[1] ಆದ್ದರಿಂದ ಕ್ರಿಸ್ತ ಯೇಸುವು ನಮಗೋಸ್ಕರ ತಮ್ಮ ಮಾಂಸದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅವರಿಗಿದ್ದ ಮನೋಭಾವವನ್ನು ಧರಿಸಿಕೊಳ್ಳಿರಿ. ಏಕೆಂದರೆ ಮಾಂಸದಲ್ಲಿ ಬಾಧೆಪಟ್ಟವರು ಪಾಪಮಾಡುವುದನ್ನು ನಿಲ್ಲಿಸಿಬಿಡುವರು.
[2] ಅಂಥವರು ಉಳಿದಿರುವ ತಮ್ಮ ಭೂಲೋಕದ ಬಾಳಲ್ಲಿ ಮನುಷ್ಯರ ದುರಾಶೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವರು.
[3] ದೇವರನ್ನು ಅರಿಯದ ಜನರು ಮಾಡಲು ಇಚ್ಛಿಸುವುದನ್ನೆಲ್ಲಾ ನೀವು ಗತಕಾಲದಲ್ಲಿ ಸಾಕಷ್ಟು ಮಾಡಿದ್ದೀರಿ. ಆಗ ನೀವು ಅಶ್ಲೀಲತೆ, ದುರಾಶೆಗಳು, ಕುಡುಕತನ, ಅಮಲೇರುವಿಕೆ, ದುಂದು ಔತಣಗಳು, ಅಸಹ್ಯವಾದ ವಿಗ್ರಹಾರಾಧನೆಗಳು ಇವುಗಳನ್ನು ಮಾಡುತ್ತಿದ್ದೀರಿ.
[4] ಆದುದರಿಂದ ನಿಮ್ಮ ಹಳೆಯ ಸ್ನೇಹಿತರೊಂದಿಗೆ ನೀವು ಮುಂಚಿನಂತೆ ಹಳೆಯ ದುಷ್ಕಾರ್ಯಗಳಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
[5] ಅಂಥವರು ಬದುಕುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕಾಗಿ ಸಿದ್ಧವಾಗಿರುವ ದೇವರಿಗೆ ಲೆಕ್ಕ ಕೊಡಬೇಕಾಗುವುದು.
[6] ಈ ಕಾರಣದಿಂದಲೇ ಈಗ ಸತ್ತಿರುವವರಿಗೂ ಸಹ ಬದುಕಿದ್ದಾಗ ಸುವಾರ್ತೆ ಸಾರಲಾಯಿತು. ಆದ್ದರಿಂದ ಎಲ್ಲಾ ಮನುಷ್ಯರಿಗೆ ನೇಮಿಸಿದ ನ್ಯಾಯತೀರ್ಪಿನಂತೆ ಅವರು ದೇಹದಲ್ಲಿ ಮರಣ ಹೊಂದಿದ್ದರೂ, ತಮ್ಮ ಆತ್ಮದಲ್ಲಿ ದೇವರಿಗಾಗಿ ಜೀವಿಸುವರು.
[7] ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಸ್ವಸ್ಥಚಿತ್ತರಾಗಿಯೂ ಜಾಗ್ರತರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರಿ.
[8] ಎಲ್ಲಕ್ಕೂ ಮಿಗಿಲಾಗಿ ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ ಇರಲಿ. ಏಕೆಂದರೆ ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
[9] ಗೊಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
[10] ನೀವು ದೇವರಿಂದ ವಿವಿಧ ಕೃಪಾವರಗಳನ್ನು ಹೊಂದಿರಲಾಗಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿರುವ ವರಗಳನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.
[11] ಒಬ್ಬನು ಬೋಧಿಸುವವನಾದರೆ ದೇವರ ವಾಕ್ಯವನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರಿಂದ ಶಕ್ತಿಯನ್ನು ಹೊಂದಿದವನಾಗಿ ಮಾಡಲಿ. ಇದರಿಂದ ಎಲ್ಲದರಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವರಿಗೆ ಮಹಿಮೆಯೂ ಸ್ತೋತ್ರವೂ ಅಧಿಪತ್ಯವೂ ಯುಗಯುಗಾಂತರಗಳಲ್ಲಿ ಇರಲಿ. ಆಮೆನ್.
[12] ಪ್ರಿಯರೇ, ನಿಮ್ಮನ್ನು ಶೋಧಿಸಲು ಬರುವ ಅಗ್ನಿಪರೀಕ್ಷೆಗೆ ನೀವು ಆಶ್ಚರ್ಯಪಡಬೇಡಿರಿ. ಅಪೂರ್ವವಾದ ಸಂಗತಿ ನಿಮಗೆ ಸಂಭವಿಸಿತೆಂದು ಯೋಚಿಸಬೇಡಿರಿ.
[13] ನೀವು ಕ್ರಿಸ್ತ ಯೇಸುವಿನ ಬಾಧೆಗಳಲ್ಲಿ ಪಾಲುಗಾರರಾಗಿರುವುದರಿಂದ ಸಂತೋಷವುಳ್ಳವರಾಗಿರಿ. ಆಗ ಕ್ರಿಸ್ತ ಯೇಸುವಿನ ಮಹಿಮೆಯ ಪ್ರತ್ಯಕ್ಷತೆಯಲ್ಲಿ ನೀವು ಸಂತೋಷಪಟ್ಟು ಅತ್ಯಂತ ಉಲ್ಲಾಸಗೊಳ್ಳುವಿರಿ.
[14] ನೀವು ಕ್ರಿಸ್ತ ಯೇಸುವಿನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ, ಧನ್ಯರು. ಏಕೆಂದರೆ, ಮಹಿಮೆಯ ಆತ್ಮರೂ, ದೇವರೂ ನಿಮ್ಮಲ್ಲಿ ವಾಸಿಸುತ್ತಾರೆ.
[15] ನಿಮ್ಮಲ್ಲಿ ಯಾವನಾದರೂ ಕೊಲೆಗಾರನು, ಕಳ್ಳನು, ದುಷ್ಟನು ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನು ಅನುಭವಿಸಬಾರದು.
[16] ನೀವು ಕ್ರಿಸ್ತ ಯೇಸುವನ್ನು ಹಿಂಬಾಲಿಸುವವರಾಗಿ ಬಾಧೆಪಟ್ಟರೆ ನಾಚಿಕೆಪಡಬೇಡಿರಿ. ಆ ಹೆಸರನ್ನು ಹೊಂದಿದ್ದಕ್ಕಾಗಿ ದೇವರನ್ನು ಘನಪಡಿಸಲಿ.
[17] ಏಕೆಂದರೆ ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯತೀರ್ಪಿನ ಸಮಯವು ಬಂದಿದೆ. ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರಬಹುದು?
[18] ಮತ್ತು, “ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಪಾಪಿಷ್ಠನೂ ಆಗಿರುವವನ ಗತಿ ಏನು?”
[19] ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ತಮ್ಮ ಆತ್ಮಗಳನ್ನು ನಂಬಿಗಸ್ತ ಆಗಿರುವ ಸೃಷ್ಟಿಕರ್ತ ದೇವರಿಗೆ ಒಪ್ಪಿಸಿ, ಒಳ್ಳೆಯದನ್ನು ಮಾಡಲಿ.