Skip to content
Opens in a new window
Listen to this chapter • 5:13

[1] ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಹಾಗೂ ನನ್ನನ್ನು ಮುಖಾಮುಖಿಯಾಗಿ ನೋಡದಿರುವವರೆಲ್ಲರಿಗಾಗಿಯೂ,

[2] ಅವರ ಹೃದಯಗಳು ಉತ್ತೇಜನಗೊಂಡು, ಪ್ರೀತಿಯಿಂದ ಒಂದಾಗಿದ್ದು, ದೇವರ ಮರ್ಮವನ್ನು ಅಂದರೆ ಕ್ರಿಸ್ತನನ್ನು ತಿಳಿದುಕೊಳ್ಳುವ ಮೂಲಕ ಬರುವ ನಿಶ್ಚಯವಾದ ಭಾಗ್ಯವನ್ನು ಪಡೆಯಬೇಕೆಂಬುದೇ ನನ್ನ ಅಪೇಕ್ಷೆ. ಅದಕ್ಕಾಗಿಯೇ ನಾನು ಎಷ್ಟು ಪ್ರಯಾಸಪಡುತ್ತಿದ್ದೇನೆಂಬುದು ನಿಮಗೆ ತಿಳಿದಿರಬೇಕೆಂದು ಬಯಸುತ್ತೇನೆ.

[3] ಈ ಕ್ರಿಸ್ತನಲ್ಲಿಯೇ ಜ್ಞಾನ ಮತ್ತು ವಿವೇಕದ ಸರ್ವಸಂಪತ್ತು ಅಡಗಿದೆ.

[4] ಯಾರೂ ನಿಮ್ಮನ್ನು ತಮ್ಮ ಮನವೊಲಿಸುವ ಮಾತುಗಳಿಂದ ಮೋಸಗೊಳಿಸದಿರಲಿ ಎಂದು ನಾನು ನಿಮಗೆ ಇದನ್ನು ಹೇಳುತ್ತಿದ್ದೇನೆ.

[5] ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮನಿಂದ ನಿಮ್ಮೊಂದಿಗಿದ್ದು ನೀವು ಕ್ರಮಬದ್ಧವಾಗಿ ನಡೆಯುವುದನ್ನು ಮತ್ತು ಕ್ರಿಸ್ತ ನಂಬಿಕೆಯಲ್ಲಿ ದೃಢವಾಗಿ ನಿಂತಿರುವುದನ್ನೂ ನೋಡಿ ಸಂತೋಷಪಡುತ್ತೇನೆ.

[6] ನೀವು ಕರ್ತನಾದ ಯೇಸು ಕ್ರಿಸ್ತನನ್ನು ಸ್ವೀಕರಿಸಿದಂತೆಯೇ ಆತನಲ್ಲಿದ್ದವರಾಗಿ ಬಾಳಿರಿ.

[7] ಆತನಲ್ಲಿ ಬೇರೂರಿಕೊಂಡು, ಆತನಲ್ಲಿ ಕಟ್ಟಲ್ಪಟ್ಟು ಮತ್ತು ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತ ನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರ ಸಲ್ಲಿಸುವವರಾಗಿರಿ.

[8] ಮೋಸಕರವಾದ ಮತ್ತು ವ್ಯರ್ಥವಾದ ತತ್ವಜ್ಞಾನ ಬೋಧನೆಯಿಂದ ಯಾರೂ ನಿಮ್ಮನ್ನು ವಶಮಾಡಿಕೊಳ್ಳದಂತೆ ಎಚ್ಚರಿಕೆಯಾಗಿರಿ. ಇವುಗಳು ಮನುಷ್ಯರ ಸಂಪ್ರದಾಯಗಳಿಗೆ ಮತ್ತು ಪ್ರಾಪಂಚಿಕ ಮೂಲ ಬೋಧನೆಗಳಿಗೆ ಸಂಬಂಧಿಸಿದವುಗಳೇ ಹೊರತು ಕ್ರಿಸ್ತನಿಗಲ್ಲ.

[9] ದೇವರ ಸರ್ವಸಂಪೂರ್ಣತೆಯು ಕ್ರಿಸ್ತನ ದೇಹದಲ್ಲಿ ವಾಸಮಾಡುತ್ತಿದೆ,

[10] ಆತನು ಎಲ್ಲಾ ದೊರೆತನಗಳಿಗೂ ಹಾಗೂ ಅಧಿಕಾರಿಗಳಿಗೂ ತಲೆಯಾಗಿರುವುದರಿಂದ ಆತನಲ್ಲಿದ್ದುಕೊಂಡೇ ನೀವು ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ.

[11] ದೇವರು ಆತನಲ್ಲಿ ನಿಮಗೆ ಮನುಷ್ಯರ ಕೈಯಿಂದ ಮಾಡಲಾಗದಂತಹ ಸುನ್ನತಿಯನ್ನು ಮಾಡಿದ್ದಾನೆ. ಕ್ರಿಸ್ತನ ಸುನ್ನತಿಯು ಶಾರೀರಿಕವಾದ ಪಾಪಸ್ವಭಾವವನ್ನು ತೆಗೆದುಹಾಕುವುದೇ.

