Skip to content
Opens in a new window
Listen to this chapter • 9:18

[1] ಸೊಲೊಮೋನನು ತನ್ನ ಅರಮನೆಯನ್ನು ಹದಿಮೂರು ವರ್ಷಗಳಲ್ಲಿ ಕಟ್ಟಿಸಿ ಮುಗಿಸಿದನು.

[2] ಅವನು ಕಟ್ಟಿಸಿದ ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರವು ನೂರು ಮೊಳ ಉದ್ದ, ಐವತ್ತು ಮೊಳ ಅಗಲ ಮತ್ತು ಮೂವತ್ತು ಮೊಳ ಎತ್ತರವಾಗಿತ್ತು. ಅದರ ಮಾಳಿಗೆಗೆ ದೇವದಾರಿನ ಮೂರು ಸಾಲು ಕಂಬಗಳೂ, ಅವುಗಳ ಮೇಲೆ ಇಡಲ್ಪಟ್ಟ ದೇವದಾರಿನ ತೊಲೆಗಳೂ ಅದಕ್ಕೆ ಆಧಾರವಾಗಿದ್ದವು.

[3] ಸ್ತಂಭಗಳ ಮೇಲಿರುವ ತೊಲೆಗಳ ಮೇಲೆ ದೇವದಾರಿನ ಹಲಿಗೆಗಳಿಂದ ಮಾಡಿದ ಮಾಳಿಗೆಯಿತ್ತು. ಸ್ತಂಭಗಳು ಪ್ರತಿಯೊಂದು ಸಾಲಿನಲ್ಲಿ ಹದಿನೈದರಂತೆ ಒಟ್ಟು ನಲ್ವತ್ತೈದು ಇದ್ದವು.

[4] ಬೆಳಕು ಎದುರೆದುರಾಗಿ ಬೀಳುವಂತೆ ಎರಡು ಗೋಡೆಗಳಿಗೆ ಮೂರು ಮೂರು ಸಾಲು ಬೆಳಕಿನ ಕಿಟಕಿಗಳಿದ್ದವು

[5] ಎಲ್ಲಾ ದ್ವಾರಗಳೂ, ಬೆಳಕಿನ ಕಿಟಕಿಗಳೂ ಚತುಷ್ಕೋಣದ ಆಕಾರವುಳ್ಳವುಗಳಾಗಿದ್ದವು. ಮೂರು ಮೂರು ಸಾಲು ಬೆಳಕಿನ ಕಿಟಕಿಗಳು ಎದುರುಬದುರಾಗಿದ್ದವು.

[6] ಇದಲ್ಲದೆ ಸೊಲೊಮೋನನು ಒಂದು ಕಂಬ ಮಂಟಪವನ್ನು ಕಟ್ಟಿಸಿದನು. ಅದರ ಉದ್ದ ಐವತ್ತು ಮೊಳ, ಅಗಲ ಮೂವತ್ತು ಮೊಳ. ಅದರ ಮುಂದುಗಡೆಯಲ್ಲಿ ಒಂದು ಪಡಸಾಲೆಯಿತ್ತು. ಆ ಪಡಸಾಲೆಗೆ ಕಂಬಗಳೂ ಮೆಟ್ಟಲುಗಳೂ ಇದ್ದವು.

[7] ಇದಲ್ಲದೆ ಅವನು ಸಿಂಹಾಸನ ಮಂದಿರವನ್ನು ಕಟ್ಟಿಸಿದನು. ಅವನು ಅಲ್ಲಿ ನ್ಯಾಯತೀರ್ಮಾನ ಮಾಡುತ್ತಿದ್ದರಿಂದ ಅದಕ್ಕೆ ನ್ಯಾಯಮಂದಿರವೆಂತಲೂ ಹೆಸರಾಯಿತು. ಇದರ ಎಲ್ಲಾ ಗೋಡೆಗಳೂ ನೆಲದಿಂದ ಮಾಳಿಗೆಯ ವರೆಗೆ ದೇವದಾರು ಮರದ ಹಲಿಗೆಗಳಿಂದ ಹೊದಿಸಲ್ಪಟ್ಟಿದ್ದವು.

