Skip to content
Opens in a new window
Listen to this chapter • 4:32

[1] ಹೀಗಿರಲಾಗಿ, ನನ್ನ ಸಹೋದರರೇ ಅತಿ ಪ್ರಿಯರೇ, ಹಾಗೂ ಆಪ್ತರೇ, ನನಗೆ ಸಂತೋಷವೂ ಕಿರೀಟವೂ ಆಗಿರುವವರೇ, ನಾನು ಹೇಳಿದಂತೆ ಕರ್ತನಲ್ಲಿ ದೃಢವಾಗಿ ನಿಲ್ಲಿರಿ, ಪ್ರಿಯರೇ.

[2] ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಿ ಎಂದು ಯುವೊದ್ಯಳನ್ನೂ ಹಾಗೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.

[3] ನನ್ನ ನಿಜವಾದ ಜೊತೆ ಸೇವಕನೇ, ಆ ಸ್ತ್ರೀಯರಿಗೆ ಸಹಾಯಕನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಜೊತೆ ಸುವಾರ್ತೆಗೋಸ್ಕರ ಪ್ರಯಾಸಪಟ್ಟವರು. ಅವರವರ ಹೆಸರುಗಳು ಜೀವಬಾಧ್ಯರ ಪಟ್ಟಿಯಲ್ಲಿ ಬರೆದಿವೆ.

[4] ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ, ಸಂತೋಷಪಡಿರಿ ಎಂದು ಪುನಃ ಹೇಳುತ್ತೇನೆ.

[5] ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ, ಕರ್ತನು ಹತ್ತಿರವಾಗಿದ್ದಾನೆ.

[6] ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯಗಳಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ಕರ್ತನಿಗೆ ತಿಳಿಯಪಡಿಸಿರಿ.

[7] ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ, ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಪಾಡುವುದು.

[8] ಕಡೆಯದಾಗಿ, ಸಹೋದರರೇ, ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ, ಯಾವುದು ಸದ್ಗುಣವಾಗಿದೆಯೋ, ಯಾವುದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳ ಬಗ್ಗೆ ಚಿಂತಿಸುವವರಾಗಿರಿ.

[9] ನೀವು ಯಾವುದನ್ನು ನನ್ನಿಂದ ಕಲಿತು ಹೊಂದಿದ್ದೀರೋ, ಮತ್ತು ಯಾವುದನ್ನು ನನ್ನಲ್ಲಿ ಕೇಳಿ ಕಂಡಿರುವಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.

[10] ನನ್ನ ವಿಷಯದಲ್ಲಿ ನಿಮಗಿರುವ ಕಾಳಜಿಯು ಇಷ್ಟು ದಿನಗಳಾದ ಮೇಲೆ ಪುನಃ ಚಿಗುರಿದಕ್ಕೆ ನಾನು ಕರ್ತನಲ್ಲಿ ಹೆಚ್ಚಾಗಿ ಸಂತೋಷಪಡುತ್ತೇನೆ. ಇಂಥ ಯೋಚನೆ ನಿಮ್ಮಲ್ಲಿ ಈ ಮೊದಲೇ ಇದ್ದಿದ್ದರೂ, ಸಹಾಯ ಮಾಡುವುದಕ್ಕೆ ಸರಿಯಾದ ಸಂದರ್ಭ ಒದಗಿ ಬಂದಿರಲಿಲ್ಲ.

[11] ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ.

[12] ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ.

[13] ನನ್ನನ್ನು ಬಲಪಡಿಸುವವನ ಮುಖಾಂತರ ನಾನು ಎಲ್ಲವನ್ನೂ ಮಾಡಲು ಶಕ್ತನಾಗಿದ್ದೇನೆ.

[14] ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಸಹಭಾಗಿಗಳಾಗಿದ್ದದ್ದು ಒಳ್ಳೆಯದಾಯಿತು.

[15] ಫಿಲಿಪ್ಪಿಯವರೇ, ನಾನು ಪ್ರಾರಂಭದಲ್ಲಿ ನಿಮ್ಮಲ್ಲಿ ಸುವಾರ್ತೆಯನ್ನು ಸಾರಿ, ಮಕೆದೋನ್ಯದಿಂದ ಹೊರಟುಹೋದಾಗ ಕೊಡುವ, ಕೊಳ್ಳುವ ವಿಷಯದಲ್ಲಿ ನಿಮ್ಮ ಹೊರತು ಬೇರೆ ಯಾವ ಸಭೆಯೂ ನನಗೆ ಬೆಂಬಲಿಸಲ್ಲಿಲ್ಲವೆಂಬುದನ್ನು ನೀವೂ ಬಲ್ಲಿರಿ.

[16] ನಾನು ಥೆಸಲೋನಿಕದಲ್ಲಿದ್ದಾಗಲೂ ನೀವು ಒಂದೆರಡು ಸಾರಿ ನನ್ನ ಕೊರತೆಯನ್ನು ನೀಗಿಸುವುದಕ್ಕೆ ಸಹಾಯವನ್ನು ಕೊಟ್ಟುಕಳುಹಿಸಿದಿರಲ್ಲಾ.

[17] ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವುದಿಲ್ಲ, ನಿಮ್ಮ ಲೆಕ್ಕಕ್ಕೆ ಸಮೃದ್ಧಿಯುಂಟಾಗುವ ಫಲವನ್ನೇ ಅಪೇಕ್ಷಿಸುತ್ತೇನೆ.

[18] ಬೇಕಾದದ್ದೆಲ್ಲಾ ನನಗುಂಟು, ಸಮೃದ್ಧಿಹೊಂದಿದ್ದೇನೆ. ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆಯಾದದ್ದು, ಸುಗಂಧವಾಸನೆಯೇ, ಇಷ್ಟ ಯಜ್ಞವೇ.

[19] ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಗಳನ್ನೂ ನೀಗಿಸುವನು.

[20] ನಮ್ಮ ತಂದೆಯಾದ ದೇವರಿಗೆ ಯುಗಯುಗಾಂತರಗಳಲ್ಲಿಯೂ ಮಹಿಮೆಯುಂಟಾಗಲಿ. ಆಮೆನ್‍.

[21] ಕ್ರಿಸ್ತ ಯೇಸುವಿನಲ್ಲಿರುವ ಪ್ರತಿಯೊಬ್ಬ ಭಕ್ತರಿಗೂ ನನ್ನ ವಂದನೆಯನ್ನು ಹೇಳಿರಿ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.

[22] ಇಲ್ಲಿರುವ ದೇವಜನರೆಲ್ಲರು ನಿಮ್ಮನ್ನು ವಂದಿಸುತ್ತಾರೆ. ವಿಶೇಷವಾಗಿ ಕೈಸರನ ಅರಮನೆಗೆ ಸೇರಿದವರು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.

[23] ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗೆ ಇರಲಿ.

ಫಿಲಿಪ್ಪಿಯವರಿಗೆ — Chapters