Skip to content
Opens in a new window
Listen to this chapter • 6:42

[1] ಒಂದು ದಿನ ಪ್ರವಾದಿಮಂಡಳಿಯವರು ಎಲೀಷನಿಗೆ, “ನಾವು ನಿನ್ನ ಜೊತೆಯಲ್ಲಿ ವಾಸಿಸುತ್ತಿರುವ ಈ ಸ್ಥಳವು ಬಹಳ ಇಕ್ಕಟ್ಟಾಗಿದೆ.

[2] ಆದುದರಿಂದ ನಾವು ಯೊರ್ದನಿಗೆ ಹೋಗಿ, ಅಲ್ಲಿ ಪ್ರತಿಯೊಬ್ಬನೂ ಒಂದೊಂದು ತೊಲೆಯನ್ನು ಕಡಿದುಕೊಂಡು ಬಂದು, ನಮ್ಮ ವಾಸಕ್ಕಾಗಿ ಒಂದು ಮನೆಯನ್ನು ಮಾಡಿಕೊಳ್ಳೋಣ” ಎಂದರು. ಎಲೀಷನು ಅವರಿಗೆ, “ಹೋಗಿಬನ್ನಿರಿ” ಎಂದು ಹೇಳಿದನು.

[3] ಅವರಲ್ಲೊಬ್ಬನು, “ದಯವಿಟ್ಟು ನೀನೂ, ನಿನ್ನ ಸೇವಕರು ನಮ್ಮ ಜೊತೆಯಲ್ಲಿ ಬರಬೇಕು” ಎಂದು ಬೇಡಿಕೊಂಡನು. ಅದಕ್ಕೆ ಎಲೀಷನು, “ಬರುತ್ತೇನೆ” ಎಂದು ಹೇಳಿ ಅವರೊಡನೆ ಹೊರಟನು.

[4] ಅವರು ಯೊರ್ದನಿಗೆ ಹೋಗಿ ಮರಗಳನ್ನು ಕಡಿಯುತ್ತಿರುವಾಗ,

[5] ಒಬ್ಬನ ಕೊಡಲಿಯು ಕೈಜಾರಿ ನೀರೊಳಗೆ ಬಿದ್ದಿತು. ಆಗ ಅವನು, “ಅಯ್ಯೋ, ಸ್ವಾಮಿ ನಾನು ಅದನ್ನು ಸಾಲವಾಗಿ ತಂದಿದ್ದೆನು” ಎಂದು ಕೂಗಿದನು.

[6] ದೇವರ ಮನುಷ್ಯನು ಅವನಿಗೆ, “ಅದು ಎಲ್ಲಿ ಬಿದ್ದಿತು?” ಎಂದು ಕೇಳಲು, ಅದು ಬಿದ್ದ ಸ್ಥಳವನ್ನು ಅವನು ತೋರಿಸಿದನು. ಆಗ ದೇವರ ಮನುಷ್ಯನು ಮರದಿಂದ ಒಂದು ತುಂಡು ಕಟ್ಟಿಗೆಯನ್ನು ಮುರಿದು ಅಲ್ಲಿ ಹಾಕಿದನು, ಕೂಡಲೆ ಕೊಡಲಿಯು ಮೇಲಕ್ಕೆ ಬಂದು ತೇಲಾಡಿತು.

[7] ಎಲೀಷನು “ಅದನ್ನು ತೆಗೆದುಕೋ” ಎಂದು ಆಜ್ಞಾಪಿಸಲು ಆ ಮನುಷ್ಯನು ಕೈಚಾಚಿ ಅದನ್ನು ತೆಗೆದುಕೊಂಡನು.

[8] ಅರಾಮ್ಯರ ಅರಸನು ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಕ್ಕೆ ಬಂದನು. ಅವನು ತನ್ನ ಸೇನಾಧಿಪತಿಗಳಿಗೆ, “ಯುದ್ಧದಲ್ಲಿ ಹೊಂಚುಹಾಕತಕ್ಕ ಸ್ಥಳವನ್ನು ಗೊತ್ತುಮಾಡಬೇಕು” ಎಂದನು.