[8] ನ್ಯಾಯಮಂದಿರದ ಹಿಂದಿನ ಪ್ರಾಕಾರದಲ್ಲಿ ತನ್ನ ವಾಸಕ್ಕಾಗಿ ಅರಮನೆಯನ್ನೂ, ತನ್ನ ಹೆಂಡತಿಯಾದ ಫರೋಹನ ಮಗಳಿಗೋಸ್ಕರ ಇನ್ನೊಂದು ಮನೆಯನ್ನು ಕಟ್ಟಿಸಿದನು. ಅದನ್ನು ನ್ಯಾಯಮಂದಿರದ ಹಾಗೆಯೇ ಇವುಗಳನ್ನು ಕಟ್ಟಿಸಿದನು.

[9] ಈ ಎಲ್ಲಾ ಮಂದಿರಗಳನ್ನೂ ಅವುಗಳ ಸುತ್ತು ಗೋಡೆಯನ್ನೂ, ದೊಡ್ಡ ಪ್ರಾಕಾರದ ಸುತ್ತು ಗೋಡೆಯನ್ನೂ, ಅಸ್ತಿವಾರದ ಮೇಲಣಿಂದ ಕಡೇ ವರಸೆಯವರೆಗೆ ಅಳತೆಯ ಮೇರೆಗೆ ಕೆತ್ತಲ್ಪಟ್ಟ ಎರಡು ಮಗ್ಗುಲಿಗೂ ಗರಗಸದಿಂದ ಕೊಯ್ಯಲ್ಪಟ್ಟಂಥ ಶ್ರೇಷ್ಠವಾದ ಕಲ್ಲುಗಳಿಂದ ಕಟ್ಟಿಸಿದನು.

[10] ಅಸ್ತಿವಾರಕ್ಕೆ ಹಾಕಿದ ಶ್ರೇಷ್ಠವಾದ ದೊಡ್ಡ ಕಲ್ಲುಗಳು ಎಂಟು ಮೊಳ ಹಾಗೂ ಹತ್ತು ಮೊಳ ಉದ್ದವಾಗಿದ್ದವು.

[11] ಅಸ್ತಿವಾರದ ಮೇಲಣ ಭಾಗಕ್ಕೆ ಅಳತೆಯ ಮೇರೆಗೆ ಕೆತ್ತಿದ ಶ್ರೇಷ್ಠವಾದ ಕಲ್ಲುಗಳನ್ನೂ, ದೇವದಾರಿನ ಮರವನ್ನೂ ಉಪಯೋಗಿಸಿದನು.

[12] ಒಳಗಿನ ಪ್ರಾಕಾರವೆನ್ನಿಸಿಕೊಳ್ಳುವ ಯೆಹೋವನ ಆಲಯದ ಪ್ರಾಕಾರಕ್ಕೂ ಅರಮನೆಯ ಪ್ರಾಕಾರಕ್ಕೂ ಹೇಗೋ ಹಾಗೆಯೇ ಎಲ್ಲಾ ಮಂದಿರಗಳ ಸುತ್ತಲಿರುವ ದೊಡ್ಡ ಪ್ರಾಕಾರಕ್ಕೆ ಮೂರು ಸಾಲು ಕಲ್ಲಿನ ಕಂಬಗಳೂ, ಒಂದು ಸಾಲು ದೇವದಾರಿನ ಮರದ ಕಂಬಗಳೂ ಇದ್ದವು.

[13] ಅರಸನಾದ ಸೊಲೊಮೋನನು ತೂರ್ ಪಟ್ಟಣದಿಂದ ಹೀರಾಮ್ ಎಂಬುವನನ್ನು ಕರೆಯಿಸಿದನು.

[14] ಅವನು ನಫ್ತಾಲಿ ಕುಲದ ಒಬ್ಬ ವಿಧವೆಯಲ್ಲಿ ತೂರ್ ಪಟ್ಟಣದ ಒಬ್ಬ ಕಂಚುಗಾರನಿಗೆ ಹುಟ್ಟಿದವನು. ಜಾಣನೂ, ತಾಮ್ರದ ಕೆಲಸದಲ್ಲಿ ನಿಪುಣನೂ, ಅನುಭವಶಾಲಿಯೂ ಆಗಿದ್ದ ಅವನು ಅರಸನ ಬಳಿಗೆ ಬಂದು ಅರಸನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿದನು.

