[1] ದೇವರ ಚಿತ್ತಾನುಸಾರವಾಗಿ ಕ್ರಿಸ್ತಯೇಸುವಿನ ಅಪೊಸ್ತಲನಾಗಿರುವ ಪೌಲನೂ ಮತ್ತು ಸಹೋದರನಾದ ತಿಮೊಥೆಯನು,
[2] ಕೊಲೊಸ್ಸೆಯಲ್ಲಿರುವ ದೇವಜನರಿಗೆ ಹಾಗು ಕ್ರಿಸ್ತನಲ್ಲಿ ನಂಬಿಗಸ್ತರಾದ ಸಹೋದರರಿಗೆ ಬರೆಯುವುದೇನೆಂದರೆ, ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಮತ್ತು ಶಾಂತಿಯೂ ಉಂಟಾಗಲಿ.
[3] ನಿಮಗೋಸ್ಕರ ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಕೃತಜ್ಞತಾಸ್ತುತಿ ಸಲ್ಲಿಸುತ್ತೇವೆ.
[4] ನೀವು ಕ್ರಿಸ್ತ ಯೇಸುವಿನಲ್ಲಿ ಇಟ್ಟಿರುವ ನಂಬಿಕೆ ಹಾಗು ದೇವಜನರೆಲ್ಲರಲ್ಲಿ ನೀವು ಇಟ್ಟಿರುವ ಪ್ರೀತಿಯ ಬಗ್ಗೆ ನಾವು ಕೇಳಿದ್ದೇವೆ.
[5] ಪರಲೋಕದಲ್ಲಿ ನಿಮಗೋಸ್ಕರ ಕಾದಿರಿಸಿರುವ ನಿರೀಕ್ಷೆಯನ್ನು ಕುರಿತು ಸುವಾರ್ತೆಯ ಸತ್ಯವಾಕ್ಯದಿಂದ ನೀವು ಮೊದಲೇ ಕೇಳಿದ್ದಿರಿ.
[6] ನೀವು ಸತ್ಯದಲ್ಲಿ ದೇವರ ಕೃಪೆಯನ್ನು ಕೇಳಿ ತಿಳಿದುಕೊಂಡ ದಿನದಿಂದ ನಿಮ್ಮ ಬಳಿಗೆ ಬಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟಂತೆ ಲೋಕದಲ್ಲೆಲ್ಲಾ ಫಲಕೊಟ್ಟು ವೃದ್ಧಿಯಾಗುತ್ತಿದೆ.
[7] ಈ ಸುವಾರ್ತೆಯನ್ನು ಕ್ರಿಸ್ತನ ನಂಬಿಗಸ್ತ ಸೇವಕನೂ, ನಮ್ಮ ಪ್ರಿಯ ಜೊತೆಸೇವಕನೂ ಆದ ಎಪಫ್ರನಿಂದ ನೀವು ಕಲಿತುಕೊಂಡಿದ್ದೀರಿ.
[8] ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯವನ್ನು ನನಗೆ ತಿಳಿಸಿದವನು ಆತನೇ.
[9] ಹೀಗಿರುವುದ್ದರಿಂದ ಈ ನಿಮ್ಮ ಪ್ರೀತಿಯ ಕುರಿತು ನಾವು ಕೇಳಿದ ದಿನದಿಂದ ನಿಮಗೋಸ್ಕರ ಪ್ರಾರ್ಥಿಸುವುದನ್ನು ನಿಲ್ಲಿಸದೆ, ನೀವು ಸಕಲ ಆತ್ಮೀಕ ಗ್ರಹಿಕೆಯಿಂದಲೂ ಜ್ಞಾನದಿಂದಲೂ ದೇವರ ಚಿತ್ತದ ತಿಳಿವಳಿಕೆಯ ಕುರಿತು ಸಂಪೂರ್ಣರಾಗಬೇಕೆಂತಲೂ,
[10] ಕರ್ತನಿಗೆ ಮೆಚ್ಚಿಕೆಯಾಗುವ ರೀತಿಯಲ್ಲಿ ನೀವು ಯೋಗ್ಯರಾಗಿ ಜೀವಿಸಬೇಕೆಂತಲೂ, ಸಕಲ ಸತ್ಕಾರ್ಯಗಳಲ್ಲಿ ಫಲವನ್ನು ಕೊಡುತ್ತಾ ದೈವಜ್ಞಾನದಲ್ಲಿ ವೃದ್ಧಿಯಾಗಬೇಕೆಂತಲೂ,
[11] ಆತನ ಮಹಿಮಾ ಶಕ್ತಿಯ ಪ್ರಕಾರ ಎಲ್ಲಾ ಸಾಮರ್ಥ್ಯದಲ್ಲಿ ಬಲಹೊಂದಿ, ಎಲ್ಲವನ್ನೂ ತಾಳ್ಮೆಯಿಂದಲೂ, ದೀರ್ಘಶಾಂತಿಯಿಂದಲೂ ಸಹಿಸಿಕೊಳ್ಳುವವರಾಗಿರಬೇಕೆಂತಲೂ,
[12] ದೇವಭಕ್ತರಿಗಾಗಿ ಬೆಳಕಿನಲ್ಲಿರುವ ಬಾಧ್ಯತೆಯಲ್ಲಿ ಪಾಲುಗಾರರಾಗುವುದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಯಾದ ದೇವರಿಗೆ ಆನಂದಪೂರ್ವಕವಾಗಿ ಕೃತಜ್ಞತಾಸ್ತುತಿಯನ್ನು ಸಲ್ಲಿಸುವವರಾಗಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇನೆ.
