[1] ಅನಂತರ ಅರಸನಾದ ಸೊಲೊಮೋನನು ದಾವೀದ ನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೂ ಕುಲಾಧಿಪತಿಗಳು ಇವರೇ ಮೊದಲಾದ ಇಸ್ರಾಯೇಲ್ ಪ್ರಧಾನಪುರುಷರನ್ನು ಯೆರೂಸಲೇಮಿಗೆ ತನ್ನ ಹತ್ತಿರಕ್ಕೆ ಕರೆಯಿಸಿಕೊಂಡನು.
[2] ಇಸ್ರಾಯೇಲರೆಲ್ಲರೂ ಏಳನೆಯ ತಿಂಗಳಾದ ಆಶ್ವೀಜ ಮಾಸದಲ್ಲಿ ಜಾತ್ರೆಗೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಕೂಡಿಬಂದರು.
[3] ಇಸ್ರಾಯೇಲರ ಎಲ್ಲಾ ಹಿರಿಯರು ಒಟ್ಟಾಗಿ ಬಂದಾಗ ಯಾಜಕರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು.
[4] ಉಳಿದ ಯಾಜಕರೂ ಮತ್ತು ಲೇವಿಯರೂ ದೇವದರ್ಶನದ ಗುಡಾರ, ಅದರಲ್ಲಿದ್ದ ಪರಿಶುದ್ಧವಸ್ತು ಇವುಗಳನ್ನು ಹೊತ್ತುಕೊಂಡರು.
[5] ಅರಸನಾದ ಸೊಲೊಮೋನನು ಅಲ್ಲಿ ಕೂಡಿ ಬಂದಿದ್ದ ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಅಸಂಖ್ಯವಾದ ಕುರಿದನಗಳನ್ನು ಯಜ್ಞಮಾಡಿದರು.
[6] ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವೆನಿಸಿಕೊಳ್ಳುವ ಗರ್ಭಗೃಹದಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿ ಇಟ್ಟರು.
[7] ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದವುಗಳಾಗಿದ್ದುದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು.
[8] ಆ ಕೋಲುಗಳು ಬಹಳ ಉದ್ದವಾಗಿದ್ದುದರಿಂದ ಅವುಗಳ ತುದಿಗಳು ಗರ್ಭಗೃಹದ ಎದುರಿನಲ್ಲಿರುವ ಪರಿಶುದ್ಧ ಸ್ಥಳದಲ್ಲಿ ನಿಂತವರಿಗೆ ಕಾಣಿಸಿದರೂ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ. ಅವು ಇಂದಿನವರೆಗೂ ಅಲ್ಲೇ ಇವೆ.
[9] ಮಂಜೂಷದಲ್ಲಿ ಎರಡು ಕಲ್ಲಿನ ಹಲಿಗೆಗಳ ಹೊರತಾಗಿ ಬೇರೇನೂ ಇರಲಿಲ್ಲ. ಯೆಹೋವನು ಐಗುಪ್ತದಿಂದ ಬಂದ ಇಸ್ರಾಯೇಲರೊಡನೆ ಹೋರೇಬ್ ಬೆಟ್ಟದ ಬಳಿಯಲ್ಲಿ ಒಡಂಬಡಿಕೆ ಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿರಿಸಿದನು.
[10] ಯಾಜಕರು ಪರಿಶುದ್ಧ ಸ್ಥಳದಿಂದ ಹೊರಗೆ ಬಂದ ಕೂಡಲೆ ಮೇಘವು ಯೆಹೋವನ ಆಲಯವನ್ನು ತುಂಬಿಕೊಂಡಿತು.
[11] ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡ ಮೇಘವು ಆಲಯವನ್ನು ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲು ಆಗಲಿಲ್ಲ.
[12] ತರುವಾಯ ಸೊಲೊಮೋನನು, “ಯೆಹೋವನೇ, ಕಾರ್ಗತ್ತಲಲ್ಲಿ ವಾಸಿಸುತ್ತೇನೆಂದು ಹೇಳಿದ್ದೀ.
