[1] ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ ಮೇಲಿನವುಗಳನ್ನೇ ಹುಡುಕಿರಿ, ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ.
[2] ಭೂಲೋಕದಲ್ಲಿರುವಂಥವುಗಳ ಬಗ್ಗೆ ಅಲ್ಲ, ಪರಲೋಕದಲ್ಲಿರುವಂಥವುಗಳ ಬಗ್ಗೆ ಯೋಚಿಸಿರಿ.
[3] ಯಾಕೆಂದರೆ ನೀವು ಸತ್ತು ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿದೆ.
[4] ನಿಮಗೆ ಜೀವವಾಗಿರುವ ಕ್ರಿಸ್ತನು ಪ್ರತ್ಯಕ್ಷನಾಗುವಾಗ ನೀವು ಸಹ ಆತನೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
[5] ಆದುದರಿಂದ ನಿಮ್ಮಲ್ಲಿರುವ ಲೌಕಿಕ ಆಸೆಗಳು ಅಂದರೆ, ಜಾರತ್ವ, ಅಶುದ್ಧತ್ವ, ಕಾಮಾಭಿಲಾಷೆ, ಕೆಟ್ಟ ಅಭಿಲಾಷೆ ಮತ್ತು ವಿಗ್ರಹಾರಾಧನೆಗೆ ಸಮವಾಗಿರುವ ದುರಾಶೆ ಇಂಥವುಗಳನ್ನು ಸಾಯಿಸಿರಿ.
[6] ಇವುಗಳ ನಿಮಿತ್ತ ಅವಿಧೇಯರಾಗುವವರ ಮೇಲೆ ದೇವರ ಕೋಪವು ಉಂಟಾಗುತ್ತದೆ.
[7] ಹಿಂದೆ ನೀವು ಸಹ ಅಂಥವುಗಳಲ್ಲಿ ಜೀವಿಸುತ್ತಿದ್ದು ಅವುಗಳನ್ನು ನಡಿಸುತ್ತಿದ್ದಿರಿ.
[8] ಆದರೆ ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ ಮತ್ತು ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
[9] ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ಯಾಕೆಂದರೆ ನೀವು ಹಿಂದಿನಸ್ವಭಾವವನ್ನು ಅದರ ಕೃತ್ಯಗಳೊಂದಿಗೆ ತೆಗೆದುಹಾಕಿ ನೂತನಸ್ವಭಾವವನ್ನು ಧರಿಸಿಕೊಂಡಿದ್ದೀರಲ್ಲವೇ.
[10] ಈ ನೂತನ ಸ್ವಭಾವವು ಸೃಷ್ಟಿಸಿದಾತನ ಹೋಲಿಕೆಯ ಜ್ಞಾನದ ಮೇರೆಗೆ ಅದು ನೂತನವಾಗುತ್ತಾ ಬರುತ್ತದೆ.
[11] ಈ ಜ್ಞಾನದಲ್ಲಿ ಗ್ರೀಕನು ಮತ್ತು ಯೆಹೂದ್ಯನು ಎಂಬ ಭೇದವಿಲ್ಲ, ಸುನ್ನತಿಮಾಡಿಸಿಕೊಂಡವರು ಮತ್ತು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ನಾಗರಿಕ, ಅನಾಗರಿಕನು ಎಂಬ ಭೇದವಿಲ್ಲ, ದಾಸನು, ಸ್ವತಂತ್ರನು ಎಂಬ ಭೇದವಿಲ್ಲ, ಆದರ ಬದಲಾಗಿ ಕ್ರಿಸ್ತನೇ ಸಮಸ್ತವೂ ಹಾಗೂ ಸಮಸ್ತರಲ್ಲಿಯೂ ಇರುವಾತನಾಗಿದ್ದಾನೆ.
[12] ಹೀಗಿರಲಾಗಿ ದೇವರಿಂದ ಆರಿಸಿಕೊಂಡವರಾಗಿ, ಪರಿಶುದ್ಧರೂ ಹಾಗೂ ಪ್ರಿಯರೂ ಆಗಿರುವುದರಿಂದ ಕನಿಕರ, ದಯೆ, ದೀನತೆ, ಸಾತ್ವಿಕತ್ವ ಮತ್ತು ಸಹನೆ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.