[13] ದೇವರು ನಮ್ಮನ್ನು ಅಂಧಕಾರದ ಅಧಿಪತ್ಯದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ಸಾಮ್ರಾಜ್ಯಕ್ಕೆ ಸೇರಿಸಿದನು.
[14] ಈ ಕುಮಾರನಲ್ಲಿ ನಮ್ಮ ಪಾಪಗಳು ಕ್ಷಮಿಸಲ್ಪಟ್ಟು ನಮಗೆ ವಿಮೋಚನೆಯಾಯಿತು.
[15] ಕ್ರಿಸ್ತನು ಅದೃಶ್ಯನಾದ ದೇವರ ಪ್ರತಿರೂಪನೂ, ಸೃಷ್ಟಿಗೆಲ್ಲಾ ಜೇಷ್ಠಪುತ್ರನೂ ಆಗಿದ್ದಾನೆ.
[16] ಭೂಪರಲೋಕಗಳಲ್ಲಿರುವ ದೃಶ್ಯ ಅದೃಶ್ಯವಾದವುಗಳೆಲ್ಲವೂ, ಸಿಂಹಾಸನಗಳಾಗಲಿ, ಪ್ರಭುತ್ವಗಳಾಗಲಿ, ದೊರೆತನಗಳಾಗಲಿ, ಅಧಿಕಾರಗಳಾಗಲಿ ಆತನಿಂದ ಸೃಷ್ಟಿಸಲ್ಪಟ್ಟವು. ಸರ್ವವೂ ಆತನ ಮುಖಾಂತರವಾಗಿ ಆತನಿಗೋಸ್ಕರವಾಗಿ ಸೃಷ್ಟಿಸಲ್ಪಟ್ಟಿತು.
[17] ಆತನು ಎಲ್ಲಕ್ಕೂ ಮೊದಲು ಇದ್ದಾತನು, ಆತನಲ್ಲಿ ಸಮಸ್ತವು ಒಂದಾಗಿ ನೆಲೆಗೊಂಡಿದ್ದೆ.
[18] ಸಭೆಯೆಂಬ ದೇಹಕ್ಕೆ ಆತನು ತಲೆಯಾಗಿದ್ದಾನೆ, ಆತನೇ ಆದಿಸಂಭೂತನು, ಎಲ್ಲಾದರಲ್ಲಿ ಆತನು ಮೊದಲಿಗನಾಗುವುದಕ್ಕಾಗಿ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ.
[19] ಏಕೆಂದರೆ ಆತನಲ್ಲಿಯೇ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ,
[20] ಮತ್ತು ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನುಂಟುಮಾಡಿ, ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ತನ್ನ ಕುಮಾರನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ತಂದೆಯಾದ ದೇವರು ಇಚ್ಛಿಸಿದನು.
[21] ಇದಲ್ಲದೆ ನೀವು ಪೂರ್ವದಲ್ಲಿ ಅನ್ಯರು ನಿಮ್ಮ ದುಷ್ಕೃತ್ಯಗಳಿಂದಲೂ ದ್ವೇಷಮನಸ್ಸುಳ್ಳವರಾಗಿ ಆತನಿಗೆ ವಿರೋಧಿಗಳೂ ಆಗಿದ್ದಿರಿ.
