Skip to content
Opens in a new window
Listen to this chapter • 4:50

[1] ಐಶ್ವರ್ಯವಂತರೇ, ನಿಮಗೆ ಬರುವ ಸಂಕಟಗಳಿಗಾಗಿ ಕಣ್ಣೀರಿಡಿರಿ, ಗೋಳಾಡಿರಿ.

[2] ನಿಮ್ಮ ಐಶ್ವರ್ಯ, ಸಂಪತ್ತು ನಾಶವಾಗಿದೆ. ನಿಮ್ಮ ಬಟ್ಟೆಗಳಿಗೆ ನುಸಿ ಹಿಡಿದಿದೆ.

[3] ನಿಮ್ಮ ಚಿನ್ನ, ಬೆಳ್ಳಿಗಳು ತುಕ್ಕು ಹಿಡಿದು ಮಣ್ಣಿಗೆ ಸಮವಾಗಿದೆ. ಅವುಗಳ ತುಕ್ಕು ನಿಮಗೆ ವಿರೋಧವಾಗಿ ಸಾಕ್ಷಿಯಾಗಿದ್ದು, ಬೆಂಕಿಯಂತೆ ನಿಮ್ಮ ಮಾಂಸವನ್ನು ದಹಿಸಿಬಿಡುವುದು. ಅಂತ್ಯಕಾಲ ಬಂದರೂ ಸಂಪತ್ತನ್ನು ಕೂಡಿಸಿ ಇಟ್ಟುಕೊಂಡಿದ್ದೀರಿ.

[4] ಇಗೋ, ನಿಮ್ಮ ಹೊಲದಲ್ಲಿನ ಪೈರುಗಳನ್ನು ಕೊಯ್ದದವರ ಕೂಲಿಯನ್ನು ಕೊಡದೆ ವಂಚಿಸಿದಿರಿ. ಆ ಕೂಲಿಯ ಕೂಗು ಹಾಗು ಪೈರು ಕೊಯ್ದದವರ ಕೂಗು ಸೇನಾಧೀಶ್ವರನಾದ ಕರ್ತನ ಕಿವಿಗಳನ್ನು ಮುಟ್ಟಿವೆ.

[5] ಭೂಲೋಕದಲ್ಲಿ ನೀವು ಸುಖಭೋಗಿಗಳಾಗಿ ನಿಮ್ಮ ಇಚ್ಛೆಪೂರೈಸಿಕೊಳ್ಳುವವರಾಗಿ ಜೀವಿಸಿದ್ದೀರಿ; ವಧೆಯ ದಿನಕ್ಕಾಗಿಯೋ ಎಂಬಂತೆ ನಿಮ್ಮ ಹೃದಯಗಳನ್ನು ಕೊಬ್ಬಿಸಿಕೊಂಡಿದ್ದೀರಿ.

[6] ನೀವು ನೀತಿವಂತನನ್ನು ಖಂಡಿಸಿ ಕೊಂದು ಹಾಕಿದ್ದೀರಿ; ಅವನಾದರೋ ನಿಮ್ಮನ್ನು ವಿರೋಧಿಸುತ್ತಿಲ್ಲ.

[7] ಸಹೋದರರೇ, ಕರ್ತನು ಬರುವ ತನಕ ತಾಳ್ಮೆಯಿಂದಿರಿ. ವ್ಯವಸಾಯಮಾಡುವವರನ್ನು ನೋಡಿರಿ, ಅವನು ಭೂಮಿಯ ಬೆಲೆಬಾಳುವ ಫಲಕ್ಕಾಗಿ ಕಾದಿದ್ದು ಮುಂಗಾರು, ಹಿಂಗಾರು ಮಳೆಗಳು ಬರುವ ತನಕ ತಾಳ್ಮೆಯಿಂದಿರುವನು.

[8] ನೀವೂ ತಾಳ್ಮೆಯಿಂದಿರಿ, ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ; ಏಕೆಂದರೆ ಕರ್ತನ ಬರೋಣವು ಹತ್ತಿರವಾಯಿತು.

[9] ಸಹೋದರರೇ, ನೀವು ಒಬ್ಬರ ಮೇಲೊಬ್ಬರು ಆಪವಾದನೆ ಮಾಡಬೇಡಿರಿ; ಇದರಿಂದ ನ್ಯಾಯವಿಚಾರಣೆಗೆ ಗುರಿಯಾದಿರಿ. ಅಗೋ, ನ್ಯಾಯಾಧಿಪತಿಯು ಬಾಗಿಲಿನ ಮುಂದೆಯೇ ನಿಂತಿದ್ದಾನೆ.

[10] ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಲ್ಲಿ ಮಾತನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ.

