Skip to content
Opens in a new window
Listen to this chapter • 4:12

[1] ದೇವರ ಸೇವಕನೂ, ಯೇಸು ಕ್ರಿಸ್ತನ ಅಪೊಸ್ತಲನೂ ಆಗಿರುವ ಪೌಲನು, ನಮ್ಮೆಲ್ಲರಿಗೆ ಹುದುವಾದ ನಂಬಿಕೆಯಲ್ಲಿ ನಿಜಕುಮಾರನಾಗಿರುವ ತೀತನಿಗೆ ಬರೆಯುವ ಪತ್ರ.

[2] ತಂದೆಯಾದ ದೇವರಿಂದ ಮತ್ತು ನಮ್ಮ ರಕ್ಷಕನಾದ ಯೇಸು ಕ್ರಿಸ್ತನಿಂದ ನಿನಗೆ ಕೃಪೆ, ಕರುಣೆ ಮತ್ತು ಶಾಂತಿ ದೊರಕಲಿ.

[3] ಸುಳ್ಳಾಡದ ದೇವರು, ಅನಾದಿಕಾಲದಲ್ಲಿಯೇ ವಾಗ್ದಾನ ಮಾಡಿದ ನಿತ್ಯಜೀವದ ನಿರೀಕ್ಷೆಯನ್ನು, ತಾನು ಆರಿಸಿಕೊಂಡವರ ನಂಬಿಕೆಯನ್ನು ಮತ್ತು ದೈವ ಭಕ್ತಿಯನ್ನು ಸತ್ಯದ ಜ್ಞಾನಕ್ಕನುಸಾರವಾಗಿ ದೃಢಪಡಿಸಲು ನಾನು ಕಾರ್ಯ ನಿರ್ವಹಿಸುತ್ತೇನೆ.

[4] ಹಾಗು, ಆ ಸಂದೇಶವನ್ನು ಸಾರುವ ಜವಾಬ್ದಾರಿಯು ನಮ್ಮ ರಕ್ಷಕನಾದ ದೇವರ ಆಜ್ಞೆಯ ಅನುಸಾರವಾಗಿ ನನಗೆ ಒಪ್ಪಿಸಲ್ಪಟ್ಟಿದೆ ಹಾಗು ಸೂಕ್ತ ಕಾಲದಲ್ಲಿ ಸಂದೇಶವನ್ನು ಸಾರುವುದರ ಮೂಲಕ ತನ್ನ ವಾಕ್ಯವನ್ನು ನನಗೆ ಪ್ರಕಟಪಡಿಸಿದ್ದಾನೆ.

[5] ಕ್ರೇತ್ ದ್ವೀಪದಲ್ಲಿ ಇನ್ನೂ ಕ್ರಮಕ್ಕೆ ಬಾರದಿರುವ ಕಾರ್ಯಗಳನ್ನು ಕ್ರಮಪಡಿಸಿ, ಪಟ್ಟಣ ಪಟ್ಟಣಗಳಲ್ಲಿ ಹಿರಿಯರನ್ನು ನೇಮಿಸಬೇಕೆಂದು ನಾನು ನಿನಗೆ ಅಪ್ಪಣೆಕೊಟ್ಟು ನಿನ್ನನ್ನು ಅಲ್ಲಿ ಬಿಟ್ಟು ಬಂದೆ.

[6] ಸಭೆಯ ಹಿರಿಯನು ದೋಷರಹಿತನೂ, ಏಕಪತ್ನಿಯುಳ್ಳವನೂ ಆಗಿರಬೇಕು; ಆತನ ಮಕ್ಕಳು ಕರ್ತನನ್ನು ನಂಬಿದವರಾಗಿರಬೇಕು; ಅವರ ಮಕ್ಕಳು ದುರ್ಮಾರ್ಗಿಗಳೂ ಮತ್ತು ಅವಿಧೇಯತೆಯ ಆರೋಪವಿಲ್ಲದವರು ಆಗಿರಬೇಕು.

[7] ಏಕೆಂದರೆ, ಸಭಾಧ್ಯಕ್ಷನು ದೇವರ ಮೇಲ್ವಿಚಾರಕನಾಗಿರುವುದರಿಂದ ದೋಷರಹಿತನಾಗಿರಬೇಕು; ಅವನು ಸ್ವೇಚ್ಛೆಯಾಗಿ ನಡೆಯುವವನೂ, ಮುಂಗೋಪಿಯೂ, ಕುಡುಕನೂ, ಜಗಳಗಂಟನೂ, ಅತಿಲಾಭವನ್ನು ಅಪೇಕ್ಷಿಸುವವನೂ ಆಗಿರದೆ,

