Skip to content
Opens in a new window
Listen to this chapter • 3:26

[1] ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ, ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!

[2] ತುರಾಯಿ ಮರವೇ, ಗೋಳಾಡು! ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು ನಾಶವಾಗಿವೆ. ಬಾಷಾನಿನ ಅಲ್ಲೋನ್ ಮರಗಳೇ ಕಿರಿಚಿರಿ! ನುಗ್ಗಲಾಗದ ದಟ್ಟವಾದ ವನವು ಉರುಳಿದೆ.

[3] ಆಹಾ, ಕುರುಬರು ಗೋಳಾಡುತ್ತಾರೆ! ಅವರ ಅತಿಶಯದ ಕಾವಲು ಹಾಳಾಗಿದೆ. ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ! ಯೊರ್ದನಿನ ದಟ್ಟ ಅಡವಿಯು ಹಾಳಾಗಿದೆ.

[4] ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು, “ಕೊಯ್ಗುರಿಗಳ ಮಂದೆಯನ್ನು ಕಾಯಿ;

[5] ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ದೋಷಿಗಳೆಂದು ಎಣಿಸುವುದಿಲ್ಲ; ಮಾರುವವರು ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು. ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸುವುದಿಲ್ಲ.”

[6] ಯೆಹೋವನು ಇಂತೆನ್ನುತ್ತಾನೆ, “ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ಅವನವನ ನೆರೆಯವನ ಕೈಗೂ, ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಠರು ಲೋಕವನ್ನು ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು.”

[7] ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ “ಕೃಪೆ” ಎಂತಲೂ ಇನ್ನೊಂದಕ್ಕೆ, “ಒಗ್ಗಟ್ಟು” ಎಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು.

[8] ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆ ತಪ್ಪಿತು; ಅವುಗಳಿಂದ ನನಗೆ ಬೇಸರವಾಯಿತು.

[9] ಆಗ, “ನಾನು ನಿಮ್ಮನ್ನು ಮೇಯಿಸೆನು; ಸಾಯುವುದು ಸಾಯಲಿ, ಹಾಳಾಗುವುದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವೊಂದನ್ನು ತಿನ್ನಲಿ ಅಂದುಕೊಂಡೆನು.”

[10] ಆಗ ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು “ಕೃಪೆ” ಎಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. ಆಗಲೇ ಮುರಿದುಹೋಯಿತು;

[11] ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು, ಇದು ಯೆಹೋವನ ನುಡಿ ಎಂದು ತಿಳಿದುಕೊಂಡವು.

[12] ಅನಂತರ ನಾನು ನಿಮಗೆ, “ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ ಇಲ್ಲವಾದರೆ ಬಿಡಿರಿ” ಅನ್ನಲು ಅವರು ಮೂವತ್ತು ತೊಲೆ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು.

[13] ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ, “ಅದನ್ನು ಡಬ್ಬಿಗೆ ಹಾಕು” ಎಂದು ಅಪ್ಪಣೆ ಮಾಡಿದಾಗ ನಾನು ಆ ಮೂವತ್ತು ಶೆಕೆಲ್ ಬೆಳ್ಳಿ ನಾಣ್ಯವನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು.

[14] ಕೂಡಲೆ ಯೆಹೂದಕ್ಕೂ, ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು “ಒಗ್ಗಟ್ಟು” ಎಂಬ ನನ್ನ ಎರಡನೆಯ ಕೋಲನ್ನು ಮುರಿದುಬಿಟ್ಟೆನು.

[15] ಆ ಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆ ಮಾಡಿದನು, “ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮೂರ್ಖ ಕುರುಬನಂತೆ ನಟಿಸು.

[16] ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ನೇಮಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದುರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರು ಮಾಡುವನು.

[17] ಮಂದೆಯನ್ನು ಕಾಯದೆ ಬಿಟ್ಟು ಬಿಟ್ಟ ಕುರುಬನ ಗತಿಯನ್ನು ಏನು ಹೇಳಲಿ? ಖಡ್ಗವು ಅವನ ತೋಳಿಗೂ, ಬಲಗಣ್ಣಿಗೂ ತಾಗುವುದು; ಅವನ ತೋಳು ತೀರಾ ಒಣಗಿಹೋಗುವುದು. ಅವನ ಬಲಗಣ್ಣು ಪೂರಾ ಮೊಬ್ಬಾಗುವುದು.”

ಜೆಕರ್ಯನು — Chapters