Skip to content
Opens in a new window
Listen to this chapter • 4:40

[1] ಆಗ ಎಲೀಷನು ಅವನಿಗೆ, “ಯೆಹೋವನ ವಾಕ್ಯವನ್ನು ಕೇಳು, ಆತನು, ‘ನಾಳೆ ಈ ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವುದು’” ಎನ್ನುತ್ತಾನೆ ಎಂದು ಹೇಳಿದನು.

[2] ಇದನ್ನು ಕೇಳಿ ಅರಸನ ಸಮೀಪವರ್ತಿಯಾದ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ ಇದು ಸಂಭವಿಸಲಾರದು” ಎನ್ನಲು ಎಲೀಷನು ಅವನಿಗೆ, “ಅದು ಸಂಭವಿಸುವುದನ್ನು ನೀನು ಕಣ್ಣಾರೆ ಕಾಣುವಿ, ಆದರೆ ನೀನು ಅದನ್ನು ಅನುಭವಿಸುವುದಿಲ್ಲ” ಎಂದು ಹೇಳಿದನು.

[3] ಊರುಬಾಗಿಲಿನ ಹತ್ತಿರ ನಾಲ್ಕು ಮಂದಿ ಕುಷ್ಠರೋಗಿಗಳಿದ್ದರು. ಅವರು ತಮ್ಮೊಳಗೆ, “ನಾವು ಸಾಯುವ ತನಕ ಇಲ್ಲೇ ಕುಳಿತಿರಬೇಕೋ?

[4] ಪಟ್ಟಣದೊಳಗೆ ಬರವಿರುವುದರಿಂದ ಅಲ್ಲಿ ಹೋದರೂ ಸಾಯಬೇಕು, ಇಲ್ಲಿಯೇ ಕುಳಿತಿದ್ದರೂ ಸಾಯಬೇಕು. ಆದುದರಿಂದ ಹೊರಟುಹೋಗಿ ಅರಾಮ್ಯರ ಪಾಳೆಯವನ್ನು ಸೇರೋಣ. ಅವರು ನಮ್ಮನ್ನು ಉಳಿಸುವುದಾದರೆ ಉಳಿಸಲಿ, ಕೊಲ್ಲುವುದಾದರೆ ಕೊಲ್ಲಲಿ” ಎಂದು ಮಾತನಾಡಿಕೊಂಡರು.

[5] ಅವರು ಸಾಯಂಕಾಲವಾಗಲು ಅರಾಮ್ಯರ ಪಾಳೆಯಕ್ಕೆ ಹೊರಟರು. ಅವರು ಪಾಳೆಯದ ಅಂಚಿಗೆ ಬಂದಾಗ ಅಲ್ಲಿ ಒಬ್ಬನೂ ಕಾಣಿಸಲಿಲ್ಲ.

[6] ಕರ್ತನು ಅರಾಮ್ಯರ ಪಾಳೆಯದವರಿಗೆ ರಥರಥಾಶ್ವಸಹಿತವಾದ ಮಹಾಸೈನ್ಯಘೋಷವು ಕೇಳಿಸುವಂತೆ ಮಾಡಿದ್ದರಿಂದ ಅವರು, “ಇಸ್ರಾಯೇಲರ ಅರಸನು ಹಿತ್ತಿಯ, ಐಗುಪ್ತ ಇವುಗಳ ಅರಸರಿಗೆ ಹಣಕೊಟ್ಟು ಅವರನ್ನು ನಮಗೆ ವಿರುದ್ಧವಾಗಿ ಕರೆದುತಂದಿದ್ದಾರೆ” ಅಂದುಕೊಂಡು,

[7] ತಮ್ಮ ಗುಡಾರಗಳನ್ನೂ, ಕತ್ತೆ ಕುದುರೆಗಳನ್ನೂ ಪಾಳೆಯದಲ್ಲಿದ್ದುದ್ದೆಲ್ಲವನ್ನೂ ಬಿಟ್ಟು ತಮ್ಮ ಜೀವರಕ್ಷಣೆಗಾಗಿ ಅದೇ ಸಾಯಂಕಾಲದಲ್ಲಿ ಓಡಿಹೋಗಿದ್ದರು.

