[1] ಅದೇ ರೀತಿಯಾಗಿ ಪತ್ನಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಪತಿಯರಲ್ಲಿ ಯಾರಾದರೂ ವಾಕ್ಯವನ್ನು ಸ್ವೀಕರಿಸದವರಾಗಿದ್ದರೂ ಪತ್ನಿಯರ ನಡತೆಯಿಂದ ವಾಕ್ಯವಿಲ್ಲದೆ ಅವರನ್ನು ಗೆಲ್ಲುವಂತೆ,
[2] ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಲಿ.
[3] ವಿಚಿತ್ರವಾಗಿ ಜಡೆ ಹೆಣೆದುಕೊಳ್ಳುವುದೂ ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವುದೂ ಇಲ್ಲವೆ ತುಂಬಾ ಬೆಲೆಯ ಉಡಿಗೆಗಳನ್ನು ಧರಿಸಿಕೊಳ್ಳುವುದೂ ಇವೇ ನಿಮ್ಮ ಅಲಂಕಾರವಾಗಿರಬಾರದು.
[4] ಅದರ ಬದಲು ಸಾತ್ವಿಕವಾದ ಶಾಂತಮನಸ್ಸು ಎಂಬ ಹೃದಯದ ಆಂತರ್ಯದ ಅಲಂಕಾರವೇ ನಿಮ್ಮದಾಗಿರಲಿ. ಇದು ದೇವರ ದೃಷ್ಟಿಗೆ ಬಹು ಅಮೂಲ್ಯವಾದದ್ದಾಗಿದೆ.
[5] ಪೂರ್ವಕಾಲದಲ್ಲಿ ದೇವರ ಮೇಲೆ ನಿರೀಕ್ಷೆಯಿಟ್ಟ ಪರಿಶುದ್ಧ ಸ್ತ್ರೀಯರು ಸಹ ಹೀಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಪತಿಯರಿಗೆ ಅಧೀನರಾಗಿದ್ದರು.
[6] ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು “ಯಜಮಾನ” ಎಂದು ಕರೆದಳು. ನೀವು ಸಾರಳ ಪುತ್ರಿಯರಾಗಿದ್ದೀರಲ್ಲಾ. ನೀವು ಒಳ್ಳೆಯದು ಯಾವುದೋ ಅದನ್ನು ಮಾಡುವುದಾದರೆ ಯಾವುದಕ್ಕೂ ಭಯಪಡಬೇಕಾಗಿರುವುದಿಲ್ಲ.
[7] ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಬಲಹೀನಳೆಂಬುದನ್ನು ತಿಳಿದು ನಿಮ್ಮ ಪತ್ನಿಯರ ಸಂಗಡ ವಿವೇಕದಿಂದ ಇರಿ. ಅವರು ಜೀವ ಕೃಪೆಯಲ್ಲಿ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವುದಿಲ್ಲ.
[8] ಕಡೆಗೆ ನೀವೆಲ್ಲರೂ ಏಕ ಮನಸ್ಸುಳ್ಳವರಾಗಿರಿ, ಒಬ್ಬರಿಗೊಬ್ಬರೂ ಕರುಣೆಯುಳ್ಳವರಾಗಿದ್ದು ಸಹೋದರರಂತೆ ಪ್ರೀತಿಸಿರಿ. ಕನಿಕರವೂ ದೀನತೆ ಉಳ್ಳವರಾಗಿರಿ,
[9] ಅಪಕಾರಕ್ಕೆ ಅಪಕಾರವನ್ನೂ ನಿಂದೆಗೆ ನಿಂದೆಯನ್ನೂ ಮಾಡದೆ ಆಶೀರ್ವದಿಸಿರಿ. ಇದಕ್ಕಾಗಿ ದೇವರು ನಿಮ್ಮನ್ನು ಕರೆದರಲ್ಲವೇ? ಹೀಗೆ ಮಾಡುವವರಾದ ನೀವು ಆಶೀರ್ವಾದವನ್ನು ಬಾಧ್ಯವಾಗಿ ಹೊಂದುವಿರೆಂದು ನಿಮಗೆ ತಿಳಿದಿದೆಯಲ್ಲಾ.
[10] “ಬಾಳನ್ನು ಪ್ರೀತಿಸಿ ಸುದಿನಗಳನ್ನು ನೋಡುವುದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದ ಹಾಗೆ ತನ್ನ ತುಟಿಗಳನ್ನೂ ಬಿಗಿ ಹಿಡಿಯಲಿ.
[11] ಅವನು ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಮಾಡಲಿ. ಸಮಾಧಾನವನ್ನು ಹುಡುಕಿ ಅದಕ್ಕೋಸ್ಕರ ಪ್ರಯತ್ನಪಡಲಿ.
[12] ಏಕೆಂದರೆ ನೀತಿವಂತರ ಮೇಲೆ ಕರ್ತದೇವರು ದೃಷ್ಟಿ ಇಡುತ್ತಾರೆ. ಅವರ ಪ್ರಾರ್ಥನೆಗಳಿಗೆ ಕರ್ತದೇವರು ಕಿವಿಗೊಡುತ್ತಾರೆ. ಆದರೆ ಕೆಟ್ಟದ್ದನ್ನು ಮಾಡುವವರಿಗೆ ದೇವರು ವಿಮುಖರಾಗಿದ್ದಾರೆ,” ಎಂದು ಪವಿತ್ರ ವೇದದಲ್ಲಿ ಬರೆದಿದೆಯಲ್ಲಾ?