[13] ಒಬ್ಬರನ್ನೊಬ್ಬರು ಸೈರಿಸಿಕೊಂಡು ಯಾರಿಗಾದರೂ ಮತ್ತೊಬ್ಬನ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ, ತಪ್ಪುಹೊರಿಸದೆ ಕ್ಷಮಿಸಿರಿ, ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.
[14] ಇವೆಲ್ಲಕ್ಕಿಂತ ಮಿಗಿಲಾಗಿ ಸಂಪೂರ್ಣತೆಯ ಬಂಧವಾಗಿರುವ ಪ್ರೀತಿಯನ್ನು ಧರಿಸಿಕೊಳ್ಳಿರಿ.
[15] ಕ್ರಿಸ್ತನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ. ಇದೇ ಸಮಾಧಾನದಲ್ಲಿ ಏಕ ದೇಹವಾಗಿರುವಂತೆ ನೀವು ಕರೆಯಲ್ಪಟ್ಟಿರುವಿರಿ ಇದಲ್ಲದೆ ಕೃತಜ್ಞತೆಯುಳ್ಳವರಾಗಿರಿ.
[16] ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಸಕಲಜ್ಞಾನದಿಂದ ಒಬ್ಬರಿಗೊಬ್ಬರು ಉಪದೇಶಮಾಡಿಕೊಂಡು ಬುದ್ಧಿಹೇಳಿಕೊಳ್ಳಿರಿ. ಕೀರ್ತನೆಗಳಿಂದಲೂ, ಸ್ತುತಿಪದಗಳಿಂದಲೂ ಮತ್ತು ಆತ್ಮೀಕವಾದ ಗೀತೆಗಳಿಂದಲೂ ಹಾಗೂ ನಿಮ್ಮ ಹೃದಯಗಳಲ್ಲಿ ದೇವರಿಗೆ ಕೃತಜ್ಞತೆಯಿಂದಲೂ ಹಾಡಿರಿ.
[17] ನೀವು ನುಡಿಯಿಂದಾಗಲಿ ನಡೆಯಿಂದಾಗಲಿ ಏನೇ ಮಾಡಿದರೂ ಅದೆಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ ಮತ್ತು ತಂದೆಯಾದ ದೇವರಿಗೆ ಆತನ ಮೂಲಕ ಕೃತಜ್ಞತಾಸ್ತುತ್ತಿಯನ್ನು ಸಲ್ಲಿಸಿರಿ.
[18] ಸತಿಯರೇ, ಕರ್ತನಿಗೆ ಯೋಗ್ಯವಾದ ರೀತಿಯಲ್ಲಿ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
[19] ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
[20] ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ, ಯಾಕೆಂದರೆ ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.
[21] ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರನ್ನು ಮನಗುಂದಿಸಿಬೇಡಿರಿ.
[22] ದಾಸರೇ, ಈ ಲೋಕದಲ್ಲಿರುವ ನಿಮ್ಮ ಯಜಮಾನರಿಗೆ ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿರಿ, ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಹಾಗೆ ನಿಮ್ಮ ಯಜಮಾನರು ನೋಡುತ್ತಿರುವಾಗ ಮಾತ್ರ ಕೆಲಸಮಾಡದೆ, ಕರ್ತನಿಗೆ ಭಯಪಡುವ ಪ್ರಾಮಾಣಿಕವಾದ ಹೃದಯದಿಂದ ಕೆಲಸ ಮಾಡಿರಿ.
[23] ನೀವು ಯಾವ ಕೆಲಸವನ್ನು ಮಾಡಿದರೋ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೇ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.
[24] ಕರ್ತನಿಂದ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವಿರೆಂದು ತಿಳಿದುಕೊಂಡು ಕರ್ತನಾದ ಕ್ರಿಸ್ತನನ್ನು ಸೇವಿಸುವವರಾಗಿರಿ.
[25] ಅನ್ಯಾಯಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕ ದಂಡನೆಯನ್ನು ಹೊಂದುವನಷ್ಟೆ ಮತ್ತು ಅದರಲ್ಲಿ ಪಕ್ಷಪಾತವಿರುವುದಿಲ್ಲ.