Skip to content
Opens in a new window
Listen to this chapter • 5:40

[1] ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೇತ್ರನು, ಪೊಂತ, ಗಲಾತ್ಯ, ಕಪ್ಪದೋಕ್ಯ, ಏಷ್ಯಾ, ಬಿಥೂನ್ಯ ಇವುಗಳಲ್ಲೆಲ್ಲಾ ಚದರಿರುವ, ದೇವರಿಂದ ಆಯ್ಕೆಯಾದ ಪ್ರವಾಸಿಗಳಿಗೆ,

[2] ಪವಿತ್ರಾತ್ಮ ದೇವರ ಕಾರ್ಯದಿಂದ ಪರಿಶುದ್ಧರಾಗಿ, ಯೇಸುಕ್ರಿಸ್ತರಿಗೆ ವಿಧೇಯರಾಗಲು ಅವರ ರಕ್ತದಿಂದ ಪ್ರೋಕ್ಷಿತರಾಗುವುದಕ್ಕೂ ನಮ್ಮ ತಂದೆ ದೇವರ ಪೂರ್ವಜ್ಞಾನಾನುಸಾರವಾಗಿ ಆಯ್ಕೆಯಾದವರಿಗೆ ಬರೆಯುವುದು: ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.

[3] ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ತಂದೆಯೂ ದೇವರೂ ಆಗಿರುವವರಿಗೆ ಸ್ತೋತ್ರವಾಗಲಿ. ಅವರು ಕ್ರಿಸ್ತ ಯೇಸುವನ್ನು ತಮ್ಮ ಮಹಾ ಕರುಣಾನುಸಾರವಾಗಿ, ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದರಿಂದ ಜೀವಕರವಾದ ನಿರೀಕ್ಷೆಗೆ ನಮ್ಮನ್ನು ತಿರುಗಿ ಹುಟ್ಟಿಸಿದ್ದಾರೆ.

[4] ಈ ನಿರೀಕ್ಷೆಯು ಲಯ, ಕಳಂಕ, ಕ್ಷಯಗಳಿಲ್ಲದ ಬಾಧ್ಯತೆಯಾಗಿದೆ. ಈ ಬಾಧ್ಯತೆಯು ನಿಮಗೋಸ್ಕರ ಪರಲೋಕದಲ್ಲಿ ಇಟ್ಟಿದೆ.

[5] ಅಂತ್ಯಕಾಲದಲ್ಲಿ ಪ್ರಕಟವಾಗುವುದಕ್ಕೆ ಸಿದ್ಧವಾಗಿರುವ ರಕ್ಷಣೆಗೆ ದೇವರು ನಿಮ್ಮ ನಂಬಿಕೆಯ ಮುಖಾಂತರ ನಿಮ್ಮನ್ನು ತಮ್ಮ ಶಕ್ತಿಯಿಂದ ಕಾಯುತ್ತಾರೆ.

[6] ನೀವು ಸದ್ಯಕ್ಕೆ ಸ್ವಲ್ಪಕಾಲ ಅಗತ್ಯವಿದ್ದಲ್ಲಿ ನಾನಾ ಕಷ್ಟಗಳಲ್ಲಿ ದುಃಖಿಸುವವರಾಗಿದ್ದರೂ ಬಹಳವಾಗಿ ಹರ್ಷಿಸುವವರಾಗಿದ್ದೀರಿ.

[7] ಬಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವುದುಂಟಷ್ಟೆ. ಬಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಿಷ್ಕಪಟ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ಕೀರ್ತಿ, ಮಾನ, ಮಹಿಮೆಗಳನ್ನು ಉಂಟುಮಾಡುವುದು.

