[1] ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿದ ನಂತರ,
[2] ಯೆಹೋವನು ಅವನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದಂತೆ ಎರಡನೆಯ ಸಾರಿ ಪ್ರತ್ಯಕ್ಷನಾದನು.
[3] ಆತನು ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ, ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.
[4] ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,
[5] ಇಸ್ರಾಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು. ‘ಇಸ್ರಾಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
[6] ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿಯುವುದಾದರೆ
[7] ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.
[8] ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.
[9] ಆಗ ಈ ದೇಶದವರು ಅವರಿಗೆ, ‘ನಮ್ಮ ಪೂರ್ವಿಕರನ್ನು ಐಗುಪ್ತದಿಂದ ಬರಮಾಡಿದ ದೇವರಾದ ಯೆಹೋವನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದಲೇ ಯೆಹೋವನು ಈ ಎಲ್ಲಾ ಆಪತ್ತನ್ನು ಬರಮಾಡಿದ್ದಾನೆ’ ಎಂಬ ಉತ್ತರ ಹೇಳುವರು” ಎಂದನು.
[10] ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.
[11] ಆನಂತರ ಅವನು ತನಗೆ ಬೇಕಾದಷ್ಟು ದೇವದಾರುಮರಗಳನ್ನೂ, ತುರಾಯಿಮರಗಳನ್ನೂ ಮತ್ತು ಬಂಗಾರವನ್ನೂ ಕೊಟ್ಟಂಥ ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತ್ಯದಲ್ಲಿ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.
[12] ಹೀರಾಮನು ತೂರಿನಿಂದ ಬಂದು ಆ ಪಟ್ಟಣಗಳನ್ನು ನೋಡಲು ಅವು ಅವನಿಗೆ ಮೆಚ್ಚಿಗೆಯಾಗಲಿಲ್ಲ.
[13] ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೇ?” ಎಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.
[14] ಹೀರಾಮನು ಸೊಲೊಮೋನನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನು ಕೊಟ್ಟನು.
[15] ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.
[16] ಐಗುಪ್ತದ ಅರಸನಾದ ಫರೋಹನು ಗೆಜೆರ್ ಪಟ್ಟಣವನ್ನು ಹಿಡಿದು ಅದಕ್ಕೆ ಬೆಂಕಿಹೊತ್ತಿಸಿ, ಅದರಲ್ಲಿದ್ದ ಕಾನಾನ್ಯರನ್ನು ಹತಿಸಿ, ಅದನ್ನು ವಶಮಾಡಿಕೊಂಡು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟಿದ್ದನು.
[17] ಸೊಲೊಮೋನನು ಗೆಜೆರ್ ಪಟ್ಟಣದ ಹೊರತಾಗಿ ಕೆಳಗಿನ ಬೆತ್ ಹೋರೋನ್,
[18] ಯೆಹೂದದ ಅರಣ್ಯಪ್ರದೇಶದಲ್ಲಿರುವ ಬಾಲಾತ್ ಮತ್ತು ತಾಮಾರ್,
[19] ತನ್ನ ಎಲ್ಲಾ ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು, ರಾಹುತರ ಪಟ್ಟಣಗಳು ಇವುಗಳನ್ನೂ ಕಟ್ಟಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.
[20] ಇದಲ್ಲದೆ ಅವನು ಇಸ್ರಾಯೇಲರಿಂದ ಸಂಹೃತರಾದ ಅನ್ಯ ಜನರನ್ನೂ, ಕಾನಾನ್ ದೇಶದಲ್ಲಿ ಉಳಿದ ಅಮೋರಿಯ, ಹಿತ್ತಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ,
[21] ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನು ತನ್ನ ಕೆಲಸಕ್ಕಾಗಿ ಬಿಟ್ಟೀಹಿಡಿದನು. ಇಂದಿನ ವರೆಗೂ ಅವರು ಬಿಟ್ಟೀಕೆಲಸದವರಾಗಿರುತ್ತಾರೆ.
[22] ಆದರೆ ಅವನು ಇಸ್ರಾಯೇಲರನ್ನು ಬಿಟ್ಟೀಹಿಡಿಯಲಿಲ್ಲ. ಅವರನ್ನು ಸೈನಿಕರನ್ನಾಗಿಯೂ, ಪರಿವಾರದವರನ್ನಾಗಿಯೂ ಅಧಿಪತಿಗಳನ್ನಾಗಿಯೂ, ಸರದಾರರನ್ನಾಗಿಯೂ, ರಥಾಶ್ವಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.
[23] ಇದಲ್ಲದೆ ಅವನು ಬಿಟ್ಟೀಕೆಲಸ ಮಾಡುವವರ ಮೇಲೆ ಐನೂರೈವತ್ತು ಮಂದಿ ಇಸ್ರಾಯೇಲರನ್ನು ಅಧಿಕಾರಿಗಳನ್ನಾಗಿಯೂ ನೇಮಿಸಿದನು.
[24] ಫರೋಹನ ಮಗಳು ದಾವೀದನಗರದಿಂದ ತನಗೋಸ್ಕರ ಕಟ್ಟಿಸಿದ ಅರಮನೆಗೆ ಬಂದಳು. ಅನಂತರ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.
[25] ಸೊಲೊಮೋನನು ಯೆಹೋವನ ಆಲಯದ ಮುಂದೆ ತಾನು ಯೆಹೋವನಿಗೋಸ್ಕರ ಕಟ್ಟಿಸಿದ ಯಜ್ಞವೇದಿಯ ಮೇಲೆ ವರ್ಷಕ್ಕೆ ಮೂರು ಸಾರಿ ಸರ್ವಾಂಗಹೋಮ, ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸಿ ಧೂಪಹಾಕುತ್ತಿದ್ದನು. ಹೀಗೆ ಅವನು ದೇವಾಲಯವನ್ನು ಕಟ್ಟಿ ಸಂಪೂರ್ಣಗೊಳಿಸಿದನು.
[26] ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದಲ್ಲಿ ಏಲೋತಿನ ಹತ್ತಿರ ಕೆಂಪುಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.
[27] ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರೊಡನೆ ಆ ಹಡಗುಗಳಲ್ಲಿ ಕಳುಹಿಸಿದನು.
[28] ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರಿಪ್ಪತ್ತು ತಲಾಂತು ಬಂಗಾರವನ್ನು ತೆಗೆದುಕೊಂಡು ಬಂದರು.