[8] ಆ ಕುಷ್ಠರೋಗಿಗಳು ಪಾಳೆಯದ ಅಂಚಿಗೆ ಬಂದಾಗ ಮೊದಲನೆಯ ಡೇರೆಯನ್ನು ಹೊಕ್ಕು ಉಂಡು, ಕುಡಿದು ಅದರಲ್ಲಿದ್ದ ಬೆಳ್ಳಿ ಬಂಗಾರವನ್ನೂ, ಬಟ್ಟೆಗಳನ್ನೂ ತೆಗೆದುಕೊಂಡು ಅಡಗಿಸಿಟ್ಟರು. ಇನ್ನೊಂದು ಡೇರೆಯನ್ನು ಹೊಕ್ಕು ಅಲ್ಲಿಂದಲೂ ತೆಗೆದುಕೊಂಡು ಅಡಗಿಸಿಟ್ಟರು.

[9] ಅನಂತರ ಅವರು, “ಇದು ಶುಭವಾರ್ತೆಯ ದಿನವಾಗಿದೆ. ನಾವು ಇದನ್ನು ಪ್ರಕಟಿಸದಿರುವುದು ಒಳ್ಳೇಯದಲ್ಲ. ಬೆಳಗಾಗುವವರೆಗೆ ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು. ಆದುದರಿಂದ ಹೋಗಿ ಅರಸನಿಗೆ ಈ ಸಂಗತಿ ತಿಳಿಸೋಣ” ಎಂದು ಮಾತನಾಡಿಕೊಂಡು ಅಲ್ಲಿಂದ ಹೊರಟರು.

[10] ಊರಬಾಗಿಲಿಗೆ ಬಂದು ಕಾವಲುಗಾರರಿಗೆ, “ನಾವು ಅರಾಮ್ಯರ ಪಾಳೆಯಕ್ಕೆ ಹೋಗಿದ್ದೆವು. ಅಲ್ಲಿ ನಮಗೆ ಯಾರೂ ಕಾಣಿಸಲಿಲ್ಲ, ಮನುಷ್ಯರ ಶಬ್ದವೇ ಕೇಳಿಸಲಿಲ್ಲ. ಕತ್ತೆ ಕುದುರೆಗಳನ್ನು ಅಲ್ಲಲ್ಲಿ ಕಟ್ಟಿಹಾಕಲಾಗಿತ್ತು ಡೇರೆಗಳು ಇದ್ದ ಹಾಗೆಯೇ ಇವೆ” ಎಂದು ಕೂಗಿ ಹೇಳಿದರು.

[11] ಬಾಗಿಲು ಕಾಯುವವರು ಕೂಡಲೆ ಅರಸನ ಮನೆಯವರನ್ನು ಕೂಗಿ, ಅವರಿಗೆ ಈ ವರ್ತಮಾನವನ್ನು ತಿಳಿಸಿದರು.

[12] ಅರಸನು ರಾತ್ರಿಯಲ್ಲೇ ಎದ್ದು ತನ್ನ ಪರಿವಾರದವರಿಗೆ, “ಅರಾಮ್ಯರ ಉಪಾಯವನ್ನು ಹೇಳುತ್ತೇನೆ ಕೇಳಿರಿ; ನಾವು ಹಸಿವೆಯಿಂದ ಸಾಯುವವರಾಗಿದ್ದೇವೆ ಎಂಬುವುದನ್ನು ಅವರು ಬಲ್ಲರು. ಆದುದರಿಂದ ಪಾಳೆಯವನ್ನು ಬಿಟ್ಟು ಹೋಗಿ ಅಡವಿಯಲ್ಲಿ ಅಡಗಿಕೊಂಡಿದ್ದಾರೆ. ನಾವು ಪಟ್ಟಣದಿಂದ ಹೊರಗೆ ಹೋದ ಕೂಡಲೆ ನಮ್ಮನ್ನು ಜೀವ ಸಹಿತವಾಗಿ ಹಿಡಿದು ಪಟ್ಟಣವನ್ನು ಪ್ರವೇಶಿಸಬೇಕೆಂದಿದ್ದಾರೆ” ಎಂದನು.

[13] ಆಗ ಅವರಲ್ಲೊಬ್ಬನು ಅರಸನಿಗೆ, “ರಾಹುತರು ಪಟ್ಟಣದಲ್ಲಿ ಉಳಿದಿರುವ ಕುದುರೆಗಳಲ್ಲಿ ನಾಲ್ಕೈದು ಕುದುರೆಗಳನ್ನು ತೆಗೆದುಕೊಂಡು ನೋಡುವುದಕ್ಕೆ ಹೋಗಲಿ; ಅವರಿಗೆ ಪಟ್ಟಣದಲ್ಲಿ ಉಳಿದಿರುವ ಇಸ್ರಾಯೇಲರ ಗತಿಯಾಗಲಿ, ಸತ್ತುಹೋದವರ ಗತಿಯಾಗಲಿ, ಸಂಭವಿಸುವುದಷ್ಟೆ” ಎಂದು ಹೇಳಿದನು.