[8] ನೀವು ಕ್ರಿಸ್ತ ಯೇಸುವನ್ನು ನೋಡಲಿಲ್ಲವಾದರೂ ಅವರನ್ನು ಪ್ರೀತಿಸುತ್ತೀರಿ. ನೀವು ಈಗ ಅವರನ್ನು ಕಾಣದಿದ್ದರೂ ಅವರಲ್ಲಿ ನಂಬಿಕೆಯಿಟ್ಟು ವ್ಯಕ್ತಪಡಿಸಲಾಗದಂಥ ಪ್ರಭಾವವುಳ್ಳ ಸಂತೋಷದಿಂದ ಹರ್ಷಿಸುತ್ತೀರಿ.

[9] ಏಕೆಂದರೆ ನಿಮ್ಮ ನಂಬಿಕೆಯ ಅಂತಿಮ ಫಲವಾಗಿರುವ ಆತ್ಮಗಳ ರಕ್ಷಣೆಯನ್ನು ಹೊಂದುವವರಾಗಿದ್ದೀರಿ.

[10] ನಿಮಗೆ ಬರಬೇಕಾಗಿದ್ದ ಕೃಪೆಯನ್ನು ಕುರಿತು ಮುಂತಿಳಿಸಿದ ಪ್ರವಾದಿಗಳು, ಈ ರಕ್ಷಣೆಯ ವಿಷಯದಲ್ಲಿ ಸೂಕ್ಷ್ಮವಾಗಿ ವಿಚಾರಿಸಿ ಪರಿಶೋಧನೆ ಮಾಡಿದರು.

[11] ಅವರಲ್ಲಿದ್ದ ಕ್ರಿಸ್ತ ಯೇಸುವಿನ ಆತ್ಮ, ಕ್ರಿಸ್ತ ಯೇಸುವಿಗೆ ಸಂಭವಿಸಬೇಕಾದ ಬಾಧೆಗಳನ್ನೂ ಅವುಗಳ ತರುವಾಯ ಉಂಟಾಗುವ ಮಹಿಮೆಗಳನ್ನೂ ಪ್ರವಾದಿಸಿದಾಗ, ಅದರ ಸಮಯ ಸಂದರ್ಭಗಳನ್ನು ಕಂಡುಹಿಡಿಯಲು ಪರಿಶೋಧನೆ ಮಾಡಿದರು.

[12] ತಮಗೋಸ್ಕರವಲ್ಲ ಆದರೆ ನಿಮಗೋಸ್ಕರ ಸೇವೆಮಾಡಿದರೆಂದು ಅವರಿಗೆ ಪ್ರಕಟವಾಯಿತು. ಅವರು ಮುಂದಾಗಿ ಹೇಳಿದ ಸಂಗತಿಗಳೇ ಈಗ ಸಂಭವಿಸಿದವು ಎಂಬ ವರ್ತಮಾನವು, ಪರಲೋಕದಿಂದ ಕಳುಹಿಸಲಾದ ಪವಿತ್ರಾತ್ಮ ದೇವರಿಂದ ನಿಮಗೆ ಸುವಾರ್ತೆಯನ್ನು ಸಾರಿದವರ ಮೂಲಕ ಪ್ರಸಿದ್ಧಿಮಾಡಲಾಗಿದೆ. ದೇವದೂತರು ಸಹ ಈ ಸಂಗತಿಗಳನ್ನು ಕಣ್ಣಿಟ್ಟು ನೋಡಬೇಕೆಂದು ಅಪೇಕ್ಷಿಸುತ್ತಾರೆ.

[13] ಆದ್ದರಿಂದ, ನೀವು ನಿಮ್ಮ ಮನಸ್ಸನ್ನು ಸಿದ್ಧಮಾಡಿಕೊಂಡು, ಸ್ವಸ್ಥಚಿತ್ತರಾಗಿದ್ದು ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ ನಿಮಗೆ ದೊರಕುವ ಕೃಪೆಯ ಮೇಲೆ ನಿಮ್ಮ ನಿರೀಕ್ಷೆಯನ್ನು ಅಂತ್ಯದವರೆಗೆ ಇಡಿರಿ.