[8] ಅತಿಥಿಸತ್ಕಾರಮಾಡುವವನೂ, ಒಳ್ಳೆಯದನ್ನು ಪ್ರೀತಿಸುವವನೂ, ವಿವೇಕಿಯು, ನೀತಿವಂತನೂ, ದೈವಭಕ್ತನು, ಜಿತೇಂದ್ರಿಯನೂ ಆಗಿದ್ದು,

[9] ತಾನು ಸ್ವಸ್ಥಬೋಧನೆಯಿಂದ ಜನರನ್ನು ಎಚ್ಚರಿಸುವುದಕ್ಕೂ, ಸುವಾರ್ತಾ ವಿರೋಧಿಗಳ ಬಾಯಿ ಕಟ್ಟುವುದಕ್ಕೂ ಶಕ್ತನಾಗಿರುವಂತೆ, ಕ್ರಿಸ್ತನ ಉಪದೇಶಕ್ಕೆ ಅನುಸಾರವಾಗಿ ನಂಬತಕ್ಕ ವಚನಗಳನ್ನು, ದೃಢವಾಗಿ ಅವಲಂಬಿಸಿದವನಾಗಿರಬೇಕು.

[10] ಅನೇಕರು, ಪ್ರಮುಖವಾಗಿ ಸುನ್ನತಿಹೊಂದಿದವರು, ಬರೀ ಮಾತುಗಾರರೂ, ಮೋಸಗಾರರೂ, ಅಧಿಕಾರಕ್ಕೆ ಒಳಪಡದವರು ಆಗಿದ್ದಾರೆ.

[11] ಅವರು ಅತಿಲಾಭವನ್ನು ಪಡೆದುಕೊಳ್ಳುವುದಕ್ಕಾಗಿ ಮಾಡಬಾರದ ಉಪದೇಶವನ್ನು ಮಾಡಿ ಕುಟುಂಬ ಕುಟುಂಬಗಳನ್ನೇ ಹಾಳುಮಾಡುತ್ತಾರಾದ್ದರಿಂದ ಅವರ ಬಾಯಿ ಮುಚ್ಚಿಸಬೇಕಾಗಿದೆ.

[12] “ಕ್ರೇತ್ ದ್ವೀಪದವರು ಯಾವಾಗಲೂ ಸುಳ್ಳುಗಾರರೂ, ದುಷ್ಟಮೃಗಗಳೂ, ಸೋಮಾರಿಗಳಾದ ಹೊಟ್ಟೆಬಾಕರೂ” ಆಗಿದ್ದಾರೆಂದು ಅವರ ಸ್ವಂತ ಪ್ರವಾದಿಗಳಲ್ಲಿಯೇ ಒಬ್ಬ ಪ್ರವಾದಿಯು ಹೇಳಿದ್ದಾನೆ.

[13] ಈ ಸಾಕ್ಷಿಯು ನಿಜವೇ ಆಗಿದೆ; ಆದಕಾರಣ ಅವರು ಯೆಹೂದ್ಯರ ಕಟ್ಟುಕಥೆಗಳಿಗೂ, ಸತ್ಯಭ್ರಷ್ಟರಾದ ಮನುಷ್ಯರ ವಿಧಿಗಳಿಗೂ ಲಕ್ಷ್ಯಕೊಡದೆ,

[14] ನಂಬಿಕೆಯಲ್ಲಿ ಸ್ವಸ್ಥಚಿತ್ತರಾಗಿರುವಂತೆ ಅವರನ್ನು ಕಠಿಣವಾಗಿ ಖಂಡಿಸಿ ತಿಳಿಸು.

[15] ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಅಶುದ್ಧರಿಗೂ, ನಂಬಿಕೆಯಿಲ್ಲದವರಿಗೂ ಯಾವುದೂ ಶುದ್ಧವಲ್ಲ; ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಎರಡೂ ಅಶುದ್ಧವಾಗಿವೆ.

[16] ಅವರು ತಾವು ದೇವರನ್ನು ಅರಿತವರೆಂದು ಹೇಳಿಕೊಳ್ಳುತ್ತಾರೆ; ಆದರೆ ಅವರ ನಡತೆ ತದ್ವಿರುದ್ಧವಾಗಿರುತ್ತದೆ. ಅವರು ಅಸಹ್ಯ ಕೃತ್ಯಗಳಲ್ಲಿ ಭಾಗವಹಿಸುವವರೂ, ದೇವರಿಗೆ ಅವಿಧೇಯರೂ ಆಗಿರುವುದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುತ್ತಾರೆ ಹಾಗು ಸತ್ಕಾರ್ಯವನ್ನು ಮಾಡಲು ಅಯೋಗ್ಯರಾಗಿದ್ದಾರೆಂದು ಸಾಬಿತುಪಡಿಸುತ್ತಾರೆ.

ತೀತನಿಗೆ — Chapters