[1] ಆದಕಾರಣ ಎಲ್ಲಾ ಕೆಟ್ಟತನವನ್ನೂ, ಎಲ್ಲಾ ವಂಚನೆಯನ್ನೂ, ಕಪಟವನ್ನೂ, ಹೊಟ್ಟೆಕಿಚ್ಚನ್ನೂ, ಎಲ್ಲಾ ತರದ ದೂಷಣೆಯನ್ನು ವಿಸರ್ಜಿಸಿರಿ.
[2] ಹೊಸದಾಗಿ ಹುಟ್ಟಿದ ಶಿಶುಗಳಂತೆ ನೀವು ದೇವರ ವಾಕ್ಯವೆಂಬ ಶುದ್ಧವಾದ ಆತ್ಮೀಕ ಹಾಲನ್ನು ಬಯಸಿರಿ. ಆದರಿಂದ ರಕ್ಷಣೆಯಲ್ಲಿ ಬೆಳೆಯುವಿರಿ.
[3] ಏಕೆಂದರೆ ಕರ್ತನು ದಯಾಪರನೆಂದು ನೀವು ಅನುಭವಿಸಿ ತಿಳಿದಿದ್ದೀರಿ.
[4] ನೀವು ಜೀವವುಳ್ಳ ಕಲ್ಲಾಗಿರುವಾತನ ಬಳಿಗೆ ಬಂದಿದ್ದೀರಿ. ಆ ಕಲ್ಲನ್ನು ಜನರು ನಿರಾಕರಿಸಿದರು ಆದರೆ ಅದು ದೇವರಿಂದ ಆರಿಸಿಕೊಳ್ಳಲ್ಪಟ್ಟದು ಮತ್ತು ಆತನಿಗೆ ಅಮೂಲ್ಯವಾದದ್ದು ಆಗಿದೆ.
[5] ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮೀಕವಾದ ಮಂದಿರವಾಗುವುದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ. ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕವಾದ ಆತ್ಮೀಕ ಯಜ್ಞಗಳನ್ನು ಸಮರ್ಪಿಸುವುದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.
[6] “ಇಗೋ, ಚೀಯೋನಿನಲ್ಲಿ ಮೂಲೆಗಲ್ಲನ್ನು ಇಡುತ್ತೇನೆ. ಅದು ಆರಿಸಿಕೊಳ್ಳಲ್ಪಟ್ಟದ್ದೂ ಮತ್ತು ಅತ್ಯಮೂಲ್ಯವಾದದ್ದೂ. ಆತನ ಮೇಲೆ ನಂಬಿಕೆಯಿಡುವವನು ಅವಮಾನಪಡುವುದೇ ಇಲ್ಲ” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
[7] ಆದ್ದರಿಂದ ನಂಬುವವರಾದ ನಿಮಗೇ ಈ ಕಲ್ಲು ಅತ್ಯಮೂಲ್ಯವಾದುದು. ಆದರೆ ನಂಬದೆಯಿರುವವರಿಗೆ, “ಮನೆಕಟ್ಟುವವರು ಬೇಡವೆಂದು ತಿರಸ್ಕರಿಸಲ್ಪಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು”
[8] ಮತ್ತು ಪವಿತ್ರಗ್ರಂಥದಲ್ಲಿ ಇನ್ನೊಂದೆಡೆ ಬರೆದಿರುವುದೇನಂದರೆ, “ಅದು ಜನರು ಎಡವುವ ಕಲ್ಲು ಮುಗ್ಗರಿಸುವ ಬಂಡೆ.” ಅವರು ದೇವರ ವಾಕ್ಯಕ್ಕೆ ಅವಿಧೇಯರಾದ್ದರಿಂದ ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರನ್ನು ನೇಮಿಸಲಾಗಿದೆ.
[9] ನಿಮ್ಮನ್ನು ಕತ್ತಲೆಯೊಳಗಿನಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನು ಪ್ರಚಾರಮಾಡುವವರಾಗುವಂತೆ ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಪರಿಶುದ್ಧ ಜನಾಂಗವೂ, ದೇವರ ಸ್ವಕೀಯ ಜನರೂ ಆಗಿದ್ದೀರಿ.
[10] ಮೊದಲು ನೀವು ಪ್ರಜೆಯಾಗಿರಲಿಲ್ಲ. ಈಗಲಾದರೂ ದೇವರ ಸ್ವಕೀಯಪ್ರಜೆಯಾಗಿದ್ದೀರಿ. ಮೊದಲು ನೀವು ಕರುಣೆ ಹೊಂದಿದವರಾಗಿರಲಿಲ್ಲ. ಈಗಲಾದರೂ ಕರುಣೆ ಹೊಂದಿದವರಾಗಿದ್ದೀರಿ.
[11] ಪ್ರಿಯರೇ, ಪ್ರವಾಸಿಗಳು ಮತ್ತು ಪರದೇಶಸ್ಥರು ಆಗಿರುವ ನೀವು ನಿಮ್ಮ ಆತ್ಮದ ವಿರುದ್ಧವಾಗಿ ಯುದ್ಧ ಮಾಡುವ ಶಾರೀರಿಕ ದುರಾಶೆಗಳಿಗೆ ದೂರವಾಗಿರಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
[12] ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ, ಆಗ ಅವರು ಯಾವ ಸಂಗತಿಗಳನ್ನು ಕುರಿತಾಗಿ ನಿಮ್ಮನ್ನು ಕೆಟ್ಟವರೆಂದು ನಿಂದಿಸುತ್ತಾರೋ ಆ ನಿಮ್ಮ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ಆತನ ಬರೋಣದ ದಿನದಲ್ಲಿ ಅವರು ದೇವರನ್ನು ಕೊಂಡಾಡುವರು.
