Skip to content
Opens in a new window
Listen to this chapter • 2:47

[1] ಜೊತೆ ಹಿರಿಯನೂ ಕ್ರಿಸ್ತ ಯೇಸುವಿನ ಶ್ರಮೆಗಳ ಸಾಕ್ಷಿಯೂ ಪ್ರತ್ಯಕ್ಷವಾಗಲಿರುವ ಮಹಿಮೆಯಲ್ಲಿ ಪಾಲುಗಾರನೂ ಆಗಿರುವ ನಾನು ನಿಮ್ಮಲ್ಲಿರುವ ಹಿರಿಯರನ್ನು ಬೇಡಿಕೊಳ್ಳುವುದು.

[2] ನಿಮ್ಮಲ್ಲಿರುವ ದೇವರ ಮಂದೆಯನ್ನು ಕಾಯಿರಿ. ಬಲಾತ್ಕಾರದಿಂದಲ್ಲ, ಆದರೆ ದೇವರ ಪ್ರಕಾರ ಇಷ್ಟಪೂರ್ವಕವಾಗಿಯೂ ನೀಚ ದ್ರವ್ಯಾಶೆಯಿಂದಲ್ಲ, ಸಿದ್ಧಮನಸ್ಸಿನಿಂದಲೂ ಮೇಲ್ವಿಚಾರಣೆ ಮಾಡಿರಿ.

[3] ದೇವರ ಸ್ವಾಸ್ತ್ಯದ ಮೇಲೆ ದೊರೆತನ ಮಾಡುವವರಂತೆ ನಡೆಯದೆ ಮಂದೆಗೆ ಆದರ್ಶವಾಗಿಯೇ ನಡೆದುಕೊಳ್ಳಿರಿ.

[4] ಪ್ರಧಾನ ಕುರುಬ ಆಗಿರುವವರು ಪ್ರತ್ಯಕ್ಷರಾಗುವಾಗ ನೀವು ಎಂದಿಗೂ ಬಾಡದ ಮಹಿಮೆಯುಳ್ಳ ಕಿರೀಟವನ್ನು ಹೊಂದುವಿರಿ.

[5] ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರಿ. ಏಕೆಂದರೆ, “ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ, ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ!”

[6] ಹೀಗಿರುವುದರಿಂದ ದೇವರ ಪರಾಕ್ರಮವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ, ಆಗ ದೇವರು ಸಕಾಲದಲ್ಲಿ ನಿಮ್ಮನ್ನು ಮೇಲಕ್ಕೆತ್ತುವರು.

[7] ನಿಮ್ಮ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿರಿ. ಅವರು ನಿಮಗೋಸ್ಕರ ಚಿಂತಿಸುತ್ತಾರೆ.

[8] ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ. ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.

[9] ನೀವು ನಂಬಿಕೆಯಲ್ಲಿ ದೃಢವಾಗಿದ್ದು ಸೈತಾನನನ್ನು ಎದುರಿಸಿರಿ. ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಸಹೋದರಿಯರಿಗೂ ಅಂಥಾ ಬಾಧೆಗಳೇ ಸಂಭವಿಸುತ್ತವೆ ಎಂದು ನಿಮಗೆ ತಿಳಿದದೆಯಲ್ಲಾ.

[10] ಕ್ರಿಸ್ತ ಯೇಸುವಿನ ಮೂಲಕ ನಿಮ್ಮನ್ನು ತಮ್ಮ ನಿತ್ಯ ಪ್ರಭಾವಕ್ಕೆ ಕರೆದ ಕೃಪಾಪೂರ್ಣ ಆಗಿರುವ ದೇವರು ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ತಾವೇ ನಿಮ್ಮನ್ನು ಪರಿಪೂರ್ಣಮಾಡಿ, ಸ್ಥಿರಪಡಿಸಿ, ಬಲಪಡಿಸಿ ನೆಲೆಗೊಳಿಸುವರು.

[11] ಅವರಿಗೆ ಸರ್ವಾಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.

[12] ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಿಮಗೆ ನಂಬಿಗಸ್ತ ಆಗಿರುವ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಸಹಾಯದಿಂದ ಸಂಕ್ಷೇಪವಾಗಿ ಇದನ್ನು ಬರೆದಿದ್ದೇನೆ. ನಿಜವಾದ ಕೃಪೆಯಲ್ಲಿ ನೀವು ನಿಂತವರಾಗಿದ್ದೀರಿ.

[13] ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬಿಲೋನಿನಲ್ಲಿರುವ ಸಭೆಯು ನಿಮಗೆ ವಂದನೆ ಹೇಳುತ್ತದೆ. ನನ್ನ ಮಗನಾದ ಮಾರ್ಕನು ಸಹ ವಂದನೆ ಹೇಳುತ್ತಾನೆ.

[14] ಪ್ರೀತಿಯಿಂದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮೆಲ್ಲರಿಗೆ ಶಾಂತಿಯಿರಲಿ!

1 ಪೇತ್ರನು — Chapters