[1] ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ. ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ, ಮನುಷ್ಯರೊಳಗೆ ಜೀವಾತ್ಮವನ್ನು ಸೃಷ್ಟಿಸುವ ಯೆಹೋವನು ಇಂತೆನ್ನುತ್ತಾನೆ,
[2] “ಆಹಾ! ನಾನು ಯೆರೂಸಲೇಮನ್ನು ಸುತ್ತಣ ಸಕಲ ಜನಾಂಗಗಳಿಗೆ ಅಮಲೇರಿಸಿ ಓಲಾಡಿಸುವ ಬೋಗುಣಿಯನ್ನಾಗಿ ಮಾಡುವೆನು; ಯೆರೂಸಲೇಮಿಗೆ ಮುತ್ತಿಗೆಹಾಕುವಾಗ ಯೆಹೂದಕ್ಕೂ ಇಕ್ಕಟ್ಟಾಗುವುದು.
[3] ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತ ಜನಗಳಿಗೂ, ಭಾರೀ ಬಂಡೆಯನ್ನಾಗಿ ಮಾಡುವೆನು; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಲೋಕದ ಸಕಲ ರಾಜ್ಯಗಳು ಅದನ್ನೆತ್ತಿ ಹಾಕಲು ಕೂಡಿಬರುವವು.”
[4] ಯೆಹೋವನು ಇಂತೆನ್ನುತ್ತಾನೆ, “ಆ ದಿನದಲ್ಲಿ ನಾನು ಎಲ್ಲಾ ಕುದುರೆಗಳು ಭಯದಿಂದ ತಬ್ಬಿಬ್ಬಾಗುವಂತೆ ಮಾಡುವೆನು, ಸವಾರರನ್ನು ಭ್ರಮೆಗೊಳಿಸುವೆನು; ಯೆಹೂದ ವಂಶವನ್ನು ಕಟಾಕ್ಷಿಸಿ ಜನಾಂಗಗಳ ಅಶ್ವಗಳನ್ನೆಲ್ಲಾ ಕುರುಡು ಮಾಡುವೆನು.
[5] ಆಗ ಯೆಹೂದದ ಕುಲಪತಿಗಳು ತಮ್ಮ ಮನಸ್ಸಿನೊಳಗೆ, ‘ಯೆರೂಸಲೇಮಿನವರು ತಮ್ಮ ದೇವರಾದ ಸೇನಾಧೀಶ್ವರ ಯೆಹೋವನಲ್ಲಿ ಬಲಗೊಂಡು ನಮಗೆ ತ್ರಾಣವಾಗಿದ್ದಾರೆ’ ಅಂದುಕೊಳ್ಳುವರು.
[6] “ಆ ದಿನದಲ್ಲಿ ನಾನು ಯೆಹೂದದ ಕುಲಪತಿಗಳನ್ನು ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯನ್ನಾಗಿಯೂ, ಸಿವುಡುಗಳ ನಡುವಣ ಪಂಜನ್ನಾಗಿಯೂ ಮಾಡುವೆನು; ಅವರು ಸುತ್ತಣ ಜನಾಂಗಗಳನ್ನೆಲ್ಲಾ ಎಡಬಲಗಳಲ್ಲಿ ನುಂಗಿಬಿಡುವರು; ಯೆರೂಸಲೇಮಿನವರು ತಮ್ಮ ಸ್ಥಳವಾದ ಯೆರೂಸಲೇಮಿನಲ್ಲೇ ಇನ್ನು ವಾಸಿಸುವರು;
[7] ದಾವೀದ ವಂಶದವರ ಮಹಿಮೆಯೂ, ಯೆರೂಸಲೇಮಿನವರ ಮಹಿಮೆಯೂ, ಯೆಹೂದದ ಮಹಿಮೆಯನ್ನು ಮೀರದಂತೆ ಯೆಹೋವನು ಯೆಹೂದದ ಪಾಳೆಯಗಳಿಗೆ ಮೊದಲು ಜಯವನ್ನುಂಟುಮಾಡುವನು;
[8] ಆ ದಿನದಲ್ಲಿ ಯೆಹೋವನು ಯೆರೂಸಲೇಮಿನವರನ್ನು ಸುತ್ತಲು ಕಾಪಾಡುವನು; ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು; ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ ಅವರಿಗೆ ಮುಂದಾಳಾಗುವುದು.
[9] ಯೆರೂಸಲೇಮಿನ ಮೇಲೆ ಬೀಳುವ ಎಲ್ಲಾ ಜನಾಂಗಗಳ ಧ್ವಂಸಕ್ಕೆ ಆ ದಿನದಲ್ಲಿ ಕೈಹಾಕುವೆನು.”
[10] ದಾವೀದ ವಂಶದವರಲ್ಲಿಯೂ, ಯೆರೂಸಲೇಮಿನವರಲ್ಲಿಯೂ ದೇವರ ದಯೆಯನ್ನು ಹಂಬಲಿಸಿ ಬೇಡುವ ಭಾವವನ್ನು ಸುರಿಸುವೆನು; ತಾವು ಇರಿದವನನ್ನು ದಿಟ್ಟಿಸಿ ನೋಡುವರು; ಇದ್ದ ಒಬ್ಬ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು. ಚೊಚ್ಚಲ ಮಗನ ವಿಯೋಗಕ್ಕೋಸ್ಕರ ದುಃಖಪಟ್ಟಂತೆ ಅವನಿಗಾಗಿ ದುಃಖಿಸುವರು.
[11] ಮೆಗಿದ್ದೋವಿನ ತಗ್ಗಿನೊಳಗೆ ಹದದ್ ರಿಮ್ಮೋನಿನಲ್ಲಿ ಗೋಳಾಟವಾಗುವಂತೆ ಯೆರೂಸಲೇಮಿನಲ್ಲಿ ಆ ದಿನ ದೊಡ್ಡ ಗೋಳಾಟವಾಗುವುದು.
[12] ದೇಶವೆಲ್ಲಾ ಗೋಳಾಡುವುದು, ಒಂದೊಂದು ಕುಟುಂಬವು ಬೇರೆ ಬೇರೆಯಾಗಿ ಗೋಳಾಡುವುದು; ದಾವೀದ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ; ನಾತಾನ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ;
[13] ಲೇವಿ ವಂಶದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ; ಶಿಮ್ಮಿಯ ಸಂತಾನದ ಕುಟುಂಬವು ಬೇರೆ, ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ,
[14] ಉಳಿದ ಕುಟುಂಬಗಳೆಲ್ಲಾ ಬೇರೆ ಬೇರೆ, ಒಂದೊಂದರಲ್ಲಿಯೂ ಹೆಂಗಸರು, ಗಂಡಸರು ಬೇರೆ ಬೇರೆ, ಹೀಗೆ ಬೇರೆ ಬೇರೆಯಾಗಿಯೇ ಗೋಳಾಡುವರು.