Skip to content
Opens in a new window
Listen to this chapter • 5:24

[1] ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಪತಿಯರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ, ಗೌರವದಿಂದಲೂ ನಡೆದುಕೊಳ್ಳುವುದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಪತ್ನಿಯರಾದ ನಿಮ್ಮ ಒಳ್ಳೆಯ ನಡತೆಗಳಿಂದಲೇ ಸನ್ಮಾರ್ಗಕ್ಕೆ ಬಂದಾರು.

[3] ಜಡೆ ಹೆಣೆದುಕೊಳ್ಳುವುದೂ, ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವುದೂ, ಬೆಲೆಬಾಳುವ ವಸ್ತ್ರಗಳನ್ನು ಧರಿಸಿಕೊಳ್ಳುವುದೂ ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು.

[4] ಆದರೆ ದೇವರ ದೃಷ್ಟಿಯಲ್ಲಿ ಅಮೂಲ್ಯವಾದದ್ದೂ ಮತ್ತು ಶಾಶ್ವತವಾದದ್ದೂ ಆಗಿರುವ ಸಾತ್ವಿಕತೆ ಮತ್ತು ಶಾಂತಮನಸ್ಸು ಎಂಬ ಆಂತರ್ಯದ ಭೂಷಣವೇ ನಿಮ್ಮ ಅಲಂಕಾರವಾಗಿರಲಿ.

[5] ಪೂರ್ವ ಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯನ್ನಿಟ್ಟಿದ್ದ ಭಕ್ತೆಯರಾದ ಸ್ತ್ರೀಯರೂ ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡಿದ್ದರು. ಅವರು ತಮ್ಮ ತಮ್ಮ ಗಂಡಂದಿರಿಗೆ ಅಧೀನರಾಗಿದ್ದರು.

[6] ಸಾರಳು ಹಾಗೆಯೇ ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಒಳ್ಳೆಯದನ್ನು ಮಾಡುತ್ತಾ ಯಾವ ಭೀತಿಗೂ ಭಯಪಡುವುದಿಲ್ಲವಾದರೆ ನೀವು ಆಕೆಯ ಕುವರಿಯರೇ ಆಗುವಿರಿ.

[7] ಅದೇ ರೀತಿಯಾಗಿ ಪತಿಯರೇ, ಸ್ತ್ರೀಯು ನಿಮ್ಮಗಿಂತ ಬಲಹೀನಳೆಂಬುದನ್ನು ತಿಳಿದುಕೊಂಡು, ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ನಡೆದುಕೊಳ್ಳಿರಿ, ಅವರು ನಿತ್ಯಜೀವ ವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಗೌರವವನ್ನು ಸಲ್ಲಿಸಿರಿ. ಹೀಗೆ ಮಾಡಿದರೆ ನಿಮ್ಮ ಪ್ರಾರ್ಥನೆಗಳಿಗೆ ಅಡಚಣೆ ಉಂಟಾಗುವುದಿಲ್ಲ.

[8] ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ, ಪರಸ್ಪರ ಅನುಕಂಪವುಳ್ಳವರಾಗಿರಿ, ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ, ಕರುಣೆಯೂ, ದೀನಭಾವವೂ ಉಳ್ಳವರಾಗಿರಿ.

[9] ಅಪಕಾರಕ್ಕೆ ಅಪಕಾರವನ್ನು, ನಿಂದೆಗೆ ನಿಂದೆಯನ್ನು ಮಾಡದೇ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದಿದ್ದಾನಲ್ಲಾ. ಹೀಗೆ ಮಾಡುವುದಾದರೆ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರಿ.

[10] ಏಕೆಂದರೆ ಪವಿತ್ರಗ್ರಂಥದಲ್ಲಿ ಬರೆದಿರುವಂತೆ, “ಜೀವವನ್ನು ಬಯಸುತ್ತಾ ಸುದಿನಗಳನ್ನು ನೋಡುವುದಕ್ಕೆ ಕಾದಿರುವಾತನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನು ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನು ಬಿಗಿಹಿಡಿದುಕೊಳ್ಳಲಿ.

[11] ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆದನ್ನು ಮಾಡಲಿ. ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಲಿ.