[9] ದೇವರ ಮನುಷ್ಯನು ಇಸ್ರಾಯೇಲರ ಅರಸನಿಗೆ, “ಜಾಗರೂಕತೆಯಿಂದಿರಿ, ನೀವು ಇಂಥಿಂಥ ಸ್ಥಳದಲ್ಲಿ ಹೋಗಬಾರದು. ಅಲ್ಲಿ ಅರಾಮ್ಯರು ಅಡಗಿಕೊಂಡಿದ್ದಾರೆ” ಎಂದು ತಿಳಿಸುತ್ತಿದ್ದನು.

[10] ದೇವರ ಮನುಷ್ಯನು ಸೂಚಿಸುವ ಎಲ್ಲಾ ಸ್ಥಳಗಳಿಗೂ ಇಸ್ರಾಯೇಲರ ಅರಸನು ಹೇಳಿ ಕಳುಹಿಸುತ್ತಿದ್ದನು. ಹೀಗೆ ಅವನು ಹಲವು ಸಾರಿ ಅರಾಮ್ಯರ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡನು.

[11] ಇದರ ದೆಸೆಯಿಂದ ಅರಾಮ್ಯರ ಅರಸನು ಕಳವಳಗೊಂಡು ತನ್ನ ಸೇನಾಧಿಪತಿಗಳನ್ನು ಕರೆದು ಅವರನ್ನು, “ನಮ್ಮವರಲ್ಲಿ ಇಸ್ರಾಯೇಲರ ಅರಸನ ಪಕ್ಷದವರು ಯಾರು? ನನಗೆ ತಿಳಿಸುವುದಿಲ್ಲವೋ” ಎಂದು ಕೇಳಿದನು.

[12] ಆಗ ಅವರಲ್ಲೊಬ್ಬನು ಅವನಿಗೆ, “ನನ್ನ ಒಡೆಯನಾದ ಅರಸನೇ, ಹಾಗಲ್ಲ, ಇಸ್ರಾಯೇಲರಲ್ಲಿ ಎಲೀಷನೆಂಬ ಒಬ್ಬ ಪ್ರವಾದಿಯಿರುತ್ತಾನೆ. ನೀನು ನಿನ್ನ ಮಲಗುವ ಕೋಣೆಯಲ್ಲಿ ಆಡುವ ಮಾತುಗಳನ್ನು ಸಹ ಅವನು ಅರಿತುಕೊಂಡು ಎಲ್ಲವನ್ನೂ ಇಸ್ರಾಯೇಲರ ಅರಸನಿಗೆ ತಿಳಿಸುತ್ತಾನೆ” ಎಂದನು.

[13] ಅರಸನು ಇದನ್ನು ಕೇಳಿ, “ಎಲೀಷನು ಎಲ್ಲಿರುತ್ತಾನೆ ಎಂದು ವಿಚಾರಿಸಿರಿ. ನಾನು ಅವನನ್ನು ಹಿಡಿಸುತ್ತೇನೆ” ಎಂದು ಹೇಳಿದನು. “ಪ್ರವಾದಿಯು ದೋತಾನಿನಲ್ಲಿ ಇರುತ್ತಾನೆ” ಎಂದು ಅರಸನು ತಿಳಿದುಕೊಂಡನು.

[14] ಆಗ ಅರಸನು ರಥರಥಾಶ್ವ ಸಹಿತವಾದ ಮಹಾಸೈನ್ಯವನ್ನು ದೋತಾನಿಗೆ ಕಳುಹಿಸಿದನು. ಸೈನ್ಯದವರು ರಾತ್ರಿಯಲ್ಲಿ ಆ ಪಟ್ಟಣವನ್ನು ಸಮೀಪಿಸಿ ಅದಕ್ಕೆ ಮುತ್ತಿಗೆ ಹಾಕಿದರು.

[15] ದೇವರ ಮನುಷ್ಯನ ಸೇವಕನು ಬೆಳಿಗ್ಗೆ ಎದ್ದು ಹೊರಗೆ ಬಂದು ನೋಡಿದಾಗ ರಥರಥಾಶ್ವಸಹಿತವಾದ ಮಹಾಸೈನ್ಯವು ಬಂದು ಪಟ್ಟಣದ ಸುತ್ತಲೂ ನಿಂತಿರುವುದನ್ನು ಕಂಡು ತನ್ನ ಯಜಮಾನನಿಗೆ, “ಅಯ್ಯೋ, ಸ್ವಾಮಿ ನಾವು ಏನು ಮಾಡೋಣ?” ಎಂದನು.