[15] ಅವನು ಎರಡು ತಾಮ್ರದ ಕಂಬಗಳನ್ನು ಮಾಡಿದನು. ಅವು ಹದಿನೆಂಟು ಮೊಳ ಎತ್ತರವಿದ್ದವು. ಅವುಗಳ ಸುತ್ತಳತೆಯು ಹನ್ನೆರಡು ಮೊಳ.

[16] ಇದಲ್ಲದೆ ಅವನು ತಾಮ್ರವನ್ನು ಎರಕ ಹೊಯ್ದು ಕಂಬಗಳ ಮೇಲೆ ಇಡುವುದಕ್ಕೊಸ್ಕರ ಐದೈದು ಮೊಳ ಎತ್ತರವಾದ ಎರಡು ಕುಂಭಗಳನ್ನೂ,

[17] ಒಂದೊಂದಕ್ಕೆ ಏಳೇಳರಂತೆ ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ತಾಮ್ರದ ಸರಿಗೆಯ ಜಾಲರಿಗಳನ್ನೂ ಮಾಡಿದನು.

[18] ಇದಲ್ಲದೆ ಅವನು ತಾಮ್ರದ ದಾಳಿಂಬೆಹಣ್ಣುಗಳನ್ನು ಮಾಡಿ, ಅವುಗಳನ್ನು ಕಂಬಗಳ ಮೇಲಣ ಪ್ರತಿಯೊಂದು ಕುಂಭದ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.

[19] ಕಂಬಗಳ ಮೇಲಿರುವ ಕುಂಭಗಳ ಒಡಲು ನಾಲ್ಕು ಮೊಳಗಳವರೆಗೆ ಕಮಲದ ಆಕಾರ ಉಳ್ಳದ್ದಾಗಿತ್ತು.

[20] ಆ ಕುಂಭಗಳ ಮೇಲಿರುವ ಭಾಗದಲ್ಲಿ ಒಡಲಿನ ಸುತ್ತಲೂ ಜಾಲರಿಯ ಹೊರಗೆ ದಾಳಿಂಬೆ ಹಣ್ಣಿನ ಆಕಾರವುಳ್ಳ ಗುಂಡುಗಳಿದ್ದವು. ಪ್ರತಿಯೊಂದು ಕುಂಭದ ಸುತ್ತಲೂ ಇನ್ನೂರು ಗುಂಡುಗಳನ್ನು ಸಾಲಾಗಿ ಸಿಕ್ಕಿಸಿದನು.

[21] ತರುವಾಯ ಅವನು ಆ ಎರಡು ಕಂಬಗಳನ್ನೂ ದೇವಾಲಯದ ಮಂಟಪದ ಬಳಿಯಲ್ಲಿ ನಿಲ್ಲಿಸಿ, ಬಲಗಡೆಯ ಕಂಬಕ್ಕೆ ಯಾಕೀನ್ ಎಂದೂ, ಎಡಗಡೆಯ ಕಂಬಕ್ಕೆ ಬೋವಜ್ ಎಂದು ಹೆಸರಿಟ್ಟನು.

[22] ಅವನು ಕಂಬಗಳ ಮೇಲೆ ಕಮಲಾಕಾರವನ್ನು ಮಾಡಿ ಅವುಗಳ ಕೆಲಸವನ್ನು ತೀರಿಸಿದನು.

[23] ಅನಂತರ ಹೀರಾಮನು ಸಮುದ್ರ ಎನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿದನು. ಅದರ ಬಾಯಿ‍ ಚಂದ್ರಾಕಾರವಾಗಿಯೂ, ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ ಮತ್ತು ಸುತ್ತಳತೆ ಮೂವತ್ತು ಮೊಳ.

[24] ಅದನ್ನು ಎರಕ ಹೊಯ್ಯುವಾಗ ಅದರ ಅಂಚಿನ ಕೆಳಗೆ ಸುತ್ತಲೂ ಹತ್ತತ್ತು ಮೊಳ ಉದ್ದವಾದ ಬಳ್ಳಿಗಳನ್ನು ಎರಡು ಸಾಲಾಗಿ ಎರಕ ಹೊಯ್ದಿದ್ದನು.

[25] ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.

