[1] ನಾನು ದೇವರ ಸಮಕ್ಷಮದಲ್ಲಿ ಮತ್ತು ಜೀವಿಸುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಬರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯನ್ನೂ, ಆತನ ರಾಜ್ಯವನ್ನೂ ಮುಂದಿಟ್ಟು ನಿನಗೆ ಖಂಡಿತವಾಗಿ ಹೇಳುವುದೇನಂದರೆ,
[2] ದೇವರ ವಾಕ್ಯವನ್ನು ಸಾರು, ಅನುಕೂಲವಾದ ಕಾಲದಲ್ಲಿಯೂ ಅನುಕೂಲವಿಲ್ಲದ ಕಾಲದಲ್ಲಿಯೂ ಅದರಲ್ಲಿ ಆಸಕ್ತನಾಗಿರು. ಪೂರ್ಣ ದೀರ್ಘಶಾಂತಿಯಿಂದ ಉಪದೇಶಿಸುತ್ತಾ ಖಂಡಿಸು, ಗದರಿಸು, ಎಚ್ಚರಿಸು.
[3] ಯಾಕೆಂದರೆ ಜನರು ಸ್ವಸ್ಥಬೋಧನೆಯನ್ನು ಒಪ್ಪಲಾರದ ಕಾಲವು ಬರುತ್ತದೆ. ಅದರಲ್ಲಿ ಅವರು ಕಿವಿಗೆ ಇಂಪಾಗುವ ಹಾಗೆ ತಮ್ಮ ದುರಾಶೆಗಳಿಗೆ ಅನುಕೂಲವಾದ ಉಪದೇಶಗಳನ್ನು ನೀಡುವ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು.
[4] ಅವರು ಸತ್ಯ ಬೋಧನೆಗೆ ಕಿವಿಗೊಡದೆ ಕಟ್ಟುಕಥೆಗಳನ್ನು ಕೇಳುವುದಕ್ಕೆ ಇಚ್ಛಿಸುವರು.
[5] ಆದರೆ ನೀನು ಎಲ್ಲಾ ವಿಷಯಗಳಲ್ಲಿಯೂ ಸ್ವಸ್ಥಚಿತ್ತನಾಗಿರು, ಹಿಂಸೆಯನ್ನು ತಾಳಿಕೋ, ಸುವಾರ್ತಿಕನ ಕೆಲಸವನ್ನು ಮಾಡು, ನಿನಗೆ ನೇಮಿಸಿರುವ ಸೇವೆಯನ್ನು ಲೋಪವಿಲ್ಲದೆ ಮಾಡು.
[6] ಯಾಕೆಂದರೆ ನಾನಂತೂ ಈಗಲೇ ಪಾನದ್ರವ್ಯವಾಗಿ ಅರ್ಪಿತನಾಗುತ್ತಾ ಇದ್ದೇನೆ. ನನ್ನ ನಿರ್ಗಮನದ ಸಮಯವು ಸಮೀಪವಾಗುತ್ತಾ ಬಂದಿದೆ.
[7] ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಓಡಿಮುಗಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.
[8] ನೀತಿವಂತರಿಗೆ ದೊರಕುವ ಜಯಮಾಲೆಯು ಮುಂದೆ ನನಗಾಗಿ ಸಿದ್ಧವಾಗಿದೆ, ಅದನ್ನು ನೀತಿವಂತನಾದ ನ್ಯಾಯಾಧಿಪತಿಯಾಗಿರುವ ಕರ್ತನು ಆ ದಿನದಲ್ಲಿ ನನಗೆ ಕೊಡುವನು, ನನಗೆ ಮಾತ್ರವಲ್ಲದೆ ತನ್ನ ಪ್ರತ್ಯಕ್ಷತೆಯನ್ನು ಪ್ರೀತಿಸುವವರೆಲ್ಲರಿಗೂ ಕೊಡುವನು.
[9] ನೀನು ನನ್ನ ಬಳಿಗೆ ಬೇಗನೇ ಬರುವುದಕ್ಕೆ ಪ್ರಯತ್ನಪಡು,
[10] ಯಾಕೆಂದರೆ ದೇಮನು ಇಹಲೋಕವನ್ನು ಪ್ರೀತಿಸಿ, ನನ್ನನ್ನು ಬಿಟ್ಟು ಥೆಸಲೋನಿಕಕ್ಕೆ ಹೋದನು. ಕ್ರೆಸ್ಕನು ಗಲಾತ್ಯಕ್ಕೂ ತೀತನು ದಲ್ಮಾತ್ಯಕ್ಕೂ ಹೋದರು.
