Skip to content
Opens in a new window
Listen to this chapter • 3:57

[1] ಹೀಗಿರುವುದರಿಂದ ಪೌಲನೆಂಬ ನಾನು ಅನ್ಯಜನರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿದ್ದಾನೆ.

[2] ನಿಮಗೋಸ್ಕರ ನಿರ್ವಹಿಸುವುದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕಾರ್ಯಭಾರವನ್ನು ನೀವು ಕೇಳಿದ್ದೀರಿ,

[3] ಆತನು ಮರ್ಮವನ್ನು ಪ್ರಕಟಣೆಯಿಂದ ನನಗೆ ತಿಳಿಯಪಡಿಸಿದನೆಂದು ಅದನ್ನು ಕುರಿತು ನಾನು ಮೊದಲೇ ನಿಮಗೆ ಸಂಕ್ಷಿಪ್ತವಾಗಿ ಬರೆದಿದ್ದೇನೆ.

[4] ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳಿದುಕೊಳ್ಳಬಹುದು.

[5] ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ.

[6] ಅದು ಯಾವುದೆಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ದೇವಜನರೊಂದಿಗೆ ಸಹಬಾಧ್ಯರೂ ಒಂದೇ ದೇಹದ ಅಂಗಗಳೂ, ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬುದೇ.

[7] ದೇವರು ತನ್ನ ಶಕ್ತಿಯ ಪ್ರಯೋಗದ ಮೂಲಕ ನನಗೆ ಕೊಡಲ್ಪಟ್ಟ ಆತನ ಕೃಪಾದಾನಕ್ಕನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.

[8] ಕ್ರಿಸ್ತನ ಅಗಮ್ಯವಾದ ಐಶ್ವರ್ಯದ ಸುವಾರ್ತೆಯನ್ನು ಅನ್ಯಜನರಿಗೆ ಸಾರುವ ಹಾಗೆಯೂ

[9] ಹಾಗೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಗುಪ್ತವಾಗಿದ ಮರ್ಮದ ಯೋಜನೆಯನ್ನು ಎಲ್ಲಾರಿಗೂ ತಿಳಿಸುವಂತಹ ಕೃಪೆಯು ದೇವಜನರೊಳಗೆ ಅತ್ಯಲ್ಪನಾದ ನನಗೆ ಕೊಡಲ್ಪಟ್ಟಿತು.

[10] ದೇವರು ನಮ್ಮ ಕರ್ತನಾದ ಕ್ರಿಸ್ತಯೇಸುವಿನಲ್ಲಿ ಮಾಡಿದ ನಿತ್ಯಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು, ಪರಲೋಕದಲ್ಲಿ ರಾಜತ್ವಗಳಿಗೂ, ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂದು ಉದ್ದೇಶಿಸಿದನು.

[12] ದೇವರ ಸನ್ನಿಧಿಯಲ್ಲಿ ಸೇರುವುದಕ್ಕೆ ನಮಗಿರುವ ಭರವಸೆಯೂ ಧೈರ್ಯವೂ ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗಿದೆ.

[13] ಆದ್ದರಿಂದ ನಿಮ್ಮ ನಿಮಿತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.

[14] ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರುಗೊಂಡಿರುವುದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು,

[16] ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲವನ್ನು ಹೊಂದುವಂತೆಯೂ,

[17] ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವಂತೆಯೂ, ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ.

[18] ನೀವು ದೇವರ ಪ್ರೀತಿಯಲ್ಲಿ ನೆಲೆಯಾಗಿ ನಿಂತು, ದೇವಜನರೆಲ್ಲರೊಂದಿಗೆ ಅದರ ಅಗಲ, ಉದ್ದ, ಎತ್ತರ, ಆಳ ಎಷ್ಟೆಂಬುದನ್ನು ಗ್ರಹಿಸುವುದಕ್ಕೆ ಶಕ್ತರಾಗುವಂತೆಯೂ,

[19] ಬುದ್ಧಿಗಿಂತಲೂ ಮಿಗಿಲಾಗಿರುವ ಕ್ರಿಸ್ತನ ಪ್ರೀತಿಯನ್ನು ತಿಳಿದುಕೊಂಡು, ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ದೇವರು ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ.

[20] ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಈ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ

[21] ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆಯಾಗಲಿ. ಆಮೆನ್.

ಎಫೆಸದವರಿಗೆ — Chapters