Skip to content
Opens in a new window
Listen to this chapter • 5:59

[1] ಇಸ್ರಾಯೇಲರು ಐಗುಪ್ತದೇಶವನ್ನು ಬಿಟ್ಟುಬಂದ ನಾನೂರ ಎಂಭತ್ತನೆಯ ವರ್ಷದಲ್ಲಿ ಅಂದರೆ, ಇಸ್ರಾಯೇಲರ ಅರಸನಾದ ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಿನ, ವೈಶಾಖ ಮಾಸದಲ್ಲಿ ಅರಸನಾದ ಸೊಲೊಮೋನನು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದನು.

[2] ಅವನು ಯೆಹೋವನಿಗೋಸ್ಕರ ಕಟ್ಟಿಸಿದ ಆಲಯದ ಉದ್ದ ಅರುವತ್ತು ಮೊಳ, ಅಗಲ ಇಪ್ಪತ್ತು ಮೊಳ, ಎತ್ತರ ಮೂವತ್ತು ಮೊಳ.

[3] ದೇವಾಲಯದ ಪರಿಶುದ್ಧ ಸ್ಥಳದ ಮುಂದುಗಡೆಯಲ್ಲಿ ಒಂದು ಮಂಟಪವಿತ್ತು. ಅದರ ಉದ್ದ ದೇವಾಲಯದ ಅಗಲಕ್ಕೆ ಸರಿಯಾಗಿ ಇಪ್ಪತ್ತು ಮೊಳ, ಅಗಲ ಹತ್ತು ಮೊಳ.

[4] ಇದಲ್ಲದೆ ಅವನು ಆಲಯಕ್ಕೆ ತೆರೆಯಲಾರದ ಜಾಲರಿಗಳುಳ್ಳ ಕಿಟಿಕಿಗಳನ್ನಿರಿಸಿದನು.

[5] ದೇವಾಲಯದ ಗೋಡೆಯ ಸುತ್ತಲೂ ಅಂದರೆ ಪರಿಶುದ್ಧ ಸ್ಥಳ ಮತ್ತು ಮಹಾಪರಿಶುದ್ಧ ಸ್ಥಳ ಇವುಗಳ ಗೋಡೆಯ ಸುತ್ತಲೂ ಇನ್ನೊಂದು ಗೋಡೆಯನ್ನು ಕಟ್ಟಿಸಿ, ಇವುಗಳ ನಡುವೆ ಅಂತಸ್ತುಗಳುಳ್ಳ ಕೊಠಡಿಗಳನ್ನು ಮಾಡಿಸಿದನು.

[6] ಕೆಳಗಿನ ಕೊಠಡಿಗಳ ಅಗಲವು ಐದು ಮೊಳ. ಮೊದಲನೆಯ ಅಂತಸ್ತುಗಳ ಕೊಠಡಿಗಳ ಅಗಲವು ಆರು ಮೊಳ. ಎರಡನೆಯ ಅಂತಸ್ತುಗಳ ಕೊಠಡಿಗಳ ಅಗಲವು ಏಳು ಮೊಳ. ಅಂತಸ್ತಿನ ತೊಲೆಗಳನ್ನಿಡುವಾಗ ದೇವಾಲಯದ ಗೋಡೆಗಳಲ್ಲಿ ತೂತಾಗಬಾರದು ಎಂದು ಗೋಡೆಯ ಹೊರಮೈಯನ್ನು ಸೋಪಾನಾಕಾರವಾಗಿ ಮಾಡಿಸಿದನು.

[7] ದೇವಾಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಕಟ್ಟುವ ದಿನಗಳಲ್ಲಿ ಸುತ್ತಿಗೆ, ಉಳಿ ಮುಂತಾದ ಕಬ್ಬಿಣದ ಸಾಮಾನುಗಳ ಶಬ್ದವು ಕೇಳಿಸುತ್ತಿರಲಿಲ್ಲ.

[8] ಕೆಳಗಿನ ಕೊಠಡಿಗೆ ಹೋಗುವ ಬಾಗಿಲು ಆಲಯದ ಬಲಗಡೆಯಲ್ಲಿತ್ತು. ಅಲ್ಲಿಂದ ಮಧ್ಯದ ಅಂತಸ್ತಿಗೂ ಮತ್ತು ಮೂರನೆಯ ಅಂತಸ್ತಿಗೂ ಹೋಗಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.