[11] ಲೂಕನು ಮಾತ್ರ ನನ್ನ ಜೊತೆಯಲ್ಲಿದ್ದಾನೆ. ಮಾರ್ಕನನ್ನು ನಿನ್ನ ಸಂಗಡ ಕರೆದುಕೊಂಡು ಬಾ, ಅವನು ನನಗೆ ಸೇವೆಯಲ್ಲಿ ಉಪಯುಕ್ತನಾಗಿದ್ದಾನೆ.
[12] ತುಖಿಕನನ್ನು ಎಫೆಸಕ್ಕೆ ಕಳುಹಿಸಿದೆನು. ತ್ರೋವದಲ್ಲಿ ನಾನು ಕರ್ಪನ ಬಳಿಯಲ್ಲಿ ಬಿಟ್ಟು ಬಂದ ಮೇಲಂಗಿಯನ್ನೂ, ಪುಸ್ತಕಗಳನ್ನೂ, ಮುಖ್ಯವಾಗಿ ಚರ್ಮದ ಕಾಗದಗಳನ್ನೂ ನೀನು ಬರುವಾಗ ತೆಗೆದುಕೊಂಡು ಬಾ.
[14] ಕಂಚುಗಾರನಾದ ಅಲೆಕ್ಸಾಂದ್ರನು ನನಗೆ ಬಹಳ ಕೇಡುಮಾಡಿದನು. ಕರ್ತನು ಅವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಅವನಿಗೆ ಕೊಡುವನು.
[15] ನೀನು ಸಹ ಅವನ ವಿಷಯದಲ್ಲಿ ಎಚ್ಚರಿಕೆಯಾಗಿರು, ಅವನು ನಮ್ಮ ಮಾತುಗಳನ್ನು ಬಹಳವಾಗಿ ಎದುರಿಸಿದನು.
[16] ನಾನು ಮೊದಲನೆ ಸಾರಿ ಪ್ರತಿವಾದ ಮಾಡಿದಾಗ ಯಾರೂ ನನ್ನ ಸಂಗಡ ಇರಲಿಲ್ಲ, ಎಲ್ಲರೂ ನನ್ನನ್ನು ಕೈಬಿಟ್ಟರು. ಇದು ಅವರಿಗೆ ದೋಷವಾಗಿ ಎಣಿಸಲ್ಪಡದೆ ಇರಲಿ.
[17] ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸುವಾರ್ತೆಯು ಸಂಪೂರ್ಣವಾಗಿ ಸಾರಲ್ಪಡುವಂತೆಯೂ, ಅನ್ಯ ಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು. ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
[18] ಪ್ರತಿಯೊಂದು ದುಷ್ಕೃತ್ಯದಿಂದ ಕರ್ತನು ನನ್ನನ್ನು ಕಾಪಾಡಿ ತನ್ನೊಂದಿಗೆ ಪರಲೋಕ ರಾಜ್ಯಕ್ಕೆ ಸೇರಿಸುವನು. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.
[19] ಪ್ರಿಸ್ಕಿಲ್ಲಳಿಗೂ, ಅಕ್ವಿಲ್ಲನಿಗೂ, ಒನೇಸಿಪೊರನ ಮನೆಯವರಿಗೂ ವಂದನೆಹೇಳು.
[20] ಎರಸ್ತನು ಕೊರಿಂಥದಲ್ಲಿ ನಿಂತನು. ತ್ರೊಫಿಮನು ಅಸ್ವಸ್ಥನಾಗಿದ್ದುದರಿಂದ ಅವನನ್ನು ಮಿಲೇತದಲ್ಲಿ ಬಿಟ್ಟೆನು.
[21] ಚಳಿಗಾಲಕ್ಕೆ ಮುಂಚೆಯೇ ಬರುವುದಕ್ಕೆ ಪ್ರಯತ್ನಿಸು. ಯುಬೂಲನು, ಪೊದೆಯನೂ, ಲೀನನೂ, ಕ್ಲೌದ್ಯಳೂ ಉಳಿದ ಸಹೋದರರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ.
[22] ಕರ್ತನು ನಿನ್ನ ಆತ್ಮದೊಂದಿಗೆ ಇರಲಿ. ಆತನ ಕೃಪೆಯು ನಿಮ್ಮೊಂದಿಗಿರಲಿ.