[16] ಆಗ ಎಲೀಷನು ಅವನಿಗೆ, “ಹೆದರಬೇಡ, ಅವರ ಕಡೆಯಲ್ಲಿರುವವರಿಗಿಂತಲೂ, ನಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ” ಎಂದು ಹೇಳಿ,

[17] “ಯೆಹೋವನೇ, ಇವನು ನೋಡುವಂತೆ ಇವನ ಕಣ್ಣುಗಳನ್ನು ತೆರೆ” ಎಂದು ಪ್ರಾರ್ಥಿಸಲು ಯೆಹೋವನು ಅವನ ಕಣ್ಣುಗಳನ್ನು ತೆರೆದನು. ಆಗ ಎಲೀಷನ ರಕ್ಷಣೆಗಾಗಿ ಸುತ್ತಣ ಗುಡ್ಡಗಳಲ್ಲಿ ಬಂದು ನಿಂತಿದ್ದ ಅಗ್ನಿಮಯವಾದ ರಥಾರಥಾಶ್ವಗಳು ಆ ಸೇವಕನಿಗೆ ಕಂಡವು.

[18] ಶತ್ರುಗಳಾದ ಅರಾಮ್ಯರು ಸಮೀಪಕ್ಕೆ ಬಂದಾಗ ಎಲೀಷನು, “ಸ್ವಾಮಿ, ಈ ಜನರನ್ನು ಕುರುಡರನ್ನಾಗಿ ಮಾಡು” ಎಂದು ಯೆಹೋವನನ್ನು ಪ್ರಾರ್ಥಿಸಿದನು. ಯೆಹೋವನು ಅವನ ಮೊರೆಯನ್ನು ಲಾಲಿಸಿ ಅವರನ್ನು ಕುರುಡರನ್ನಾಗಿ ಮಾಡಿದನು.

[19] ಆಗ ಎಲೀಷನು ಅವರಿಗೆ, “ನೀವು ಹೋಗಬೇಕೆಂದಿದ್ದ ಪಟ್ಟಣವೂ, ದಾರಿಯೂ ಇದಲ್ಲ, ನನ್ನ ಜೊತೆಯಲ್ಲಿ ಬನ್ನಿರಿ, ನೀವು ಹುಡುಕುತ್ತಿರುವ ಮನುಷ್ಯನ ಬಳಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ” ಎಂದು ಹೇಳಿ ಅವರನ್ನು ಸಮಾರ್ಯಕ್ಕೆ ಕರೆದುಕೊಂಡು ಹೋದನು.

[20] ಅವರು ಸಮಾರ್ಯದೊಳಗೆ ಬಂದಾಗ ಎಲೀಷನು, “ಇವರು ನೋಡುವಂತೆ ಇವರ ಕಣ್ಣುಗಳನ್ನು ತೆರೆ” ಎಂದು ಯೆಹೋವನನ್ನು ಬೇಡಿಕೊಂಡದ್ದರಿಂದ ಆತನು ಅವರ ಕಣ್ಣುಗಳನ್ನು ತೆರೆದನು. ಆಗ ಅವರಿಗೆ ತಾವು ಸಮಾರ್ಯದಲ್ಲಿದ್ದೇವೆಂದು ತಿಳಿದುಬಂತು.

[21] ಇಸ್ರಾಯೇಲರ ಅರಸನು ಅವರನ್ನು ಕಂಡು ಎಲೀಷನಿಗೆ, “ಅಪ್ಪಾ, ನಾನು ಇವರನ್ನು ಸಂಹರಿಸಿ ಬಿಡಲೋ? ಸಂಹರಿಸಲೇ?” ಎಂದು ಕೇಳಿದನು.