[26] ಪಾತ್ರೆಯು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲದ ಆಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಎರಡು ಸಾವಿರ ಬಾನೆಗಳಷ್ಟು ನೀರು ಹಿಡಿಯುತ್ತಿತ್ತು.

[27] ಇದಲ್ಲದೆ ಅವನು ಹತ್ತು ತಾಮ್ರದ ಪೀಠಗಳನ್ನು ಮಾಡಿದನು. ಪ್ರತಿಯೊಂದು ನಾಲ್ಕು ಮೊಳ ಉದ್ದ, ನಾಲ್ಕು ಮೊಳ ಅಗಲ, ಮೂರು ಮೊಳ ಎತ್ತರ ಇತ್ತು.

[28] ಅವುಗಳನ್ನು ಮಾಡಿದ ವಿಧಾನ ಹೇಗೆಂದರೆ, ಅವುಗಳಲ್ಲಿ ನಿಲುವು ಪಟ್ಟಿಗಳಿಂದ ಕೂಡಿದ ಅಡ್ಡಪಟ್ಟಿಗಳಿದ್ದವು.

[29] ಆ ಅಡ್ಡಪಟ್ಟಿಗಳ ಮೇಲೆ ಸಿಂಹ, ಹೋರಿ ಮತ್ತು ಕೆರೂಬಿ ಇವುಗಳ ಚಿತ್ರಗಳಿದ್ದವು. ನಿಲುವುಪಟ್ಟಿಗಳಿಗೂ ಇದೇ ಅಲಂಕಾರವಿತ್ತು. ಸಿಂಹ, ಹೋರಿ ಇವುಗಳ ಮೇಲೂ ಕೆಳಗೂ ತೋರಣ ಚಿತ್ರಗಳಿದ್ದವು.

[30] ಪ್ರತಿಯೊಂದು ಪೀಠಕ್ಕೆ ನಾಲ್ಕು ತಾಮ್ರದ ಗಾಲಿಗಳೂ ಅಚ್ಚುಗಳೂ ಇದ್ದವು. ಪ್ರತಿಯೊಂದು ನಿಲುವುಪಟ್ಟಿಯ ಮೇಲಣ ತುದಿಯಲ್ಲಿ ಎರಕ ಹೊಯ್ದ ತಾಮ್ರದ ಹಿಡಿಗಳಿದ್ದವು. ಅವು ಪೀಠದ ಮೇಲಣ ಗಂಗಾಳವನ್ನು ಹಿಡಿಯುತ್ತಿದ್ದವು. ಅವುಗಳ ಹೊರಮೈಗೆ ತೋರಣ ಚಿತ್ರಗಳಿದ್ದವು.

[31] ಗಂಗಾಳವನ್ನು ಇಡುವುದಕ್ಕೋಸ್ಕರ ಪೀಠದ ಮೇಲಣ ಭಾಗದಲ್ಲಿ ಒಂದು ಅಥವಾ ಒಂದುವರೆ ಮೊಳ ಎತ್ತರವಾದ ಬಾಯಿತ್ತು. ಚಕ್ರಾಕಾರವಾಗಿರುವ ಈ ಬಾಯಿಯು ಒಂದುವರೆ ಮೊಳ ಅಗಲವಾಗಿತ್ತು. ಇದರ ಮೇಲೆಯೂ ಚಿತ್ರಗಳಿದ್ದವು. ಇದಕ್ಕೆ ಆಧಾರವಾದ ಅಡ್ಡಪಟ್ಟಿಗಳು ಚಕ್ರಾಕಾರವಾಗಿರದೆ ಚೌಕಾಕಾರವಾಗಿದ್ದವು.

[32] ಮೇಲೆ ಕಂಡ ನಾಲ್ಕು ಗಾಲಿಗಳು ಅಡ್ಡಪಟ್ಟಿಗಳ ಕೆಳಗಿದ್ದವು. ತಿರುಗೋಲು ಮತ್ತು ಪೀಠವು ಅಖಂಡವಾಗಿದ್ದವು. ಪ್ರತಿಯೊಂದು ಗಾಲಿಯು ಒಂದುವರೆ ಮೊಳ ಎತ್ತರವಿತ್ತು.

