Skip to content
Opens in a new window
Listen to this chapter • 5:42

[1] ಆದುದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.

[2] ಕ್ರಿಸ್ತನು ನಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುವಾಸನೆಯಾದ ಕಾಣಿಕೆಯಾಗಿಯೂ, ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

[3] ಜಾರತ್ವ ಮತ್ತು ಯಾವ ವಿಧವಾದ ಅಶುದ್ಧತ್ವ ಅಥವಾ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು, ಇವುಗಳಿಗೆ ದೂರವಾಗಿರುವುದೇ ದೇವಜನರಿಗೆ ಯೋಗ್ಯವಾದದ್ದು.

[4] ಹೊಲಸು ಮಾತು, ಹುಚ್ಚು ಮಾತು, ಕುಚೋದ್ಯ ಇವು ಬೇಡ. ಇವು ಅಯುಕ್ತವಾಗಿವೆ. ಆದರೆ ಇವುಗಳಿಗೆ ಪ್ರತಿಯಾಗಿ ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.

[5] ಜಾರನಿಗಾಗಲಿ, ದುರಾಚಾರಿಗಾಗಲಿ, ವಿಗ್ರಹಾರಾಧಕನಾಗಿರುವ ಲೋಭಿಗಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೆಂದು ನಿಮಗೆ ನಿಶ್ಚಯವಾಗಿ ತಿಳಿದಿರಲಿ.

[6] ಹುರುಳಿಲ್ಲದ ಮಾತುಗಳಿಂದ ಯಾರು ನಿಮ್ಮನ್ನು ವಂಚಿಸದಿರಲಿ, ಇಂಥ ಕೃತ್ಯಗಳ ನಿಮಿತ್ತ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.

[7] ಆದುದರಿಂದ ನೀವು ಅವರೊಂದಿಗೆ ಪಾಲುಗಾರರಾಗಿರಬೇಡಿರಿ.

[8] ಏಕೆಂದರೆ ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕರ್ತನಲ್ಲಿದ್ದು ಬೆಳಕಾಗಿದ್ದೀರಿ. ಬೆಳಕಿನವರಂತೆ ನಡೆದುಕೊಳ್ಳಿರಿ.

[9] ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.

[10] ಕರ್ತನಿಗೆ ಮೆಚ್ಚಿಕೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳಿದುಕೊಳ್ಳಿರಿ.

[11] ನಿಷ್ಪ್ರಯೋಜಕವಾದ ಕತ್ತಲೆಯ ಕೃತ್ಯಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬಯಲಿಗೆಳೆದು ಖಂಡಿಸಿರಿ.

[12] ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಹೇಳುವುದಕ್ಕೂ ಅವಮಾನಕರವಾಗಿದೆ.

[13] ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ಬಹಿರಂಗವಾಗುತ್ತದೆ. ಯಾಕೆಂದರೆ ಎಲ್ಲಾವನ್ನೂ ಬಹಿರಂಗಪಡಿಸುವಂಥದ್ದು ಬೆಳಕೇ.

[14] ಆದ್ದರಿಂದ, “ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಆಗ ಕ್ರಿಸ್ತನು ನಿನ್ನಲ್ಲಿ ಪ್ರಕಾಶಿಸುವನು” ಎಂದು ಹೇಳಿಯದೆಯಲ್ಲಾ.

[15] ಆದಕಾರಣ ನೀವು ನಡೆದುಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಅಜ್ಞಾನಿಗಳಾಗಿರದೆ ಜ್ಞಾನವಂತರಾಗಿರಿ.

[16] ಈ ದಿನಗಳು ಕೆಡುಕಿನಿಂದ ಕೂಡಿದವುಗಳಾಗಿರುವುದ್ದರಿಂದ ಕಾಲವನ್ನು ಸದುಪಯೋಗಪಡಿಸಿಕೊಳ್ಳಿರಿ.

[17] ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬುದನ್ನು ತಿಳಿದುಕೊಳ್ಳಿರಿ.

[18] ಮದ್ಯಪಾನ ಮಾಡಿ ಮತ್ತರಾಗಬೇಡಿರಿ. ಅದರಿಂದ ಪಟಿಂಗತನವು ಹುಟ್ಟುತ್ತದೆ. ಆದರೆ ಪವಿತ್ರಾತ್ಮಭರಿತರಾಗಿದ್ದು,

[19] ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ, ಆತ್ಮೀಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನನ್ನು ಹಾಡಿ ಕೊಂಡಾಡಿರಿ.

[20] ಯಾವಾಗಲೂ ಎಲ್ಲಾ ಕಾರ್ಯಗಳಿಗಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರವನ್ನು ಮಾಡಿರಿ.

[21] ಕ್ರಿಸ್ತನಿಗೆ ಭಯಪಡುವವರಾಗಿದ್ದು, ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.

[22] ಸತಿಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.

[23] ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನು ತಾನೇ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ.

[24] ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.

[25] ಪತಿಯರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.

[26] ಆತನು ಅದನ್ನು ಪಾವನಗೊಳಿಸುವುದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.

[27] ಅದನ್ನು ಕಳಂಕ ಸುಕ್ಕು ಮುಂತಾದದ್ದೊಂದೂ ಇಲ್ಲದಂತೆ ಪರಿಶುದ್ಧವೂ, ನಿರ್ದೋಷವೂ, ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಿಮಾಡಿದನು.

[28] ಹಾಗೆಯೇ ಗಂಡದಿರು ಸಹ ತಮ್ಮ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.

[29] ಯಾರೂ ಎಂದೂ ಸ್ವಂತ ಶರೀರವನ್ನು ಹಗೆಮಾಡಿದ್ದಿಲ್ಲವಲ್ಲ, ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಪಾಲನೆ ಮಾಡುತ್ತಾರಷ್ಟೇ.

[30] ಸಭೆಯೆಂಬ ದೇಹಕ್ಕೆ ನಾವು ಅಂಗಗಳಾಗಿದ್ದೇವೆ ಸಭೆಯೆಂಬ ಈ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಪಾಲನೆ ಮಾಡುತ್ತಾ ಬಂದಿದ್ದಾನೆ.

[31] “ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು, ಅವರಿಬ್ಬರೂ ಒಂದೇ ಶರೀರವಾಗಿರುವರು.” ಎಂದು ಬರೆದದೆಯಲ್ಲಾ.

[32] ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತನಾಡುತ್ತಿದ್ದೇನೆ, ಇದುವರೆಗೆ ಗುಪ್ತವಾಗಿದ್ದ ಈ ಮರ್ಮವು ಬಹು ಗಂಭೀರವಾದದ್ದು.

[33] ಆದರೆ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು. ಪ್ರತಿ ಹೆಂಡತಿಯೂ ತನ್ನ ಗಂಡನಿಗೆ ಗೌರವದಿಂದ ನಡೆದುಕೊಳ್ಳಬೇಕು.

ಎಫೆಸದವರಿಗೆ — Chapters