[22] ಅದಕ್ಕೆ ಅವನು, “ಇವರನ್ನು ನೀನು ಸಂಹರಿಸಬೇಡ, ಕತ್ತಿಬಿಲ್ಲುಗಳಿಂದ ಸ್ವಾಧೀನಪಡಿಸಿಕೊಂಡು ಸೆರೆಯಾಗಿ ತಂದವರನ್ನು ನೀನು ಸಂಹರಿಸುವೆಯೋ? ಇವರಿಗೆ ಅನ್ನಪಾನಗಳನ್ನು ಕೊಡು, ಉಂಡು ಕುಡಿದು ತಮ್ಮ ಯಜಮಾನನ ಬಳಿಗೆ ಹಿಂದಿರುಗಿ ಹೋಗಲಿ” ಎಂದು ಉತ್ತರಕೊಟ್ಟನು.

[23] ಆಗ ಅರಸನು ಅವರಿಗಾಗಿ ಒಂದು ದೊಡ್ಡ ಔತಣವನ್ನು ಮಾಡಿಸಿ ಅವರು ಅನ್ನ ಪಾನಗಳನ್ನು ತೆಗೆದುಕೊಂಡಾದ ಮೇಲೆ ಅವರನ್ನು ಅವರ ಯಜಮಾನನ ಬಳಿಗೆ ಕಳುಹಿಸಿದನು. ಅಂದಿನಿಂದ ಸುಲಿಗೆ ಮಾಡುವ ಅರಾಮ್ಯರ ಗುಂಪುಗಳು ಇಸ್ರಾಯೇಲರ ಪ್ರಾಂತ್ಯದೊಳಗೆ ಮತ್ತೆ ಬರಲೇ ಇಲ್ಲ.

[24] ಆ ನಂತರ ಅರಾಮ್ಯರ ಅರಸನಾದ ಬೆನ್ಹದದನು ತನ್ನ ಎಲ್ಲಾ ಸೈನ್ಯವನ್ನು ಕೂಡಿಸಿಕೊಂಡು ಬಂದು ಸಮಾರ್ಯಕ್ಕೆ ಮುತ್ತಿಗೆ ಹಾಕಿದನು.

[25] ಆಗ ಸಮಾರ್ಯ ಪಟ್ಟಣದಲ್ಲಿ ಘೋರವಾದ ಬರವಿದ್ದಿತು. ಮುತ್ತಿಗೆಯ ದೆಸೆಯಿಂದ ಅದು ಮತ್ತಷ್ಟು ಘೋರವಾಗಿದ್ದುದರಿಂದ ಒಂದು ಕತ್ತೆಯ ತಲೆಗೆ ಎಂಭತ್ತು ರೂಪಾಯಿಗಳೂ, ಅರ್ಧ ಸೇರು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಟ್ಟವು.

[26] ಒಂದು ದಿನ ಇಸ್ರಾಯೇಲರ ಅರಸನು ಪೌಳಿಗೋಡೆಯ ಮೇಲೆ ಹಾದುಹೋಗುತ್ತಿರುವಾಗ, ಒಬ್ಬ ಸ್ತ್ರೀಯು, “ಅರಸನೇ, ನನ್ನ ಒಡೆಯನೇ, ನನ್ನನ್ನು ರಕ್ಷಿಸು” ಎಂದು ಮೊರೆಯಿಟ್ಟಳು.

[27] ಅರಸನು ಆಕೆಗೆ, “ಯೆಹೋವನು ನಿನ್ನನ್ನು ರಕ್ಷಿಸದಿದ್ದರೆ ನಾನು ಹೇಗೆ ರಕ್ಷಿಸಬಹುದು? ಕಣದಲ್ಲಾಗಲಿ, ದ್ರಾಕ್ಷಿ ಆಲೆಯಲ್ಲಾಗಲಿ ಏನಾದರೂ ಉಂಟೋ” ಎಂದು ಕೇಳಿ,

[28] “ನಿನಗಿರುವ ದುಃಖ ಯಾವುದು” ಎಂದು ಅರಸನು ಕೇಳಿದನು. ಆಗ ಆಕೆಯು, “ಈ ಸ್ತ್ರೀಯು ನನಗೆ, ನಿನ್ನ ಮಗನನ್ನು ತೆಗೆದುಕೊಂಡು ಬಾ, ನಾವು ಈ ಹೊತ್ತು ಅವನನ್ನು ತಿಂದುಬಿಡೋಣ, ನಾಳೆ ನನ್ನ ಮಗನನ್ನು ತಿನ್ನೋಣ” ಎಂದು ಹೇಳಿದ್ದರಿಂದ,

