[1] ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.
[2] ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು.
[3] ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.
[4] ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
[5] ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.
[6] ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
[7] ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.
[8] ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
[9] ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
[10] ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.
[11] ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.
[12] ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.
[13] ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ
[14] ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.
[15] ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.
[16] ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
[17] ನ್ಯಾಯವಿಚಾರಣೆಯ ಸಮಯ ಬಂದಿದೆ. ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?
[18] ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?
[19] ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.