Skip to content
Opens in a new window
Listen to this chapter • 7:45

[1] ಇಸ್ರಾಯೇಲರ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ ಅಮಚ್ಯನ ಮಗನಾದ ಅಜರ್ಯನು ಯೆಹೂದದ ಅರಸನಾದನು.

[2] ಅಜರ್ಯನು ಪಟ್ಟಕ್ಕೆ ಬಂದಾಗ ಅವನು ಹದಿನಾರು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷಗಳ ಕಾಲ ಆಳಿದನು. ಯೆರೂಸಲೇಮಿನವಳಾದ ಯೆಕೊಲ್ಯ ಎಂಬಾಕೆ ಇವನ ತಾಯಿ.

[3] ಅಜರ್ಯನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿ ನಡೆದನು.

[4] ಆದರೆ, ಇವನ ಕಾಲದಲ್ಲಿಯೂ ಪೂಜಾಸ್ಥಳಗಳು ತೆಗೆಯಲ್ಪಡಲಿಲ್ಲವಾದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಅರ್ಪಿಸುತ್ತಿದ್ದರು.

[5] ಯೆಹೋವನು ಅವನನ್ನು ಕುಷ್ಠರೋಗದಿಂದ ಶಿಕ್ಷಿಸಿದನು. ಆದುದರಿಂದ ಇವನು ಜೀವದಿಂದಿರುವವರೆಗೂ ಪ್ರತ್ಯೇಕವಾದ ಮನೆಯಲ್ಲಿ ವಾಸಮಾಡಬೇಕಾಯಿತು. ರಾಜಗೃಹಾಧಿಪತ್ಯವನ್ನೂ, ಪ್ರಜಾಪಾಲನೆಯನ್ನೂ ಇವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು.

[6] ಅಜರ್ಯನ ಉಳಿದ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲದ ವೃತಾಂತ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.

[7] ಅಜರ್ಯನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದ ನಗರದೊಳಗೆ ರಾಜಕುಟುಂಬದ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಯೋತಾಮನು ಅರಸನಾದನು.

[8] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಆರು ತಿಂಗಳು ಆಳಿದನು.

[9] ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

[10] ಯಾಬೇಷನ ಮಗನಾದ ಶಲ್ಲೂಮನು ಅವನಿಗೆ ವಿರುದ್ಧವಾಗಿ ಒಳಸಂಚುಮಾಡಿ ಪ್ರಜೆಗಳ ಮುಂದೆಯೇ ಅವನನ್ನು ಕೊಂದು ಅವನಿಗೆ ಬದಲಾಗಿ ತಾನು ಅರಸನಾದನು.

[11] ಜೆಕರ್ಯನ ಉಳಿದ ಚರಿತ್ರೆಯು ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.

[12] “ನಿನ್ನ ಸಂತಾನದವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲರ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು” ಎಂಬುದಾಗಿ ಯೆಹೋವನು ಯೇಹುವಿಗೆ ಮುಂತಿಳಿಸಿದ ಮಾತು ನೆರವೇರಿತು.

[13] ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗನಾದ ಶಲ್ಲೂಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು.

[14] ಗಾದಿಯ ಮಗನಾದ ಮೆನಹೇಮನೆಂಬುವನು ತಿರ್ಚದಿಂದ ಸಮಾರ್ಯಕ್ಕೆ ಬಂದು ಅಲ್ಲಿದ್ದ ಯಾಬೇಷನ ಮಗನಾದ ಶಲ್ಲೂಮನನ್ನು ಕೊಂದು, ಅವನಿಗೆ ಬದಲಾಗಿ ತಾನು ಅರಸನಾದನು.

[15] ಶಲ್ಲೂಮನ ಉಳಿದ ಚರಿತ್ರೆಯೂ ಮತ್ತು ಅವನ ಒಳಸಂಚಿನ ವಿವರವೂ ಇಸ್ರಾಯೇಲ್ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.