[13] ಮನುಷ್ಯರು ನೇಮಿಸಿರುವ ಪ್ರತಿಯೊಂದು ಅಧಿಕಾರಕ್ಕೂ ಕರ್ತನ ನಿಮಿತ್ತ ನೀವು ಅಧೀನರಾಗಿರಿ. ಸರ್ವಾಧಿಕಾರಿಯಾಗಿರುವ ಅರಸನಿಗಾಗಲಿ
[14] ಅಥವಾ ಅರಸನಿಂದ ಕೆಟ್ಟ ನಡತೆಯುಳ್ಳವರನ್ನು ದಂಡಿಸುವುದಕ್ಕೂ ಒಳ್ಳೆ ನಡತೆಯುಳ್ಳವರನ್ನು ಪ್ರೋತ್ಸಾಹಪಡಿಸುವುದಕ್ಕೂ ಕಳುಹಿಸಲ್ಪಟ್ಟಂಥ ಅಧಿಪತಿಗಳಿಗಾಗಲಿ ನೀವು ಅಧೀನರಾಗಿರಿ.
[15] ತಿಳಿವಳಿಕೆಯಿಲ್ಲದೆ ಮಾತನಾಡುವ ಮೂಢ ಜನರ ಬಾಯನ್ನು ನೀವು ಒಳ್ಳೆ ನಡತೆಯಿಂದ ಮುಚ್ಚಿಸಬೇಕೆಂಬುದು ದೇವರ ಚಿತ್ತ.
[16] ಸ್ವತಂತ್ರರಂತೆ ನಡೆದುಕೊಳ್ಳಿರಿ, ಆದರೆ ಕೆಟ್ಟತನವನ್ನು ಮರೆಮಾಡುವುದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಡಿರಿ, ಆದರೆ ನೀವು ದೇವರ ದಾಸರಂತೆ ನಡೆದುಕೊಳ್ಳಿರಿ.
[17] ಎಲ್ಲರನ್ನೂ ಸನ್ಮಾನಿಸಿರಿ. ಸಹೋದರರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ. ಅರಸನನ್ನು ಗೌರವಿಸಿರಿ.
[18] ಸೇವಕರೇ, ನಿಮ್ಮ ಯಜಮಾನರಿಗೆ ಪೂರ್ಣ ಗೌರವದಿಂದ ಅಧೀನರಾಗಿರಿ. ಒಳ್ಳೆಯವರೂ ಸಾತ್ವಿಕರೂ ಆಗಿರುವವರಿಗೆ ಮಾತ್ರವಲ್ಲದೆ ವಕ್ರಬುದ್ಧಿಯುಳ್ಳವರಿಗೂ ವಿಧೇಯರಾಗಿರಿ.
[19] ಒಬ್ಬನು ಅನ್ಯಾಯವಾಗಿ ಬಾಧೆಪಡುವವನಾಗಿದ್ದು ದೇವರು ನೋಡುತ್ತಾನೆಂದು ಅರಿತು ಆ ಕಷ್ಟವನ್ನು ಸಹಿಸಿಕೊಂಡರೆ ಅದು ಶ್ಲಾಘ್ಯವಾಗಿದೆ.
[20] ತಪ್ಪುಮಾಡಿ ಗುದ್ದು ತಿನ್ನುವುದರಲ್ಲಿ ನೀವು ಸಹಿಸಿಕೊಂಡರೆ ಅದರಿಂದೇನು ಕೀರ್ತಿ? ಆದರೆ ಒಳ್ಳೆಯದನ್ನು ಮಾಡಿ ಬಾಧೆಪಡುವುದರಲ್ಲಿ ನೀವು ಸಹಿಸಿಕೊಂಡರೆ ಅದು ದೇವರ ಮುಂದೆ ಶ್ಲಾಘ್ಯವಾಗಿದೆ.
[21] ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿದ್ದೀರಿ. ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ಆತನ ಹೆಜ್ಜೆಯ ಜಾಡಿಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.
[22] ಆತನು ಯಾವ ಪಾಪವನ್ನೂ ಮಾಡಲಿಲ್ಲ, ಆತನ ಬಾಯಲ್ಲಿ ಯಾವ ವಂಚನೆಯೂ ಸಿಕ್ಕಲಿಲ್ಲ.
[23] ಬಯ್ಯುವವರನ್ನು ಆತನು ಪ್ರತಿಯಾಗಿ ಬಯ್ಯಲಿಲ್ಲ, ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ, ನ್ಯಾಯವಾಗಿ ತೀರ್ಪು ಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.
[24] ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಶಿಲುಬೆಯನ್ನು ಏರಿ ಮರಣ ಹೊಂದಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
[25] ನೀವು ದಾರಿತಪ್ಪಿದ ಕುರಿಗಳಂತೆ ಇದ್ದವರು. ಆದರೆ ಈಗ ನೀವು ತಿರುಗಿಕೊಂಡು ನಿಮ್ಮ ಆತ್ಮಗಳ ಕುರುಬನೂ ಪಾಲಕನೂ ಆಗಿರುವಾತನ ಬಳಿಗೆ ಬಂದಿದ್ದೀರಿ.