Skip to content
Opens in a new window
Listen to this chapter • 4:48

[1] ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನೂ ಆಗಿರುವ ಸೀಮೋನ ಪೇತ್ರನು, ನಮ್ಮ ದೇವರ ಮತ್ತು ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ನೀತಿಯ ಮೂಲಕ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದು:

[2] ದೇವರ ವಿಷಯವಾಗಿಯೂ ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ವಿಷಯವಾಗಿಯೂ ಇರುವ ತಿಳುವಳಿಕೆಯ ಮೂಲಕ ನಿಮಗೆ ಕೃಪೆಯೂ ಶಾಂತಿಯೂ ಹೆಚ್ಚೆಚ್ಚಾಗಿ ದೊರೆಯಲಿ.

[3] ದೇವರು ತಮ್ಮ ಸ್ವಂತ ಮಹಿಮೆಗಾಗಿಯೂ ಸದ್ಗುಣಕ್ಕಾಗಿಯೂ ನಮ್ಮನ್ನು ಕರೆದಿದ್ದಾರೆ. ಏಕೆಂದರೆ, ದೇವರ ತಿಳುವಳಿಕೆಯ ಮೂಲಕವಾಗಿ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವುಗಳನ್ನು ದೇವರ ಶಕ್ತಿಯು ನಮಗೆ ಕೊಡಲಾಗಿದೆ.

[4] ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂದು ಅತ್ಯಂತ ಮಹತ್ವವುಳ್ಳ ಅಮೂಲ್ಯವಾದ ವಾಗ್ದಾನಗಳನ್ನು ದೇವರು ನಮಗೆ ದಯಪಾಲಿಸಿದ್ದಾರೆ.

[5] ಈ ಕಾರಣದಿಂದಲೇ ನೀವು ಪೂರ್ಣಜಾಗ್ರತೆಯಿಂದ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ ಸದ್ಗುಣಕ್ಕೆ ಜ್ಞಾನವನ್ನೂ

[6] ಜ್ಞಾನಕ್ಕೆ ಸ್ವಯಂ ನಿಯಂತ್ರಣವನ್ನೂ ಸ್ವಯಂ ನಿಯಂತ್ರಣಕ್ಕೆ ತಾಳ್ಮೆಯನ್ನೂ

[7] ತಾಳ್ಮೆಗೆ ಭಕ್ತಿಯನ್ನೂ ಭಕ್ತಿಗೆ ಸೋದರ ಸ್ನೇಹವನ್ನೂ ಸೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.

[8] ಈ ಗುಣಗಳು ನಿಮ್ಮಲ್ಲಿದ್ದು ಹೆಚ್ಚುತ್ತಾ ಬಂದರೆ, ನಮ್ಮ ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಅರಿತುಕೊಳ್ಳುವುದರಲ್ಲಿ ನೀವು ನಿಷ್ಪ್ರಯೋಜಕರೂ ನಿಷ್ಫಲರೂ ಆಗದಂತೆ ಮಾಡುತ್ತವೆ.

[9] ಆದರೆ ಈ ಗುಣಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಿನ ಪಾಪಗಳಿಂದ ಶುದ್ಧನಾದದ್ದನ್ನು ಮರೆತು ಬಿಟ್ಟಿದ್ದಾನೆ.

[10] ಆದ್ದರಿಂದ ಪ್ರಿಯರೇ, ನಿಮ್ಮ ಕರೆಯುವಿಕೆಯನ್ನೂ ಆಯ್ಕೆಯನ್ನೂ ದೃಢಪಡಿಸಿಕೊಳ್ಳಲು ಸರ್ವ ಪ್ರಯತ್ನವನ್ನು ಮಾಡಿರಿ. ಏಕೆಂದರೆ ಇವುಗಳನ್ನು ನೀವು ಮಾಡಿದರೆ ಎಂದಿಗೂ ಪಾಪದಲ್ಲಿ ಬಿದ್ದುಹೋಗುವುದಿಲ್ಲ.

[11] ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವು ತಮ್ಮ ನಿತ್ಯ ರಾಜ್ಯದಲ್ಲಿ ಪ್ರವೇಶಿಸುವ ಭಾಗ್ಯವನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವರು.