[16] ಮೆನಹೇಮನು ತಿರ್ಚದಿಂದ ತಿಪ್ಸಹುವಿಗೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲನ್ನು ಅವನಿಗೆ ತೆರೆಯಲಿಲ್ಲ, ಆದುದರಿಂದ ಅವನು ಆ ಊರನ್ನು ಅದಕ್ಕೆ ಸೇರಿದ ಪ್ರದೇಶವನ್ನೂ ಹಾಳುಮಾಡಿ ಅದರ ನಿವಾಸಿಗಳನ್ನು ಸಂಹರಿಸಿದನು. ಅದರಲ್ಲಿದ್ದ ಎಲ್ಲಾ ಗರ್ಭಿಣಿಗಳ ಹೊಟ್ಟೆಯನ್ನು ಸೀಳಿಹಾಕಿಸಿದನು.

[17] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗನಾದ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು.

[18] ಇವನು ಜೀವದಿಂದ ಇರುವವರೆಗೂ ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ದುರ್ಮಾರ್ಗವನ್ನು ಬಿಡದೆ ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

[19] ಅಶ್ಶೂರ ದೇಶದ ಅರಸನಾದ ಪೂಲನೆಂಬವನು ಇಸ್ರಾಯೇಲ್ ದೇಶಕ್ಕೆ ವಿರುದ್ಧವಾಗಿ ಬಂದಾಗ ಮೆನಹೇಮನು ಅವನ ಮುಖಾಂತರವಾಗಿ ತನ್ನ ಅರಸುತನವನ್ನು ಜನರು ದೃಢಪಡಿಸಿಕೊಳ್ಳುವುದಕ್ಕೋಸ್ಕರ ಅವನಿಗೆ ಸಾವಿರ ತಲಾಂತು ಬೆಳ್ಳಿಯನ್ನು ಕೊಟ್ಟನು.

[20] ಮೆನಹೇಮನು ಅಶ್ಶೂರದ ಅರಸನಿಗೆ ಆ ಹಣವನ್ನು ಕೊಡುವುದಕ್ಕಾಗಿ ಇಸ್ರಾಯೇಲರ ಪ್ರತಿಯೊಬ್ಬ ಐಶ್ವರ್ಯವಂತನಿಂದ ಐವತ್ತು ರೂಪಾಯಿಗಳನ್ನು ವಸೂಲಿಮಾಡಿಕೊಂಡನು. ಆ ಹಣವು ಸಿಕ್ಕಿದ ನಂತರ ಅಶ್ಶೂರದ ಅರಸನು ಅಲ್ಲಿ ನಿಲ್ಲದೆ ಹಿಂತಿರುಗಿ ಹೋದನು.

[21] ಮೆನಹೇಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಲಿಖಿತವಾಗಿದೆ.

[22] ಮೆನಹೇಮನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಮಗನಾದ ಪೆಕಹ್ಯನು ಇಸ್ರಾಯೇಲರ ಅರಸನಾದನು.

[23] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗನಾದ ಪೆಕಹ್ಯ ಎಂಬುವವನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಎರಡು ವರ್ಷ ಆಳಿದನು.

[24] ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

[25] ಇವನ ಸರದಾರನೂ, ರೆಮಲ್ಯನ ಮಗನೂ ಆಗಿದ್ದ ಪೆಕಹನು, ಗಿಲ್ಯಾದಿನ ಐವತ್ತು ಮಂದಿ ಜನರನ್ನು ಕೂಡಿಸಿಕೊಂಡು ಇವನಿಗೆ ವಿರುದ್ಧವಾಗಿ ಒಳಸಂಚು ಮಾಡಿ ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಇವನನ್ನೂ ಅರ್ಗೋಬ್, ಅರ್ಯೇ ಎಂಬವರನ್ನೂ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.

[26] ಪೆಕಹ್ಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.

[27] ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರ್ಷದಲ್ಲಿ ರೆಮಲ್ಯನ ಮಗನಾದ ಪೆಕಹನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಇಪ್ಪತ್ತು ವರ್ಷ ಆಳಿದನು.