[14] ವಿಧೇಯರಾದ ಮಕ್ಕಳಿಗೆ ತಕ್ಕಂತೆ, ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮ್ಮ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರಬೇಡಿರಿ.

[15] ಆದರೆ ನಿಮ್ಮನ್ನು ಕರೆದಿರುವ ದೇವರು ಪರಿಶುದ್ಧರಾಗಿರುವ ಪ್ರಕಾರವೇ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ.

[16] ಏಕೆಂದರೆ, “ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು,” ಎಂದು ಪವಿತ್ರ ವೇದದಲ್ಲಿ ಬರೆದಿದೆ.

[17] ಪ್ರತಿಯೊಬ್ಬನ ಕೆಲಸವನ್ನು ಪಕ್ಷಪಾತವಿಲ್ಲದೆ ತೀರ್ಪುಮಾಡುವ ದೇವರನ್ನು ನೀವು ತಂದೆಯೆಂದು ಬೇಡಿಕೊಳ್ಳುವವರಾಗಿದ್ದು ನಿಮ್ಮ ಪ್ರವಾಸಕಾಲವನ್ನು ಭಯಭಕ್ತಿಯಿಂದ ಕಳೆಯಿರಿ.

[18] ನಿಮ್ಮ ಪೂರ್ವಿಕರಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿಹೋಗುವ ಬೆಳ್ಳಿ, ಬಂಗಾರದಿಂದಲ್ಲ.

[19] ಅದು ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯಾಗಿರುವ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತದಿಂದಲೇ.

[20] ಅವರು ಜಗದುತ್ಪತ್ತಿಗೆ ಮೊದಲೇ ನೇಮಕಗೊಂಡು ಈ ಅಂತ್ಯಕಾಲಗಳಲ್ಲಿ ನಿಮಗಾಗಿ ಪ್ರತ್ಯಕ್ಷರಾದರು.

[21] ಕ್ರಿಸ್ತ ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿ ಅವರಿಗೆ ಮಹಿಮೆಯನ್ನು ಕೊಟ್ಟ ದೇವರಲ್ಲಿ ನೀವು ಕ್ರಿಸ್ತ ಯೇಸುವಿನ ಮೂಲಕ ವಿಶ್ವಾಸವಿಟ್ಟಿದ್ದೀರಿ. ಹೀಗಿರಲಾಗಿ ನಿಮ್ಮ ನಂಬಿಕೆಯೂ ನಿರೀಕ್ಷೆಯೂ ದೇವರಲ್ಲಿಯೇ ನೆಲೆಗೊಂಡಿರಲಿ.

[22] ನೀವು ಕ್ರಿಸ್ತ ಯೇಸುವಿನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡಿದ್ದರಿಂದ ನಿಷ್ಕಪಟವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.

[23] ಏಕೆಂದರೆ ನೀವು ತಿರುಗಿ ಹುಟ್ಟಿದವರಾಗಿದ್ದೀರಲ್ಲಾ! ಆ ಜನ್ಮವು ನಾಶವಾಗುವ ಬೀಜದಿಂದಲ್ಲ. ಆದರೆ ನಾಶವಾಗದಂಥದ್ದರಿಂದ ಸಜೀವವಾದ ಸದಾಕಾಲವಿರುವ ದೇವರ ವಾಕ್ಯದ ಮೂಲಕ ಆಗಿದೆ.

[24] “ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯರ ಪ್ರಭಾವವೆಲ್ಲಾ ಹೊಲದ ಹೂವಿನಂತಿದೆ. ಹುಲ್ಲು ಒಣಗಿಹೋಗುವುದು. ಅದರ ಹೂವು ಉದುರಿ ಹೋಗುವುದು.

[25] ಕರ್ತದೇವರ ವಾಕ್ಯವಾದರೋ ಸದಾಕಾಲ ಇರುವುದು.” ಇದೇ ನಿಮಗೆ ಸಾರಲಾದ ಸುವಾರ್ತಾವಾಕ್ಯವು.

1 ಪೇತ್ರನು — Chapters