Skip to content
Opens in a new window
Listen to this chapter • 3:44

[1] ಯಜಮಾನರೇ, ಪರಲೋಕದಲ್ಲಿ ನಿಮಗೂ ಯಜಮಾನನೊಬ್ಬನಿದ್ದಾನೆಂದು ತಿಳಿದು ನಿಮ್ಮ ದಾಸರೊಂದಿಗೆ ನೀತಿಯಿಂದಲೂ ನ್ಯಾಯದಿಂದಲೂ ವರ್ತಿಸಿರಿ.

[2] ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ, ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ.

[3] ಕ್ರಿಸ್ತನ ಮರ್ಮವನ್ನು ಅಂದರೆ ಸುರ್ವಾತೆಯನ್ನು ನಾವು ಸಾರುವುದಕ್ಕೆ ದೇವರು ನಮಗೆ ಬಾಗಿಲನ್ನು ತೆರೆದು ಕೊಡುವುದಕ್ಕಾಗಿ ನಮಗೋಸ್ಕರವಾಗಿ ಪ್ರಾರ್ಥಿಸಿರಿ. ಈ ಸುರ್ವಾತೆಯ ನಿಮಿತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ.

[4] ನಾನು ಆ ಸತ್ಯಾರ್ಥವನ್ನು ಹೇಳಬೇಕಾದ ರೀತಿಯಲ್ಲಿ ಸ್ಪಷ್ಟವಾಗಿ ಹೇಳುವಂತೆ ಪ್ರಾರ್ಥಿಸಿರಿ.

[5] ಸಮಯವನ್ನು ಸದುಪಯೋಗಿಸಿಕೊಂಡು ಹೊರಗಿನವರೊಂದಿಗೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ.

[6] ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ.

[7] ಪ್ರಿಯ ಸಹೋದರನೂ, ನಂಬಿಗಸ್ತನಾದ ಸೇವಕನೂ ಮತ್ತು ಕರ್ತನಲ್ಲಿ ಜೊತೆಯ ದಾಸನೂ ಆಗಿರುವ ತುಖಿಕನು ನನ್ನ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವನು.

[8] ನೀವು ನಮ್ಮ ಕುರಿತು ತಿಳಿದುಕೊಳ್ಳುವಂತೆ, ಅವನು ನಿಮ್ಮ ಹೃದಯಗಳನ್ನು ಉರಿದುಂಬಿಸುವಂತೆ,

[9] ಅವನನ್ನು ನಂಬಿಗಸ್ತನು ಮತ್ತು ಪ್ರಿಯ ಸಹೋದರನಾಗಿರುವ ನಿಮ್ಮ ಊರಿನವನೇ ಆದ ಓನೇಸಿಮನ ಜೊತೆಯಲ್ಲಿ ಕಳುಹಿಸಿದ್ದೇನೆ. ಅವರು ಇಲ್ಲಿ ನಡೆಯುತ್ತಿರುವ ವಿಷಯಗಳನ್ನೆಲ್ಲಾ ನಿಮಗೆ ತಿಳಿಸುವರು.

[10] ನನ್ನ ಜೊತೆ ಸೆರೆಯವನಾದ ಅರಿಸ್ತಾರ್ಕನೂ ಮತ್ತು ಬಾರ್ನಬನ ಸೋದರಸಂಬಂಧಿಯಾಗಿರುವ ಮಾರ್ಕನೂ ನಿಮಗೆ ವಂದನೆ ಹೇಳುತ್ತಾರೆ. ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಅವನ ವಿಷಯದಲ್ಲಿ ಅಪ್ಪಣೆಗಳನ್ನು ಹೊಂದಿದ್ದೀರಲ್ಲಾ.

[11] ಯುಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆ ಹೇಳುತ್ತಾನೆ. ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಕ್ಕಾಗಿ ನನ್ನ ಜೊತೆಸೇವಕರಾಗಿದ್ದಾರೆ, ಇವರಿಂದ ನನಗೆ ಆದರಣೆ ಉಂಟಾಯಿತು.

[12] ಕ್ರಿಸ್ತಯೇಸುವಿನ ದಾಸನಾಗಿರುವ ನಿಮ್ಮ ಊರಿನವನಾದ ಎಪಫ್ರನು ನಿಮಗೆ ವಂದನೆ ಹೇಳುತ್ತಾನೆ, ನೀವು ಪ್ರವೀಣರಾಗಿಯೂ ದೇವರ ಎಲ್ಲಾ ಚಿತ್ತದಲ್ಲಿ ಪೂರ್ಣ ನಿಶ್ಚಯವುಳ್ಳವರಾಗಿರಬೇಕೆಂದು ನಿಮಗೋಸ್ಕರ ಯಾವಾಗಲೂ ಪ್ರಾರ್ಥನೆಯಲ್ಲಿ ಹೋರಾಡುತ್ತಾನೆ.

[13] ಇವನು ನಿಮಗಾಗಿಯೂ, ಲವೊದಿಕೀಯದವರಿಗಾಗಿಯೂ ಮತ್ತು ಹಿರಿಯಾಪೋಲಿಯದವರಿಗಾಗಿಯೂ ಬಹಳ ಪ್ರಯಾಸ ಪಡುತ್ತಾನೆಂದು ನಾನು ಸಾಕ್ಷಿಹೇಳುತ್ತೇನೆ.

[14] ಪ್ರಿಯ ವೈದ್ಯನಾಗಿರುವ ಲೂಕನು ಮತ್ತು ದೇಮನು ನಿಮಗೆ ವಂದನೆ ಹೇಳುತ್ತಾರೆ.

[15] ಲವೊದಿಕೀಯದಲ್ಲಿರುವ ಸಹೋದರರಿಗೂ ಮತ್ತು ನುಂಫಳಿಗೂ ಹಾಗೂ ಆಕೆಯ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ವಂದನೆ ಹೇಳಿರಿ.

[16] ನಿಮ್ಮಲ್ಲಿ ಈ ಪತ್ರವನ್ನು ಓದಿದ ತರುವಾಯ ಲವೊದಿಕೀಯದವರ ಸಭೆಯಲ್ಲಿಯೂ ಇದನ್ನು ಓದಿಸಿರಿ ಮತ್ತು ನಾನು ಬರೆದ ಪತ್ರವನ್ನು ಲವೊದಿಕೀಯದಿಂದ ತರಿಸಿ ನೀವೂ ಓದಿಕೊಳ್ಳಿರಿ.

[17] ಅರ್ಖಿಪ್ಪನಿಗೆ, “ನೀನು ಕರ್ತನಿಂದ ಹೊಂದಿರುವ ಸೇವೆಯನ್ನು ಎಚ್ಚರವಾಗಿದ್ದು ನೆರವೇರಿಸಬೇಕೆಂದು” ಹೇಳಿರಿ.

[18] ಇದು ಪೌಲನೆಂಬ ನಾನು ಸ್ವಂತ ಕೈಯಿಂದಲೇ ಬರೆದ ವಂದನೆ. ನಾನು ಸೆರೆಯಲ್ಲಿದ್ದೇನೆಂಬುದನ್ನು ಜ್ಞಾಪಕ ಮಾಡಿಕೊಳ್ಳಿರಿ. ಕೃಪೆಯು ನಿಮ್ಮೊಂದಿಗಿರಲಿ.

ಕೊಲೊಸ್ಸೆಯವರಿಗೆ — Chapters