[13] ನಾನು ನಿನಗೋಸ್ಕರ ಒಂದು ಮಂದಿರವನ್ನು ಕಟ್ಟಿಸಿದ್ದೇನೆ. ಅದು ನಿನಗೆ ಶಾಶ್ವತವಾದ ವಾಸಸ್ಥಳವಾಗಿರಲಿ” ಎಂದು ಪ್ರಾರ್ಥನೆಮಾಡಿದನು.
[14] ಇದಾದ ಮೇಲೆ ಅರಸನು ಎದ್ದು ನಿಂತು ಇಸ್ರಾಯೇಲ್ ಸಮೂಹದವರ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿ,
[15] “ಇಸ್ರಾಯೇಲ್ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ನನ್ನ ತಂದೆಯಾದ ದಾವೀದನಿಗೆ ಆತನ ಬಾಯಿ ನುಡಿದಿದ್ದನ್ನು ಆತನ ಹಸ್ತವು ಈಗ ನೆರವೇರಿಸಿದೆ.
[16] ಆತನು, ‘ನಾನು ನನ್ನ ಜನರಾದ ಇಸ್ರಾಯೇಲರನ್ನು ಐಗುಪ್ತದಿಂದ ಬರಮಾಡಿದಂದಿನಿಂದ ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಆಳುವುದಕ್ಕೋಸ್ಕರ ದಾವೀದನನ್ನು ಆರಿಸಿಕೊಂಡೆನೇ ಹೊರತು ನನ್ನ ನಾಮದ ನಿವಾಸಕ್ಕೋಸ್ಕರ ಆಲಯ ಸ್ಥಾನವನ್ನಾಗಿ ಇಸ್ರಾಯೇಲ್ ಕುಲಗಳ ಯಾವ ಪಟ್ಟಣವನ್ನೂ ಆರಿಸಿಕೊಳ್ಳಲಿಲ್ಲ’ ಎಂದು ಹೇಳಿದ್ದನು.
[17] ನನ್ನ ತಂದೆಯಾದ ದಾವೀದನು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿಗೋಸ್ಕರ ಮನೆಯನ್ನು ಕಟ್ಟಬೇಕೆಂದು ಮನಸ್ಸು ಮಾಡಿದ್ದನು.
[18] ಆಗ ಯೆಹೋವನು ಅವನಿಗೆ, ‘ನೀನು ನನ್ನ ಹೆಸರಿಗೋಸ್ಕರ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೇದೆ ಸರಿ. ಆದರೂ ನೀನು ಅದನ್ನು ಕಟ್ಟಬಾರದು.
[19] ನಿನ್ನಿಂದ ಹುಟ್ಟುವ ಮಗನು ನನ್ನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕು’ ಎಂದು ಹೇಳಿದನು.
[20] ಯೆಹೋವನು ತಾನು ಕೊಟ್ಟ ಮಾತನ್ನು ನೆರವೇರಿಸಿದನು. ಆತನ ವಾಗ್ದಾನದಂತೆ ನಾನು ನನ್ನ ತಂದೆಯಾದ ದಾವೀದನಿಗೆ ಬದಲಾಗಿ ಇಸ್ರಾಯೇಲ್ ಸಿಂಹಾಸನದ ಮೇಲೆ ಅರಸನಾಗಿ ಕುಳಿತುಕೊಂಡು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಈ ಆಲಯವನ್ನು ಕಟ್ಟಿದೆನು.
[21] ಇದಲ್ಲದೆ ಐಗುಪ್ತದೇಶದಿಂದ ಬಿಡುಗಡೆ ಹೊಂದಿದ ನಮ್ಮ ಪೂರ್ವಿಕರಿಗೆ ಯೆಹೋವನಿಂದ ದೊರಕಿದ ನಿಬಂಧನಾಶಾಸನಗಳಿರುವ ಮಂಜೂಷಕ್ಕೆ ಸ್ಥಳವನ್ನು ಪ್ರತ್ಯೇಕಿಸಿ ಅಲ್ಲಿ ಅದನ್ನು ಇರಿಸಿದೆನು” ಎಂದು ಹೇಳಿದನು.
