Skip to content
Opens in a new window
Listen to this chapter • 5:11

[1] ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೈದು ವರ್ಷ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.

[2] ಅವನು ಯೆಹೋವನು ಇಸ್ರಾಯೇಲರ ರಾಜ್ಯದಿಂದ ಅನ್ಯಜನಾಂಗಗಳ ಅಸಹ್ಯಕಾರ್ಯಗಳನ್ನು ಅವನು ಅನುಸರಿಸಿ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.

[3] ತನ್ನ ತಂದೆಯಾದ ಹಿಜ್ಕೀಯನು ತೆಗೆದು ಹಾಕಿದ ಪೂಜಾಸ್ಥಳಗಳನ್ನು ತಿರುಗಿ ಸ್ಥಾಪಿಸಿ ಇಸ್ರಾಯೇಲರ ಅರಸನಾದ ಅಹಾಬನಂತೆ ಬಾಳದೇವತೆಗೋಸ್ಕರ ಯಜ್ಞವೇದಿಗಳನ್ನು ಕಟ್ಟಿಸಿ ಅಶೇರ ವಿಗ್ರಹ ಸ್ತಂಭಗಳನ್ನು ನಿಲ್ಲಿಸಿ ನಕ್ಷತ್ರಮಂಡಲಕ್ಕೆ ಕೈಮುಗಿದು ಆರಾಧಿಸಿದನು.

[4] ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು” ಎಂದು ಯೆಹೋವನು ಯಾವುದನ್ನು ಕುರಿತು ಹೇಳಿದ್ದನೋ, ಆ ಯೆಹೋವನ ಆಲಯದಲ್ಲಿ ಮನಸ್ಸೆಯು ಯಜ್ಞವೇದಿಗಳನ್ನು ಕಟ್ಟಿಸಿದನು.

[5] ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿಯೂ ಸರ್ವ ನಕ್ಷತ್ರಮಂಡಲಗಳಿಗಾಗಿ ಯಜ್ಞವೇದಿಗಳನ್ನು ಕಟ್ಟಿಸಿದನು.

[6] ಇದಲ್ಲದೆ ಅವನು ತನ್ನ ಸ್ವಂತ ಮಗನನ್ನೇ ಆಹುತಿಕೊಟ್ಟನು. ಕಣಿಕೇಳಿಸುವುದು, ಮಾಟಮಂತ್ರಗಳನ್ನು ಮಾಡಿಸುವುದು, ಜೋತಿಷ್ಯ, ಮುಹೂರ್ತಗಳನ್ನು ನೋಡುವುದು ಮತ್ತು ಭೂತಪ್ರೇತಗಳನ್ನೂ ವಿಚಾರಿಸುವುದು, ಇವೇ ಮೊದಲಾದ ದುಷ್ಕೃತ್ಯಗಳಿಂದ ಯೆಹೋವನಿಗೆ ಕೋಪವನ್ನು ಎಬ್ಬಿಸಿದನು.

[7] ತಾನು ಮಾಡಿಸಿದ ಅಶೇರ ವಿಗ್ರಹಸ್ತಂಭವನ್ನು ಯೆಹೋವನ ಆಲಯದಲ್ಲಿ ಇಡಿಸಿದನು. ಯೆಹೋವನು ಆ ಆಲಯದ ವಿಷಯದಲ್ಲಿ ದಾವೀದನಿಗೂ ಮತ್ತು ಅವನ ಮಗನಾದ ಸೊಲೊಮೋನನಿಗೂ, “ಈ ಆಲಯದಲ್ಲಿಯೂ, ಇಸ್ರಾಯೇಲರ ಸಕಲ ಗೋತ್ರಗಳಲ್ಲಿಯೂ, ನಾನು ಆರಿಸಿಕೊಂಡ ಯೆರೂಸಲೇಮಿನಲ್ಲಿಯೂ ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು

[8] ಇಸ್ರಾಯೇಲರು ತಮಗೆ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಧರ್ಮಶಾಸ್ತ್ರದ ನಿಯಮ ನಿಬಂಧನೆಗಳನ್ನು ಅನುಸರಿಸಿ, ನಡೆಯುವುದಾದರೆ, ನನ್ನ ನಾಮ ಮಹತ್ತು ಈ ದೇವಾಲಯದಲ್ಲಿಯೂ, ಇಸ್ರಾಯೇಲರ ಎಲ್ಲಾ ಊರುಗಳಲ್ಲಿಯೂ, ನನಗೆ ಇಷ್ಟವಾಗಿರುವ ಯೆರೂಸಲೇಮಿನಲ್ಲಿಯೂ ಸದಾಕಾಲ ಇರುವಂತೆ ಮಾಡುವೆನು, ಇಸ್ರಾಯೇಲರು ಇನ್ನು ಮುಂದೆ ದೇಶಭ್ರಷ್ಟರಾಗಿ ಅಲೆದಾಡದೆ ತಮ್ಮ ಪೂರ್ವಿಕರಿಗೆ ಕೊಡಲಾದ ದೇಶದಲ್ಲಿಯೇ ವಾಸವಾಗಿರುವಂತೆ ಮಾಡುವೆನು” ಎಂದು ಹೇಳಿದನು.

[9] ಆದರೆ ಇಸ್ರಾಯೇಲರು ಆತನ ಮಾತನ್ನು ಕೇಳದೆ ಮನಸ್ಸೆಯಿಂದ ಪ್ರೇರೇಪಿತರಾಗಿ ತಮ್ಮ ಮುಂದೆಯೇ ಯೆಹೋವನಿಂದ ಸಂಹೃತವಾದ ಅನ್ಯಜನಾಂಗಗಳಿಗಿಂತಲೂ ದುಷ್ಟರಾದರು.

[10] ಆಗ ಯೆಹೋವನು ತನ್ನ ಸೇವಕರಾದ ಪ್ರವಾದಿಗಳ ಮುಖಾಂತರವಾಗಿ,

[11] “ಯೆಹೂದ್ಯರ ಅರಸನಾದ ಮನಸ್ಸೆಯು ಮೊದಲು ಇದ್ದ ಅಮೋರಿಯರ ಕೃತ್ಯಗಳಿಗಿಂತಲೂ ಅಸಹ್ಯವಾದ ಕೃತ್ಯಗಳನ್ನು ನಡಿಸಿದ್ದರಿಂದಲೂ, ವಿಗ್ರಹಗಳನ್ನು ಪೂಜಿಸಲು ಯೆಹೂದ್ಯರನ್ನು ಪ್ರೇರೇಪಿಸಿದ್ದರಿಂದಲೂ,

[12] ಇಸ್ರಾಯೇಲಿನ ದೇವರಾದ ಯೆಹೋವನೆಂಬ ನಾನು ಯೆರೂಸಲೇಮಿನವರ ಮೇಲೆಯೂ, ಯೆಹೂದದವರ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವರ ಎರಡು ಕಿವಿಗಳು ಬಿರಿದು ಹೋಗುವವು.

[13] ನೂಲು ಮಟ್ಟಗೋಲು ಇವುಗಳಿಂದಲೋ ಎಂಬಂತೆ ಸಮಾರ್ಯವನ್ನೂ, ಅಹಾಬನ ಮನೆಯನ್ನೂ ನೆಲಸಮಮಾಡಿದಂತೆ, ಯೆರೂಸಲೇಮನ್ನೂ ಅದರಂತೆಯೇ ಮಾಡುವೆನು. ಒಬ್ಬನು ಪಾತ್ರೆಯನ್ನು ಒರಸಿ ಬೋರಲು ಹಾಕುವ ಹಾಗೆ ನಾನು ಯೆರೂಸಲೇಮನ್ನು ಒರಸಿ ಬೋರಲು ಹಾಕುವೆನು.

[14] ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಎಲ್ಲಾ ಶತ್ರುಗಳು ಬಂದು ಅವರ ಸ್ವತ್ತನ್ನು ಸುಲಿದು ಸೂರೆಮಾಡುವರು.