[9] ಈ ಪ್ರಕಾರ ಅವನು ಮನೆಯನ್ನು ಕಟ್ಟಿಸಿ, ದೇವದಾರಿನ ತೊಲೆ ಮತ್ತು ಹಲಿಗೆಗಳಿಂದ ಮಾಳಿಗೆಯನ್ನು ಮಾಡಿಸಿ ಕೆಲಸ ಮುಗಿಸಿದನು.

[10] ಅವನು ದೇವಾಲಯದ ಸುತ್ತಲೂ ಒಂದರ ಮೇಲೊಂದು ಐದೈದು ಮೊಳ ಎತ್ತರವಾದ ಕೊಠಡಿಗಳನ್ನು ಕಟ್ಟಿಸಿದನು. ಇವು ದೇವದಾರಿನ ತೊಲೆಗಳಿಂದ ದೇವಾಲಯಕ್ಕೆ ಸೇರಿಸಲ್ಪಟ್ಟಿದ್ದವು.

[11] ಯೆಹೋವನು ಸೊಲೊಮೋನನಿಗೆ ಈ ಮಾತುಗಳನ್ನು ತಿಳಿಸಿದನು.

[12] “ನೀನು ಈಗ ಒಂದು ಆಲಯವನ್ನು ಕಟ್ಟಿಸುತ್ತಿರುವಿಯಷ್ಟೆ. ನೀನು ನನ್ನ ನಿಯಮ ವಿಧಿಗಳನ್ನು ಅನುಸರಿಸಿ, ನನ್ನ ಆಜ್ಞೆಗಳನ್ನು ಕೈಕೊಂಡು ನಡೆಯುವುದಾದರೆ, ನಾನು ನಿನ್ನನ್ನು ಕುರಿತು ನಿನ್ನ ತಂದೆಯಾದ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು.

[13] ನನ್ನ ಪ್ರಜೆಗಳಾದ ಇಸ್ರಾಯೇಲರನ್ನು ಕೈಬಿಡದೆ ಅವರ ಮಧ್ಯದಲ್ಲೇ ವಾಸಿಸುವೆನು” ಎಂದು ಹೇಳಿದನು.

[14] ಸೊಲೊಮೋನನು ದೇವಾಲಯವನ್ನು ಕಟ್ಟಿಸಿ ಮುಗಿಸಿದನು.

[15] ಅನಂತರ ಅವನು ಅದರ ಗೋಡೆಗಳ ಒಳಮೈಯನ್ನು ನೆಲದಿಂದ ಮಾಳಿಗೆಯವರೆಗೆ ದೇವದಾರಿನ ಹಲಗೆಗಳಿಂದ ಹೊದಿಸಿದನು. ನೆಲಕ್ಕೆ ತುರಾಯಿ ಮರದ ಹಲಗೆಗಳನ್ನು ಹಾಕಿದನು.

[16] ಇದಲ್ಲದೆ ಅವನು ದೇವಾಲಯದೊಳಗೆ ಹಿಂದಿನ ಇಪ್ಪತ್ತು ಮೊಳ ಸ್ಥಳವನ್ನು ಬಿಟ್ಟು ನೆಲದಿಂದ ತೊಲೆಗಳವರೆಗೆ ದೇವದಾರಿನ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿದನು. ಅದರ ಹಿಂದಿನ ಭಾಗವನ್ನು ಗರ್ಭಗೃಹ ಅಥವಾ ಮಹಾಪರಿಶುದ್ಧ ಸ್ಥಳ ಎಂದು ಪ್ರತ್ಯೇಕಿಸಿದನು.

[17] ದೇವಾಲಯದ ಪರಿಶುದ್ಧ ಸ್ಥಳ ಎನ್ನಿಸಿಕೊಳ್ಳುವ ಮುಂದಿನ ಭಾಗವು ನಲ್ವತ್ತು ಮೊಳ ಉದ್ದವಿತ್ತು.

[18] ದೇವಾಲಯದೊಳಗೆ ಕಲ್ಲು ಕಾಣಿಸದಂತೆ ಗೋಡೆಗಳನ್ನೆಲ್ಲಾ ಬಳ್ಳಿಗಳು ಮತ್ತು ಹೂವುಗಳು ಕೆತ್ತಿರುವ ದೇವದಾರಿನ ಹಲಿಗೆಗಳಿಂದ ಹೊದಿಸಿದನು.