[33] ಅವು ಸಾಧಾರಣವಾದ ಬಂಡಿಗಳ ಗಾಲಿಗಳಂತೆಯೇ ಇದ್ದವು. ಆದರೆ ಅವುಗಳ ಕಟ್ಟು, ಅರ, ಕುಂಭ ಇವುಗಳಿಗೆ ಸಂಬಂಧಪಟ್ಟ ತಿರುಗೋಲು ತಾಮ್ರದವುಗಳು.

[34] ಪ್ರತಿಯೊಂದು ಪೀಠದ ತುದಿಯಲ್ಲಿದ್ದ ನಾಲ್ಕು ಹಿಡಿಗಳು ಪೀಠದೊಡನೆ ಅಖಂಡವಾಗಿದ್ದವು.

[35] ಪೀಠದ ಮೇಲಣ ಭಾಗದಲ್ಲಿದ್ದ ಚಕ್ರಾಕಾರವಾದ ಬಾಯಿಯು ಅರ್ಧ ಮೊಳ ಎತ್ತರವಾಗಿತ್ತು. ಪೀಠದ ಮೇಲಿನ ಭಾಗದಲ್ಲಿದ್ದ ಹಿಡಿಗಳೂ ಅಡ್ಡ ಪಟ್ಟಿಗಳೂ ಅದರೊಡನೆ ಅಖಂಡವಾಗಿದ್ದವು.

[36] ಅಡ್ಡಪಟ್ಟಿಗಳಿಗೂ ಹಿಡಿಗಳ ಹೊರಮೈಗೂ ಸ್ಥಳವಿದ್ದ ಕಡೆಗೆ ಕೆರೂಬಿ, ಸಿಂಹ, ಖರ್ಜೂರವೃಕ್ಷ ಇವುಗಳ ಚಿತ್ರಗಳನ್ನೂ ಈ ಚಿತ್ರಗಳ ಸುತ್ತಲೂ ತೋರಣ ಚಿತ್ರಗಳನ್ನೂ ಮಾಡಿಸಿದನು.

[37] ಲೋಹಗಳನ್ನು ಒಂದೇ ಸಾರಿ ಕರಗಿಸಿ ಆ ಹತ್ತು ಪೀಠಗಳನ್ನು ಮಾಡಿದನು. ಅವುಗಳ ಆಕಾರವು ಅಳತೆಯೂ ಒಂದೇಯಾಗಿತ್ತು.

[38] ಇದಲ್ಲದೆ ಅವನು ನಲ್ವತ್ತು ಬತ್ ನೀರು ಹಿಡಿಯುವ ನಾಲ್ಕು ಮೊಳ ಅಗಲವಾದ ಹತ್ತು ಗಂಗಾಳಗಳನ್ನು ಮಾಡಿ, ಪ್ರತಿಯೊಂದು ಪೀಠದ ಮೇಲೆ ಒಂದೊಂದನ್ನು ಇಟ್ಟನು.

[39] ಐದು ಪೀಠಗಳನ್ನು ದೇವಾಲಯದ ಬಲಗಡೆಯಲ್ಲಿಯೂ, ಐದು ಪೀಠಗಳನ್ನು ಎಡಗಡೆಯಲ್ಲಿಯೂ ಇಟ್ಟನು. ಸಮುದ್ರವೆನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿರಿಸಿದನು.

[40] ಇದಲ್ಲದೆ ಹೀರಾಮನು ಬಟ್ಟಲುಗಳನ್ನೂ, ಸಲಿಕೆಗಳನ್ನೂ, ಬೋಗುಣಿಗಳನ್ನೂ ಮಾಡಿದನು. ಅವನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕೋಸ್ಕರ ಹೀರಾಮನು ಮಾಡಿಸಿದ ಒಟ್ಟು ಸಾಮಾನುಗಳ ಪಟ್ಟಿ.