[22] ತರುವಾಯ ಸೊಲೊಮೋನನು ಎಲ್ಲಾ ಇಸ್ರಾಯೇಲರ ಎದುರಿನಲ್ಲಿ ಯೆಹೋವನ ಯಜ್ಞವೇದಿಯ ಮುಂದೆ ನಿಂತು ಆಕಾಶದ ಕಡೆಗೆ ಕೈಗಳನ್ನೆತ್ತಿ ಹೀಗೆ ಪ್ರಾರ್ಥಿಸಿದನು,
[23] “ಇಸ್ರಾಯೇಲ್ ದೇವರಾದ ಯೆಹೋವನೇ, ಭೂಲೋಕದಲ್ಲಿಯೂ, ಪರಲೋಕದಲ್ಲಿಯೂ ನಿನಗೆ ಸಮಾನನಾದ ದೇವರಿಲ್ಲ. ಪೂರ್ಣಮನಸ್ಸಿನಿಂದ ನಿನಗೆ ನಡೆದುಕೊಳ್ಳುವಂಥ ಸೇವಕರ ವಿಷಯದಲ್ಲಿ ನೀನು ನಿನ್ನ ಒಡಂಬಡಿಕೆಯನ್ನೂ, ಕೃಪೆಯನ್ನೂ ನೆರವೇರಿಸುವವನು.
[24] ನಿನ್ನ ಸೇವಕನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ನೆರವೇರಿಸಿರುವೆ. ನಿನ್ನ ಬಾಯಿ ನುಡಿದಿದ್ದನ್ನು ನಿನ್ನ ಹಸ್ತವು ಈಗ ನೆರವೇರಿಸಿದೆ.
[25] ಇಸ್ರಾಯೇಲ್ ದೇವರಾದ ಯೆಹೋವನೇ, ನೀನು ನನ್ನ ತಂದೆಯಾದ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಮಾರ್ಗದಲ್ಲೇ ನಡೆದುಕೊಳ್ಳುವುದಾದರೆ, ಅವರು ತಪ್ಪದೆ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು’ ಎಂಬುದಾಗಿ ವಾಗ್ದಾನ ಮಾಡಿದಿಯಲ್ಲಾ ಅದನ್ನು ನೆರವೇರಿಸು.
[26] ಇಸ್ರಾಯೇಲ್ ದೇವರೇ, ನೀನು ನಿನ್ನ ಸೇವಕನೂ, ನನ್ನ ತಂದೆಯೂ ಆದ ದಾವೀದನಿಗೆ ನುಡಿದಿದ್ದೆಲ್ಲವೂ ಸಾರ್ಥಕವಾಗಲಿ.
[27] “ದೇವರು ನಿಜವಾಗಿ ಭೂಲೋಕದಲ್ಲಿ ವಾಸಿಸುವನೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿನ್ನ ವಾಸಕ್ಕೆ ಸಾಲದು. ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ಸಾಕಾದೀತು?
[28] ಆದರೂ ನನ್ನ ದೇವರೇ, ಯೆಹೋವನೇ, ನಿನ್ನ ಸೇವಕನ ಪ್ರಾರ್ಥನೆಗೂ, ವಿಜ್ಞಾಪನೆಗೂ ಕಿವಿಗೊಡು. ಈ ಹೊತ್ತು ನಿನ್ನನ್ನು ಪ್ರಾರ್ಥಿಸುತ್ತಿರುವ ನಿನ್ನ ಸೇವಕನ ಮೊರೆಯನ್ನು ಲಾಲಿಸು.
[29] ಈ ಸ್ಥಳವನ್ನು ಕುರಿತು, ‘ನನ್ನ ನಾಮಪ್ರಭಾವವು ಇಲ್ಲಿ ವಾಸಿಸುವುದು’ ಎಂದು ಹೇಳಿದವನೇ, ನಿನ್ನ ಕಟಾಕ್ಷವು ಹಗಲಿರುಳು ಈ ಮಂದಿರದ ಮೇಲಿರಲಿ. ಇಲ್ಲಿ ನಿನ್ನ ಸೇವಕರು ನಿನ್ನನ್ನು ಪ್ರಾರ್ಥಿಸುವಾಗೆಲ್ಲಾ ಅವರಿಗೆ ಸದುತ್ತರವನ್ನು ದಯಪಾಲಿಸು.
