[1] ಅರಸನಾದ ದಾರ್ಯಾವೆಷನ ಆಳ್ವಿಕೆಯ ನಾಲ್ಕನೆಯ ವರ್ಷದ ಕಿಸ್ಲೇವ್ ಎಂಬ ಒಂಭತ್ತನೆಯ ತಿಂಗಳಿನ ನಾಲ್ಕನೆಯ ದಿನದಲ್ಲಿ ಯೆಹೋವನು ಜೆಕರ್ಯನಿಗೆ ಒಂದು ವಾಕ್ಯವನ್ನು ದಯಪಾಲಿಸಿದನು.
[2] ಅಷ್ಟರೊಳಗೆ ಬೇತೇಲಿನವರು ಸರೆಚರನನ್ನೂ, ರೆಗೆಮ್ ಮೆಲೆಕನನ್ನೂ, ಅವನ ಪರಿಜನರನ್ನೂ ಯೆಹೋವನ ಪ್ರಸನ್ನತೆಯ ಪ್ರಾರ್ಥನೆಗಾಗಿ ಕಳುಹಿಸಿದ್ದರು.
[3] ಆಗ, “ನಾವು ಬಹು ವರ್ಷಗಳಿಂದ ಮಾಡಿಕೊಂಡು ಬಂದಂತೆ ಮುಂದೆಯೂ ಐದನೆಯ ತಿಂಗಳಿನಲ್ಲಿ ಉಪವಾಸ ಮಾಡಿ ಅಳಬೇಕೋ? ಎಂದು ಪ್ರವಾದಿಗಳ ಮತ್ತು ಸೇನಾಧೀಶ್ವರನಾದ ಯೆಹೋವನ ಆಲಯದ ಯಾಜಕರ ಹತ್ತಿರ ವಿಚಾರಿಸಿಕೊಂಡು ಬನ್ನಿರಿ” ಎಂಬುದಾಗಿ ಅವರಿಗೆ ಅಪ್ಪಣೆಕೊಟ್ಟು ಕಳುಹಿಸಿದ್ದೇವು.
[4] ಹೀಗಿರಲು ಸೇನಾಧೀಶ್ವರ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.
[5] “ನೀನು ಯಾಜಕರಿಗೂ ದೇಶದ ಸಕಲ ಜನರಿಗೂ ಹೀಗೆ ನುಡಿ, ‘ನೀವು ಈ ಎಪ್ಪತ್ತು ವರ್ಷಗಳಿಂದಲೂ ಐದನೆಯ ಮತ್ತು ಏಳನೆಯ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡುತ್ತಿದ್ದಾಗ, ಆ ನಿಮ್ಮ ಉಪವಾಸವು ನನಗಾಗಿಯೇ ಮಾಡಿದ್ದೋ?
[6] ನೀವು ಭೋಜನ ಮಾಡುವಾಗಲೂ, ಪಾನಮಾಡುವಾಗಲೂ ಆ ನಿಮ್ಮ ಭೋಜನಪಾನಗಳು ನಿಮ್ಮವುಗಳಾಗಿಯೇ ಇರುವುದಲ್ಲವೇ.
[7] ಯೆರೂಸಲೇಮು ಸುತ್ತಣ ಪಟ್ಟಣಗಳ ಸಮೇತ ಜನಭರಿತವಾಗಿಯೂ, ನೆಮ್ಮದಿಯಾಗಿಯೂ ಇದ್ದು, ದಕ್ಷಿಣ ಪ್ರಾಂತ್ಯದಲ್ಲಿಯೂ, ಪೂರ್ವದ ಇಳಕಲಿನ ಪ್ರದೇಶದಲ್ಲಿಯೂ ಜನರು ತುಂಬಿದ್ದಾಗ ಆ ಪೂರ್ವಕಾಲದ ಪ್ರವಾದಿಗಳ ಮೂಲಕ ಯೆಹೋವನು ಪ್ರಕಟಿಸಿದ ಮಾತುಗಳನ್ನು ನೀವು ಕೇಳಿಲ್ಲವೇ?’”
[8] ಅಲ್ಲದೆ ಯೆಹೋವನು ಜೆಕರ್ಯನಿಗೆ ಈ ವಾಕ್ಯವನ್ನು ದಯಪಾಲಿಸಿ,
[9] “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಷ್ಠೆಯಿಂದ ನ್ಯಾಯತೀರಿಸಿರಿ,
[10] ಒಬ್ಬರಿಗೊಬ್ಬರು ಪ್ರೀತಿ, ಕರುಣೆಗಳನ್ನು ತೋರಿಸಿರಿ; ವಿಧವೆ, ಅನಾಥ, ವಿದೇಶಿ, ದರಿದ್ರರಿಗೂ ಅನ್ಯಾಯಮಾಡಬೇಡಿರಿ; ನಿಮ್ಮಲ್ಲಿ ಯಾವನೂ ತನ್ನ ಸಹೋದರನಿಗೆ ಕೇಡನ್ನು ಬಗೆಯದಿರಲಿ.’
[11] “ನಿಮ್ಮ ಪೂರ್ವಿಕರಾದರೋ ಗಮನಿಸದೆ ಹೆಗಲುಕೊಡದೇ ಹೋದರು, ಕೇಳಬಾರದೆಂದು ಕಿವಿಮಂದಮಾಡಿಕೊಂಡರು.
[12] ಧರ್ಮೋಪದೇಶವನ್ನೂ, ಸೇನಾಧೀಶ್ವರ ಯೆಹೋವನು ಪೂರ್ವಕಾಲದ ಪ್ರವಾದಿಗಳ ಮೂಲಕ ತನ್ನ ಆತ್ಮನಿಂದ ಹೇಳಿಸಿದ ಮಾತುಗಳನ್ನೂ ಕೇಳಬಾರದೆಂದು ತಮ್ಮ ಹೃದಯಗಳನ್ನು ವಜ್ರದಷ್ಟು ಕಠಿಣಪಡಿಸಿಕೊಂಡರು. ಆದಕಾರಣ ಸೇನಾಧೀಶ್ವರ ಯೆಹೋವನ ಕೋಪಕ್ಕೆ ಗುರಿಯಾದರು.
[13] “ಆಗ ಸೇನಾಧೀಶ್ವರ ಯೆಹೋವನು ಇಂತೆಂದನು, ‘ನಾನು ಕೂಗಿದರೂ ಅವರು ಹೇಗೆ ಕೇಳಲಿಲ್ಲವೋ ಹಾಗೆ ಅವರು ಕೂಗಿದರೂ ನಾನು ಕೇಳುವುದಿಲ್ಲ.
[14] ಅವರು ನೋಡದ ಎಲ್ಲಾ ಜನಾಂಗಗಳ ಮಧ್ಯಕ್ಕೆ ಅವರನ್ನು ತೂರಿಬಿಡುವೆನು. ಯೆಹೋವನ ಈ ಮಾತಿನಂತೆ ಅವರು ಚದರಿದ ಮೇಲೆ ದೇಶವು ಹಾಳಾಯಿತು. ಅದರಲ್ಲಿ ಯಾರೂ ಹೋಗುತ್ತಿರಲಿಲ್ಲ, ಬರುತ್ತಿರಲಿಲ್ಲ; ಆ ರಮ್ಯ ದೇಶವನ್ನು ಹಾಳುಮಾಡಿದರು.’”