[1] ಯೇಸು ಕ್ರಿಸ್ತನ ಅಪೊಸ್ತಲನಾದ ಪೇತ್ರನು ಪೊಂತ, ಗಲಾತ್ಯ, ಕಪ್ಪದೋಕ್ಯ, ಆಸ್ಯ, ಬಿಥೂನ್ಯ ಎಂಬ ಸೀಮೆಗಳಲ್ಲಿ ಚದುರಿಹೋಗಿರುವಂಥ ಪರದೇಶಸ್ಥರಾದ ದೇವಜನರಿಗೆ ಅಂದರೆ,
[2] ಪವಿತ್ರಾತ್ಮನಿಂದ ಪ್ರತಿಷ್ಠಿಸಲ್ಪಟ್ಟವರಾಗಿ, ವಿಧೇಯರಾಗುವುದಕ್ಕಾಗಿ, ಯೇಸು ಕ್ರಿಸ್ತನ ರಕ್ತದಿಂದ ಪ್ರೋಕ್ಷಿತರಾಗಿ, ತಂದೆಯಾದ ದೇವರ ಭವಿಷ್ಯದ ಜ್ಞಾನಾನುಸಾರವಾಗಿ ಆರಿಸಿಕೊಳಲ್ಪಟ್ಟವರಿಗೆ ಬರೆಯುವುದೇನೆಂದರೆ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ಉಂಟಾಗಲಿ.
[3] ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ, ತನ್ನ ಮಹಾ ಕರುಣಾನುಸಾರವಾಗಿ ನಮ್ಮನ್ನು ತಿರುಗಿ ಜೀವಿಸುವಂತೆ ಮಾಡಿ ಜೀವಕರವಾದ ನಿರೀಕ್ಷೆಯನ್ನು ನಮ್ಮಲ್ಲಿ ಹುಟ್ಟಿಸಿ,
[4] ನಮ್ಮನ್ನು ಲಯ, ಕಳಂಕ, ನಾಶಗಳಿಲ್ಲದ ಬಾಧ್ಯತೆಯನ್ನು ಎದುರು ನೋಡುವವರನ್ನಾಗಿ ಮಾಡಿದನು. ಆ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಡಲ್ಪಟ್ಟಿದೆ.
[5] ಅಂತ್ಯ ಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಯು ನಂಬುವವರಾದ ನಿಮಗೆ ದೊರೆಯಬೇಕೆಂದು ದೇವರು ನಿಮ್ಮನ್ನು ತನ್ನ ಶಕ್ತಿಯಿಂದ ಕಾಪಾಡುತ್ತಾನೆ.
[6] ಆದ್ದರಿಂದ ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ವಿಧ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ, ಹರ್ಷಿಸುವವರಾಗಿದ್ದೀರಿ.
[7] ನಾಶವಾಗುವಂತಹದ್ದೂ, ಬೆಂಕಿಯಿಂದ ಶೋಧಿಸುವಂತಹದ್ದೂ ಆಗಿರುವ ಬಂಗಾರಕ್ಕಿಂತಲೂ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವಂತಹದ್ದಾಗಿದೆ.
[8] ನೀವು ಆತನನ್ನು ಕಣ್ಣಾರೆ ನೋಡಲಿಲ್ಲವಾದರೂ ಆತನನ್ನು ಪ್ರೀತಿಸುತ್ತೀರಿ. ನೀವು ಈಗ ಆತನನ್ನು ಕಾಣದಿದ್ದರೂ ಆತನಲ್ಲಿ ನಂಬಿಕೆಯಿಟ್ಟು, ನಿಮ್ಮ ನಂಬಿಕೆಯ ಅಂತ್ಯಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿ ಹೇಳಲಸಾಧ್ಯವಾದಂತಹ ಮಹಿಮೆಯುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.
[10] ದೇವರು ನಿಮಗೆ ತೋರಿಸಿದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.
[11] ತಮ್ಮಲ್ಲಿದ್ದ ಕ್ರಿಸ್ತನ ಆತ್ಮನು ಕ್ರಿಸ್ತನಿಗೆ ಬರಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಯನ್ನೂ ಮುಂದಾಗಿ ತಿಳಿಸಿದಾಗ ಆತನು ಯಾವ ಕಾಲವನ್ನು ಇಲ್ಲವೆ ಎಂಥ ಕಾಲವನ್ನು ಸೂಚಿಸುವನೆಂಬುದನ್ನು ಅವರು ಪರಿಶೋಧನೆ ಮಾಡಿದರು.