[30] ನಿನ್ನ ಸೇವಕನಾದ ನಾನಾಗಲಿ ನಿನ್ನ ಪ್ರಜೆಗಳಾದ ಇಸ್ರಾಯೇಲರಾಗಲಿ ಈ ಸ್ಥಳದ ಕಡೆಗೆ ತಿರುಗಿಕೊಂಡು ನಿನ್ನನ್ನು ಪ್ರಾರ್ಥಿಸುವುದಾದರೆ, ನಿನ್ನ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹವನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸು.
[31] “ನೆರೆಯವನಿಗೆ ವಿರೋಧವಾಗಿ ತಪ್ಪುಮಾಡಿದವನೆಂಬ ಸಂಶಯಕ್ಕೆ ಗುರಿಯಾದ ಮನುಷ್ಯನು ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ ಅಂಥವನು ಈ ಆಲಯಕ್ಕೆ ಬಂದು ನಿನ್ನ ಈ ಯಜ್ಞವೇದಿಯ ಮುಂದೆ ನಿಂತು ಪ್ರಮಾಣಮಾಡುವುದಾದರೆ,
[32] ಪರಲೋಕದಲ್ಲಿರುವ ನೀನು ಅದನ್ನು ಕೇಳಿ ನಿನ್ನ ಸೇವಕರ ವ್ಯಾಜ್ಯವನ್ನು ತೀರಿಸು. ದುಷ್ಟನಿಗೆ ಅವನ ದುಷ್ಟತ್ವವನ್ನು ಅವನ ತಲೆಯ ಮೇಲೆಯೇ ಬರಮಾಡಿ, ಅವನು ಅಪರಾಧಿಯೆಂದು ತೋರಿಸು. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ ಅವನು ನೀತಿವಂತನೆಂದೂ ತೋರಿಸಿಕೊಡು.
[33] “ತಮ್ಮ ಪಾಪಗಳ ಫಲವಾಗಿ ಶತ್ರುಗಳಿಂದ ತಗ್ಗಿಸಲ್ಪಟ್ಟ ನಿನ್ನ ಪ್ರಜೆಗಳಾದ ಇಸ್ರಾಯೇಲರು ನಿನ್ನ ಕಡೆಗೆ ತಿರುಗಿಕೊಂಡು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದಲ್ಲಿ ನಿನಗೆ ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಮಾಡುವುದಾದರೆ,
[34] ಪರಲೋಕದಲ್ಲಿರುವ ನೀನು ಅದನ್ನು ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ಪೂರ್ವಿಕರಿಗೆ ನೀನು ಕೊಟ್ಟ ದೇಶಕ್ಕೆ ಅವರನ್ನು ಮರಳಿ ಬರುವಂತೆಮಾಡು.
[35] “ಅವರ ಪಾಪಗಳ ನಿಮಿತ್ತವಾಗಿ ಆಕಾಶವು ಮಳೆಗರೆಯದಂತೆ ಮುಚ್ಚಿಕೊಂಡಾಗ ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವನು ನೀನೇ ಎಂದು ನಿನ್ನ ನಾಮವನ್ನು ಸ್ತುತಿಸಿ ಈ ಆಲಯದ ಕಡೆಗೆ ತಿರುಗಿಕೊಂಡು ಪ್ರಾರ್ಥಿಸುವುದಾದರೆ,
[36] ಪರಲೋಕದಲ್ಲಿರುವ ನೀನು ಆಲಿಸಿ, ನಿನ್ನ ಸೇವಕರೂ ಪ್ರಜೆಗಳೂ ಆದ ಇಸ್ರಾಯೇಲರ ಪಾಪಗಳನ್ನು ಕ್ಷಮಿಸಿ ಅವರು ನಡೆಯಬೇಕಾದ ಮಾರ್ಗವನ್ನು ತೋರಿಸಿ, ನಿನ್ನ ಪ್ರಜೆಗೆ ಸ್ವತ್ತಾಗಿ ಕೊಟ್ಟ ದೇಶಕ್ಕೆ ಮಳೆಯನ್ನು ಅನುಗ್ರಹಿಸು.