[13] ನೀವು ಒಳ್ಳೆಯದನ್ನು ಅನುಸರಿಸಲು ಆಸಕ್ತರಾಗಿದ್ದರೆ ನಿಮಗೆ ಕೇಡು ಮಾಡುವವರು ಯಾರಿದ್ದಾರೆ?
[14] ನೀವು ನೀತಿಯ ನಿಮಿತ್ತವೇ ಬಾಧೆಪಟ್ಟರೆ ನಿಮಗೆ ಆಶೀರ್ವಾದವಿರುವುದು. ಅವರ ಬೆದರಿಕೆಗೆ ಹೆದರಬೇಡಿರಿ ಮತ್ತು ಕಳವಳಪಡಬೇಡಿರಿ.
[15] ಆದರೆ ಕ್ರಿಸ್ತ ಯೇಸುವನ್ನು ನಿಮ್ಮ ಹೃದಯಗಳಲ್ಲಿ “ಕರ್ತದೇವರು” ಎಂದು ಪ್ರತಿಷ್ಠೆ ಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ ಉತ್ತರ ಹೇಳುವುದಕ್ಕೆ ಯಾವಾಗಲೂ ಸಿದ್ಧವಾಗಿರಿ.
[16] ಒಳ್ಳೆಯ ಮನಸ್ಸಾಕ್ಷಿಯುಳ್ಳವರಾಗಿರಿ. ಆಗ ನೀವು ಕೆಟ್ಟದ್ದನ್ನು ಮಾಡುವವರೆಂದು ನಿಮ್ಮ ವಿಷಯವಾಗಿ ಕೆಟ್ಟದ್ದಾಗಿ ಮಾತನಾಡಿ ಕ್ರಿಸ್ತ ಯೇಸುವಿನಲ್ಲಿರುವ ನಿಮ್ಮ ಒಳ್ಳೆಯ ನಡವಳಿಕೆಯ ವಿಷಯವಾಗಿ ಸುಳ್ಳಾಗಿ ದೂರು ಹೇಳುವವರು ನಾಚಿಕೊಳ್ಳುವರು.
[17] ಕೆಟ್ಟನಡತೆಯುಳ್ಳವರಾಗಿ ಬಾಧೆಪಡುವುದಕ್ಕಿಂತ ಒಳ್ಳೆಯ ನಡತೆಯುಳ್ಳವರಾಗಿಯೇ ದೇವರ ಚಿತ್ತವಿದ್ದರೆ ಬಾಧೆಪಡುವುದು ಲೇಸು.
[18] ಕ್ರಿಸ್ತ ಯೇಸುವು ನೀತಿವಂತರಾಗಿದ್ದರೂ ಅನೀತಿವಂತರಾದ ನಮ್ಮನ್ನು ದೇವರ ಬಳಿಗೆ ತರುವುದಕ್ಕಾಗಿ, ಒಂದೇ ಸಾರಿ ಪಾಪಗಳಿಗೋಸ್ಕರ ಬಾಧೆಪಟ್ಟು ಶರೀರದಲ್ಲಿ ಮರಣಹೊಂದಿದರು. ಆದರೆ ಆತ್ಮದಲ್ಲಿ ಬದುಕುವವರಾದರು.
[19] ಹೀಗೆ ಕ್ರಿಸ್ತ ಯೇಸುವು ಆತ್ಮರೂಪದಲ್ಲಿ ಬದುಕುವವರಾಗಿ, ಸೆರೆಯಲ್ಲಿದ್ದ ಅವಿಧೇಯ ಆತ್ಮಗಳ ಬಳಿಗೆ ಹೋಗಿ ಸಾರಿದರು.
[20] ಅಂದರೆ, ಪೂರ್ವಕಾಲದಲ್ಲಿ ನೋಹನು ನಾವೆಯನ್ನು ಕಟ್ಟುತ್ತಿರಲು, ದೇವರು ದೀರ್ಘಶಾಂತಿಯಿಂದ ಕಾದಿದ್ದಾಗ, ಆ ನಾವೆಯೊಳಗೆ ಎಂಟೇ ಜನರು ನೀರಿನಿಂದ ಸಂರಕ್ಷಣೆ ಹೊಂದಿದರು.
[21] ಈ ನೀರು ದೀಕ್ಷಾಸ್ನಾನವನ್ನು ಸೂಚಿಸುವಂತದ್ದಾಗಿದೆ. ಈ ದೀಕ್ಷಾಸ್ನಾನ ಕ್ರಿಸ್ತ ಯೇಸುವಿನ ಪುನರುತ್ಥಾನದ ಮೂಲಕ ಈಗ ನಮ್ಮನ್ನು ರಕ್ಷಿಸುತ್ತದೆ. ಅದು ಮೈಕೊಳೆಯನ್ನು ಹೋಗಲಾಡಿಸುವಂಥದಲ್ಲ. ಆದರೆ ಒಳ್ಳೆಯ ಮನಸ್ಸಾಕ್ಷಿಯು ಬೇಕೆಂದು ದೇವರನ್ನು ಬೇಡಿಕೊಳ್ಳುವಂಥದ್ದಾಗಿದೆ.
[22] ಕ್ರಿಸ್ತ ಯೇಸು ಪರಲೋಕಕ್ಕೆ ಹೋಗಿ ದೇವರ ಬಲಗಡೆಯಲ್ಲಿದ್ದಾರೆ, ದೇವದೂತರೂ ಪ್ರಭುತ್ವಗಳೂ ಅಧಿಕಾರಗಳೂ ಅವರಿಗೆ ಅಧೀನವಾಗಿವೆ.