Skip to content
Opens in a new window
Listen to this chapter • 4:43

[1] ಕಡೆಯದಾಗಿ ನನ್ನ ಸಹೋದರರೇ, ಕರ್ತನಲ್ಲಿ ಸಂತೋಷಪಡಿರಿ. ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು.

[2] ಆ ನಾಯಿಗಳಿಗೆ ಎಚ್ಚರವಾಗಿರಿ, ದುಷ್ಕರ್ಮಿಗಳಿಗೆ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ.

[3] ನಿಜವಾದ ಸುನ್ನತಿಯವರು ಯಾರೆಂದರೆ, ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ, ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ ನಾವುಗಳೇ.

[4] ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.

[5] ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು, ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ ನಾನು ಫರಿಸಾಯನು,

[6] ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.

[7] ಆದರೆ, ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.

[8] ಇಷ್ಟೇ ಅಲ್ಲದೆ, ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.

[9] ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು, ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ, ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ.

[10] ಆತನನ್ನೂ ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ, ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ.

[11] ಹೀಗಾದರೆ ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.

[12] ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.

[13] ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ,

[14] ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ.

[15] ನಮ್ಮಲ್ಲಿ ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು.

[16] ಅಂತೂ, ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.

[17] ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.

[18] ಯಾಕೆಂದರೆ ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ ಅಳುತ್ತಾ ಹೇಳುತ್ತೇನೆ.

[19] ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ, ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.

[20] ನಾವಾದರೋ ಪರಲೋಕದ ಪ್ರಜೆಗಳು, ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ.

[21] ಆತನು ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ ಪರಾಕ್ರಮವನ್ನು ಹೊಂದಿದವನಾಗಿ ದೀನಾವಸ್ಥೆಯುಳ್ಳ ನಮ್ಮ ದೇಹವನ್ನು ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

ಫಿಲಿಪ್ಪಿಯವರಿಗೆ — Chapters