[37] “ದೇಶಕ್ಕೆ ಕ್ಷಾಮ, ಘೋರವ್ಯಾಧಿ, ಬಿಸಿಗಾಳಿ, ಜೊಳ್ಳು, ಮಿಡತೆ, ಜಿಟ್ಟೇಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಅಂತು ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ ಬಾಧೆ ಉಂಟಾಗುವಾಗ,
[38] ಮನಸ್ಸಾಕ್ಷಿ ಪೀಡಿತರಾದ ಎಲ್ಲಾ ಇಸ್ರಾಯೇಲರಾಗಲಿ, ಅವರಲ್ಲಿ ಒಬ್ಬನಾಗಲಿ ಈ ಆಲಯದ ಕಡೆಗೆ ಕೈಯೆತ್ತಿ ಸ್ತುತಿಸಿ ನಿನಗೆ ಪ್ರಾರ್ಥನೆಯನ್ನೂ, ವಿಜ್ಞಾಪನೆಯನ್ನು ಮಾಡುವುದಾದರೆ,
[39] ಮನುಷ್ಯರ ಹೃದಯಗಳನ್ನು ಬಲ್ಲಂಥ ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಲಾಲಿಸಿ, ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸು. ನೀನೊಬ್ಬನೇ ಎಲ್ಲಾ ಮನುಷ್ಯರ ಹೃದಯಗಳನ್ನು ಬಲ್ಲವನಾಗಿರುವುದರಿಂದ ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕ ಹಾಗೆ ಫಲವನ್ನು ಕೊಡು.
[40] ಆಗ ನಮ್ಮ ಪೂರ್ವಿಕರಿಗೆ ನೀನು ಕೊಟ್ಟ ದೇಶದಲ್ಲಿ ಅವರು ವಾಸಿಸುವ ಕಾಲದಲ್ಲೆಲ್ಲಾ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುವರು.
[41] “ನಿನ್ನ ಪ್ರಜೆಗಳಾದ ಇಸ್ರಾಯೇಲನಲ್ಲದ ಒಬ್ಬ ಪರದೇಶದವನು ನಿನ್ನ ನಾಮಸ್ತುತಿಗೋಸ್ಕರ ದೂರದೇಶದಿಂದ ಬರುವಾಗ
[42] ಅಲ್ಲಿ ನಿನ್ನ ನಾಮಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ವರ್ತಮಾನವು ಪರರಾಜ್ಯಗಳವರಿಗೂ ಗೊತ್ತಾಗುವುದು. ಅವನು ಈ ಆಲಯದ ಮುಂದೆ ನಿಂತು ನಿನ್ನನ್ನು ಪ್ರಾರ್ಥಿಸುವುದಾದರೆ,
[43] ನಿನ್ನ ನಿವಾಸವಾಗಿರುವ ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ, ಅವನು ಬೇಡಿಕೊಂಡದ್ದನ್ನು ಅನುಗ್ರಹಿಸು. ಆಗ ಪರರಾಜ್ಯದವರೂ, ಲೋಕದ ಎಲ್ಲಾ ಜನರು ನಿನ್ನ ನಾಮಮಹತ್ತನ್ನು ತಿಳಿದು, ನಿನ್ನ ಜನರಾದ ಇಸ್ರಾಯೇಲರಂತೆ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿ, ನಾನು ನಿನ್ನ ಹೆಸರಿಗಾಗಿ ಈ ಆಲಯವನ್ನು ಕಟ್ಟಸಿದ್ದೇನೆಂದು ತಿಳಿದುಕೊಳ್ಳುವರು.
