[1] ನೀನಾದರೋ ಸ್ವಸ್ಥ ಬೋಧನೆಗೆ ಅನುಗುಣವಾಗಿ ಉಪದೇಶಮಾಡು.
[2] ವೃದ್ಧರು ಮದ್ಯಾಸಕ್ತಿಯಿಲ್ಲದವರೂ, ಗೌರವವುಳ್ಳವರೂ, ಜಿತೇಂದ್ರಿಯರೂ, ನಂಬಿಕೆ, ಪ್ರೀತಿ, ತಾಳ್ಮೆಯಲ್ಲಿ ಸ್ವಸ್ಥರು ಆಗಿರಬೇಕೆಂದು ಬೋಧಿಸು.
[3] ಹಾಗೆಯೇ, ವೃದ್ಧ ಸ್ತ್ರೀಯರು ಚಾಡಿಹೇಳುವವರೂ ಮದ್ಯಕ್ಕೆ ಅಧೀನರು ಆಗಿರದೆ ದೇವಭಕ್ತೆಯರಿಗೆ ಯೋಗ್ಯವಾದ ನಡತೆಯುಳ್ಳವರೂ, ಸದ್ಬೋಧಕಿಯರು ಆಗಿರಬೇಕು.
[4] ಇದಲ್ಲದೆ, ವೃದ್ಧ ಸ್ತ್ರೀಯರು ಪ್ರಾಯದ ಸ್ತ್ರೀಯರಿಗೆ ಮಾದರಿಯಾಗಿ, ತಮ್ಮ ಮೂಲಕ ದೇವರ ವಾಕ್ಯಕ್ಕೆ ದೂಷಣೆಯಾಗದಂತೆ ನಡೆದುಕೊಳ್ಳುವಂತೆ ತಿಳಿಸು. ಪ್ರಾಯದಸ್ತ್ರಿಯರು ಗಂಡಂದಿರನ್ನೂ, ಮಕ್ಕಳನ್ನೂ ಪ್ರೀತಿಸುವವರೂ, ವಿವೇಕವುಳ್ಳವರೂ, ಕ್ಷಮಾಶಿಲರೂ, ಪತಿವ್ರತೆಯರೂ
[5] ಸ್ವಂತಮನೆಗಾಗಿ ಕೆಲಸಮಾಡುವವರೂ, ಸುಶೀಲೆಯರೂ ಆಗಿ ತಮ್ಮ ಗಂಡಂದಿರಿಗೆ ವಿಧೇಯರಾಗಿರಬೇಕೆಂದು ಬುದ್ಧಿಹೇಳಬೇಕೆಂದು ನೀನು ವೃದ್ಧ ಸ್ತ್ರೀಯರಿಗೆ ಬೋಧಿಸು.
[6] ಹಾಗೆಯೇ ಯೌವನಸ್ಥರನ್ನು ಎಲ್ಲಾ ಸಂಗತಿಗಳಲ್ಲಿಯೂ ಸ್ವಸ್ಥ ಚಿತ್ತರಾಗಿರಬೇಕೆಂದು ಎಚ್ಚರಿಸು.
[7] ಸತ್ಕಾರ್ಯ ಮಾಡುವುದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಸತ್ಯವೂ ಗೌರವವೂ ಆಕ್ಷೇಪಣೆಗೆ ಅವಕಾಶವಿಲ್ಲದಂಥ ಸುಬುದ್ಧಿಯೂ ಇರಬೇಕು;
[8] ಆಗ ನಮಗೆ ಎದುರಾಳಿಗಳಾಗಿರುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವುದಕ್ಕೆ ಆಸ್ಪದವಿಲ್ಲದೆ ನಾಚಿಕೊಳ್ಳುವರು.
[9] ಸೇವಕರು ತಮ್ಮ ಯಜಮಾನರಿಗೆ ವಿಧೇಯರಾಗಿದ್ದು ಅವರನ್ನು ಮೆಚ್ಚಿಸುವುದಕ್ಕೆ ಪ್ರಯತ್ನಪಡುತ್ತಾ ಎದುರುತ್ತರಕೊಡದೆ,
[10] ಯಾವುದನ್ನೂ ಕದ್ದಿಟ್ಟುಕೊಳ್ಳದೆ ಒಳ್ಳೆಯ ನಂಬಿಗಸ್ತರೆಂದು ಹೆಸರನ್ನು ಹೊಂದಲು, ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಗೌರವ ತರುವಂತೆ ವರ್ತಿಸಬೇಕೆಂದು ಅವರಿಗೆ ಉಪದೇಶಿಸು.
[11] ಏಕೆಂದರೆ ಎಲ್ಲಾ ಮನುಷ್ಯರಿಗೆ ರಕ್ಷಣೆಯನ್ನುಂಟುಮಾಡುವ ದೇವರ ಕೃಪೆಯು ಪ್ರತ್ಯಕ್ಷವಾಯಿತು;
[12] ಅದು ಭಕ್ತಿಹೀನತೆಯನ್ನೂ, ಲೋಕದ ಆಸೆಗಳನ್ನೂ ತ್ಯಜಿಸಿ ಭಾಗ್ಯಕರವಾದ ನಿರೀಕ್ಷೆಯನ್ನು,
[13] ಅಂದರೆ ಮಹಾ ದೇವರ ಮತ್ತು ನಮ್ಮ ರಕ್ಷಕನಾದ ಯೇಸುಕ್ರಿಸ್ತನ ಮಹಿಮೆಪೂರ್ಣವಾದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಇಹಲೋಕದಲ್ಲಿ ಸ್ವಸ್ಥಚಿತ್ತರಾಗಿಯೂ, ನೀತಿವಂತರಾಗಿಯೂ, ಭಕ್ತಿಯುಳ್ಳವರಾಗಿಯೂ ಜೀವಿಸಬೇಕೆಂದು ನಮಗೆ ಬೋಧಿಸುತ್ತದೆ.
[14] ಆತನು ನಮ್ಮನ್ನು ಸಕಲ ಅಧರ್ಮಗಳಿಂದ ಬಿಡುಗಡೆಮಾಡುವುದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಸ್ವಕೀಯಜನರನ್ನು ತನಗಾಗಿ ಬೇರ್ಪಡಿಸಿ ಶುದ್ಧೀಕರಣ ಮಾಡುವುದಕ್ಕಾಗಿಯೂ ನಮಗೋಸ್ಕರ ತನ್ನನ್ನು ಒಪ್ಪಿಸಿಕೊಟ್ಟನು.
[15] ಈ ಕಾರ್ಯಗಳ ವಿಷಯದಲ್ಲಿ ಬೋಧಿಸುತ್ತಾ, ಎಚ್ಚರಿಸುತ್ತಾ, ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದ ಹಾಗೆ ನೋಡಿಕೋ.