[12] ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ಈಗಿನ ಸತ್ಯದಲ್ಲಿ ಸ್ಥಿರವಾಗಿದ್ದರೂ ಇವುಗಳನ್ನು ಯಾವಾಗಲೂ ನಿಮ್ಮ ನೆನಪಿಗೆ ತರಲು ನಾನು ಬಯಸುತ್ತೇನೆ.

[13] ನಾನು ನನ್ನ ದೇಹವೆಂಬ ಗುಡಾರದಲ್ಲಿ ಬಾಳುವ ತನಕ ನಿಮ್ಮ ನೆನಪಿಗೆ ತರುವುದು ಯುಕ್ತವೆಂದೆಣಿಸಿದ್ದೇನೆ.

[14] ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರು ನನಗೆ ಸ್ಪಷ್ಟ ಪಡಿಸಿದ ಪ್ರಕಾರ, ಈ ನನ್ನ ದೇಹವೆಂಬ ಗುಡಾರವನ್ನು ತೆಗೆದುಹಾಕುವ ಕಾಲ ಬೇಗನೆ ಬರುತ್ತದೆಂದು ನಾನು ಬಲ್ಲೆನು.

[15] ಆದರೂ ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ನನ್ನಿಂದಾದಷ್ಟು ಪ್ರಯಾಸಪಡುವೆನು.

[16] ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಶಕ್ತಿಯ ಬಗ್ಗೆಯೂ ಅವರ ಪುನರಾಗಮನದ ಬಗ್ಗೆಯೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಕುತಂತ್ರವಾಗಿ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸಲಿಲ್ಲ. ಆದರೆ ನಾವೇ ಕ್ರಿಸ್ತ ಯೇಸುವಿನ ಮಹತ್ತನ್ನು ಕಣ್ಣಾರೆ ಕಂಡವರಾಗಿ ತಿಳಿಯಪಡಿಸಿದೆವು.

[17] ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ,” ಎಂಬ ಧ್ವನಿಯು ಮಹೋನ್ನತ ಮಹಿಮೆಯಿಂದ ಅವರಿಗೆ ಉಂಟಾದದ್ದರಲ್ಲಿ ಅವರು ತಂದೆ ದೇವರಿಂದ ಗೌರವವನ್ನೂ ಮಹಿಮೆಯನ್ನೂ ಹೊಂದಿದರಲ್ಲವೇ.

[18] ನಾವು ಪರಿಶುದ್ಧ ಪರ್ವತದ ಮೇಲೆ ಕ್ರಿಸ್ತ ಯೇಸುವಿನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.

[19] ಮಾತ್ರವಲ್ಲದೆ ನಮಗೆ ಬಹು ನಿಶ್ಚಯವಾದ ಪ್ರವಾದನೆಯ ವಾಕ್ಯಗಳಿವೆ. ಉದಯ ನಕ್ಷತ್ರವಾಗಿರುವ ಕ್ರಿಸ್ತ ಯೇಸು ನಿಮ್ಮ ಹೃದಯಗಳಲ್ಲಿ ಉದಯಿಸುವಾಗ ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪದಂತೆ ಎಣಿಸಿ, ನೀವು ಆ ಪ್ರವಾದನಾ ವಾಕ್ಯಗಳಿಗೆ ಲಕ್ಷ್ಯಕೊಡುವುದು ಒಳ್ಳೆಯದು.

[20] ಪವಿತ್ರ ವೇದದ ಯಾವ ಪ್ರವಾದನೆಯೂ ಕೇವಲ ಪ್ರವಾದಿಗಳಿಂದ ಸ್ವಂತವಾಗಿ ವಿವರಿಸತಕ್ಕದ್ದಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿರಿ.

[21] ಯಾವ ಪ್ರವಾದನೆಯೂ ಎಂದೂ ಮನುಷ್ಯನ ಚಿತ್ತದಿಂದ ಬರಲಿಲ್ಲ, ಆದರೆ ಪ್ರವಾದಿಗಳು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಪಡೆದುಕೊಂಡಿದ್ದನ್ನೇ ಮಾತನಾಡಿದರು.

2 ಪೇತ್ರನು — Chapters