[12] ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟಿದ್ದೀರಿ, ಮತ್ತು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಶಕ್ತಿಯಲ್ಲಿ ನಂಬಿಕೆಯಿಡುವುದರ ಮೂಲಕ ಆತನ ಜೊತೆಯಲ್ಲಿ ನೀವು ಎದ್ದು ಬಂದಿದ್ದೀರಿ.

[13] ಅಪರಾಧಗಳನ್ನು ಮಾಡುವುದರಿಂದಲೂ ಹಾಗೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ ಮತ್ತು ನಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ.

[14] ನಮ್ಮ ಮೇಲೆ ದೋಷಾರೋಪಣೆ ಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ತೊಡೆದುಹಾಕಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗಿ ಮಾಡಿದನು.

[15] ಆತನು ದೊರೆತನಗಳನ್ನೂ ಮತ್ತು ಅಧಿಕಾರಗಳನ್ನೂ ನಿರಾಯುಧರನ್ನಾಗಿ ಮಾಡಿ, ತನ್ನ ಶಿಲುಬೆಯ ಮೂಲಕ ಅವುಗಳನ್ನು ಜಯಿಸಿ ಬಹಿರಂಗಪಡಿಸಿದನು.

[16] ಹೀಗಿರುವುದರಿಂದ, ಅನ್ನಪಾನಗಳ ವಿಷಯದಲ್ಲಿಯೂ ಅಥವಾ ಹಬ್ಬ ಅಮಾವಾಸ್ಯೆ ಹಾಗೂ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ನಿರ್ಣಯಿಸದಿರಲಿ.

[17] ಇವುಗಳು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ, ಇವುಗಳ ನಿಜಸ್ವರೂಪವು ಕ್ರಿಸ್ತನೇ.

[18] ಮಿಥ್ಯಾ ದೀನತೆಯನ್ನು ಅಪೇಕ್ಷಿಸಿ ದೇವದೂತರ ಆರಾಧನೆಯಲ್ಲಿ ಆಸಕ್ತರಾಗಿದ್ದು, ದರ್ಶನಗಳಾದವೆಂದು ಕೊಚ್ಚಿಕೊಂಡು, ಪ್ರಾಪಂಚಿಕ ಬುದ್ಧಿಯಿಂದಾಗಿ, ಕಾರಣವಿಲ್ಲದೆ ಉಬ್ಬಿಕೊಂಡು ಇರುವಂಥವರಿಗೆ ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವುದಕ್ಕೆ ಅವಕಾಶಕೊಡಬೇಡಿರಿ.

[19] ಇಂಥವನು ಕ್ರಿಸ್ತನೆಂಬ ತಲೆಯೊಂದಿಗೆ ಸಂಬಂಧ ಕಳೆದುಕೊಂಡವನಾಗಿದ್ದಾನೆ, ತಲೆಯಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಪೋಷಣೆಯನ್ನು ಹೊಂದಿ, ಒಂದಾಗಿ ಜೋಡಿಸಲ್ಪಟ್ಟ ದೇಹವಾಗಿ, ದೇವರು ಕೊಡುವ ಅಭಿವೃದ್ಧಿಯಿಂದ ಬೆಳೆಯುತ್ತಾ ಬರುತ್ತದೆ.

[20] ಪ್ರಾಪಂಚಿಕವಾದ ಪ್ರಥಮಬೋಧನೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದರೆ, ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯಕಲ್ಪಿತ ಆಜ್ಞೆಗಳನ್ನು ಮತ್ತು ಉಪದೇಶಗಳನ್ನು ಅನುಸರಿಸಿ,

[21] “ಇದನ್ನು ಹಿಡಿಯಬೇಡ, ಇದರ ರುಚಿನೋಡಬೇಡ, ಅದನ್ನು ಮುಟ್ಟಬೇಡ” ಎನ್ನುವ ನಿಬಂಧನೆಗಳಿಗೆ ಅಧೀನರಾಗಿರುವುದೇತಕ್ಕೆ? ಈ ಮಾನವ ಆಜ್ಞೆಗಳೂ ಹಾಗೂ ಬೋಧನೆಗಳೂ ಉಪಯೋಗದಿಂದ ನಾಶವಾಗುವ ಪದಾರ್ಥಗಳಿಗೆ ಅನುಸಾರವಾಗಿದೆ.

[23] ಇಂಥ ಉಪದೇಶಗಳು ಮನುಷ್ಯಕಲ್ಪಿತವಾದ ಆಚರಣೆಗಳಿಂದಲೂ, ಕಪಟದೀನತೆಯಿಂದಲೂ ಮತ್ತು ದೇಹದಂಡನೆಯಿಂದಲೂ ಜ್ಞಾನವುಳ್ಳದೆಂದು ತೋರಿಬರುತ್ತವೆ, ಆದರೆ ಶಾರೀರಿಕ ಇಚ್ಛೆಗಳನ್ನು ನಿಯಂತ್ರಿಸುವಲ್ಲಿ ಇವುಗಳಿಂದ ಯಾವ ಪ್ರಯೋಜನವೂ ಉಂಟಾಗುವುದಿಲ್ಲ.

ಕೊಲೊಸ್ಸೆಯವರಿಗೆ — Chapters