[19] ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಇಡುವುದಕ್ಕಾಗಿ ದೇವಾಲಯದೊಳಗೆ ಒಂದು ಭಾಗವನ್ನು ಗರ್ಭಗೃಹವೆಂದು ಪ್ರತ್ಯೇಕಿಸಿದನು.

[20] ಆ ಗರ್ಭಗೃಹವು ಇಪ್ಪತ್ತು ಮೊಳ ಉದ್ದವೂ, ಇಪ್ಪತ್ತು ಮೊಳ ಅಗಲವೂ, ಇಪ್ಪತ್ತು ಮೊಳ ಎತ್ತರವೂ ಆಗಿತ್ತು. ಅದನ್ನು ಚೊಕ್ಕ ಬಂಗಾರದ ತಗಡಿನಿಂದಲೂ, ಧೂಪವೇದಿಯನ್ನು ದೇವದಾರು ಮರದಿಂದಲೂ ಹೊದಿಸಿದನು.

[21] ಸೊಲೊಮೋನನು ದೇವಾಲಯದ ಒಳಮೈಯನ್ನು ಚೊಕ್ಕ ಬಂಗಾರದ ತಗಡಿನಿಂದ ಹೊದಿಸಿದನು. ಮಹಾಪರಿಶುದ್ಧ ಸ್ಥಳದ ಎದುರಿನಲ್ಲಿ ಒಂದು ಗೋಡೆಯನ್ನು ಮತ್ತು ಇನ್ನೊಂದು ಗೋಡೆಗೆ ಬಂಗಾರದ ಸರಪಣಿಗಳನ್ನು ಕಟ್ಟಿಸಿದನು.

[22] ದೇವಾಲಯದ ಎಲ್ಲಾ ಗೋಡೆಗಳನ್ನೂ ಮಹಾಪರಿಶುದ್ಧ ಸ್ಥಳಕ್ಕೆ ಸೇರಿದ ವೇದಿಯನ್ನೂ ಪೂರ್ಣವಾಗಿ ಬಂಗಾರದ ತಗಡಿನಿಂದ ಹೊದಿಸಿದನು.

[23] ಇದಲ್ಲದೆ ಅವನು ಎಣ್ಣೇ ಮರದಿಂದ ಹತ್ತು ಮೊಳ ಎತ್ತರವಾದ ಎರಡು ಕೆರೂಬಿಗಳನ್ನು ಮಾಡಿಸಿ, ಅವುಗಳನ್ನು ಗರ್ಭಗೃಹದಲ್ಲಿ ಇರಿಸಿದನು.

[24] ಪ್ರತಿಯೊಂದು ಕೆರೂಬಿಯ ರೆಕ್ಕೆಗಳು ಐದೈದು ಮೊಳ ಉದ್ದವಿದ್ದವು. ಎರಡು ರೆಕ್ಕೆಗಳ ಅಂತರವು ಒಂದು ತುದಿಯಿಂದ ಇನ್ನೊಂದು ತುದಿಗೆ ಹತ್ತು ಮೊಳಗಳಾಗಿದ್ದವು.

[25] ಇನ್ನೊಂದು ಕೆರೂಬಿಯ ರೆಕ್ಕೆಗಳ ಅಂತರವು ಹತ್ತು ಮೊಳವಾಗಿತ್ತು. ಎರಡೂ ಕೆರೂಬಿಗಳ ಅಳತೆಯೂ ಆಕಾರವೂ ಒಂದೇಯಾಗಿದ್ದವು.

[26] ಅವೆರಡು ಹತ್ತತ್ತು ಮೊಳ ಎತ್ತರವಾಗಿದ್ದವು.

[27] ಅವನು ಅವುಗಳನ್ನು ದೇವಾಲಯದ ಗರ್ಭಗೃಹದಲ್ಲಿಡಿಸಿದನು. ಅವುಗಳ ರೆಕ್ಕೆಗಳು ಚಾಚಿದಂತಿದ್ದುದರಿಂದ ಮೊದಲನೆಯ ಕೆರೂಬಿಯ ಒಂದು ರೆಕ್ಕೆಯು ಈಚೆಯ ಗೋಡೆಗೂ, ಎರಡನೆಯ ಕೆರೂಬಿಯ ಒಂದು ರೆಕ್ಕೆಯು ಆಚೆಯ ಗೋಡೆಗೂ ತಗುಲಿದ್ದವು. ಅವುಗಳ ಬೇರೆ ಎರಡು ರೆಕ್ಕೆಗಳು ಮನೆಯ ಮಧ್ಯದಲ್ಲಿ ಒಂದನ್ನೊಂದು ತಗುಲಿದಂತೆ ಇತ್ತು.