[22] ಈಗಲಾದರೋ ದೇವರು ನಿಮ್ಮನ್ನು ಯೇಸುಕ್ರಿಸ್ತನ ಶಾರೀರಿಕ ಮರಣದ ಮೂಲಕವಾಗಿ ಸಂಧಾನಪಡಿಸಿಕೊಂಡಿದ್ದಾನೆ. ದೇವರು ತನ್ನ ಸನ್ನಿಧಿಯಲ್ಲಿ ನಿಮ್ಮನ್ನು ಪರಿಶುದ್ಧರನ್ನಾಗಿಯೂ, ನಿರ್ದೋಷಿಗಳನ್ನಾಗಿಯೂ, ನಿರಪರಾಧಿಗಳನ್ನಾಗಿಯೂ ನಿಲ್ಲಿಸಬೇಕೆಂದು ಹೀಗೆ ಮಾಡಿದ್ದಾನೆ.
[23] ಆಕಾಶದ ಕೆಳಗಿರುವ ಸರ್ವ ಸೃಷ್ಟಿಗೂ ಸಾರಲ್ಪಟ್ಟಂತಹ ಮತ್ತು ನೀವು ಕೇಳಿದಂತಹ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯಿಂದ ಕದಲಿಹೋಗದಂತೆ ನಂಬಿಕೆಯಲ್ಲಿ ದೃಢವಾಗಿರಿ ಮತ್ತು ನೆಲೆಗೊಂಡಿರಿ. ಇದೇ ಸುವಾರ್ತೆಗೆ ಪೌಲನೆಂಬ ನಾನು ಸೇವಕನಾಗಿದ್ದೇನೆ.
[24] ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ನನಗೆ ಸಂತೋಷವಿದೆ. ಕ್ರಿಸ್ತನ ಯಾತನೆಗಳಲ್ಲಿ ಕೊರತೆಯಾಗಿರುವುದನ್ನು ಆತನ ಸಭೆಯೆಂಬ ದೇಹಕೋಸ್ಕರ ನಾನು ನನ್ನ ದೇಹದಲ್ಲಿ ಅನುಭವಿಸಿ ತೀರಿಸುತ್ತೇನೆ.
[25] ದೇವರ ಸಂಕಲ್ಪದ ಮೇರೆಗೆ ನಿಮ್ಮ ಪ್ರಯೋಜನಕ್ಕೋಸ್ಕರವಾಗಿ ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕಾರ್ಯವನ್ನು ನನಗೆ ದಯಪಾಲಿಸಿದನು.
[26] ಈ ರಹಸ್ಯವಾದ ಸತ್ಯವಾಕ್ಯವು ಹಿಂದಿನ ಯುಗಯುಗಗಳಿಂದಲೂ, ತಲತಲಾಂತರಗಳಿಂದಲೂ ಮರೆಯಾಗಿತ್ತು, ಆದರೆ ಈಗ ದೇವರು ಅದನ್ನು ತನ್ನ ದೇವಜನರಿಗೆ ಪ್ರಕಟಿಸಿದ್ದಾನೆ.
[27] ಈ ಮರ್ಮದ ಮಹಿಮಾತಿಶಯವು ಎಷ್ಟೆಂಬುದನ್ನು ಅನ್ಯಜನಗಳಿಗೂ ತಿಳಿಸಲಿಕ್ಕೆ ದೇವರು ಇಚ್ಛಿಸಿದನು. ಈ ಮರ್ಮವು ಏನೆಂದರೆ ಮಹಿಮೆಯ ನಿರೀಕ್ಷೆಗೆ ಆಧಾರನಾಗಿರುವ ಕ್ರಿಸ್ತನು ನಿಮ್ಮಲ್ಲಿದ್ದಾನೆಂಬುದೇ.
[28] ನಾವು ಆತನನ್ನು ಸಾರುತ್ತಲಿದ್ದೇವೆ, ಸಕಲರಿಗೂ ಬುದ್ಧಿ ಹೇಳುತ್ತಾ, ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ, ದೇವರ ಮುಂದೆ ಎಲ್ಲರನ್ನೂ ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವುದಕ್ಕೆ ಪ್ರಯತ್ನಿಸುತ್ತಿದ್ದೇವೆ.
[29] ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲದಿಂದ ಇದಕ್ಕೊಸ್ಕರವೇ ಶ್ರಮಿಸಿ ಹೋರಾಡುತ್ತೇನೆ.