[29] ನಾವಿಬ್ಬರೂ ನನ್ನ ಮಗನನ್ನು ಕೊಂದು ಬೇಯಿಸಿ ತಿಂದು ಬಿಟ್ಟೆವು. ಮರುದಿನ ನಾನು ಆಕೆಗೆ, “ಈ ಹೊತ್ತು ನಿನ್ನ ಮಗನನ್ನು ತೆಗೆದುಕೊಂಡು ಬಾ, ಅವನನ್ನು ಕೊಂದು ತಿನ್ನೋಣ ಅಂದಾಗ ಆಕೆಯು ಅವನನ್ನು ಎಲ್ಲಿಯೋ ಅಡಗಿಸಿಟ್ಟಳು” ಎಂದು ಹೇಳಿದಳು.

[30] ಗೋಡೆಯ ಮೇಲೆ ಹೋಗುತ್ತಿದ್ದ ಅರಸನು ಆ ಸ್ತ್ರೀಯ ಮಾತನ್ನು ಕೇಳಿದೊಡನೆ ತನ್ನ ಬಟ್ಟೆಗಳನ್ನು ಹರಿದುಕೊಂಡನು. ಆಗ ಅವನ ಮೈ ಮೇಲೆ ಗೋಣಿತಟ್ಟು ಇರುವುದು ಜನರಿಗೆ ಕಂಡಿತು.

[31] ಇದಲ್ಲದೆ ಅವನು, “ನಾನು ಈ ಹೊತ್ತು ಶಾಫಾಟನ ಮಗನಾದ ಎಲೀಷನ ತಲೆಯನ್ನು ಅವನ ದೇಹದಿಂದ ಬೇರ್ಪಡಿಸದೆ ಹೋದರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದು ಆಣೆಯಿಟ್ಟುಕೊಂಡನು.

[32] ಎಲೀಷನು ಊರಿನ ಹಿರಿಯರೊಡನೆ ತನ್ನ ಮನೆಯಲ್ಲಿ ಕುಳಿತುಕೊಂಡಿದ್ದನು. ಅರಸನು ತನ್ನ ಹತ್ತಿರವಿದ್ದ ಒಬ್ಬ ಆಳನ್ನು ಕಳುಹಿಸಿದನು. ಅವನು ಇನ್ನೂ ದೂರದಲ್ಲಿರುವಾಗಲೇ ಎಲೀಷನು ಹಿರಿಯರಿಗೆ, “ನೋಡಿರಿ, ಆ ಕೊಲೆಗಾರನ ಮಗನು ನನ್ನ ತಲೆಯನ್ನು ಹಾರಿಸುವುದಕ್ಕೆ ಆಳನ್ನು ಕಳುಹಿಸಿದ್ದಾನೆ. ಆಳು ಇಲ್ಲಿಗೆ ಬಂದ ಕೂಡಲೆ ನೀವು ಬಾಗಿಲನ್ನು ಮುಚ್ಚಿ ಅವನು ಒಳಗೆ ಬಾರದಂತೆ ಅದನ್ನು ಒತ್ತಿ ಹಿಡಿಯಿರಿ. ಅವನ ಹಿಂದೆಯೇ ಬರುತ್ತಿರುವ ಅವನ ಒಡೆಯನ ಕಾಲಿನ ಸಪ್ಪಳವು ಕೇಳಿಸುತ್ತಿದೆಯಲ್ಲಾ” ಎಂದು ಹೇಳಿದನು.

[33] ಅವನು ಅವರೊಡನೆ ಮಾತನಾಡುತ್ತಿರುವಾಗಲೇ, ಸೇವಕನು ಅರಸನೊಂದಿಗೆ ಬಂದನು. ಅರಸನು ಎಲೀಷನಿಗೆ, “ನೋಡು, ಈ ಆಪತ್ತು ಯೆಹೋವನಿಂದಲೇ ಬಂದದ್ದು, ಇನ್ನು ಮುಂದೆ ನಾನೇಕೆ ಆತನನ್ನು ನಿರೀಕ್ಷಿಸಿಕೊಂಡಿರಬೇಕು” ಎಂದನು.

2 ಅರಸುಗಳು — Chapters