[44] ನೀನು ನಿನ್ನ ಜನರನ್ನು ಶತ್ರುಗಳೊಡನೆ ಯುದ್ಧಮಾಡುವುದಕ್ಕೋಸ್ಕರ ಎಲ್ಲಿಗಾದರು ಕಳುಹಿಸಿದಾಗ ಅವರು ಅಲ್ಲಿಂದ ನೀನು ಆರಿಸಿಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ಯೆಹೋವನಾದ ನಿನ್ನನ್ನು ಪ್ರಾರ್ಥಿಸುವುದಾದರೆ
[45] ಪರಲೋಕದಲ್ಲಿರುವ ನೀನು ವಿಜ್ಞಾಪನೆಯನ್ನು ಮತ್ತು ಪ್ರಾರ್ಥನೆಯನ್ನೂ ಕೇಳಿ, ಅವರ ನ್ಯಾಯವನ್ನು ಸ್ಥಾಪಿಸು.
[46] “ಅವರು ನಿನಗೆ ವಿರುದ್ಧವಾಗಿ ಪಾಪ ಮಾಡಬಹುದು. ಪಾಪಮಾಡದ ಮನುಷ್ಯನು ಒಬ್ಬನೂ ಇಲ್ಲ. ನೀನು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ ಇರುವ ತಮ್ಮ ದೇಶಕ್ಕೆ ಅವರನ್ನು ಒಯ್ದಾಗ,
[47] ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಅವರು ಪಶ್ಚಾತ್ತಾಪಪಟ್ಟು, ನಿನ್ನ ಅನುಗ್ರಹದಿಂದ ತಮ್ಮ ಪೂರ್ವಿಕರಿಗೆ ದೊರಕಿದ ದೇಶದ ಕಡೆಗೂ, ನೀನು ಆರಿಸಕೊಂಡ ಪಟ್ಟಣದ ಕಡೆಗೂ, ನಾನು ನಿನ್ನ ಹೆಸರಿಗೋಸ್ಕರ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು,
[48] ‘ನಾವು ನಿನ್ನ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ಒಪ್ಪಿ ಪೂರ್ಣಮನಸ್ಸಿನಿಂದ ನಿನ್ನನ್ನು ಪ್ರಾರ್ಥಿಸುವುದಾದರೆ,
[49] ನೀನು ನಿನ್ನ ನಿವಾಸವಾಗಿರುವ ಪರಲೋಕದಿಂದ ಅವರ ಪ್ರಾರ್ಥನೆಯನ್ನು ಲಾಲಿಸಿ ಅವರ ನ್ಯಾಯವನ್ನು ಸ್ಥಾಪಿಸು.
[50] ಕಬ್ಬಿಣ ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತ ದೇಶದಿಂದ ನೀನು ಬಿಡಿಸಿದ ಈ ಜನರು ನಿನ್ನ ಸ್ವಕೀಯ ಜನರಾಗಿದ್ದಾರೆಂಬುದನ್ನು ನೆನಪುಮಾಡಿಕೊ.
[51] ಅವರು ನಿನಗೆ ವಿರುದ್ಧವಾಗಿ ಮಾಡಿದ ಎಲ್ಲಾ ಅಪರಾಧ ದ್ರೋಹಗಳನ್ನು ಕ್ಷಮಿಸಿ ಅವರನ್ನು ಸೆರೆಯೊಯ್ದವರ ಮನಸ್ಸಿನಲ್ಲಿ ಅವರ ಮೇಲೆ ದಯೆಹುಟ್ಟಿಸು.
[52] ನಿನ್ನ ಸೇವಕನ ಮೇಲೆಯೂ, ನಿನ್ನ ಪ್ರಜೆಗಳಾದ ಇಸ್ರಾಯೇಲರ ಮೇಲೆಯೂ ಕಟಾಕ್ಷವಿಟ್ಟು ಅವರು ಪ್ರಾರ್ಥಿಸುವಾಗೆಲ್ಲಾ ಅವರ ವಿಜ್ಞಾಪನೆಗಳನ್ನು ಲಾಲಿಸು.