[12] ಆದರೆ ಈ ಸಂಗತಿಗಳನ್ನು ಮುಂತಿಳಿಸುವುದರಲ್ಲಿ ತಮಗೋಸ್ಕರವಲ್ಲ ನಿಮಗೋಸ್ಕರವೇ ಸೇವೆ ಮಾಡುವವರಾಗಿದ್ದಾರೆಂಬುದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಲ್ಪಡುತ್ತಿವೆ ಎಂಬ ವರ್ತಮಾನವು ಪರಲೋಕದಿಂದ ಕಳುಹಿಸಲ್ಪಟ್ಟ ಪವಿತ್ರಾತ್ಮನ ಬಲದಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ನಿಮಗೆ ಪ್ರಸಿದ್ಧಿಮಾಡಲ್ಪಟ್ಟಿದೆ. ದೇವದೂತರೂ ಈ ಸಂಗತಿಗಳನ್ನು ಲಕ್ಷ್ಯವಿಟ್ಟು ನೋಡಬೇಕೆಂದು ಬಯಸುತ್ತಿದ್ದಾರೆ.
[13] ಆದ್ದರಿಂದ ನೀವು ನಿಮ್ಮ ಮನಸ್ಸನ್ನು ದೃಢಪಡಿಸಿಕೊಂಡು, ಸ್ವಸ್ಥಚಿತ್ತರಾಗಿದ್ದು ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.
[14] ವಿಧೇಯತ್ವವುಳ್ಳ ಮಕ್ಕಳಂತೆ ನಡೆಯಿರಿ, ನೀವು ಮೊದಲು ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರದೆ,
[15] ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಾಗಿದ್ದು ಆತನಿಗೆ ನಿಮ್ಮ ಎಲ್ಲಾ ನಡವಳಿಕೆಗಳಲ್ಲಿ ಪರಿಶುದ್ಧರಾಗಿರಿ.
[16] ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು” ಎಂದು ಬರೆದಿದೆಯಲ್ಲಾ.
[17] ಪ್ರತಿಯೊಬ್ಬನ ನಡತೆಯನ್ನು ನೋಡಿ ಪಕ್ಷಪಾತವಿಲ್ಲದೆ ತೀರ್ಪುಮಾಡುವಾತನನ್ನು ನೀವು ತಂದೆಯೆಂದು ಕರೆಯುವವರಾಗಿರುವುದರಿಂದ ಈ ಲೋಕದಲ್ಲಿನ ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.
[18] ನಿಮ್ಮ ಪೂರ್ವಿಕರಿಂದ ಬಂದಿರುವ ವ್ಯರ್ಥವಾದ ಸಂಪ್ರದಾಯಗಳ ನಡವಳಿಕೆಗಳಿಂದ ನಿಮಗೆ ಬಿಡುಗಡೆಯನ್ನುಂಟುಮಾಡಿದ್ದು ಬೆಳ್ಳಿ, ಬಂಗಾರ ಮೊದಲಾದ ನಶಿಸಿಹೋಗುವ ವಸ್ತುಗಳಿಂದಲ್ಲ.
[19] ಯೇಸು ಕ್ರಿಸ್ತನೆಂಬ ನಿಷ್ಕಳಂಕವೂ, ನಿರ್ಮಲವೂ ಆದ ಕುರಿಮರಿಯ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
[20] ಆತನು ಜಗದುತ್ಪತ್ತಿಗೆ ಮೊದಲೇ ನೇಮಿಸಲ್ಪಟ್ಟವನಾಗಿದ್ದು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷನಾದನು.
[21] ಆತನನ್ನು ಸತ್ತವರೊಳಗಿಂದ ಎಬ್ಬಿಸಿ ಆತನಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಆತನ ಮೂಲಕ ನಂಬಿಕೆಯಿಟ್ಟವರಾಗಿದ್ದೀರಷ್ಟೆ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿವೆ.
[22] ನೀವು ಸತ್ಯೋಪದೇಶಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಿಮಾಡಿಕೊಂಡದ್ದರಿಂದ ನಿಷ್ಕಪಟವಾದ ಸಹೋದರ ಪ್ರೀತಿಯುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನೊಬ್ಬರು ಶುದ್ಧಹೃದಯದಿಂದಲೂ, ಯಥಾರ್ಥವಾಗಿಯೂ ಪ್ರೀತಿಸಿರಿ.
[23] ಏಕೆಂದರೆ ನೀವು ಹೊಸದಾಗಿ ಹುಟ್ಟಿರುವಂಥದ್ದು ನಾಶವಾಗುವ ವಾಕ್ಯದಿಂದದ್ದಲ್ಲ. ಆದರೆ ನಾಶವಾಗದಂಥ ವಾಕ್ಯದಿಂದಲೇ. ಅದು ಸದಾ ಜೀವವುಳ್ಳ ದೇವರವಾಕ್ಯದ ಮೂಲಕ ಉಂಟಾಯಿತು.
[24] ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಅದರ ಮಹಿಮೆಯೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವುದು. ಅದರ ಹೂವು ಉದುರಿ ಹೋಗುವುದು.
[25] ಆದರೆ ಕರ್ತನ ಮಾತೋ ಸದಾಕಾಲವೂ ಇರುವುದು.” ಆ ಮಾತು ಯಾವುದೆಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.