[12] ಏಕೆಂದರೆ ಕರ್ತನು ನೀತಿವಂತರನ್ನು ಕಟಾಕ್ಷಿಸುತ್ತಾನೆ ಮತ್ತು ಆತನು ಅವರ ವಿಜ್ಞಾಪನೆಗಳಿಗೆ ಕಿವಿಗೊಡುತ್ತಾನೆ. ಆದರೆ ಕೆಡುಕರಿಗೋ ಕರ್ತನು ವಿಮುಖನಾಗಿರುತ್ತಾನೆ.”

[13] ನೀವು ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?

[14] ಒಂದು ವೇಳೆ ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಕೆಗೆ ಹೆದರಬೇಡಿರಿ, ಕಳವಳಪಡಬೇಡಿರಿ.

[15] ಆದರೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೆನೆಂದು ಕೇಳುವವರೆಲ್ಲರಿಗೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧರಾಗಿರಿ. ಆದರೆ ಅದನ್ನು ಸಾತ್ವಿಕತ್ವದಿಂದಲೂ ಮತ್ತು ಗೌರವದಿಂದಲೂ ಹೇಳಿರಿ.

[16] ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ ಆಗ ಕ್ರಿಸ್ತನಲ್ಲಿರುವ ನಿಮ್ಮ ಒಳ್ಳೆಯ ನಡತೆಯನ್ನು ಕುರಿತು ಕೆಟ್ಟಮಾತುಗಳನ್ನಾಡುವವರು ನಿಮ್ಮನ್ನು ನಿಂದಿಸುವುದಕ್ಕೆ ನಾಚಿಕೆಪಡುವರು.

[17] ಕೆಟ್ಟ ನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತಲೂ ಒಳ್ಳೆ ನಡತೆಯುಳ್ಳವರಾಗಿಯೇ ದೇವರ ಚಿತ್ತದ ಪ್ರಕಾರ ಬಾಧೆಪಡುವುದು ಉತ್ತಮ.

[18] ಕ್ರಿಸ್ತನು ಸಹ ನೀತಿವಂತನಾಗಿದ್ದು ಅನೀತಿವಂತರಿಗೋಸ್ಕರ ಪ್ರಾಣ ಕೊಟ್ಟು ನಮ್ಮನ್ನು ದೇವರ ಬಳಿಗೆ ಸೇರಿಸುವುದಕ್ಕಾಗಿ ಒಂದೇ ಸಾರಿ ಪಾಪನಿವಾರಣೆಗೋಸ್ಕರ ಬಾಧೆಪಟ್ಟು ಸತ್ತನು. ಆತನು ಶರೀರಸಂಬಂಧವಾಗಿ ಕೊಲ್ಲಲ್ಪಟ್ಟು, ಆತ್ಮ ಸಂಬಂಧವಾಗಿ ತಿರುಗಿ ಬದುಕುವವನಾದನು.

[19] ಇದಲ್ಲದೆ ಆತನು ಆತ್ಮರೂಪನಾಗಿ ಸೆರೆಯಲ್ಲಿದ್ದ ಆತ್ಮಗಳ ಬಳಿಗೆ ಹೋಗಿ ಸುವಾರ್ತೆಯನ್ನು ಸಾರಿದನು.

[20] ಅಂದರೆ ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ ಅವರು ಆತನಿಗೆ ಅವಿಧೇಯರಾಗಿದ್ದರು. ಆ ನಾವೆಯೊಳಗೆ ಸೇರಿದ ಎಂಟು ಜನರು ಮಾತ್ರ ನೀರಿನೊಳಗಿನಿಂದ ರಕ್ಷಿಸಲ್ಪಟ್ಟರು.

[21] ಆ ನೀರಿಗೆ ಅನುರೂಪವಾದ ದೀಕ್ಷಾಸ್ನಾನವು ಯೇಸು ಕ್ರಿಸ್ತನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ದೇಹದ ಮೇಲಿನ ಕೊಳೆಯನ್ನು ಹೊಗಲಾಡಿಸುವಂಥದ್ದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿ ಬೇಕೆಂದು ದೇವರಿಗೆ ವಿಜ್ಞಾಪಿಸಿಕೊಳ್ಳುವಂಥದಾಗಿದೆ.

[22] ಆತನು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾನೆ, ದೇವದೂತರು, ಅಧಿಕಾರಿಗಳು ಮತ್ತು ಶಕ್ತಿಗಳೂ ಆತನ ಸ್ವಾಧೀನವಾಗಿವೆ.

1 ಪೇತ್ರನು — Chapters