[11] ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಪರಿಗಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣಾಸಾಗರನೂ ಮತ್ತು ದಯಾಳುವೂ ಆಗಿದ್ದಾನೆಂದು ತಿಳಿದಿರುವಿರಿ.

[12] ಮುಖ್ಯವಾಗಿ ನನ್ನ ಸಹೋದರರೇ, ಆಣೆಯಿಡಲೇ ಬೇಡಿರಿ. ಆಕಾಶದ ಮೇಲಾಗಲಿ, ಭೂಮಿಯ ಮೇಲಾಗಲಿ, ಇನ್ಯಾವುದರ ಮೇಲಾಗಲಿ ಆಣೆಯಿಡಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವುದಿಲ್ಲ.

[13] ನಿಮ್ಮಲ್ಲಿ ಯಾವನಾದರೂ ಬಾಧೆಪಡುವವನು ಇದ್ದರೆ, ಅವನು ದೇವರನ್ನು ನಂಬಿಕೆಯಿಂದ ಪ್ರಾರ್ಥಿಸಲಿ. ನಿಮ್ಮಲ್ಲಿ ಯಾವನಾದರೂ ಸಂತೋಷಪಡುವವನು ಇದ್ದರೆ, ಅವನು ದೇವರಿಗೆ ಸ್ತುತಿಗೀತೆಗಳನ್ನು ಹಾಡಲಿ.

[14] ನಿಮ್ಮಲ್ಲಿ ಯಾವನಾದರೂ ಅಸ್ವಸ್ಥನಾಗಿರುವವನು ಇದ್ದರೆ, ಅವನು ಸಭೆಯ ಹಿರಿಯರನ್ನು ಕರೆದು ಪ್ರಾರ್ಥಿಸುವಂತೆ ವಿನಂತಿಸಲಿ. ಅವರು ಕರ್ತನ ಹೆಸರಿನಲ್ಲಿ ಅವನಿಗೆ ಎಣ್ಣೆ ಹಚ್ಚಿ ಅವನಿಗೋಸ್ಕರ ದೇವರನ್ನು ಪ್ರಾರ್ಥಿಸಲಿ.

[15] ನಂಬಿಕೆಯಿಂದ ಮಾಡಿದ ಪ್ರಾರ್ಥನೆಯು ರೋಗಿಯನ್ನು ಗುಣಪಡಿಸುವುದು ಮತ್ತು ಕರ್ತನು ಅವನನ್ನು ಎಬ್ಬಿಸುವನು; ಅವನು ಪಾಪ ಮಾಡಿದವನಾಗಿದ್ದರೆ, ದೇವರು ಆ ಪಾಪಗಳನ್ನು ಕ್ಷಮಿಸುವನು.

[16] ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ,, ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ. ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಸಾಮರ್ಥ್ಯವುಳ್ಳದಾಗಿರುತ್ತದೆ.

[17] ಎಲೀಯನು ನಮಗೆ ಸಮಾನವಾದ ಸ್ವಭಾವವುಳ್ಳವನಾಗಿದ್ದನು, ಅವನು ಮಳೆ ಬರಬಾರದೆಂದು ಭಕ್ತಿಯಿಂದ ಪ್ರಾರ್ಥಿಸಲು ಮೂರು ವರ್ಷ ಆರು ತಿಂಗಳವರೆಗೂ ಭೂಮಿಯ ಮೇಲೆ ಮಳೆ ಬೀಳಲಿಲ್ಲ.

[18] ತಿರುಗಿ ಅವನು ಪ್ರಾರ್ಥನೆ ಮಾಡಲು ಆಕಾಶವು ಮಳೆಗರೆಯಿತು, ಭೂಮಿಯು ಫಲಕೊಟ್ಟಿತು.

[19] ನನ್ನ ಸಹೋದರರೇ, ನಿಮ್ಮಲ್ಲಿ ಯಾರಾದರು ಸತ್ಯ ಮಾರ್ಗವನ್ನು ಬಿಟ್ಟು ತಪ್ಪಿ ನಡೆಯುತ್ತಿದ್ದರೆ ಮತ್ತೊಬ್ಬನು ಅವನನ್ನು ಸನ್ಮಾರ್ಗಕ್ಕೆ ತಂದರೆ;

[20] ಒಬ್ಬ ಪಾಪಿಯನ್ನು ತಪ್ಪಾದ ಮಾರ್ಗದಿಂದ ತಪ್ಪಿಸಿ, ಪರಿವರ್ತಿಸಿ ಅವನ ಆತ್ಮವನ್ನು ಮರಣದಿಂದ ತಪ್ಪಿಸಿ ಬಹು ಪಾಪಗಳನ್ನು ಮುಚ್ಚಿದವನಾದನೆಂದು ತಿಳಿದುಕೊಳ್ಳಲ್ಲಿ.

ಯಾಕೋಬನು — Chapters