[28] ಇವನು ಇಸ್ರಾಯೇಲರನ್ನು ಪಾಪಕ್ಕೆ ಪ್ರಚೋದಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಮಾರ್ಗವನ್ನು ಬಿಡದೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು.

[29] ಇಸ್ರಾಯೇಲರ ಅರಸನಾದ ಪೆಕಹನ ಕಾಲದಲ್ಲಿ ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನೆಂಬುವವನು ಬಂದು ಇಯ್ಯೋನ್, ಆಬೇಲ್ಬೇತ್ಮಾಕಾ, ಯಾನೋಹ, ಕೆದೆಷ್, ಹಾಚೋರ್ ಮೊದಲಾದ ನಫ್ತಾಲಿಯ ಊರುಗಳನ್ನು ಗಿಲ್ಯಾದ್ ಮತ್ತು ಗಲಿಲಾಯ ಪ್ರಾಂತ್ಯಗಳನ್ನೂ ಸ್ವಾಧೀನಪಡಿಸಿಕೊಂಡು ಅವುಗಳ ನಿವಾಸಿಗಳನ್ನು ಅಶ್ಶೂರ್ ದೇಶಕ್ಕೆ ಸೆರೆಯಾಗಿ ತೆಗೆದುಕೊಂಡು ಹೋದನು.

[30] ಆಗ ಏಲನ ಮಗನಾದ ಹೋಶೇಯನು, ರೆಮಲ್ಯನ ಮಗನಾದ ಪೆಕಹನಿಗೆ ವಿರುದ್ಧವಾಗಿ ಒಳಸಂಚು ಮಾಡಿ, ಇವನನ್ನು ಉಜ್ಜೀಯನ ಮಗನಾದ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಕೊಂದು ಇವನಿಗೆ ಬದಲಾಗಿ ತಾನು ಅರಸನಾದನು.

[31] ಪೆಕಹನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಇಸ್ರಾಯೇಲರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.

[32] ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ಯೆಹೂದ್ಯರ ಅರಸನಾದ ಉಜ್ಜೀಯನ ಮಗನಾದ ಯೋತಾಮನು ಆಳತೊಡಗಿದನು.

[33] ಇವನು ಪಟ್ಟಕ್ಕೆ ಬಂದಾಗ ಇಪ್ಪತ್ತೈದು ವರ್ಷದವನಾಗಿದ್ದನು. ಇವನು ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷಾ ಇವನ ತಾಯಿ.

[34] ಇವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು.

[35] ಆದರೆ ಇವನ ಕಾಲದಲ್ಲಿ ಪೂಜಾಸ್ಥಳಗಳು ಇನ್ನೂ ತೆಗೆಯಲ್ಪಟ್ಟಿರಲಿಲ್ಲ. ಆದುದರಿಂದ ಜನರು ಅವುಗಳಲ್ಲಿ ಯಜ್ಞಧೂಪಗಳನ್ನು ಸಮರ್ಪಿಸುತ್ತಿದ್ದರು. ಯೆಹೋವನ ಆಲಯಕ್ಕೆ ಮೇಲಣ ಹೆಬ್ಬಾಗಿಲನ್ನು ಇಡಿಸಿದವನು ಇವನೇ.

[36] ಯೋತಾಮನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ.

[37] ಯೆಹೋವನು ಆ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನನ್ನೂ, ರೆಮಲ್ಯನ ಮಗನಾದ ಪೆಕಹನನ್ನೂ ಯೆಹೂದ್ಯರಿಗೆ ವಿರೋಧವಾಗಿ ಕಳುಹಿಸತೊಡಗಿದನು.

[38] ಯೋತಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಅವನ ಪೂರ್ವಿಕನಾದ ದಾವೀದನ ಪಟ್ಟಣದೊಳಗೆ ಅವನ ಪೂರ್ವಿಕರ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಆಹಾಜನು ಅರಸನಾದನು.

2 ಅರಸುಗಳು — Chapters