[53] ಕರ್ತನೇ, ಯೆಹೋವನೇ, ನೀನು ನಮ್ಮ ಪೂರ್ವಿಕರನ್ನು ಐಗುಪ್ತದೇಶದಿಂದ ಬಿಡಿಸುವಾಗ ಅವರಿಗೆ ನಾನು ನಿಮ್ಮನ್ನು ಎಲ್ಲಾ ಜನಾಂಗಗಳೊಳಗಿಂದ ಪ್ರತ್ಯೇಕಿಸಿ, ಸ್ವಕೀಯಜನರನ್ನಾಗಿ ಮಾಡಿಕೊಂಡಿದ್ದೇನೆಂದು ಮೋಶೆಯ ಮುಖಾಂತರವಾಗಿ ಹೇಳಿದಿಯಲ್ಲವೇ” ಎಂದು ದೇವರನ್ನು ಪ್ರಾರ್ಥಿಸಿದನು.
[54] ಸೊಲೊಮೋನನು ಆಕಾಶದ ಕಡೆಗೆ ಕೈಯೆತ್ತಿ ಯೆಹೋವನ ಯಜ್ಞವೇದಿಯ ಮುಂದೆ ಮೊಣಕಾಲೂರಿ ಯೆಹೋವನನ್ನು ಪ್ರಾರ್ಥಿಸಿದ ನಂತರ ಎದ್ದು ನಿಂತು
[55] ಇಸ್ರಾಯೇಲ್ ಸರ್ವಸಮೂಹದವರನ್ನು ಆಶೀರ್ವದಿಸಿ ಗಟ್ಟಿಯಾಗಿ ಹೇಳಿದ್ದೇನಂದರೆ,
[56] “ತಾನು ವಾಗ್ದಾನ ಮಾಡಿದಂತೆ ತನ್ನ ಪ್ರಜೆಗಳಾದ ಇಸ್ರಾಯೇಲರಿಗೆ ವಿಶ್ರಾಂತಿಯನ್ನು ಅನುಗ್ರಹಿಸಿದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ತನ್ನ ಸೇವಕನಾದ ಮೋಶೆಯ ಮುಖಾಂತರವಾಗಿ ಮಾಡಿದ ಅತಿ ಶ್ರೇಷ್ಠ ವಾಗ್ದಾನಗಳಲ್ಲಿ ಒಂದೂ ತಪ್ಪಿ ಹೋಗಲಿಲ್ಲ.
[57] ನಮ್ಮ ದೇವರಾದ ಯೆಹೋವನು ನಮ್ಮ ಪೂರ್ವಿಕರ ಸಂಗಡ ಇದ್ದ ಹಾಗೆ ನಮ್ಮ ಸಂಗಡಲೂ ಇರಲಿ, ಆತನು ನಮ್ಮನ್ನು ಕೈಬಿಡದಿರಲಿ, ನಿರಾಕರಿಸದಿರಲಿ.
[58] ನಾವು ನಮ್ಮ ಪೂರ್ವಿಕರಿಗೆ ಕೊಡಲ್ಪಟ್ಟ ಆಜ್ಞಾನಿಯಮವಿಧಿಗಳನ್ನು ಕೈಕೊಂಡು ಆತನ ಮಾರ್ಗದಲ್ಲಿ ನಡೆಯುವಂತೆ ನಮ್ಮ ಮನಸ್ಸನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಿಲಿ.
[59] ನಾನು ಈಗ ನಮ್ಮ ದೇವರಾದ ಯೆಹೋವನಿಗೆ ಮಾಡಿದ ವಿಜ್ಞಾಪನೆಯು ಹಗಲಿರುಳು ಆತನ ಜ್ಞಾಪಕದಲ್ಲಿರಲಿ.
[60] ಭೂಲೋಕದ ಜನರೆಲ್ಲರೂ ಯೆಹೋವನ ಹೊರತು ಬೇರೆ ದೇವರಿಲ್ಲವೆಂಬುದನ್ನು ತಿಳಿದುಕೊಳ್ಳುವಂತೆ ಆತನು ಅಗತ್ಯವಿರುವಾಗೆಲ್ಲಾ ತನ್ನ ಸೇವಕನ ಮತ್ತು ಪ್ರಜೆಗಳಾದ ಇಸ್ರಾಯೇಲರ ನ್ಯಾಯವನ್ನು ಸ್ಥಾಪಿಸುತ್ತಾ ಬರಲಿ.
