Skip to content
Opens in a new window
Listen to this chapter • 3:41

[1] ಅಧಿಪತಿಗಳಿಗೂ, ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕಂತಲೂ, ಸಕಲಸತ್ಕಾರ್ಯಗಳನ್ನು ಮಾಡುವುದಕ್ಕೆ ಸಿದ್ಧರಾಗಿರಬೇಕೆಂತಲೂ,

[2] ಯಾರನ್ನೂ ದೂಷಿಸದೆ, ಕುತರ್ಕ ಮಾಡದೆ ಎಲ್ಲಾ ಜನರಿಗೂ ಪೂರ್ಣಸದ್ಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ, ಅವರಿಗೆ ನೆನಪಿಸು.

[3] ಏಕೆಂದರೆ ನಾವು ಸಹ, ಮೊದಲು ಅವಿವೇಕಿಗಳೂ, ಅವಿಧೇಯರೂ, ಮೋಸಹೋದವರೂ, ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ಅಧೀನರೂ, ಕೆಟ್ಟತನ, ಹೊಟ್ಟೆಕಿಚ್ಚುಗಳಲ್ಲಿ ಕಾಲಕಳೆಯುವವರೂ, ಅಸಹ್ಯರೂ, ಒಬ್ಬರನ್ನೊಬ್ಬರು ಹಗೆಮಾಡುವವರೂ ಆಗಿದ್ದೆವು.

[4] ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ, ಪ್ರೀತಿಯೂ, ಮನುಷ್ಯರಿಗೆ ಪ್ರತ್ಯಕ್ಷವಾದಾಗ,

[5] ನಾವು ಮಾಡಿದ ಪುಣ್ಯಕಾರ್ಯಗಳ ನಿಮಿತ್ತದಿಂದಲ್ಲ ಪುನರ್ಜನ್ಮವನ್ನು ಸೂಚಿಸುವ ದೀಕ್ಷಾಸ್ನಾನದ ಮೂಲಕವಾಗಿಯೂ, ಪವಿತ್ರಾತ್ಮನ ನವೀಕರಣದ ಮೂಲಕವಾಗಿಯೂ ಆತನು ತನ್ನ ಕರುಣೆಯಿಂದಲೇ ನಮ್ಮನ್ನು ರಕ್ಷಿಸಿದನು.

[6] ನಾವು ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಕೃಪೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗೆ ಬಾಧ್ಯರಾಗುವಂತೆ ದೇವರು ಆತನ ಮೂಲಕ ಪವಿತ್ರಾತ್ಮನನ್ನು ನಮ್ಮ ಮೇಲೆ ಹೇರಳವಾಗಿ ಸುರಿಸಿದನು.

[8] ಇದು ನಂಬತಕ್ಕ ಮಾತಾಗಿದೆ; ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವುದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಎಲ್ಲಾ ಮಾತುಗಳನ್ನು ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಅದು ಉತ್ತಮವೂ, ಮನುಷ್ಯರಿಗೆ ಪ್ರಯೋಜನಕಾರಿಯೂ ಆಗಿವೆ.

[9] ಆದರೆ ಬುದ್ಧಿಯಿಲ್ಲದ ತರ್ಕಗಳಿಂದಲೂ, ವಂಶಾವಳಿಗಳಿಂದಲೂ, ಜಗಳಗಳಿಂದಲೂ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ವಾಗ್ವಾದಗಳಿಂದಲೂ ದೂರವಾಗಿರು; ಅವು ನಿಷ್ಪ್ರಯೋಜಕವೂ ವ್ಯರ್ಥವೂ ಆಗಿವೆ.

[10] ಸಭೆಯಲ್ಲಿ ಭಿನ್ನಭೇದಗಳನ್ನುಂಟುಮಾಡುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟು ಬಿಡು;

[11] ಅಂಥವನು ಸನ್ಮಾರ್ಗದಿಂದ ದೂರವಾದವನೂ ಪಾಪಮಾಡುವವನೂ ಆಗಿದ್ದಾನೆ; ತಾನು ಶಿಕ್ಷೆಗೆ ಅರ್ಹನೆಂದು ಅವನ ಮನಸ್ಸೇ ನಿರ್ಣಯ ಮಾಡುತ್ತದೆ.

[12] ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡಿದ್ದರಿಂದ ಅರ್ತೆಮನನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವುದಕ್ಕೆ ಪ್ರಯತ್ನಿಸು.

[13] ನ್ಯಾಯಶಾಸ್ತ್ರಿಯಾದ ಜೇನನನ್ನೂ ಮತ್ತು ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಕಳುಹಿಸಿಕೊಡು; ಅವರಿಗೇನೂ ಕೊರತೆಯಾಗಬಾರದು.

[14] ನಮ್ಮ ಜನರು ಸತ್ಕ್ರಿಯೆಹೀನರಾಗದಂತೆ ಬೋಧಿಸು. ತಮ್ಮ ಸಹಮಾನವರ ಕೊರತೆಗಳನ್ನು ಗುರುತಿಸಿ ನೆರವು ನೀಡಲಿ. ಪರೋಪಕಾರವನ್ನು ಕಲಿತುಕೊಂಡು ಸಾರ್ಥಕ ಜೀವನ ನಡೆಸಲಿ.

[15] ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ಕ್ರಿಸ್ತನಲ್ಲಿ ನಂಬಿಕೆಯುಳ್ಳವರಾಗಿ ನಮ್ಮನ್ನು ಪ್ರೀತಿಸುವವರಿಗೆ ವಂದನೆಗಳನ್ನು ಸಲ್ಲಿಸು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

ತೀತನಿಗೆ — Chapters