[1] ಅನಂತರ ಸಂಭವಿಸಿದ್ದೇನೆಂದರೆ, ಇಜ್ರೇಲಿನಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಹತ್ತಿರ ಇಜ್ರೇಲಿನವನಾದ ನಾಬೋತನೆಂಬ ಮನುಷ್ಯನ ದ್ರಾಕ್ಷಿತೋಟವಿತ್ತು.
[2] ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು, ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ. ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ” ಎಂದು ಹೇಳಿದನು.
[3] ಅದಕ್ಕೆ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತ ಸ್ವತ್ತನ್ನು ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಉತ್ತರಕೊಟ್ಟನು.
[4] “ನನ್ನ ಪಿತ್ರಾರ್ಜಿತ ಸ್ವತ್ತನ್ನು ನಿನಗೆ ಕೊಡುವುದಿಲ್ಲ” ಎಂದು ಇಜ್ರೇಲಿನವನಾದ ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ, ಮಂಚದ ಮೇಲೆ ಮಲಗಿ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು.
[5] ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನನ್ನು, “ನೀನು ಯಾಕೆ ಊಟಮಾಡುವುದಿಲ್ಲ? ನಿನಗೆ ಯಾವ ಚಿಂತೆ ಇರುತ್ತದೆ?” ಎಂದು ಕೇಳಿದಳು.
[6] ಅವನು, “ನಾನು ಇಜ್ರೇಲಿನವನಾದ ನಾಬೋತನಿಗೆ ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು, ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷಿತೋಟವನ್ನು ಕೊಡುತ್ತೇನೆ’ ಎಂಬುದಾಗಿ ಹೇಳಿದೆನು. ಆದರೆ ಅವನು ಕೊಡುವುದಿಲ್ಲ ಎಂದನು” ಎಂದು ಉತ್ತರಕೊಟ್ಟನು.
[7] ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
[8] ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
[9] ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ,
[10] ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು.
[11] ಆಗ ಊರಿನ ಹಿರಿಯರು ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು.
[12] ಅವರು ಉಪವಾಸವನ್ನು ಪ್ರಕಟಿಸಿ, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು.
[13] ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತು ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆ ಎಂಬುದಾಗಿ ಜನರ ಎದುರಿನಲ್ಲಿ ಅವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
[14] ನಾಬೋತನು ಕಲ್ಲೆಸೆಯಲ್ಪಟ್ಟು ಸತ್ತ ವರ್ತಮಾನವನ್ನು ಹಿರಿಯರು ಈಜೆಬೆಲಳಿಗೆ ತಿಳಿಸಿದರು.
[15] ಆಕೆಯು ಇದನ್ನು ಕೇಳಿ ಅಹಾಬನಿಗೆ, “ನೀನು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೋ, ಅವನು ಜೀವದಿಂದಿಲ್ಲ ಸತ್ತನು” ಎಂದು ಹೇಳಿದಳು.
[16] ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷಿ ತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೋಸ್ಕರ ಇಳಿದು ಹೋದನು.
[17] ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು.
[18] ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ.
[19] ಅವನಿಗೆ ನೀನು ಕೊಲೆ ಮಾಡಿ ಸ್ವತ್ತನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬುದೇ.
[20] ಅಹಾಬನು ಎಲೀಯನನ್ನು ಕಂಡು ಅವನನ್ನು, “ನನ್ನ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ” ಎಂದು ಕೇಳಲು ಅವನು, “ಹೌದು ಕಂಡುಹಿಡಿದ್ದೆನು. ನೀನು ನಿನ್ನನ್ನು ಪಾಪಕ್ಕೆ ಮಾರಿಕೊಂಡು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ.
[21] ಯೆಹೋವನು ನಿನ್ನನ್ನು ಕುರಿತು, ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನನ್ನು ಕಸವನ್ನೋ ಎಂಬಂತೆ ತೆಗೆದುಹಾಕುವೆನು. ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಕಡಿದುಬಿಡುವೆನು.
[22] ನೀನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರೇಪಿಸಿ ನನಗೆ ಕೋಪವನ್ನೆಬಿಸಿದ್ದರಿಂದ ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಅನ್ನುತ್ತಾನೆ
[23] ಇದಲ್ಲದೆ ಆತನು ಈಜೆಬೆಲಳನ್ನು ಕುರಿತು, ‘ನಾಯಿಗಳು ಇಜ್ರೇಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು.
[24] ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ, ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದು ಬಿಡುವವು’ ಎಂದು ಹೇಳುತ್ತಾನೆ” ಅಂದನು.
[25] ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
[26] ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆಯು ಕೇವಲ ಅಸಹ್ಯವಾಗಿತ್ತು.
[27] ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು.
[28] ಆದುದರಿಂದ ಯೆಹೋವನು ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತಗ್ಗಿಸಿಕೊಂಡಿದ್ದನ್ನು ಕಂಡಿಯಾ?
[29] ಅವನು ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಅದನ್ನು ಬರಮಾಡುವೆನು” ಎಂದು ಹೇಳಿದನು.