Skip to content
Opens in a new window
Listen to this chapter • 4:37

[1] ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು.

[2] ಆದರೆ ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಅತಲ್ಯಳಿಂದ ಹತರಾಗಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯರೊಡನೆ ಅವನನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು

[3] ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಿ ಕೊಂಡು ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಆ ಆರು ವರ್ಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು.

[4] ಏಳನೆಯ ವರ್ಷದಲ್ಲಿ, ಯೆಹೋಯಾದಾವನು ಕಾರಿಯರ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಆಪ್ತನಾಗಿದ್ದು ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು.

[5] ಯೆಹೋಯಾದಾವನು ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ರಾಜರ ಅರಮನೆಯನ್ನು ಕಾಯಬೇಕು,

[6] ಮೂರರಲ್ಲೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು.

[7] ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು.

[8] ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು, ಅವನ ಗುಂಪಿನಲ್ಲಿ ನುಗ್ಗುವಂತವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು. ಇದೇ ನನ್ನ ಅಪ್ಪಣೆ” ಎಂದು ಹೇಳಿದನು.

[9] ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು.

[10] ಯಾಜಕನಾದ ಯೆಹೋಯಾದಾವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ರಾಜನಾದ ದಾವೀದನ ಬರ್ಜಿಯನ್ನೂ, ಗುರಾಣಿಗಳನ್ನೂ ಕೊಟ್ಟನು.

[11] ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕೋಸ್ಕರ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು.

[12] ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆ ತಟ್ಟುತ್ತಾ, “ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದರು.

[13] ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಸೇರಿ ಬಂದಿದ್ದ ಯೆಹೋವನ ಆಲಯಕ್ಕೆ ಬಂದಳು.

[14] ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ, ತುತ್ತೂರಿಯನ್ನು ಊದುವವರೂ ಅರಸನ ಹತ್ತಿರ ನಿಂತಿದ್ದರು. ದೇಶದ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.

[15] ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ, ಶತಾಧಿಪತಿಗಳಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ ಸಿಪಾಯಿಗಳ ಮಧ್ಯದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರಿ ಮತ್ತು ಆಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು.

[16] ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ರಾಜನ ಅರಮನೆಗೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದರು.

[17] ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ, ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಅಲ್ಲಿ ಪ್ರಮಾಣ ಮಾಡಿದರು. ಇದಲ್ಲದೆ ರಾಜಪ್ರಜೆಗಳೂ ಒಡಂಬಡಿಕೆಮಾಡಿಕೊಂಡರು.

[18] ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಎದುರಿನಲ್ಲಿಯೇ ಕೊಂದು, ದೇವಸ್ಥಾನವನ್ನೂ ಅದರಲ್ಲಿದ್ದ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ಯೆಹೋವನ ದೇವಾಲಯಕ್ಕೆ ಕಾವಲಿಟ್ಟನು.

[19] ಅಲ್ಲದೆ ಯೆಹೋಯಾದಾವನು ಶತಾಧಿಪತಿಗಳನ್ನು, ಕಾರಿಯರು ಎನ್ನಿಸಿಕೊಳ್ಳುವ ಸೈನ್ಯಗಳ ಕಾವಲುದಂಡನ್ನು, ಸಾಧಾರಣ ಜನರನ್ನು ಅವರೊಡನೆ ಅರಸನಾದ ಯೆಹೋವಾಷನನ್ನು ಯೆಹೋವನ ಆಲಯದಲ್ಲಿ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು.

[20] ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿ ನೆಲೆಸಿತು. ಅತಲ್ಯಳನ್ನು ರಾಜನ ಅರಮನೆಯ ಸಮೀಪದಲ್ಲಿ ಕತ್ತಿಯಿಂದ ಸಂಹರಿಸಿದರು.

[21] ಯೆಹೋವಾಷನು ಅರಸನಾದಾಗ ಅವನು ಏಳು ವರ್ಷದವನಾಗಿದ್ದನು.

2 ಅರಸುಗಳು — Chapters