[15] ಅವರು ತಮ್ಮ ಪೂರ್ವಿಕರ ಕಾಲದಲ್ಲಿ ಐಗುಪ್ತದೇಶವನ್ನು ಬಿಟ್ಟುಬಂದರೂ ತಮ್ಮ ಪಾಪಗಳನ್ನು ಬಿಡದೆ ಇಂದಿನವರೆಗೂ ತಮ್ಮ ಪಾಪಗಳಿಂದ ನನ್ನನ್ನು ರೇಗಿಸುತ್ತಾ ಬಂದದ್ದೇ ಇದಕ್ಕೆ ಕಾರಣ” ಎಂದು ಹೇಳಿಸಿದನು.

[16] ಮನಸ್ಸೆಯು ಯೆಹೂದ್ಯರನ್ನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಲು ಪ್ರೇರೇಪಿಸಿದ್ದಲ್ಲದೆ ಯೆರೂಸಲೇಮನ್ನೆಲ್ಲಾ ನಿರಪರಾಧಿಗಳ ರಕ್ತದಿಂದ ತುಂಬಿಸಿದನು.

[17] ಮನಸ್ಸೆಯ ಉಳಿದ ಚರಿತ್ರೆಯೂ ಅವನ ಎಲ್ಲಾ ಕ್ರಿಯೆಗಳೂ, ಅವನು ಮಾಡಿದ ಪಾಪಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.

[18] ಮನಸ್ಸೆಯು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಅರಮನೆಯಿರುವ ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅವನಿಗೆ ನಂತರ ಅವನ ಮಗನಾದ ಆಮೋನನು ಅರಸನಾದನು.

[19] ಆಮೋನನು ಅರಸನಾದಾಗ ಅವನು ಇಪ್ಪತ್ತೆರಡು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಎರಡು ವರ್ಷಗಳ ಕಾಲ ಆಳಿದನು. ಯೊಟ್ಬಾ ಊರಿನವಳೂ ಹಾರೂಚನ ಮಗಳೂ ಆದ ಮೆಷುಲ್ಲೆಮೆತ್ ಎಂಬಾಕೆಯು ಅವನ ತಾಯಿ.

[20] ಅವನು ತನ್ನ ತಂದೆಯಾದ ಮನಸ್ಸೆಯ ಮಾರ್ಗದಲ್ಲಿಯೇ ನಡೆದು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

[21] ತನ್ನ ತಂದೆಯ ಮಾರ್ಗದಲ್ಲಿ ನಡೆದು ಅವನು ಪೂಜಿಸಿದ ವಿಗ್ರಹಗಳನ್ನು ತಾನೂ ಪೂಜಿಸಿ ಅವುಗಳಿಗೆ ಅಡ್ಡಬಿದ್ದನು.

[22] ತನ್ನ ಪೂರ್ವಿಕರ ದೇವರಾದ ಯೆಹೋವನನ್ನೂ ಆರಾಧಿಸದೆ, ಆತನಿಗೆ ಮೆಚ್ಚಿಗೆಯಾಗುವಂತೆ ನಡೆಯುವ ಮಾರ್ಗವನ್ನೂ ಬಿಟ್ಟುಬಿಟ್ಟನು.

[23] ಮನಸ್ಸೆಯ ಸೇವಕರು ಆಮೋನನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಅವನನ್ನು ಅರಸನ ಅರಮನೆಯಲ್ಲಿಯೇ ಕೊಂದುಹಾಕಿದರು.

[24] ಆದರೆ ದೇಶದ ಜನರು ಒಳಸಂಚುಮಾಡಿದವರನ್ನೆಲ್ಲಾ ಕೊಂದುಹಾಕಿ, ಆಮೋನನ ಮಗನಾದ ಯೋಷೀಯನನ್ನು ಅರಸನನ್ನಾಗಿ ಮಾಡಿದರು.

[25] ಆಮೋನನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.

[26] ಆಮೋನನ ಶವವನ್ನು ಉಜ್ಜನ ವನದಲ್ಲಿ ಸಮಾಧಿಮಾಡಿದರು. ಅಲ್ಲಿ ಅವನು ಮೊದಲೇ ತನಗೋಸ್ಕರ ಒಂದು ಸಮಾಧಿಯನ್ನು ಸಿದ್ಧಪಡಿಸಿಟ್ಟಿದ್ದನು.

2 ಅರಸುಗಳು — Chapters