[61] ನೀವಾದರೋ ಈಗಿನಂತೆ ಮುಂದೆಯೂ ನಮ್ಮ ದೇವರಾದ ಯೆಹೋವನಲ್ಲಿ ಪೂರ್ಣ ಭಯಭಕ್ತಿಯುಳ್ಳವರಾಗಿ, ಆತನ ವಿಧಿಗಳನ್ನು ಅನುಸರಿಸಿ, ಆತನ ಆಜ್ಞೆಗಳನ್ನು ಕೈಕೊಳ್ಳಿರಿ” ಎಂಬುದೇ.
[62] ಆನಂತರ ಅರಸನೂ, ಎಲ್ಲಾ ಇಸ್ರಾಯೇಲರೂ ಯೆಹೋವನ ಸನ್ನಿಧಿಯಲ್ಲಿ ಯಜ್ಞಮಾಡಿದರು.
[63] ಸೊಲೊಮೋನನು ಯೆಹೋವನಿಗೋಸ್ಕರ ಮಾಡಿದ ಸಮಾಧಾನಯಜ್ಞಕ್ಕಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ ಮತ್ತು ಕುರಿಗಳು ಲಕ್ಷದ ಇಪ್ಪತ್ತು ಸಾವಿರ, ಈ ಪ್ರಕಾರ ಅರಸನೂ ಎಲ್ಲಾ ಇಸ್ರಾಯೇಲರೂ ಯೆಹೋವನ ಆಲಯವನ್ನು ಪ್ರತಿಷ್ಠೆ ಮಾಡಿದರು.
[64] ಯೆಹೋವನ ಆಲಯದ ಮುಂದಿರುವ ತಾಮ್ರದ ಯಜ್ಞವೇದಿಯು ಈ ಎಲ್ಲಾ ಸರ್ವಾಂಗಹೋಮ ದ್ರವ್ಯಗಳನ್ನೂ, ಧಾನ್ಯ ನೈವೇದ್ಯಗಳನ್ನೂ ಸಮಾಧಾನಯಜ್ಞದ ಕೊಬ್ಬನ್ನೂ ಹಿಡಿಯಲಾರದಷ್ಟು ಚಿಕ್ಕದಾಗಿದ್ದುದರಿಂದ ಸೊಲೊಮೋನನು ಆ ದಿನ ದೇವಾಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ, ಅಲ್ಲಿ ಅವುಗಳನ್ನೆಲ್ಲಾ ಸಮರ್ಪಿಸಿದನು.
[65] ಈ ರೀತಿಯಾಗಿ ಸೊಲೊಮೋನನು ಹಮಾತ್ ಪಟ್ಟಣದ ದಾರಿಯಿಂದ ಐಗುಪ್ತದ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ ಮಹಾ ಸಮೂಹವಾಗಿ ಕೂಡಿಬಂದಿದ್ದ ಎಲ್ಲಾ ಇಸ್ರಾಯೇಲರೂ ಎರಡು ವಾರ ಅಂದರೆ ಹದಿನಾಲ್ಕು ದಿನಗಳ ವರೆಗೆ ತಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಹಬ್ಬಮಾಡಿದರು.
[66] ಎಂಟನೆಯ ದಿನ ಜನರಿಗೆ ಹೋಗುವುದಕ್ಕೆ ಅಪ್ಪಣೆಯಾಗಲು ಅವರು ಅರಸನನ್ನು ವಂದಿಸಿ ಯೆಹೋವನು ತನ್ನ ಸೇವಕನಾದ ದಾವೀದನಿಗೂ ತನ್ನ ಪ್ರಜೆಗಳಾದ ಇಸ್ರಾಯೇಲರಿಗೂ ಮಾಡಿದ ಸರ್ವೋಪಕಾರಗಳನ್ನು ನೆನದು ಆನಂದಚಿತ್ತರಾಗಿ, ಹರ್ಷಿಸುತ್ತಾ ತಮ್ಮ ತಮ್ಮ ನಿವಾಸಗಳಿಗೆ ತೆರಳಿದರು.