[41] ಎರಡು ಕಂಬಗಳು ಅವುಗಳ ಮೇಲಿನ ಎರಡು ಕುಂಭಗಳು, ಕುಂಭಗಳ ಮೇಲೆ ಹಾಕುವುದಕ್ಕೋಸ್ಕರ ಎರಡು ಜಾಲರಿಗಳು

[42] ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕೋಸ್ಕರ ತಾಮ್ರದ ನಾನೂರು ದಾಳಿಂಬಹಣ್ಣುಗಳು,

[43] ಹತ್ತು ಪೀಠಗಳು, ಅವುಗಳ ಮೇಲಿದ್ದ ಹತ್ತು ಗಂಗಾಳಗಳು,

[44] ಸಮುದ್ರವೆನಿಸಿಕೊಳ್ಳುವ ಪಾತ್ರೆಯೂ, ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,

[45] ಹಂಡೆ, ಸಲಿಕೆ ಬೋಗುಣಿಗಳು ಇವೇ. ಹೀರಾಮನು ಅರಸನಾದ ಸೊಲೊಮೋನನ ಅಪ್ಪಣೆಯಂತೆ ಯೆಹೋವನ ಆಲಯಕ್ಕೋಸ್ಕರ ಈ ಎಲ್ಲಾ ಸಾಮಾನುಗಳನ್ನು ರುಜುವಾತು ಪಡಿಸಿ ತಾಮ್ರದಿಂದ ಮಾಡಿಸಿದನು.

[46] ಅರಸನು ಯೊರ್ದನಿನ ತಗ್ಗಿನಲ್ಲಿ ಸುಕ್ಕೋತಿಗೂ ಮತ್ತು ಚಾರೆತಾನಿಗೂ ಮಧ್ಯದಲ್ಲಿರುವ ಜೇಡಿ ಮಣ್ಣು ಇರುವ ನೆಲದಲ್ಲಿ ಎರಕ ಹೊಯ್ಯಿಸಿದನು.

[47] ಸೊಲೊಮೋನನು ತಾನು ಮಾಡಿಸಿದ ಸಾಮಾನುಗಳು ಅನೇಕವಾಗಿದ್ದರಿಂದ ಅವುಗಳ ತಾಮ್ರದ ತೂಕವು ಎಷ್ಟೆಂಬುದನ್ನು ಗೊತ್ತುಮಾಡಲಾಗಲ್ಲಿಲ್ಲ.

[48] ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಒಳಗಿನ ಸಾಮಾನುಗಳು ಯಾವುವೆಂದರೆ - ಬಂಗಾರದ ಧೂಪವೇದಿಯು ನೈವೇದ್ಯವಾದ ರೊಟ್ಟಿಗಳನ್ನಿಡುವುದಕ್ಕಾಗಿ ಬಂಗಾರದ ಮೇಜು,

[49] ಮಹಾಪರಿಶುದ್ಧಸ್ಥಳದ ಎದುರಿಗೆ ಎಡಗಡೆಯಲ್ಲಿಯೂ, ಬಲಗಡೆಯಲ್ಲಿಯೂ ಇಡುವುದಕ್ಕಾಗಿ ಐದೈದರಂತೆ ಇಡುವುದಕ್ಕೋಸ್ಕರ ಚೊಕ್ಕ ಬಂಗಾರದಿಂದ ಮಾಡಿದ ಪುಷ್ಪಾಲಂಕಾರವುಳ್ಳ ಹತ್ತು ದೀಪಸ್ತಂಭಗಳು, ಬಂಗಾರದ ಹಣತೆ, ಇಕ್ಕಳಗಳು, ಚೊಕ್ಕ ಬಂಗಾರದ ಬಟ್ಟಲುಗಳು,

[50] ಕತ್ತರಿಗಳು, ಬೋಗುಣಿಗಳು, ಧೂಪಾರತಿಗಳು ಅಗ್ಗಿಷ್ಟಿಕೆಗಳು, ದೇವಾಲಯದ ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದ ಬಾಗಿಲುಗಳಿಗೂ

[51] ಪರಿಶುದ್ಧಸ್ಥಳದ ಬಾಗಿಲುಗಳಿಗೂ ಇರುವ ಬಂಗಾರದ ತಿರುಗುಣಿಗಳು ಇವುಗಳೇ. ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದ ನಂತರ ತನ್ನ ತಂದೆಯಾದ ದಾವೀದನು ಯೆಹೋವನಿಗೆ ಹರಕೆಹೊತ್ತು ಪ್ರತಿಷ್ಠಿಸಿದ ಬೆಳ್ಳಿ ಬಂಗಾರವನ್ನೂ ಮತ್ತು ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.

1 ಅರಸುಗಳು — Chapters