Skip to content
Opens in a new window
Listen to this chapter • 2:46

[1] ನಂತರ ನಾನು ಕಣ್ಣೆತ್ತಿ ನೋಡಲು, ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು. ಅ ಬೆಟ್ಟಗಳು ತಾಮ್ರದವುಗಳಾಗಿದ್ದವು.

[2] ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು; ಎರಡನೆಯ ರಥಕ್ಕೆ ಕಪ್ಪು ಕುದುರೆಗಳು;

[3] ಮೂರನೆಯ ರಥಕ್ಕೆ ಬಿಳಿ ಕುದುರೆಗಳು; ನಾಲ್ಕನೆಯ ರಥಕ್ಕೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು.

[4] ಆಗ ನನ್ನ ಸಂಗಡ ಮಾತನಾಡಿದ ದೇವದೂತನಿಗೆ, “ನನ್ನ ಸ್ವಾಮೀ ಇದೇನು?” ಎಂದೆನು.

[5] ಆ ದೇವದೂತನು ನನಗೆ, “ಇವು ಆಕಾಶದ ನಾಲ್ಕು ಗಾಳಿಗಳು; ಭೂಲೋಕದ ಒಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ” ಎಂದು ಉತ್ತರಕೊಟ್ಟನು.

[6] ಅನಂತರ ಕಪ್ಪು ಕುದುರೆಗಳ ರಥ ಉತ್ತರ ದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಪಶ್ಚಿಮ ದೇಶಕ್ಕೆ ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳ ರಥ ದಕ್ಷಿಣ ದೇಶಕ್ಕೆ ಹೋದವು.

[7] ಕೆಂಪು ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವುದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಆಗ ಅವನು, “ಹೊರಡಿರಿ, ಲೋಕದಲ್ಲಿ ಸಂಚರಿಸಿರಿ” ಎಂದು ಅಪ್ಪಣೆ ಮಾಡಲು ಅವು ಲೋಕದಲ್ಲಿ ಸಂಚರಿಸಿದವು.

[8] ಆ ಮೇಲೆ ಅವನು ನನಗೆ, “ಆಹಾ, ಉತ್ತರ ದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ” ಎಂದು ಕೂಗಿ ಹೇಳಿದನು.

[9] ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

[10] ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ ಮತ್ತು ಯೆದಾಯ ಎಂಬುವರ ಕೈಯಿಂದ ಬೆಳ್ಳಿ ಬಂಗಾರಗಳನ್ನು ತೆಗೆದುಕೋ; ಈ ದಿನವೇ ನೀನು ಹೋಗಿ ಬಾಬೆಲಿನಿಂದ ಬಂದು, ಇವರು ಇಳಿದುಕೊಂಡಿರುವ ಚೆಫನ್ಯನ ಮಗನಾದ ಯೋಷಿಯನ ಮನೆಗೆ ಹೋಗಿ,

[11] ಇವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಕಿರೀಟವನ್ನು ಮಾಡಿ ಯೆಹೋಚಾದಾಕನ ಮಗನೂ ಹಾಗೂ ಮಹಾಯಾಜಕನು ಆದ ಯೆಹೋಶುವನ ತಲೆಯ ಮೇಲೆ ಇಟ್ಟು,

[12] ಅವನಿಗೆ ಹೀಗೆ ಹೇಳು, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ, ಯೆಹೋವನ ಆಲಯವನ್ನು ಕಟ್ಟಿಸುವನು.

[13] ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ಹೊಂದಿಕೊಂಡು ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು. ಮತ್ತು ಯಾಜಕರು ತನ್ನ ಸಿಂಹಾಸನದಲ್ಲಿ ಕುಳಿತಿರುವರು. ಅವರಿಬ್ಬರೂ ಸಮ್ಮತಿ ಸಮಾಧಾನದಿಂದ ಇರುವರು.

[14] “‘ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಯೋಷೀಯ ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಡಲಾಗಿದೆ.

[15] ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವುದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರನಾದ ಯೆಹೋವನೇ ಎಂದು ನಿಮಗೆ ದೃಢವಾಗುವುದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವುದು.’”

ಜೆಕರ್ಯನು — Chapters