[28] ಈ ಕೆರೂಬಿಗಳು ಬಂಗಾರದ ತಗಡುಗಳಿಂದ ಹೊದಿಸಲ್ಪಟ್ಟಿದ್ದವು.

[29] ಅವನು ದೇವಾಲಯದ ಎಲ್ಲಾ ಗೋಡೆಗಳಲ್ಲಿ ಹೊರಗೂ ಮತ್ತು ಒಳಗೂ ಕೆರೂಬಿ, ಖರ್ಜೂರವೃಕ್ಷ ಮತ್ತು ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿದನು.

[30] ದೇವಾಲಯದ ಒಳಗಣ ಮತ್ತು ಹೊರಗಣ ನೆಲವನ್ನು ಬಂಗಾರದ ತಗಡುಗಳಿಂದ ಹೊದಿಸಿದನು.

[31] ಗರ್ಭಗೃಹದ ಬಾಗಿಲಿಗೆ ಎಣ್ಣೇ ಮರದ ಬಾಗಿಲುಗಳನ್ನು ಇಡಿಸಿದನು. ಚೌಕಟ್ಟು ಪಂಚಕೋನಗಳಿಂದ ಕೂಡಿತ್ತು.

[32] ಎಣ್ಣೇ ಮರದ ಆ ಎರಡು ಬಾಗಿಲುಗಳಲ್ಲಿಯೂ ಕೆರೂಬಿ, ಖರ್ಜೂರವೃಕ್ಷ ಮತ್ತು ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ ಬಾಗಿಲುಗಳಿಗೆ ಬಂಗಾರದ ತಗಡುಗಳನ್ನು ಹೊದಿಸಿ, ಚಿತ್ರಗಳಿದ್ದಲ್ಲಿ ಆ ತಗಡನ್ನು ಇಡಿಸಿದನು.

[33] ಇದಲ್ಲದೆ ಅವನು ಪರಿಶುದ್ಧ ಸ್ಥಳದ ಬಾಗಿಲಿಗೆ ಎಣ್ಣೇ ಮರದಿಂದ ಚತುಷ್ಕೋಣದ ಚೌಕಟ್ಟನ್ನು ಮಾಡಿಸಿ

[34] ಅದಕ್ಕೆ ತುರಾಯಿಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಿಚಬಹುದಾಗಿತ್ತು.

[35] ಈ ಬಾಗಿಲುಗಳಲ್ಲಿ ಕೆರೂಬಿ, ಖರ್ಜೂರವೃಕ್ಷ ಮತ್ತು ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಅವುಗಳಿಗೆ ಬಂಗಾರದ ತಗಡನ್ನು ಹೊದಿಸಿ, ಕೆತ್ತನೆಯಿದ್ದಲ್ಲಿ ಆ ತಗಡನ್ನು ಇಡಿಸಿದನು.

[36] ದೇವಾಲಯದ ಪ್ರಾಕಾರದಲ್ಲಿ ಮೂರು ಸಾಲು ಕಲ್ಲಿನ ಕಂಬಗಳನ್ನೂ, ಒಂದು ಸಾಲು ದೇವದಾರಿನ ಕಂಬಗಳನ್ನೂ ಇರಿಸಿದನು.

[37] ಸೊಲೊಮೋನನ ಆಳ್ವಿಕೆಯ ನಾಲ್ಕನೆಯ ವರ್ಷದ ವೈಶಾಖ ಮಾಸದಲ್ಲಿ ಯೆಹೋವನ ಆಲಯದ ಅಸ್ತಿವಾರವನ್ನು ಹಾಕಿದರು.

[38] ಹನ್ನೊಂದನೆಯ ವರ್ಷದ ಎಂಟನೆಯ ತಿಂಗಳಾದ ಕಾರ್ತಿಕ ಮಾಸದಲ್ಲಿ ದೇವಾಲಯವೂ ಮತ್ತು ಅದರ ಎಲ್ಲಾ ಕಟ್ಟಡಗಳೂ ನೇಮದ ಪ್ರಕಾರ ಸಿದ್ಧವಾದವು. ದೇವಾಲಯವನ್ನು ಕಟ್ಟುವುದಕ್ಕೆ ಏಳು ವರ್ಷ ಹಿಡಿಯಿತು.

1 ಅರಸುಗಳು — Chapters