಸ್ತನಲ್ಲಿ ಬೆಳೆಯುವವರಾಗಿರೋಣ.

[16] ದೇಹವೆಲ್ಲಾ ಆತನ ಮುಖಾಂತರ ಪ್ರತಿ ಕೀಲಿನಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಐಕ್ಯವಾಗಿದ್ದು, ಪ್ರತಿಯೊಂದು ಅಂಗವು ತನ್ನ ಕೆಲಸವನ್ನು ಮಾಡುವುದರಿಂದ ದೇಹವು ಪ್ರೀತಿಯಲ್ಲಿ ಬೆಳೆದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.

[17] ಆದ್ದರಿಂದ ನಾನು ಕರ್ತನಲ್ಲಿ ಹೇಳುವುದೇನಂದರೆ ಅನ್ಯಜನರು ನಡೆದುಕೊಳ್ಳುವ ಹಾಗೆ ನೀವು ಇನ್ನು ಮುಂದೆ ನಡೆದುಕೊಳ್ಳಬಾರದು. ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ.

[18] ಅವರ ಮನಸ್ಸಿಗೆ ಕತ್ತಲು ಕವಿದಿದೆ, ಅವರು ತಮ್ಮ ಕಠಿಣವಾದ ಹೃದಯದ ನಿಮಿತ್ತದಿಂದಲೂ ಮತ್ತು ತಮ್ಮಲ್ಲಿರುವ ಅಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ದೂರವಾಗಿದ್ದಾರೆ.

[19] ಅವರು ಲಜ್ಜೆಗೆಟ್ಟವರಾಗಿ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡೆಸುವವರಾಗಿದ್ದಾರೆ.

[20] ನೀವಾದರೋ ಕ್ರಿಸ್ತನ ಬೋಧನೆಯನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.

[21] ಆತನಿಂದಲೇ ಕೇಳಿ ಆತನಲ್ಲಿಯೇ ಉಪದೇಶವನ್ನು ಹೊಂದಿದ್ದೀರಲ್ಲಾ.

[22] ಯೇಸುವಿನಲ್ಲಿರುವ ಸತ್ಯೋಪದೇಶವು ಯಾವುದೆಂದರೆ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೇ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು. ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದ್ದು.

[23] ನೀವು ನಿಮ್ಮ ಹೃನ್ಮನಗಳನ್ನು ನವೀಕರಿಸಿ, ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.

[24] ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಕ್ಕನುಗುಣವಾಗಿ ನೀತಿಯುಳ್ಳದ್ದಾಗಿಯೂ, ಪರಿಶುದ್ಧತೆಯುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.

[25] ಆದಕಾರಣ ಸುಳ್ಳಾಡುವುದನ್ನು ಬಿಟ್ಟುಬಿಟ್ಟು “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ನುಡಿಯಲಿ.” ಏಕೆಂದರೆ ನಾವು ಪ್ರತಿಯೊಬ್ಬರೂ ಒಂದೇ ದೇಹದ ಅಂಗಗಳಾಗಿದ್ದೇವಲ್ಲಾ.

[26] “ಕೋಪಗೊಳ್ಳಬೇಕಾಗಿ ಬಂದರೂ ಪಾಪಮಾಡಬೇಡಿರಿ,” ಸೂರ್ಯನು ಮುಳುಗುವುದಕ್ಕಿಂತ ಮೊದಲೇ ನಿಮ್ಮ ಸಿಟ್ಟು ತೀರಿಹೋಗಲಿ.

[27] ಸೈತಾನನಿಗೆ ಅವಕಾಶಕೊಡಬೇಡಿರಿ.

[28] ಕಳವು ಮಾಡುವವನು ಇನ್ನು ಮುಂದೆ ಕಳವು ಮಾಡದೇ ಸ್ವಂತ ಕೈಯಿಂದ ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ. ಆಗ ಕೊರತೆಯಲ್ಲಿರುವವರಿಗೆ ಕೊಡುವುದಕ್ಕೆ ಅವನಿಂದಾಗುವದು.

[29] ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು.

[30] ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ. ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.

[31] ಎಲ್ಲಾ ದ್ವೇಷ, ಕೋಪ, ಕ್ರೋಧ, ಕಲಹ, ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನಗಳನ್ನೂ ನಿಮ್ಮಿಂದ ದೂರ ಮಾಡಿರಿ.

[32] ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ, ಕರುಣೆಯುಳ್ಳವರಾಗಿಯೂ ಇರಿ. ದೇವರು ನಿಮ್ಮನ್ನು ಕ್ರಿಸ್ತನಲ್ಲಿ ಕ್ಷಮಿಸಿದಂತೆ ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.

ಎಫೆಸದವರಿಗೆ — Chapters