[14] ಕೂಡಲೆ ಅರಸನು ಎರಡು ಜೋಡಿ ಕುದುರೆಗಳನ್ನು ತರಿಸಿ, ಅರಾಮ್ಯರ ಸೈನ್ಯವು ಎಲ್ಲಿರುತ್ತದೆ ಎಂಬುವುದನ್ನು ನೋಡಿ, ಬರುವುದಕ್ಕಾಗಿ ರಾಹುತರನ್ನು ಕಳುಹಿಸಿದನು.

[15] ಅವರು ಯೊರ್ದನ್ ನದಿಯವರೆಗೂ ಹೋಗಿ, ಅವಸರದಿಂದ ಓಡಿಹೋದ ಅರಾಮ್ಯರು ದಾರಿಯಲ್ಲೆಲ್ಲಾ ತಮ್ಮ ಬಟ್ಟೆಗಳನ್ನು ಸಾಮಾನುಗಳನ್ನು ಬಿಸಾಡಿದ್ದನ್ನೂ ಕಂಡು, ಹಿಂದಿರುಗಿ ಬಂದು ಅರಸನಿಗೆ ತಿಳಿಸಿದರು.

[16] ಆಗ ಜನರು ಹೊರಗೆ ಹೋಗಿ ಅರಾಮ್ಯರ ಪಾಳೆಯವನ್ನು ಸೂರೆಮಾಡಿಬಿಟ್ಟರು. ಯೆಹೋವನ ಮಾತಿನಂತೆ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ, ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಟ್ಟವು.

[17] ಅರಸನು ತನ್ನ ಸಹವರ್ತಿಯಾದ ಸರದಾರನನ್ನು ಊರಬಾಗಿಲು ಕಾಯುವುದಕ್ಕಾಗಿ ಕಳುಹಿಸಿದ್ದರಿಂದ, ಅವನು ಜನರಿಂದ ತುಳಿಯಲ್ಪಟ್ಟು ಸತ್ತು ಹೋದನು. ಹೀಗೆ ದೇವರ ಮನುಷ್ಯನು ಅರಸನ ಜೊತೆಯಲ್ಲಿ, ತನ್ನ ಬಳಿಗೆ ಬಂದಿದ್ದ ಆ ಸರದಾರನಿಗೆ ಹೇಳಿದ ಮಾತು ನೆರವೇರಿತು.

[18] ದೇವರ ಮನುಷ್ಯನು ಅರಸನಿಗೆ, “ನಾಳೆ ಇಷ್ಟು ಹೊತ್ತಿಗೆ ಸಮಾರ್ಯ ಪಟ್ಟಣದ ಬಾಗಿಲಿನಲ್ಲಿ ಗೋದಿಹಿಟ್ಟು ರೂಪಾಯಿಗೆ ಹನ್ನೆರಡು ಸೇರಿನಂತೆಯೂ ಜವೆಗೋದಿಯು ಇಪ್ಪತ್ತನಾಲ್ಕು ಸೇರಿನಂತೆಯೂ ಮಾರಲ್ಪಡುವವು” ಎಂದು ಹೇಳಿದನು.

[19] ಆ ಸರದಾರನು ದೇವರ ಮನುಷ್ಯನಿಗೆ, “ಯೆಹೋವನು ಆಕಾಶದಲ್ಲಿ ಕಿಂಡಿಗಳನ್ನು ಕೊರೆದರೂ, ಇದು ಸಂಭವಿಸಲು ಸಾಧ್ಯವಿಲ್ಲ?” ಎಂದು ಹೇಳಿದ್ದನು. ಆಗ ದೇವರ ಮನುಷ್ಯನಾದ ಎಲೀಷನು ಅವನಿಗೆ, “ನೀನು, ಅದನ್ನು ಕಣ್ಣಾರೆ ಕಾಣುವಿ, ಆದರೆ ಅದನ್ನು ಅನುಭವಿಸುವುದಿಲ್ಲ” ಎಂದು ನುಡಿದಿದ್ದನು.

[20] ಅವನು ಊರುಬಾಗಿಲಿನಲ್ಲಿ ಜನರಿಂದ ತುಳಿಯಲ್ಪಟ್ಟು ಮರಣ ಹೊಂದಿದನು. ಎಲೀಷನು ಹೇಳಿದ ಈ ಮಾತು ನೆರವೇರಿತು.

2 ಅರಸುಗಳು — Chapters